ವಿರೋಧ ಪಕ್ಷವಾಗಿ ಸಮರ್ಥವಾಗಿ ಕೆಲಸ ಮಾಡಲಾಗದ ಬಿಜೆಪಿಯು ಜೆಡಿಎಸ್‌ನ ಜೊತೆಗೂಡಿ ರಾಜ್ಯಪಾಲರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಜನರಿಂದ ಆಯ್ಕೆಯಾದ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡುತ್ತಿದೆ. ಇದಕ್ಕೆ ದಸಂಸ ವಿರೋಧ ವ್ಯಕ್ತಪಡಿಸಿ, ಬೆಂಗಳೂರಲ್ಲಿ ಸೆ. 3ರಂದು ಬೃಹತ್ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರೆಪ್ಪ ಹಳ್ಳಿ ತಿಳಿಸಿದರು.
ದಲಿತ ಸಂಘರ್ಷ ಸಮಿತಿಯ ವತಿಯಿಂದ ಕಲಬುರಗಿ ನಗರದ ಪತ್ರಿಕಾ ಭವನದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನದ ಆಶಯಗಳ ಅಡಿಯಲ್ಲಿ, ರಾಷ್ಟ್ರಪತಿಗಳ ನೇರ ಸುಪರ್ದಿಯಲ್ಲಿ ಕಾರ್ಯನಿರ್ವಹಿಸಬೇಕಾದ ರಾಜ್ಯಪಾಲರು ಪ್ರಧಾನಿ ಹಾಗೂ ಗೃಹ ಸಚಿವರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಆ ಮೂಲಕ ಸಂವಿಧಾನ- ಪ್ರಜಾಪ್ರಭುತ್ವ- ಒಕ್ಕೂಟ ವ್ಯವಸ್ಥೆಗೆ ದಕ್ಕೆಯುಂಟು ಮಾಡುತ್ತಿರುವುದು ವಿಷಾದಕರ ಸಂಗತಿ” ಎಂದು ತಿಳಿಸಿದರು.
ಜೆಡಿಎಸ್‌ನ ಎಚ್.ಡಿ. ಕುಮಾರಸ್ವಾಮಿ, ಬಿಜೆಪಿಯ ಮುರುಗೇಶ್ ನಿರಾಣಿ, ಜನಾರ್ದನ ರೆಡ್ಡಿ ಹಾಗೂ ಶಶಿಕಲಾ ಜೊಲ್ಲೆಯ ವಿರುದ್ಧ ಲೋಕಾಯುಕ್ತ ಮತ್ತು ಎಸ್‌ಐಟಿಯಂಥ ತನಿಖಾ ಸಂಸ್ಥೆಗಳು ಪ್ರಾಸಿಕ್ಯೂಷನ್ ನಡೆಸಲು ಅನುಮತಿ ಕೋರಿ ವರ್ಷವಾಗುತ್ತಾ ಬಂದಿದೆ. ಆದರೂ ಅನುಮತಿ ನೀಡದ ರಾಜ್ಯಪಾಲರು ಖಾಸಗಿ ವ್ಯಕ್ತಿ ನೀಡಿದ ದೂರನ್ನು ಆಧರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಒಂದೇ ದಿನದಲ್ಲಿ ಶೋಕಾಸ್ ನೋಟೀಸ್ ನೀಡಿದ್ದಾರೆ. ಅಲ್ಲದೇ, ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ನಡೆದುಕೊಳ್ಳುತ್ತಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ದೂರಿದರು.
“ಸಿದ್ದರಾಮಯ್ಯರನ್ನು ಮಣಿಸಲು ಬಿಜೆಪಿ- ಜೆಡಿಎಸ್ ಮಸಲತ್ತು ನಡೆಸುತ್ತಿದೆ. ತಳ ಸಮುದಾಯಗಳ ಪ್ರತಿನಿಧಿಯಾಗಿ ಬೆಳೆದುಬಂದಿರುವ ಸಿದ್ಧರಾಮಯ್ಯ ಅವರನ್ನು ಸೈದ್ಧಾಂತಿಕವಾಗಿ ಸೋಲಿಸುವುದು ಕಷ್ಟ. ಭ್ರಷ್ಟಾಚಾರದ ಖಯಾಲಿಯೂ ಸಿದ್ದರಾಮಯ್ಯನವರಿಗೆ ಇಲ್ಲದಿರುವುದು ಬಿಜೆಪಿ- ಜೆಡಿಎಸ್‌ನವರಿಗೆ ದೊಡ್ಡ ತಲೆನೋವಾಗಿದೆ. ಯಾವುದೂ ಸಿಗದೇ ಇದ್ದಾಗ ತಾವೇ ಮಂಜೂರು ಮಾಡಿದ್ದ ಸೈಟನ್ನು ವಿವಾದಮಯಗೊಳಿಸಿ, ಅದನ್ನು ಸಿದ್ದರಾಮಯ್ಯನವರು ತಮ್ಮ ಅಧಿಕಾರಾವಧಿಯಲ್ಲಿ ನಡೆಸಿರುವ ಅಕ್ರಮ ಎಂಬಂತೆ ಬಿಂಬಿಸಿ ಇಲ್ಲದ ವಿವಾದವನ್ನು ಸೃಷ್ಟಿಸುತ್ತಿದ್ದಾರೆ” ಎಂದು ಕಿಡಿಕಾರಿದರು.
ಕಾಂಗ್ರೆಸ್ ಸೇರಿದಂತೆ ಯಾವುದೇ ಪಕ್ಷ/ಸರ್ಕಾರಗಳ ಜನವಿರೋಧಿ ನೀತಿಗಳನ್ನು ಖಂಡಿಸಿ ದಸಂಸ ಹೋರಾಟ ಮಾಡುತ್ತಲೇ ಇದೆ. ಮುಡಾ ಪ್ರಕರಣವು ಕುತಂತ್ರ ರಾಜಕಾರಣದ ಭಾಗ. ಹಾಗಾಗಿ, ಇದನ್ನು ದಸಂಸ ಖಂಡಿಸುತ್ತದೆ. ತಳಸಮುದಾಯದ ನಾಯಕನೊಬ್ಬನನ್ನು ದುಷ್ಟಕಾರಣಗಳಿಗಾಗಿ ರಾಜ್ಯಪಾಲರನ್ನು ಬಳಸಿಕೊಂಡು ಬಲಿಪಶು ಮಾಡಲು ನಡೆಸುವ ಕುಚೋದ್ಯಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಮರೆಪ್ಪ ಹಳ್ಳಿ ತಿಳಿಸಿದರು.
ಇದನ್ನು ಓದಿದ್ದೀರಾ? ಬೆಂಗಳೂರು | ಚನ್ನಗಿರಿಯಲ್ಲಿ ಯುವಕನ ಕಸ್ಟಡಿ ಸಾವು: ಸತ್ಯಶೋಧನಾ ವರದಿ ಬಿಡುಗಡೆ
ಈ ಹಿನ್ನೆಲೆಯಲ್ಲಿ ಬಿಜೆಪಿ ಜೆಡಿಎಸ್‌ನ ದುಷ್ಟತನದ ವಿರುದ್ಧ ಹೋರಾಟ ನಡೆಸಲೇಬೇಕಿದೆ. ಅದಕ್ಕಾಗಿ ಸೆಪ್ಟೆಂಬರ್ 3ರಂದು ದಲಿತ ಸಂಘರ್ಷ ಸಮಿತಿಯು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನಾ ಸಭೆಯನ್ನು ಹಮ್ಮಿಕೊಂಡಿದೆ. ಈ ಸಭೆಗೆ ದಲಿತರು, ವಿದ್ಯಾರ್ಥಿ-ಯುವಜನರು, ಮಹಿಳೆಯರು, ಹಿಂದುಳಿದ ವರ್ಗದವರು, ಪ್ರಗತಿಪರರು ಹಾಗೂ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮರೆಪ್ಪ ಮೇತ್ರೆ, ಡಾ. ಜಯಕುಮಾರ ನೂಲಕರ್ , ಶಿವಶರಣಪ್ಪ ಕುರನಳ್ಳಿ , ಸಂತೋಷ ತೆಗನೂರ , ಮಲ್ಲಿಕಾರ್ಜುನ ಹಳ್ಳಿ, ಮಲ್ಲಿಕಾರ್ಜುನ ಗೌಡ ಉಪಸ್ಥಿತರಿದ್ದರು.
