ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿಯನ್ನು ಅಂಗೀಕರಿಸಿ, ದಲಿತ ಹಿಂದುಳಿದ ವರ್ಗಗಳ ಮೀಸಲಾತಿ ಪ್ರಮಾಣವನ್ನು ಶೇ 50ರಿಂದ ಶೇ 75ಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಮುಖಂಡರು ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿದರು.
ದಸಂಸ ಮುಂಖಡ ಮರೆಪ್ಪ ಹಳ್ಳಿ ಮಾತನಾಡಿ, “ಅಕ್ಟೋಬರ್ 25-2024 ರಂದು ನಡೆಯುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿಯನ್ನು ಅಂಗೀಕರಿಸಿ ಶೀಘ್ರ ಅನುಷ್ಠಾನಕ್ಕಾಗಿ ಆಗ್ರಹಿಸಿ ಹಾಗೂ ದಲಿತ ಹಿಂದುಳಿದ ವರ್ಗಗಳ ಮೀಸಲಾತಿ ಮಿತಿಯ ಪ್ರಮಾಣವನ್ನು ಶೇ.50 ರಿಂದ ಶೇ.75ಕ್ಕೆ ಹೆಚ್ಚಳ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು” ಒತ್ತಾಯಿಸಿದರು.
ರಾಜ್ಯದ ಆದಿವಾಸಿಗಳು, ಅಲೆಮಾರಿಗಳು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಸೇರಿದಂತೆ ಶೋಷಿತ ಸಮುದಾಯದವರು ದಶಕಗಳಿಂದ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಜಾತಿ ಕೇಂದ್ರೀತವಾದ ಪಕ್ಷ ರಾಜಕಾರಣವು ಈ ಸಮುದಾಯಗಳ ಬೇಡಿಕೆಗಳಿಗೆ ಕಿವಿಗೊಡುತ್ತಿಲ್ಲ ಎಂದು ಆರೋಪಿಸಿದರು.

ಸಾಮಾಜಿಕ ನ್ಯಾಯದ ಗುರಿಗಳನ್ನು ತಲುಪಲು ಕಾಲ ಕಾಲಕ್ಕೆ ಜನಗಣತಿಯ ನಿಖರವಾದ ವಿವರಗಳನ್ನು ಆಧರಿಸಿ ಮೀಸಲಾತಿ ಪ್ರಮಾಣ ಹೆಚ್ಚಳ ಹಾಗೂ ಇತರೆ ಯೋಜನೆಗಳನ್ನು ರೂಪಿಸುವುದು ಅನಿವಾರ್ಯವಾಗಿದೆ. ಈ ಕೊರತೆಯನ್ನು ನೀಗಿಸಲು ರಾಜ್ಯ ಸರ್ಕಾರ ಹೊರಟಿರುವುದು ಶ್ಲಾಘನೀಯ ಎಂದರು.
ಇದನ್ನು ಓದಿದ್ದೀರಾ? ಯಾದಗಿರಿ | ಕಾಂಗ್ರೆಸ್-ಬಿಜೆಪಿ ರಾಜಕೀಯ ಬಿಟ್ಟು ಜನರ ಸಮಸ್ಯೆಗಳ ಬಗ್ಗೆ ಗಮನಹರಿಸಲಿ: ದಸಂಸ ಆಗ್ರಹ
ಜಾತಿ ಗಣತಿ ವರದಿ ಸ್ವೀಕರಿಸಿದ ನಂತರ ಕೆಲವು ಪಟ್ಟಭದ್ರ ಜಾತಿವಾದಿಗಳು ಹಾಗೂ ರಾಜಕೀಯ ಪಕ್ಷಗಳು, ಸಂಘ– ಸಂಸ್ಥೆಗಳು ತೀವ್ರ ಅಸಮಾಧಾನ ಹೊರಹಾಕಿ ವಿರೋಧ ವ್ಯಕ್ತಪಡಿಸುತ್ತಿವೆ. ಇದು ಕಳವಳಕರ ಸಂಗತಿ. ರಾಜ್ಯ ಸರ್ಕಾರವು ಈ ವಿರೋಧವನ್ನು ಲೆಕ್ಕಿಸದೆ ಸಾಮಾಜಿಕ ನ್ಯಾಯದ ಪರವಾದ ದೃಢ ನಿಲುವು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಸತ್ಯಾಗ್ರಹ ನಡೆಸಿದ ಬಳಿಕ ಕಲಬುರಗಿ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಮರೆಪ್ಪ ಮೇತ್ರ, ಶಿವಶರಣಪ ಕುರ್ನಳ್ಳಿ, ರಮೇಶ ಕವಡೆ, ಡಾ. ಜಯಕುಮಾರ ನೂಲಕರ, ಡಾ.ಶಿವುಕುಮಾರ ಸಂಗನ್, ಸಂತೋಷ ತೆಗನೂರ, ಉದಯಕುಮಾರ ಸಾಗರ್, ಮಲ್ಲಿಕಾರ್ಜುನ ಗೌಡ, ಮುಕ್ತಬಾಯಿ ಇನ್ನಿತರರು ಉಪಸ್ಥಿತರಿದ್ದರು.
