ಕರ್ನಾಟಕದಲ್ಲಿ ಎಐಡಿವೈಒ ಸಂಘಟನೆಯ ಪ್ರಾರಂಭದ ದಿನಗಳಲ್ಲಿ ಸಂಘಟನೆಯನ್ನು ಬೆಳೆಸುವಲ್ಲಿ ಸಕ್ರಿಯ ಪಾತ್ರ ವಹಿಸಿದ್ದ ಮತ್ತು ಸಂಘಟನೆಯ ಹಿಂದಿನ ರಾಜ್ಯ ಸಮಿತಿಯ ಹಿರಿಯ ಉಪಾಧ್ಯಕ್ಷರಲ್ಲಿ ಒಬ್ಬರಾಗಿದ್ದ ಡಾ. ವಿಷ್ಣು ಸಭಾಹಿತ್ ಅವರ ನಿಧನ ಸಂಘಟನೆಗೆ ತೀವ್ರ ನಷ್ಟ ಉಂಟಾಗಿದೆ ಎಂದು ಎಐಡಿವೈಒ ಕಾರ್ಯದರ್ಶಿ ಜವಣ್ಣ ಸಂತಾಪ ವ್ಯಕ್ತಪಡಿಸಿದ್ದಾರೆ.
ಕಲಬುರಗಿಯಲ್ಲಿ ಪತ್ರಿಕೆ ಹೇಳಿಕೆ ನೀಡಿದ್ದು, “ಅನೇಕ ತರುಣರನ್ನು ಸಾಮಾಜಿಕ ಸೇವೆಗೆ ಮತ್ತು ಹೋರಾಟಗಳಿಗೆ ಆಕರ್ಷಿಸಿದ್ದ ಡಾ.ವಿಷ್ಣು ಸಭಾಹಿತ್ ಅವರು ಬೆಂಗಳೂರಿನ ಕೆಂಗೇರಿ ಬಡಾವಣೆಗೆ ಕಾವೇರಿ ನಾಲ್ಕನೇ ಹಂತದ ಕುಡಿಯುವ ನೀರಿನ ಯೋಜನೆಗಾಗಿ ಸಕ್ರಿಯ ಹೋರಾಟ ಕಟ್ಟಿದ್ದರು. ಆನಂತರವೂ ಕೂಡಾ ಜನಜಾಗೃತಿ ಹೋರಾಟ ಸಮಿತಿಯ ಮೂಲಕ ನಾಗರಿಕ ಸೌಲಭ್ಯಗಳಿಗಾಗಿ, ಮದ್ಯಪಾನದ ವಿರುದ್ಧ ಹೋರಾಟ, ಹೀಗೆ ಹಲವು ಯಶಸ್ವಿ ಹೋರಾಟಗಳನ್ನು ಕಟ್ಟಿದ್ದರು” ಎಂದು ಹೇಳಿದರು.
“ಅವರ ಹುಟ್ಟೂರಾದ ಹೊನ್ನಾವರಕ್ಕೆ ಸ್ಥಳಾಂತರಗೊಂಡು ತಮ್ಮ ಜನಪರ ವೈದ್ಯಕೀಯ ವೃತ್ತಿಯ ಮೂಲಕ ಬಡಜನರ ಮತ್ತು ಹೊನ್ನಾವರದ ಸುತ್ತಮುತ್ತಲಿನ ಆದಿವಾಸಿ ಜನರಿಗೆ ಆರೋಗ್ಯ ಸೇವೆ ಒದಗಿಸುತ್ತಿದ್ದರು. ಅವರ ಸಾಮಾಜಿಕ ಕಾರ್ಯಗಳು ಮಾದರಿಯಾಗಿವೆ. ಇತ್ತೀಚೆಗೆ ಅನಾರೋಗ್ಯ ಸಮಸ್ಯೆಯಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಸೋಮವಾರ ಬೆಳಗಿನ ಜಾವ ಅಸುನೀಗಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಮೋದಿ ಸುಳ್ಳಿನ ಕಂತೆ ಹೊತ್ತು ತರುತ್ತಿದ್ದಾರೆ: ಎಎಪಿ
“ಎಐಡಿವೈಒ ಕರ್ನಾಟಕ ರಾಜ್ಯ ಸಮಿತಿಯು ಈ ಸಂದರ್ಭದಲ್ಲಿ ಅವರ ಸಕ್ರಿಯ ಸಾಮಾಜಿಕ ಚಟುವಟಿಕೆಗಳನ್ನು ಗೌರವದಿಂದ ನೆನೆಯುತ್ತಾ, ಅವರ ಅಗಲಿಕೆಗೆ ತೀವ್ರ ಸಂತಾಪದೊಂದಿಗೆ ಹೃತ್ಪೂರ್ವಕ ಶ್ರದ್ದಾಂಜಲಿ ಸಲ್ಲಿಸುತ್ತದೆ” ಎಂದು ತಿಳಿಸಿದರು.
