ಉಡುಪಿ ಜಿಲ್ಲೆಯ ಕಾರ್ಕಳದ ಯುವತಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಇಬ್ಬರನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ. ಆ ಮೂಲಕ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.
ಎರಡು ದಿನಗಳ ಹಿಂದೆ ವಶಕ್ಕೆ ಪಡೆದುಕೊಂಡ ಇಬ್ಬರು ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದ ಪೊಲೀಸರು, ಆರೋಪಿಗಳು ನೀಡಿದ ಮಾಹಿತಿ ಆಧರಿಸಿ ಆ.28ರಂದು ಮತ್ತೆ ಇಬ್ಬರನ್ನು ಬಂಧಿಸಿದ್ದಾರೆ. ಅವರನ್ನು ಕೂಡ ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ. ಬಂಧಿತರ ವಿವರಗಳನ್ನು ಪೊಲೀಸರು ಈವರೆಗೆ ನೀಡಿಲ್ಲ. ಆದರೆ, ಇದರಲ್ಲಿ ಓರ್ವ ಶಿರ್ವ ಹಾಗೂ ಮತ್ತೋರ್ವ ಬೆಂಗಳೂರು ಮೂಲದವನು ಎಂದು ತಿಳಿದುಬಂದಿದೆ.
ಬಂಧಿತ ಆರೋಪಿಗಳ ಪೈಕಿ, ಬಿಜೆಪಿ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದ ಅಭಯ್‌ನನ್ನು ಪೊಲೀಸರು ಈಗಾಗಲೇ ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದರು. ಉಳಿದ ಇಬ್ಬರು ಆರೋಪಿಗಳಾದ ಅಲ್ತಾಫ್ ಹಾಗೂ ರಿಚರ್ಡ್ ಕ್ಷೇವಿಯರ್‌ನ ನಾಲ್ಕು ದಿನಗಳ ಪೊಲೀಸ್ ಕಸ್ಟಡಿ ಅವಧಿ ಅ.27ಕ್ಕೆ ಮುಗಿದ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ಕಾರ್ಕಳ ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.
ಇವರಿಬ್ಬರನ್ನು ಹೆಚ್ಚಿನ ತನಿಖೆ ಒಳಪಡಿಸಬೇಕಾಗಿರುವುದರಿಂದ ಮತ್ತೆ ಪೊಲೀಸ್ ವಶಕ್ಕೆ ನೀಡುವಂತೆ ಪೊಲೀಸರು ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಅದರಂತೆ ಕೋರ್ಟ್ ಈ ಇಬ್ಬರು ಆರೋಪಿಗಳನ್ನು ಮತ್ತೆ ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿದೆ.
ಇದನ್ನು ಓದಿದ್ದೀರಾ? ಕಾರ್ಕಳ ಯುವತಿಯ ಅತ್ಯಾಚಾರ | 3ನೇ ಆರೋಪಿ ಬಿಜೆಪಿ ಕಾರ್ಯಕರ್ತ : ಕಾಂಗ್ರೆಸ್‌ನಿಂದ ಫೋಟೋ ಬಿಡುಗಡೆ
ಪ್ರಕರಣದ ಸಂತ್ರಸ್ತೆಯನ್ನು ಕಾರ್ಕಳ ನ್ಯಾಯಾಲಯದ ಮುಂದೆ ಬುಧವಾರ ಪೊಲೀಸರು ಹಾಜರುಪಡಿಸಿದ್ದು, ಆಕೆ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯನ್ನು ಮುಚ್ಚಿದ ಲಕೋಟೆಯಲ್ಲಿ ಸೀಲ್ ಮಾಡಲಾಗಿದ್ದು, ಇದೀಗ ಆ ಹೇಳಿಕೆ ಪೊಲೀಸರ ಕೈ ಸೇರಿದೆ ಎಂದು ತಿಳಿದು ಬಂದಿದೆ. ಜಾರ್ಜ್ ಶೀಟ್ ಸಲ್ಲಿಕೆ ಸಮಯದಲ್ಲಿ ಈ ಲಕೋಟೆ ಸೀಲ್‌ನ್ನು ತನಿಖಾಧಿಕಾರಿಗಳು ತೆರೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
