ಬೆಂಗಳೂರು-ಮೈಸೂರು ಆರು ಪಥಗಳ ಹೆದ್ದಾರಿ ನಿರ್ಮಾಣದ ನಂತರ ಬಿಎಂಐಸಿ ಯೋಜನೆ ಅನಾವಶ್ಯಕವಾಗಿದ್ದು, ಭೂ ಸ್ವಾಧೀನದ ಪ್ರಕ್ರಿಯೆ ರೈತರಿಗೆ ಅನ್ಯಾಯಕರವಾಗಿದೆ. ನೈಸ್ ಕಂಪನಿಯ ಹಗರಣ ಹಾಗೂ ದೌರ್ಜನ್ಯಗಳಿಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೆಂಬಲ ವ್ಯಕ್ತಪಡಿಸಿರುವುದಕ್ಕೆ ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಎನ್.ಎಲ್. ಭರತ್ ರಾಜ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರವು 30 ವರ್ಷಗಳ ಹಿಂದೆ ಕೆಐಎಡಿಬಿ ಮೂಲಕ ರೈತರ ಭೂಮಿ ಸ್ವಾಧೀನ ಮಾಡಿಕೊಂಡು ನೈಸ್ ಕಂಪನಿಗೆ ಹಸ್ತಾಂತರಿಸಿದೆ. ಈ ಯೋಜನೆ ಕಾರ್ಯಗತವಾಗದೇ ಇದ್ದರೂ, ನೈಸ್ ಕಂಪನಿ ಹೆಚ್ಚುವರಿ ಭೂಮಿಯನ್ನು ದಬ್ಬಾಳಿಕೆ ಮೂಲಕ ಕಬಳಿಸಿ, ಅದನ್ನು ರಿಯಲ್ ಎಸ್ಟೇಟ್ ವ್ಯಾಪಾರಕ್ಕೆ ಬಳಸುತ್ತಿದೆ. ಇದರಿಂದ ಭೂಮಿಯನ್ನು ಕಳೆದುಕೊಂಡ ರೈತರು ಕೋರ್ಟ್, ಕಚೇರಿಗಳಿಗೆ ಅಲೆದು ಹಣ ಹಾಗೂ ಸಮಯ ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಗಿದೆ. ಸುಪ್ರೀಂ ಕೋರ್ಟ್ ತೀರ್ಪುಗಳು ಹಾಗೂ ಸದನ ಸಮಿತಿಯ ಶಿಫಾರಸ್ಸುಗಳನ್ನೂ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.
ನೈಸ್ ಕಂಪನಿಯ ಪರವಾಗಿ ಡಿ.ಕೆ. ಶಿವಕುಮಾರ್ ವಕಾಲತ್ತು ವಹಿಸುವುದು ಬೇಜವಾಬ್ದಾರಿ ಕ್ರಮವಾಗಿದೆ ಹಾಗೂ ಇದು ರೈತ ವಿರೋಧಿ ನಡೆ. ಶಿವಕುಮಾರ್ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಮತ್ತು ರೈತ ಸಮುದಾಯದ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಶಾಸಕರಾದ ಟಿ.ಬಿ. ಜಯಚಂದ್ರ ಅಧ್ಯಕ್ಷತೆಯ ಅಧೀನ ಸಮಿತಿಯ ಶಿಫಾರಸ್ಸುಗಳ ಅನುಸರಣೆಯ ಮೂಲಕ ಬಿಎಂಐಸಿ ಯೋಜನೆ ರದ್ದುಪಡಿಸಬೇಕು ಎಂದು ರೈತ ಸಂಘ ಆಗ್ರಹಿಸಿದೆ. ಅದಲ್ಲದೆ, 13237 ಎಕರೆ ಭೂಮಿ ಬೇಕಾದರೂ, ನೈಸ್ 23846 ಹೆಚ್ಚುವರಿ ಎಕರೆಗಳನ್ನು ಸ್ವಾಧೀನ ಪಡಿಸಿಕೊಂಡಿರುವುದು ಅನ್ಯಾಯ. ಹೆಚ್ಚುವರಿ ಭೂಮಿಯನ್ನು ನೈಸ್ ಕಂಪನಿಯಿಂದ ಹಿಂದಿರಗಿಸಬೇಕು ಎಂದು ರೈತರು ಆಗ್ರಹಿಸಿದರು.
ಇನ್ನು, ಬೆಂಗಳೂರಿನಿಂದ ಮೈಸೂರಿಗೆ ಆರು ಸಾಲಿನ ರಸ್ತೆ ನಿರ್ಮಾಣದಿಂದಾಗಿ ಸಾವಿರಾರು ವ್ಯಾಪಾರಸ್ಥರು ಉದ್ಯೋಗ ಕಳೆದುಕೊಂಡಿದ್ದಾರೆ. ರೈತರ ಅತೀವ ಸಂಕಷ್ಟವನ್ನು ತಂದೊಡ್ಡಿದೆ. ಈ ಪರಿಸ್ಥಿತಿಯಲ್ಲೂ ನೈಸ್ ಯೋಜನೆಯತ್ತ ಗಮನ ಹರಿಸುವುದು ಯಾರ ಉದ್ಧಾರಕ್ಕಾಗಿ ಎಂದು ಪ್ರಶ್ನಿಸಿದರು.
ಇದನ್ನು ಓದಿದ್ದೀರಾ? ‘ಈ ದಿನ’ ವರದಿಗೆ ಎಚ್ಚೆತ್ತ ಅಧಿಕಾರಿಗಳು: ಗುಬ್ಬಿಯ ಹಂದಿಜೋಗಿ ಸಮುದಾಯದ ವಸತಿ ಪ್ರದೇಶಕ್ಕೆ ಭೇಟಿ
ಒಕ್ಕೂಟ ಸರ್ಕಾರವು ತಮಿಳುನಾಡು, ಕೇರಳಕ್ಕೆ ಸಂಪರ್ಕ ಕಲ್ಪಿಸಲು ಇಂಟರ್ಸಿಟಿ ರೈಲು ಯೋಜನೆಗಳ ತ್ವರಿತ ಜಾರಿಗೆ ಆದ್ಯತೆ ನೀಡಬೇಕು. ಚಾಮರಾಜನಗರ, ಕನಕಪುರ ಹಾಗೂ ಮದ್ದೂರು, ಕೆಸ್ತೂರ್, ಕುಣಿಗಲ್, ತುಮಕೂರು ಮಾರ್ಗ ಸೇರಿದಂತೆ, ಬೇರೆ ರೈಲು ಯೋಜನೆಗಳನ್ನು ವೇಗವಾಗಿ ಅನುಷ್ಠಾನಗೊಳಿಸಬೇಕು. ಈ ರೈಲು ಮಾರ್ಗ ಯೋಜನೆಗಳಿಂದ ಬೆಂಗಳೂರಿಗೆ ವಾಹನಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಕರ್ನಾಟಕ ಪ್ರಾಂತ್ಯ ರೈತ ಸಂಘ ಒತ್ತಾಯಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯದರ್ಶಿ ಎನ್ ಲಿಂಗರಾಜಮೂರ್ತಿ, ಉಪಾಧ್ಯಕ್ಷರಾದ ಮರಿಲಿಂಗೇಗೌಡ , ಚಿಕ್ಕಸ್ವಾಮಿ, ಹಿಪ್ಜುಲ್ಲಾ, ಎ.ಎಲ್ ಶಿವಕುಮಾರ್ ಉಪಸ್ಥಿತರಿದ್ದರು.