ಕನ್ನಡ ರಾಜ್ಯೋತ್ಸವವನ್ನು ಕೇವಲ ಒಂದು ದಿನದ ಕಾರ್ಯಕ್ರಮಕ್ಕೆ ಸೀಮಿತಗೊಳಿಸದೆ, ಮನೆಯ ಹಬ್ಬದಂತೆ ಸಂಭ್ರಮದಿಂದ ಆಚರಿಸಬೇಕು. ಬಸ್ ಚಾಲಕರು ಮತ್ತು ನಿರ್ವಾಹಕರು ಪ್ರಯಾಣಿಕರ ಜೀವದ ಜವಾಬ್ದಾರಿ ಹೊತ್ತಿದ್ದು, ಅವರನ್ನು ಸುರಕ್ಷಿತವಾಗಿ ಗಮ್ಯಸ್ಥಾನಕ್ಕೆ ತಲುಪಿಸುವ ಕಾರ್ಯವನ್ನು ಪ್ರಾಮಾಣಿಕತೆಯಿಂದ ನಿರ್ವಹಿಸುತ್ತಿದ್ದಾರೆ ಅವರ ಸೇವೆ ಅನನ್ಯವಾಗಿದೆ ಎಂದು ಶಾಸಕ ಕೊತ್ತೂರು ಜಿ. ಮಂಜುನಾಥ್ ತಿಳಿಸಿದರು
ನಗರದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗೀಯ ಕಚೇರಿ ಆವರಣದಲ್ಲಿ ಭಾನುವಾರ ನಡೆದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಕರ್ನಾಟಕಕ್ಕೆ ತನ್ನದೇ ಆದ ರಾಜ್ಯ ಬಾವುಟವಿದೆ. ಕನ್ನಡದ ವರನಟ ಡಾ. ರಾಜ್ಕುಮಾರ್ ಅವರು ಭಾಷೆ ಮತ್ತು ನಾಡಿನ ಬಗ್ಗೆ ಅಪಾರ ಅಭಿಮಾನ ಹೊಂದಿದ್ದರು. ಕನ್ನಡವನ್ನು ತಾಯಿಯಂತೆ ಗೌರವಿಸಿ ಅದರ ಬೆಳವಣಿಗೆಗೆ ಶ್ರಮಿಸಿದ್ದರು. ಕೋಲಾರ ಜಿಲ್ಲೆ ಡಿ.ವಿ.ಜಿ., ಮಾಸ್ತಿ ಅವರಂತಹ ಮಹನೀಯರನ್ನು ನಾಡಿಗೆ ಕೊಡುಗೆಯಾಗಿ ನೀಡಿದ್ದು, ಜಿಲ್ಲೆಯಲ್ಲಿ ಕನ್ನಡದ ಬಗ್ಗೆ ಅಪಾರ ಜ್ಞಾನ ಮತ್ತು ಅಭಿಮಾನ ಹೊಂದಿರುವವರಿದ್ದಾರೆ. ಮುಂದಿನ ವರ್ಷ ಇನ್ನಷ್ಟು ಅದ್ಧೂರಿಯಾಗಿ ರಾಜ್ಯೋತ್ಸವ ಆಚರಿಸೋಣ ಎಂದರು.
ವಿಧಾನ ಪರಿಷತ್ ಸದಸ್ಯ ಎಂ.ಎಲ್. ಅನಿಲ್ ಕುಮಾರ್ ಮಾತನಾಡಿ, ಹಂಪಿ ಸೇರಿದಂತೆ ನಾಡಿನ ಇತಿಹಾಸ ಮತ್ತು ಜಿಲ್ಲೆಯ ಮಹನೀಯರನ್ನು ನೆನಪಿಸುವ ಶಬ್ದಚಿತ್ರಗಳು ಕನ್ನಡದ ಶ್ರೀಮಂತ ಪರಂಪರೆಯನ್ನು ಸಾರುತ್ತವೆ. ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡುವಲ್ಲಿ ದೇವರಾಜ ಅರಸು ಅವರ ಪಾತ್ರ ಮಹತ್ವದ್ದಾಗಿದೆ. ರಾಜ್ಯೋತ್ಸವವನ್ನು ಒಂದೇ ದಿನಕ್ಕೆ ಸೀಮಿತಗೊಳಿಸದೆ ಮೂರರಿಂದ ಐದು ದಿನಗಳ ಕಾಲ ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯೋತ್ಸವದ ಮಾದರಿಯಲ್ಲಿ ಆಚರಿಸಬೇಕು ಎಂದರು.
ಕೋಲಾರ ಗಡಿಭಾಗದ ಜಿಲ್ಲೆಯಾಗಿದ್ದರೂ ಕನ್ನಡ ಭಾಷೆ, ನೆಲ, ಜಲ ಹಾಗೂ ಗಡಿ ವಿಚಾರಗಳಲ್ಲಿ ಜಿಲ್ಲೆಯ ಜನರು ಸದಾ ಹೋರಾಟದ ಮುಂಚೂಣಿಯಲ್ಲಿದ್ದಾರೆ. ಗೋಕಾಕ್ ಚಳವಳಿ ಹಾಗೂ ಕಾವೇರಿ ಹೋರಾಟದಲ್ಲಿಯೂ ಕನ್ನಡದ ಪರವಾಗಿ ಬೆಂಬಲ ನೀಡಿದ್ದಾರೆ ಎಂದು ತಿಳಿಸಿದರು.
ಇದನ್ನು ಓದಿದ್ದೀರಾ..?ಕೋಲಾರ | ವಾಲ್ಮೀಕಿ, ಅಂಬೇಡ್ಕರ್ ನಮ್ಮ ನಿಜವಾದ ಹೀರೋಗಳು: ಶಾಸಕ ಕೊತ್ತೂರು ಮಂಜುನಾಥ್
ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ವೈ. ಶಿವಕುಮಾರ್, ಕೋಮುಲ್ ನಿರ್ದೇಶಕರಾದ ಚಂಜಿಮಲೆ ರಮೇಶ್, ಷಂಷೀರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಖಾಜಿಕಲ್ಲಹಳ್ಳಿ ಮುನಿರಾಜು, ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಾಥ್ ಸೇರಿದಂತೆ ಜನಪ್ರತಿನಿಧಿಗಳು, ಕನ್ನಡ ಸಂಘದ ಪದಾಧಿಕಾರಿಗಳು ಹಾಗೂ ಸಾರಿಗೆ ನಿಗಮದ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.




