ಕೋಲಾರ ಜಿಲ್ಲೆ, ಶ್ರೀನಿವಾಸಪುರ ತಾಲ್ಲೂಕಿನ ಉಪ್ಪರಪಲ್ಲಿ ಗ್ರಾಮದ ದಲಿತ ರೈತರ ಮೇಲಿನ ದೌರ್ಜನ್ಯದ ಆರೋಪ ಖಂಡಿಸಿ, ಭೂ ಸಂತ್ರಸ್ತರ ಹೋರಾಟ ಸಮಿತಿ ಹಾಗೂ ವಿವಿಧ ರೈತಪರ ಮತ್ತು ದಲಿತ ಸಂಘಟನೆಗಳ ನೇತೃತ್ವದಲ್ಲಿ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನೆಲವಂಕಿ ಹೋಬಳಿಯ ಮಲ್ಲಂಪಲ್ಲಿ ಗ್ರಾಮದ ಸರ್ವೆ ನಂಬರ್ 34 ಮತ್ತು 35ರಲ್ಲಿ ಕಳೆದ 20ರಿಂದ 25 ವರ್ಷಗಳಿಂದ ರೈತರು ಸಾಗುವಳಿ ಮಾಡಿಕೊಂಡು ಬರುತ್ತಿದ್ದು, 2019ರಲ್ಲಿ 19 ದಲಿತ ರೈತರಿಗೆ ಸಾಗುವಳಿ ಚೀಟಿ ನೀಡಲಾಗಿದೆ ಎಂಬುದು ಹೋರಾಟಗಾರರ ವಾದವಾಗಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ರೈತರ ಜಮೀನುಗಳಿಗೆ ಪ್ರವೇಶಿಸಿ ಬೆಳೆಗಳನ್ನು ನಾಶಪಡಿಸುವುದರ ಜೊತೆಗೆ, ರೈತರ ಮೇಲೆ ದಬ್ಬಾಳಿಕೆ ನಡೆಸಿ, ಹಲ್ಲೆ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ರೈತರು ಪೊಲೀಸ್ ಠಾಣೆಗಳಲ್ಲಿ ದೂರು ನೀಡಿದರೂ ಅರಣ್ಯ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಹೋರಾಟಗಾರರು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಪಿ.ಆರ್. ಸೂರ್ಯನಾರಾಯಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾತಕೋಟೆ ನವೀನ್ ಕುಮಾರ್ ಹಾಗೂ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಎಸ್. ಮುನಿಸ್ವಾಮಿ ಸೇರಿದಂತೆ ಹಲವು ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಇದನ್ನು ಓದಿದ್ದೀರಾ..?ಕೋಲಾರ | ವಾಲ್ಮೀಕಿ, ಅಂಬೇಡ್ಕರ್ ನಮ್ಮ ನಿಜವಾದ ಹೀರೋಗಳು: ಶಾಸಕ ಕೊತ್ತೂರು ಮಂಜುನಾಥ್
ಅರಣ್ಯ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೆ ನಡೆಸಿ ಭೂ ವಿವಾದ ಬಗೆಹರಿಸಬೇಕು, ರೈತರ ಮೇಲಿನ ಪ್ರಕರಣಗಳನ್ನು ಪರಿಶೀಲಿಸಿ ನ್ಯಾಯ ಒದಗಿಸಬೇಕು ಹಾಗೂ ರೈತರ ಭೂಮಿಯ ಹಕ್ಕುಗಳನ್ನು ರಕ್ಷಿಸಬೇಕು ಎಂದು ಆಗ್ರಹಿಸಿ, ತಾಲ್ಲೂಕು ಕಚೇರಿಯ ಶಿರಸ್ತೇದಾರ್ ಸಂಪತ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ರೈತರಿಗೆ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಭೂ ಸಂತ್ರಸ್ತರ ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ.




