ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ಹಾನಿಗೊಳಗಾದ ತುಂಗಭದ್ರಾ ಡ್ಯಾಂ(ಜಲಾಶಯ)ನ 19ನೇ ಕ್ರಸ್ಟ್ ಗೇಟನ್ನು ದುರಸ್ತಿ ಮಾಡಲು ಉನ್ನತ ಅನುಭವವುಳ್ಳವರನ್ನು ಕರೆಸುತ್ತಿದ್ದೇವೆ. ಈ ಘಟನೆ ಅತ್ಯಂತ ದುಃಖಕರ ಎಂದು ಉಪಮುಖ್ಯಮಂತ್ರಿ ಮತ್ತು ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ಹೇಳಿದರು.
ಭಾನುವಾರ ಮಧ್ಯಾಹ್ನ ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಮ್ಮ ತುಂಗಭದ್ರಾ ನೀರಾವರಿ ನಿಗಮದಲ್ಲಿಯೂ ಉತ್ತಮ ತಂತ್ರಜ್ಞರಿದ್ದಾರೆ. ಅಲ್ಲದೇ ಗುತ್ತಿಗೆದಾರ ಸಂಸ್ಥೆಗಳಾದ ಕೃಷ್ಣಯ್ಯ, ನಾರಾಯಣ ಹಾಗೂ ಹಿಂದುಸ್ಥಾನ್ ಸಂಸ್ಥೆಯ ತಂಡಗಳು ಈಗಾಗಲೇ ದುರಸ್ತಿ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ತಂತ್ರಜ್ಞರಿಗೆ ಈಗಾಗಲೇ ಅಣೆಕಟ್ಟಿನ ವಿನ್ಯಾಸ ನಕ್ಷೆ ನೀಡಲಾಗಿದೆ” ಎಂದು ಹೇಳಿದರು.
“ಶನಿವಾರ ರಾತ್ರಿ ಜಲಾಶಯದ 10 ಗೇಟ್‌ಗಳನ್ನು ತೆರೆಯಲಾಗಿತ್ತು. ಏಕಾಏಕಿ ಜಲಾಶಯದ 19ನೇ ಗೇಟಿನ ಚೈನ್ ಲಿಂಕ್ ತುಂಡಾದ ಹಿನ್ನೆಲೆಯಲ್ಲಿ ಎಲ್ಲ ಗೇಟ್‌ಗಳನ್ನು ತೆರೆದು ಅಣೆಕಟ್ಟಿನ ಮೇಲಿನ ಒತ್ತಡ ಕಡಿಮೆ ಮಾಡಲಾಗಿದೆ. ಸದ್ಯ ಜಲಾಶಯದಿಂದ 98 ಸಾವಿರ ಕ್ಯುಸೆಕ್ ನೀರನ್ನು ಹೊರಗಡೆ ಬಿಡಲಾಗುತ್ತಿದೆ. 19ನೇ ಗೇಟ್ ಒಂದರಲ್ಲಿಯೇ 35 ಸಾವಿರ ಕ್ಯುಸೆಕ್ ನೀರು ಹೊರಹೋಗುತ್ತಿದೆ. ಅಚ್ಚುಕಟ್ಟು ಪ್ರದೇಶದ ರೈತರು ಭಯಪಡುವ ಅವಶ್ಯಕತೆ ಇಲ್ಲ” ಎಂದು ಹೇಳಿದರು.
ರೈತರ ಒಂದು ಬೆಳೆಗಾದರೂ ನೀರನ್ನು ಉಳಿಸುತ್ತೇವೆ: ಡಿಕೆಶಿ
“ಜಲಾಶಯದಿಂದ 60 ಟಿಎಂಸಿ ನೀರು ಖಾಲಿ ಮಾಡಬೇಕಿದೆ. ಗೇಟನ್ನು ಮತ್ತೆ ಹಾಕಬೇಕೆಂದರೆ ಒತ್ತಡ ಕಡಿಮೆ ಮಾಡಬೇಕಿದೆ. ಜಲಾಶಯದಲ್ಲಿ 150 ಟಿಎಂಸಿ ನೀರನ್ನು ಸಂಗ್ರಹ ಮಾಡಬಹುದು. ಜಲಾಶಯಕ್ಕೆ ಒಳಹರಿವು 28,000 ಕ್ಯುಸೆಕ್ ಇದೆ. ಕನಿಷ್ಠ ನಮ್ಮ ರೈತರಿಗೆ ಒಂದು ಬೆಳೆಗಾದರೂ ಒದಗಿಸುವಷ್ಟು ನೀರನ್ನು ಉಳಿಸಿಕೊಳ್ಳುತ್ತೇವೆ” ಎಂದು ತಿಳಿಸಿದರು.
“ಅಣೆಕಟ್ಟಿನ ಪ್ರಮುಖ ಮೂರು ಕಾಲುವೆಗಳಿಗೆ ನೀರನ್ನು ಹರಿಸಲು 115 ಟಿಎಂಸಿ ನೀರಿನ ಅವಶ್ಯಕತೆ ಇದೆ. ಇದೆಲ್ಲವನ್ನೂ ಲೆಕ್ಕಾಚಾರ ಹಾಕಿ ರೈತರನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ಪಕ್ಕದ ರಾಜ್ಯಗಳಿಗೆ ಈಗಾಗಲೇ 25 ಟಿಎಂಸಿ ನೀರನ್ನು ಕೊಡಲಾಗಿದೆ. ಇನ್ನೂ 90 ಟಿಎಂಸಿ ನೀರನ್ನು ಕೊಡಬೇಕಾಗಿದೆ. ಮೂರು ರಾಜ್ಯಗಳು ಒಟ್ಟಿಗೆ ಸೇರಿ ಈ ಸಮಸ್ಯೆಯನ್ನು ಬಗೆಹರಿಸುತ್ತೇವೆ. ರೈತರು ಆತಂಕಕ್ಕೆ ಒಳಗಾಗಬೇಡಿ” ಎಂದರು.
“ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ ಈ ಮೂರು ರಾಜ್ಯಗಳ ರೈತರಿಗೆ ಬಹುಮುಖ್ಯವಾದ ಜಲಾಶಯ ಇದಾಗಿದೆ. ನಮ್ಮ ಕರ್ನಾಟಕದ 12 ಲಕ್ಷ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವನ್ನು ಇದು ಹೊಂದಿದೆ. ಕೊಪ್ಪಳ, ರಾಯಚೂರು, ಬಳ್ಳಾರಿ ಸೇರಿದಂತೆ ಅನೇಕ ಜಿಲ್ಲೆಗಳು ಇದರಿಂದ ಲಾಭ ಪಡೆಯುತ್ತಿವೆ. ನಮ್ಮ ರೈತರು ಆತಂಕ ಪಡಬೇಕಾಗಿಲ್ಲ ಸರ್ಕಾರ ನಿಮ್ಮ ಜೊತೆಗಿದೆ” ಎಂದು ತಿಳಿಸಿದರು.
“ಇದು 60 ರಿಂದ 70 ವರ್ಷ ಹಳೆಯ ಜಲಾಶಯವಾಗಿದ್ದು. ಘಟನೆಗೆ ಸಂಬಂಧಿಸಿದಂತೆ ನಾನು ಯಾವ ಅಧಿಕಾರಿಗಳನ್ನೂ ದೂರುವುದಿಲ್ಲ. ದೇಶದ ಸಂಪತ್ತನ್ನು ಕಾಪಾಡಬೇಕಿದೆ. ಅಣೆಕಟ್ಟಿನ ಎರಡು ಕಿಲೋಮೀಟರ್ ಸುತ್ತಳತೆಯಲ್ಲಿ ತಂತ್ರಜ್ಞರು ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಹೊರತುಪಡಿಸಿ ಜನಪ್ರತಿನಿಧಿಗಳಿಗೂ ಕೂಡಾ ಪ್ರವೇಶವನ್ನು ನಿರ್ಬಂಧಿಸಲಾಗಿದೆ” ಎಂದರು.
ಬಾಗಿನ ಅರ್ಪಣೆ ಮುಂದೂಡಿಕೆ
“ಆಗಸ್ಟ್ 13ರಂದು ಅಣೆಕಟ್ಟು ತುಂಬಿದ ಹಿನ್ನೆಲೆಯಲ್ಲಿ ನಾನು, ಸಿಎಂ ಬಾಗಿನ ಅರ್ಪಿಸುವ ಕಾರ್ಯಕ್ರಮವಿತ್ತು. ಈಗ ಅದನ್ನು ಮುಂದೂಡಲಾಗಿದೆ. ಮೊದಲು ಅಣೆಕಟ್ಟೆಯ ಸುರಕ್ಷತೆ ನಮಗೆ ಮುಖ್ಯವಾಗಿದೆ” ಎಂದು ತಿಳಿಸಿದ್ದಾರೆ.
ದುರಸ್ತಿಗೆ ಎಷ್ಟು ಸಮಯ ತೆಗೆದುಕೊಳ್ಳುತ್ತದೆಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದು, “ನಮ್ಮ ಅಧಿಕಾರಿಗಳು ಪ್ರತಿಕ್ಷಣವೂ ಎಚ್ಚರಿಕೆಯಿಂದ ಕೆಲಸ ಮಾಡುತ್ತಿದ್ದಾರೆ. ಈ ಘಟನೆಯಾದ ಕ್ಷಣದಿಂದ ತ್ವರಿತವಾಗಿ ಕೆಲಸ ಮಾಡುತ್ತಿದ್ದಾರೆ. ಯಾರ ನಿರ್ಲಕ್ಷ್ಯದಿಂದಲೂ ಈ ಅವಘಡ ಸಂಭವಿಸಿಲ್ಲ. ಆಕಸ್ಮಿಕವಾಗಿ ಈ ಘಟನೆ ನಡೆದಿದೆ” ಎಂದು ಹೇಳಿದರು.
ಇತರೆ ಜಲಾಶಯಗಳನ್ನು ಪರಿಶೀಲಿಸಲಾಗುತ್ತದೆಯೇ ಎಂದು ಕೇಳಿದಾಗ “ಬೇರೆ ಜಲಾಶಯಗಳಲ್ಲಿ ರೋಪ್ ಹಾಗೂ ಚೈನ್ ಎರಡರ ವ್ಯವಸ್ಥೆ ಮಾಡಲಾಗಿರುತ್ತದೆ. ಈ ಜಲಾಶಯವನ್ನು ವಿನ್ಯಾಸ ಮಾಡುವಾಗ ಚೈನ್ ವ್ಯವಸ್ಥೆ ಮಾಡಿದ್ದಾರೆ. ಮೊದಲು ಇಲ್ಲಿನ ಸಮಸ್ಯೆ ಪರಿಹರಿಸಿ ಆನಂತರ ಇತರೆಡೆ ಪರಿಶೀಲನೆ ಮಾಡಲಾಗುವುದು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ರೈಲ್ವೆ ಖಾಸಗೀಕರಣ ಸ್ಥಗಿತಕ್ಕೆ ಎಐಡಿಐಒ ಆಗ್ರಹ
ಕಾಡಾ ಅಧ್ಯಕ್ಷ ಹಸನ್ ಸಾಬ್ ದೋಟಿಹಾಳ, ಶಾಸಕರಾದ ಕೆ ರಾಘವೇಂದ್ರ ಹಿಟ್ನಾಳ್, ಬಸನಗೌಡ ತುರ್ವಿಹಾಳ, ನಾರಾ ಭರತರೆಡ್ಡಿ, ಗವಿಯಪ್ಪ, ಮಾಜಿ ಸಚಿವರಾದ ಆನಂದಸಿಂಗ್, ಅಮರೇಗೌಡ ಬಯ್ಯಾಪುರ, ಸಣ್ಣ ನೀರಾವರಿ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು, ಸಂಸದ ಇ ತುಕಾರಾಂ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿದಂತೆ ಇತರರು ಇದ್ದರು.