ಸೇವೆಯ ಮೂಲಕ ಸಮಾಜದಲ್ಲಿ ಪರಿವರ್ತನೆ ತರಲು ಸಾಧ್ಯವಿದ್ದು, ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಗಮನಹರಿಸಬೇಕು ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.
ಉಡುಪಿಯ ಅಂಬಾಗಿಲು ಕಕ್ಕುಂಜೆ ಸಮೀಪದ ಅನುಗ್ರಹ ಪಾಲನಾ ಕೇಂದ್ರದಲ್ಲಿ ಕ್ಯಾಥೊಲಿಕ್ ಸಭಾ ಪ್ರದೇಶದಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
“ಕ್ರೈಸ್ತ ಸಮುದಾಯದ ಸೇವೆಯನ್ನು ಎಲ್ಲ ವ್ಯಕ್ತಿಗಳೂ ಗುರುತಿಸುತ್ತಾರೆ. ಜನಪ್ರತಿನಿಧಿಗಳಾಗಿ ಆಯ್ಕೆಯಾದವರು ಹಾಗೂ ಸಾಮಾಜಿಕ ಸೇವೆ ಸಂಘಟನೆಗಳಲ್ಲಿ ಚುನಾಯಿತರಾದವರು ದೀನದಲಿತರ, ಹಿಂದುಳಿದವರ ನೋವುಗಳಿಗೆ ಸ್ಪಂದಿಸಿ ಅವರ ಕೆಲಸವನ್ನು ಮಾಡಿಕೊಟ್ಟಾಗ ಅದಕ್ಕಿಂದ ದೊಡ್ಡ ಬಹುಮಾನ ಇನ್ನೊಂದಿಲ್ಲ. ಈ ಮೂಲಕ ಸಮಾಜದಲ್ಲಿ ಇನ್ನಷ್ಟು ಸೇವೆ ನೀಡುವಂತಾಗಲಿ” ಎಂದು ಶುಭ ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, “ಸಮಾಜದ ಎಲ್ಲ ವಿಚಾರಗಳನ್ನು ಅಧ್ಯಯನ ಮಾಡಿದಾಗ ಮಾತ್ರ ಸೇವೆಗೆ ನಿಜವಾದ ಅರ್ಥ ಲಭಿಸುತ್ತದೆ. ಸ್ವಾತಂತ್ರ್ಯದ ಬಳಿಕ ದೇಶದಲ್ಲಿ ಶಿಕ್ಷಣದ ಮೂಲಕ ಸಜ್ಜನ ನಾಗರಿಕರನ್ನಾಗಿ ಮಾಡುವ ಕೆಲಸ ಸಮುದಾಯದಿಂದ ನಡೆಯುತ್ತಿದ್ದು, ಈ ಕಾರ್ಯ ಇನ್ನಷ್ಟು ಮುಂದುವರೆಯಲಿ” ಎಂದರು.
ವಿಧಾನಪರಿಷತ್ ಸದಸ್ಯ ಎಸ್ ಎಲ್ ಭೋಜೆಗೌಡ ಮಾತನಾಡಿ, “ಸಂವಿಧಾನದ ಆಶಯದಂತೆ ಪ್ರತಿಯೊಬ್ಬರಿಗೂ ಶಿಕ್ಷಣ ಮತ್ತು ಆರೋಗ್ಯದ ಸೇವೆ ನೀಡುವ ಮೂಲಕ ಸ್ವಾಸ್ಥ್ಯಯುತ ಸಮಾಜ ನಿರ್ಮಾಣದಲ್ಲಿ ಕೈಜೋಡಿಸಿರುವ ಕ್ರೈಸ್ತ ಸಮುದಾಯದ ಕಾರ್ಯ ಶ್ಲಾಘನೀಯವಾಗಿದೆ. ಶಿಕ್ಷಣ ಸಂಸ್ಥೆಗಳ ಕುರಿತು ಇರುವ ಯಾವುದೇ ರೀತಿಯ ಕೆಲಸಗಳನ್ನು ಮಾಡಿಕೊಡುವ ಕೆಲಸದಲ್ಲಿ ತಾನು ಪ್ರಾಮಾಣಿಕವಾಗಿ ಮಾಡಲು ಸಿದ್ದನಿದ್ದೇನೆ” ಎಂದು ಹೇಳಿದರು.
ಇದೇ ವೇಳೆ ನೂತನವಾಗಿ ಚುನಾಯಿತರಾದ ಜನಪ್ರತಿನಿಧಿಗಳಿಗೆ ಹಾಗೂ ಸಾಮಾಜಿಕ ಸೇವಾ ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ ಚುನಾಯಿತರಾದವರನ್ನು ಸನ್ಮಾನಿಸಲಾಯಿತು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಕೊಚ್ಚಿಹೋದ ತುಂಗಭದ್ರಾ ಡ್ಯಾಂ ಗೇಟ್; ಡಿ ಕೆ ಶಿವಕುಮಾರ್ ವೀಕ್ಷಣೆ
ಕ್ಯಾಥೊಲಿಕ್ ಸಭಾ ಉಡುಪಿ ಪ್ರದೇಶ ಅಧ್ಯಕ್ಷ ಸಂತೋಷ್ ಕರ್ನೇಲಿಯೊ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ಸೋಪ್ಸ್ ಆ್ಯಂಡ್ ಡಿಟರ್ಜೆಂಟ್ ಮಾಜಿ ಅಧ್ಯಕ್ಷ ವೆರೋನಿಕಾ ಕರ್ನೇಲಿಯೊ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಜೆರಾಲ್ಡ್ ಫೆರ್ನಾಂಡಿಸ್ ಅಭಿನಂದನಾ ನುಡಿಗಳನ್ನಾಡಿದರು. ಕ್ಯಾಥೊಲಿಕ್ ಸಭಾ ನಿಕಟಪೂರ್ವ ಅಧ್ಯಕ್ಷೆ ಮೇರಿ ಡಿ’ಸೋಜ, ಪ್ರಧಾನ ಕಾರ್ಯದರ್ಶಿ ಒಲಿವಿಯಾ ಜೆ. ಡಿಮೆಲ್ಲೊ ಇದ್ದರು.