ಕುಮಟಾ ತಾಲೂಕಿನ ಹೆಗಲೆಯಲ್ಲಿರುವ ಶ್ರೀಪತಿ ವೆಂಕಟ್ರಮಣ ಆಚಾರಿ ಅವರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕಳ್ಳರು ನುಗ್ಗಿ ಚಿನ್ನಾಭರಣ, ಬೆಳ್ಳಿ ಸರಗಳು ಹಾಗೂ ನಗದು ಹಣವನ್ನು ಕಳವು ಮಾಡಿದ್ದಾರೆ.
ಸೆಪ್ಟೆಂಬರ್ 26ರ ಸಂಜೆ 6 ಗಂಟೆಯಿಂದ ಅಕ್ಟೋಬರ್ 8ರ ಬೆಳಿಗ್ಗೆ 11 ಗಂಟೆಯ ನಡುವಿನ ಅವಧಿಯಲ್ಲಿ ಈ ಕಳ್ಳತನ ನಡೆದಿದೆ. ಮನೆಯ ಹಿಂಬಾಗಿಲು ತೆರೆದು ಒಳನುಗ್ಗಿದ ಕಳ್ಳರು, ಕೋಣೆಯಲ್ಲಿದ್ದ ಸ್ಟೀಲ್ ಕಪಾಟುಗಳಲ್ಲಿನ ಚಿನ್ನಾಭರಣಗಳನ್ನು ಕದ್ದೊಯ್ದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕಳವಾದ ವಸ್ತುಗಳಲ್ಲಿ ಎರಡು ಜೊತೆ ಬಂಗಾರದ ಕುಡುಕುಗಳು, ಒಂದು ಬಂಗಾರದ ಉಂಗುರ, ಒಂದು ಮೂಗುತಿ, ಚಿಕ್ಕ ಮಕ್ಕಳ ಎರಡು ಬಂಗಾರದ ಚೈನುಗಳು, ಚಿಕ್ಕ ಮಕ್ಕಳ ನಾಲ್ಕು ಬಂಗಾರದ ಉಂಗುರಗಳು, ಮೂರು ಬೆಳ್ಳಿಯ ಚೈನುಗಳು ಹಾಗೂ ₹15 ಸಾವಿರ ನಗದು ಸೇರಿವೆ.
ಈ ಕುರಿತು ಶ್ರೀಪತಿ ವೆಂಕಟ್ರಮಣ ಆಚಾರಿ ನೀಡಿದ ದೂರಿನ ಮೇರೆಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 214/2026ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) 2023ರ ಕಲಂ 331(3), 331(4) ಮತ್ತು 305ರ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.




