ಮಂಡ್ಯ ಜಿಲ್ಲೆಯ ಪ್ರಮುಖ ಸಮಸ್ಯೆ, ಐತಿಹಾಸಿಕ ಮೈಶುಗರ್ ಕಾರ್ಖಾನೆ ಉಳಿವು, ಕೆಆರ್ ಎಸ್ ನ ಬೃಂದಾವನ ಉದ್ಯಾನವನ ಅಭಿವೃದ್ಧಿ ಸೇರಿದಂತೆ ವಿವಿಧ ವಿಚಾರವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಜಿಲ್ಲೆಯ ನಾಯಕರು ಹಾಗೂ ಇಲಾಖೆ ಅಧಿಕಾರಿಗಳ ಜತೆ ಶುಕ್ರವಾರ ಚರ್ಚೆ ನಡೆಸಿದರು.
“ಮಂಡ್ಯ ಜಿಲ್ಲೆಯ ಸಮಸ್ಯೆ ಕುರಿತು ಇಲ್ಲಿನ ನಾಯಕರ ಜತೆ ಚರ್ಚೆ ಮಾಡಿದ್ದೇವೆ. ಐತಿಹಾಸಿಕ ಮೈಷುಗರ್ ಕಾರ್ಖಾನೆ ಹೇಗೆ ಉಳಿಸಿಕೊಳ್ಳಬೇಕು ಎಂದು ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದೆವು. ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು, ರೈತರಿಗೆ ಅನುಕೂಲ ಮಾಡಿಕೊಳ್ಳಬೇಕು ಎಂಬ ಉದ್ದೇಶದಿಂದ ಸಭೆ ಮಾಡಿದ್ದೇವೆ. ಹೊಸ ಕಾರ್ಖಾನೆ ಆರಂಭಿಸಬೇಕಾ ಅಥವಾ ಇರುವ ಕಾರ್ಖಾನೆಗೆ ಹೊಸ ವ್ಯವಸ್ಥೆ ಕಲ್ಪಿಸುವುದೇ ಎಂದು ತಾಂತ್ರಿಕ ಸಮಿತಿ ಮುಂದೆ ಚರ್ಚೆ ಮಾಡಿದ್ದೇವೆ” ಎಂದು ತಿಳಿಸಿದರು.
“10 ಸಾವಿರ ಟಿಸಿಡಿ ಮಾಡುವುದು ನಮ್ಮ ಮುಂದೆ ಇರುವ ಆಯ್ಕೆ. ಇದನ್ನು ಮಾಡಿದರೆ ಬೇಕಾಗಿರುವ ಕಬ್ಬನ್ನು ಎಲ್ಲಿಂದ ತರುವುದು? ಬೆಳೆ ಪ್ರಮಾಣ ಎಷ್ಟಿದೆ? ಎಂದು ಅಧಿಕಾರಿಗಳ ಜತೆ ಸುದೀರ್ಘ ಚರ್ಚೆ ಮಾಡಿದ್ದೇವೆ. ಈಗಿರುವ 5 ಸಾವಿರ ಟಿಸಿಡಿ ಸಂಪೂರ್ಣವಾಗಿ ನಡೆದು ಅಲ್ಲಿ ಎಥೆನಾಲ್ ಘಟಕ ಸೇರಿದಂತೆ ಎಲ್ಲವೂ ಕಾರ್ಯಾರಂಭವಾಗಿ ಸಂಸ್ಥೆ ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಬೇಕು. ನಾವು ದೊಡ್ಡ ಕಾರ್ಖಾನೆ ಮಾಡುವುದು ದೊಡ್ಡದಲ್ಲ. ಅದಕ್ಕೆ ತಕ್ಕಂತೆ ರೈತರು ಕಬ್ಬು ಬೆಳೆಯಲು ಉತ್ತೇಜನ ನೀಡಬೇಕು” ಎಂದು ತಿಳಿಸಿದರು.
“ನಮಗಿರುವ ವರದಿ ಪ್ರಕಾರ ಅಕಾಲಿಕ ಮಳೆಯಿಂದಾಗಿ ರೈತರು ಕಬ್ಬು ಬೆಳೆಯುವುದನ್ನು ಬಿಟ್ಟು ಬೇರೆ ಬೆಳೆ ಬೆಳೆಯಲು ಮುಂದಾಗುತ್ತಿದ್ದಾರೆ. ಎರಡು ಸಾವಿರ ರೈತರು ಕಬ್ಬು ಬೆಳೆಗೆ ಮುಂದಾಗಿದ್ದಾರೆ. ಇದಕ್ಕೆ ಏನು ಮಾಡಬೇಕು ಎಂದು ಚರ್ಚೆ ಮಾಡಿದ್ದೇವೆ. ಜಿಲ್ಲೆಯಲ್ಲಿ ಈ ಕಾರ್ಖಾನೆ ಜತೆಗೆ ಇನ್ನು ಐದಾರು ಕಾರ್ಖಾನೆಗಳಿವೆ. ಎಲ್ಲವೂ ಸುಸ್ಥಿರವಾಗಿರಬೇಕು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
