ಪ್ಯಾರಿಸ್ ಒಲಿಂಪಿಕ್ಸ್ 2024ರಿಂದ ಕುಸ್ತಿಪಟು ವಿನೇಶ್ ಫೋಗಟ್ ಅವರು ಅನರ್ಹಗೊಂಡಿರುವ ಬಗ್ಗೆ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ (ಸಿಎಎಸ್) ಇಂದು ತನ್ನ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ಒಲಿಂಪಿಕ್ಸ್ ಅಂತ್ಯದ ವೇಳೆಗೆ ಅಂದರೆ ಆಗಸ್ಟ್ 11ಕ್ಕೂ ಮುನ್ನ ತೀರ್ಪು ನೀಡುವುದಾಗಿ ತಿಳಿಸಿದೆ.
ಪ್ಯಾರಿಸ್ ಒಲಿಂಪಿಕ್ಸ್‌ನ 50 ಕೆಜಿ ಕುಸ್ತಿ ವಿಭಾಗದ ಫೈನಲ್ ಪಂದ್ಯಕ್ಕೂ ಮುನ್ನ ನಿಗದಿತ ತೂಕಕ್ಕಿಂತ 100 ಗ್ರಾಂ ಅಧಿಕವಾಗಿದ್ದ ಕಾರಣ ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಅನರ್ಹಗೊಂಡಿದ್ದರು. ಈ ನಿರ್ಧಾರವನ್ನು ಪ್ರಶ್ನಿಸಿ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ ವಿನೇಶ್ ಅರ್ಜಿ ಸಲ್ಲಿಸಿದ್ದರು.
ಇದನ್ನು ಓದಿದ್ದೀರಾ? ಪ್ಯಾರಿಸ್ ಒಲಿಂಪಿಕ್ಸ್ | ವಿನೇಶ್ ಫೋಗಟ್ ಅನರ್ಹತೆ ಪ್ರಕರಣ ಎತ್ತುವ ಪ್ರಶ್ನೆಗಳು
ತನಗೆ ಫೈನಲ್ ಪಂದ್ಯವನ್ನು ಆಡಲು ಅನುಮತಿ ನೀಡಬೇಕೆಂದು ವಿನೇಶ್ ಮನವಿ ಮಾಡಿದ್ದಾರೆ. ಆದರೆ ವಿನೇಶ್ ಅವರ ಮನವಿಯ ಮೇರೆಗೆ ಫೈನಲ್ ಪಂದ್ಯವನ್ನು ತಡಮಾಡಲಾಗದು ಎಂದು ಸಿಎಎಸ್ ಹೇಳಿತ್ತು. ಅದಾದ ಬಳಿಕ ತನಗೆ ಜಂಟಿ ಬೆಳ್ಳಿ ಪದಕವನ್ನಾದರೂ ನೀಡಬೇಕೆಂದು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯವನ್ನು ವಿನೇಶ್ ಕೋರಿದ್ದರು.
ಈ ಬೆನ್ನಲ್ಲೇ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯವು ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದೆ. ವಿನೇಶ್ ಫೋಗಟ್ ಅನರ್ಹತೆಯ ವಿರುದ್ಧದ ಅರ್ಜಿಯ ಬಗ್ಗೆ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟ ಮುಗಿಯುವ ಮೊದಲು ತೀರ್ಪು ಪ್ರಕಟಿಸುವುದಾಗಿ ತಿಳಿಸಿದೆ.