ಇಡೀ ರಾಜ್ಯದಲ್ಲಿ ಡೆಂಘೀ ಜ್ವರ ಹರಡುತ್ತಾ ಇರುವಾಗ ನೈರ್ಮಲ್ಯ ಕಾಪಾಡಿ, ನೀರು ನಿಲ್ಲದಂತೆ, ಸೊಳ್ಳೆಗಳು ಬೆಳೆದು ಹರಡದಂತೆ ಮಾಡಿ ಎಂದು ಆರೋಗ್ಯ ಇಲಾಖೆಯವರು ಪ್ರಚಾರ ಮಾಡುತ್ತಿದ್ದಾರೆ. ಆದರೆ, ಇದಕ್ಕೆ ತದ್ವಿರುದ್ಧವಾಗಿ ಮಂಡ್ಯ ವೈದ್ಯಕೀಯ ಕಾಲೇಜು ನಡೆದುಕೊಳ್ಳುತ್ತಿದೆ ಅಂದರೆ ನೀವು ಆಶ್ಚರ್ಯಪಡಬಹುದು.
ಹೌದು. ಮಂಡ್ಯ ಆರೋಗ್ಯ ಇಲಾಖೆಯ ಭಾಗವಾದ ಮಂಡ್ಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಆವರಣವನ್ನೊಮ್ಮೆ ಗಮನಿಸಿದರೆ ಸಾಕು, ಸೊಳ್ಳೆ ಉತ್ಪಾದನಾ ಕೇಂದ್ರವಾಗಿದೆ. ಇದು ದುರಂತವೇ ಸರಿ.
ಮಂಡ್ಯ ವೈದ್ಯಕೀಯ ಕಾಲೇಜು ವಾರ್ಡುಗಳು ಹಾಗೂ ತಮಿಳು ಕಾಲೋನಿಗಳ ನಡುವೆ ಬರುವ ಜಾಗದಲ್ಲಿ ತೆರೆದ ಚರಂಡಿ ಇದೆ. ಕಟ್ಟಡದ ಮೇಲಿಂದ ಗಲೀಜು ನೀರು ಸೋರುತ್ತಿದೆ. ಆ ನೀರು ತಗ್ಗಿನಲ್ಲಿ ನಿಂತಿದೆ. ಜೊತೆಗೆ ಒಳಚರಂಡಿಯ ನೀರು ಸೇರಿ, ಆಸ್ಪತ್ರೆಯ ಆವರಣವೇ ಸೊಳ್ಳೆಯ ಆವಾಸಸ್ಥಾನ ಮಾರ್ಪಟ್ಟಿದೆ.

ಕೆಲವು ದಿನಗಳ ಹಿಂದೆ ಹತ್ತು ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿ ಒಳಚರಂಡಿಗೆ ಹೊಸ ಪೈಪ್‌ಲೈನ್ ಹಾಕುವ ಮೂಲಕ ಸರಿ ಮಾಡಿದ್ದರು. ಹೊಸ ಲೈನ್ ಹಾಕಿದ್ದರೂ ಕೂಡ ಸಹ ವ್ಯವಸ್ಥೆ ಸರಿ ಹೋಗಿಲ್ಲ. ಒಳಚರಂಡಿ ವ್ಯವಸ್ಥೆ ಸೋರುತ್ತಿದೆ.
ಸರಕಾರ ಇತ್ತೀಚೆಗೆ ಹತ್ತು ಲಕ್ಷ ಖರ್ಚು ಮಾಡಿ ಹೊಸ ಒಳಚರಂಡಿ ವ್ಯವಸ್ಥೆ ಸರಿ ಮಾಡಿದ್ದರೂ ಕೂಡ ಪೂರ್ಣ ಅದ್ವಾನ ಆಗಿ ಕೊಳಚೆ ನೀರು ಹೊರ ಬರುತ್ತಿದೆ. ವಾರ್ಡ್ ಮಗ್ಗುಲಲ್ಲಿಯೇ ನಿಂತಿದ್ದು, ಸೊಳ್ಳೆ ಉತ್ಪಾದನೆ ಕೇಂದ್ರವಾಗಿದೆ. ವಾರ್ಡ್ ಒಳಗಡೆ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಒಳಚರಂಡಿ ನೀರು, ಶೌಚಾಲಯದ ಗಲೀಜು ನೀರಿನಿಂದ ಉತ್ಪತ್ತಿಯಾಗುತ್ತಿರುವ ಸೊಳ್ಳೆಗಳ ನಡುವೆಯೇ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕಾದ ದುಸ್ಥಿತಿ ಬಂದೊದಗಿದೆ.
ಗಲೀಜು ನೀರಿನಿಂದಾಗಿ ಅನೈರ್ಮಲ್ಯ ತುಂಬಿದೆ. ವಾರ್ಡ್ ಉದ್ದಕ್ಕೂ ಒಳಚರಂಡಿ ನೀರು ನಿಂತಿದ್ದು, ಸೊಳ್ಳೆಗಳು ಉತ್ಪತ್ತಿಯಾಗುತ್ತಿರುವುದು ಕಣ್ಣಾರೆ ಕಾಣಸಿಗುತ್ತದೆ . ಮಂಡ್ಯ ವೈದ್ಯಕೀಯ ಕಾಲೇಜು ನಿರ್ದೇಶಕರು, ವೈದ್ಯಕೀಯ ಶಿಕ್ಷಣ ಸಚಿವ ಶರಣ ಪಾಟೀಲ್ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಇತ್ತ ಗಮನ ಹರಿಸಬೇಕಾದ ಅವಶ್ಯಕತೆ ಇದೆ.
ಡೆಂಘೀ ಜ್ವರ ನಿಯತ್ರಣಕ್ಕೆ ಬರಬೇಕಾದರೆ ನಗರದ ನೈರ್ಮಲ್ಯದ ಜೊತೆ ಜೊತೆಗೆ ಆಸ್ಪತ್ರೆ ಆವರಣದ ಒಳಚರಂಡಿ ಕೂಡ ಸರಿ ಆಗಬೇಕಾಗಿದೆ.
ವಾರ್ಡಿನ ಮತ್ತೊಂದು ಮಗ್ಗುಲಲ್ಲಿ ಗಿಡ ಗಂಟಿಗಳು ಬೆಳೆದು ನಿಂತು ಸೊಳ್ಳೆಗಳ ತಾಣವಾಗಿದೆ. ಹಳೆಯ ಮಂಚ, ಸ್ಟ್ಯಾಂಡ್, ಅಂಬ್ಯುಲೆನ್ಸ್ ಇನ್ನಿತರ ಗುಜರಿ ಸಾಮಾನುಗಳನ್ನು ಇಟ್ಟಿರುವುದರಿಂದ ರೋಗಿಗಳಿಗೆ ತೊಂದರೆಯಾಗಿದೆ ಹಾಗೂ ಹರಾಜು ಹಾಕಿ ವಿಲೇವಾರಿ ಮಾಡದ ಕಾರಣ ಸರಕಾರಕ್ಕೂ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.
ಜುಲೈ 12ರಂದು ನಡೆದ 2೦24-25ನೇ ಸಾಲಿನ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಂಡ್ಯ ಶಾಸಕರಾದ ರವಿ ಗಣಿಗರವರು, “ರಾಜ್ಯದಲ್ಲಿ ಡೆಂಘೀ ಪ್ರಕರಣಗಳು ಹೆಚ್ಚುತ್ತಿವೆ. ಸ್ವಚ್ಛತೆಯ ಬಗ್ಗೆ ನಿಗಾವಹಿಸಿ. ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ಎಚ್ಚರದಿಂದ ಇರಬೇಕು . ಡೆಂಘೀ ತಡೆಗೆ ಕ್ರಮ ತೆಗೆದುಕೊಳ್ಳಬೇಕು. ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳಬೇಕು. ಸಣ್ಣಪುಟ್ಟ ರೋಗಗಳಿಗೆಲ್ಲಾ ಮೈಸೂರಿನ ಆಸ್ಪತ್ರೆಗಳಿಗೆ ಕಳುಹಿಸ ಕೂಡದು” ಎಂದು ಮೀಮ್ಸ್ ವೈದ್ಯಕೀಯ ಅಧೀಕ್ಷಕ ಶಿವಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಆದರೂ ಎಚ್ಚೆತ್ತುಕೊಂಡಿಲ್ಲ ಎಂಬುದೇ ವಾಸ್ತವ ಸಂಗತಿ.
ಮಂಡ್ಯ ನಗರಸಭೆಯವರು ಕೂಡ ಇತ್ತ ಗಮನಹರಿಸಬೇಕಾದ ಅವಶ್ಯಕತೆ ಇದೆ. ಒಳಚರಂಡಿಗೆ ಹೊಸ ಪೈಪ್‌ಲೈನ್ ಕಾಮಗಾರಿಗೆ ಲಕ್ಷಾಂತರ ರೂ ಖರ್ಚು ಮಾಡಲಾಗಿದೆ. ಕಾಮಗಾರಿ ಕಳಪೆಯಾಗಿರುವುದರಿಂದ ಸಂಬಂಧಿಸಿದ ಗುತ್ತಿಗೆದಾರನ ಬಿಲ್ ಅನ್ನು ತಡೆ ಹಿಡಿದು, ಈಗ ಉಂಟಾಗಿರುವ ಎಲ್ಲ ಸಮಸ್ಯೆಗಳನ್ನು ಸರಿಪಡಿಸುವ ಕೆಲಸ ಆಗಬೇಕಿದೆ. ಜೊತೆಗೆ ಇದರ ಮೇಲ್ವಿಚಾರಣೆ ಹೊತ್ತ ಇಂಜಿನಿಯರ್ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಬೇಕಿದೆ.
