ಮಂಡ್ಯ ಜಿಲ್ಲೆಯಲ್ಲಿ ದಿನೇ ದಿನೇ ಮೈಕ್ರೋ ಫೈನಾನ್ಸ್‌ಗಳ ಹಾವಳಿ ಜೋರಾಗಿದ್ದು, ಈಗಾಗಲೇ ಸಾಲ ಪಡೆದುಕೊಂಡಿದ್ದವರ ಪೈಕಿ ಮಹಿಳೆಯರೂ ಕೂಡ ಇದ್ದು, ಸಂಕಷ್ಟದಿಂದ ಹೊರಬರಲು ಪರದಾಟ ನಡೆಸುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.
ಮಂಡ್ಯದಲ್ಲಿ ಧರ್ಮಸ್ಥಳದಂತಹ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಅಂದಾಜು 40% ವರೆಗೆ ಬಡ್ಡಿ ಹಾಕುತ್ತಾರೆ. ಮಂಡ್ಯ ತಾಲೂಕಿನ ಹೊಳಲು ಗ್ರಾಮವೊಂದರಲ್ಲೇ ಸುಮಾರು 500 ಕುಟುಂಬಗಳು ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆ ಯೋಚನೆ ಮಾಡುತ್ತಿವೆ. ಈ ಸಂಬಂಧ ಪಂಚಾಯಿತಿ ಮುಂದೆ ಹಳ್ಳಿಯ ಹೆಣ್ಣು ಮಕ್ಕಳು ಹೋರಾಟ ಮಾಡಿದ್ದಾರೆ.
ಮಳವಳ್ಳಿಯಲ್ಲಿಯೂ ಧರ್ಮಸ್ಥಳದ ಸಂಘದಲ್ಲಿ ಸಾಲ ಪಡೆದ ಮಹಿಳೆಯರು ಸಾಲ ಮರುಪಾವತಿ ಮಾಡದಿದ್ದಾಗ ಸಂಘದ ಅಧಿಕಾರಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವಿಚಾರಗಳಿಗೆ ಸಂಬಂಧಿಸಿದಂತೆ ಹೊಳಲು ಗ್ರಾಮ ಸೇರಿದಂತೆ ಹಲವು ಕಡೆ ಮಹಿಳಾ ಮುನ್ನಡೆ ತಂಡ ಸಂಘಟನೆಯವರು ಭೇಟಿ ನೀಡಿ, ಮಾತನಾಡಿಸಿತು. ಈ ವೇಳೆ ಹಲವಾರು ವಿಚಾರಗಳು ಗೊತ್ತಾಗಿದೆ.

ಸುಮಾರು 50ಕ್ಕಿಂತ ಹೆಚ್ಚು ಮೈಕ್ರೋ ಫೈನಾನ್ಸ್ ಸಂಸ್ಥೆಗಳಿವೆ. ಒಬ್ಬೊಬ್ಬ ಮಹಿಳೆಯು ಸುಮಾರು 10 ಸಂಘಗಳಲ್ಲಿ ಸಾಲ ಪಡೆದು, ಸಾಲ ಕಟ್ಟಲಾಗದೆ ಪರದಾಡುತ್ತಿರುವುದು ಬೆಳಕಿಗೆ ಬಂದಿದೆ. ಮೈಕ್ರೋ ಫೈನಾನ್ಸ್ ಸಂಸ್ಥೆಗಳು ತಾವೇ ಖುದ್ದಾಗಿ ಹಳ್ಳಿಗಳಿಗೆ ಹೋಗಿ ಆಧಾರ್ ಕಾರ್ಡ್ ಆಧಾರದಲ್ಲಿ ಸಾಲಗಳನ್ನು ಕೊಡುತ್ತೇವೆಂದು ಪ್ರಚೋದಿಸಿ, ಅಧಿಕ ಬಡ್ಡಿ ವಸೂಲಿ ಮಾಡಿ ಅನೈತಿಕವಾಗಿ ಜಿಲ್ಲೆಯ ಜನರ ಮೇಲೆ ಸಾಲದ ಹೊರೆ ಹೊರಿಸುತ್ತಿವೆ. ಬಡ ಕುಟುಂಬಗಳನ್ನು ಸಂಕಷ್ಟಕ್ಕೆ, ಸಾವಿನ ದವಡೆಗೆ ತಳ್ಳುತ್ತಿರುವುದು ಬೆಳಕಿಗೆ ಬಂದಿದೆ.
ಒಬ್ಬರಿಗೆ ಸಾಲ ಕೊಡಲು ಗುಂಪಿನ ಎಲ್ಲರ ಜಾಮೀನು ಪಡೆದುಕೊಳ್ಳುತ್ತವೆ. ಕಮಿಷನ್ ಆಸೆ ಮೇಲೆ ಸಾಲವನ್ನು ಕೊಡಿಸಿಕೊಡಲು ಪ್ರಚೋದಿಸುತ್ತವೆ. ಸಾಲವನ್ನು ಪಡೆದವರು ಮರುಪಾವತಿ ಮಾಡದೇ ಇದ್ದಾಗ ಜಾಮೀನು ನೀಡಿದ ಮಹಿಳೆಯರನ್ನು ಸಾಲ ಪಡೆದಿದ್ದ ಮಹಿಳೆಯರ ಮೇಲೆ ಎತ್ತಿ ಕಟ್ಟಿ ಅವರನ್ನೇ ವಸೂಲಿಗೆ ಕಳುಹಿಸುತ್ತಿದ್ದು, ಈ ವೇಳೆ ಗ್ರಾಮದಲ್ಲಿ ಪರಸ್ಪರ ಮಹಿಳೆಯರೇ ಬಡಿದಾಡಿಕೊಳ್ಳುವಂತಹ ಪರಿಸ್ಥಿತಿ ನಿರ್ಮಿಸಿರುವುದು ತಿಳಿದುಬಂದಿದೆ. ನಾಯಿ ಕೊಡೆಗಳಂತೆ ಹುಟ್ಟಿಕೊಂಡಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಇಂದು ಸಾಮಾಜಿಕ ಪಿಡುಗಾಗಿ ಬದಲಾಗಿದೆ ಎಂದು ಮಹಿಳಾ ಮುನ್ನಡೆ ತಿಳಿಸಿದೆ.

ಗ್ರಾಮ ಹಳ್ಳಿಯ ಜನರು ದುಡಿಮೆ ಇಲ್ಲದೆ ಬರಗಾಲದ ಪರಿಸ್ಥಿತಿಯನ್ನು ಎದುರಿಸಿ ಬೆಳೆದ ಬೆಳೆಗಳು ಕೈಗತ್ತುತಿಲ್ಲ. ಬೆಳೆಯೂ ಇಲ್ಲದೆ ಬದುಕು ನಡೆಸಲು, ಮಕ್ಕಳಿಗೆ ಶಿಕ್ಷಣ ಕೊಡಿಸಲು ಸಾಧ್ಯವಾಗದಿರುವಾಗ ಊರು ಬಿಟ್ಟು ಹೋಗುತ್ತಿರುವ ಕುಟುಂಬಗಳ ಸಂಖ್ಯೆಯೂ ಹೆಚ್ಚಾಗಿದೆ. ಸಾಲ ಕೊಡುವಾಗ ಇನ್ಶೂರೆನ್ಸ್ ಮಾಡಿಸಲಾಗಿರುತ್ತದೆ. ಸಾಲ ಪಡೆದವರು ಮೃತಪಟ್ಟರೆ ಸಾಲ ಮನ್ನಾ ಮಾಡುತ್ತಾರೆ. ಈ ವಿಚಾರಕ್ಕೆ ಹಲವು ಜನ ಸತ್ತರೆ ಸಾಲ ಮನ್ನಾವಾಗುತ್ತದೆ, ಕುಟುಂಬ ನೆಮ್ಮದಿಯಿಂದ ಬದುಕು ಮಾಡುತ್ತದೆ ಎಂದು ಆತ್ಮಹತ್ಯೆ ಮಾಡಿಕೊಂಡ ಸಾಕಷ್ಟು ಉದಾಹರಣೆಗಳೂ ಕೂಡ ಮಂಡ್ಯ ಜಿಲ್ಲೆಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಒಬ್ಬ ಮಹಿಳೆ ಗರ್ಭಕೋಶದ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರೂ ಕೂಡ ಬಿಡದೆ, ಅಂತ ಸಂದರ್ಭದಲ್ಲಿಯೂ ಆಸ್ಪತ್ರೆಗೆ ತೆರಳಿ ಸಾಲ ವಸೂಲಿ ಮಾಡಲಾಗಿದೆ ಎಂಬ ಮಾತುಗಳು ಮೈಕ್ರೋ ಫೈನಾನ್ಸುಗಳ ಅಮಾನವೀಯತೆಯ ಇನ್ನೊಂದು ಮಜಲುಗಳನ್ನು ತೆರೆದಿಟ್ಟಿದೆ.
ಇದನ್ನು ಓದಿದ್ದೀರಾ? ಕೌಟುಂಬಿಕ ಸಮಸ್ಯೆ ಬಗೆಹರಿಸಿಕೊಳ್ಳಲು ದಂಪತಿಯನ್ನು ಮಠಕ್ಕೆ ಕಳಿಸಿದ ನ್ಯಾ. ದೀಕ್ಷಿತ್; ಚಿಂತಕರ ವಿರೋಧ
ಇಷ್ಟೆಲ್ಲಾ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸರ್ಕಾರ ಸರ್ಕಾರದಿಂದ ಮಾನ್ಯತೆ ಪಡೆದು, ತೆರಿಗೆ ಕಟ್ಟಿ ಅಧಿಕೃತವಾಗಿ ಪರವಾನಗಿಯನ್ನು ಪಡೆದುಕೊಂಡಿದ್ದಾರೆಯೇ? ಸರ್ಕಾರ ಮತ್ತು ಜಿಲ್ಲಾಡಳಿತ ಇವರ ಮೇಲೆ ಪರಿಶೀಲಿಸಿ ಗಂಭೀರ ಕ್ರಮ ಕೈಗೊಳ್ಳಬೇಕು. ಬರಗಾಲದಿಂದ ಸಂಕಷ್ಟದಿಂದ ತತ್ತರಿಸಿರುವ ಮನೆ ಮುಂದೆ ಸಾಲ ಕಟ್ಟಲು ಕಿರುಕುಳ ನೀಡದಂತೆ ಆದೇಶ ಹೊರಡಿಸಬೇಕು. ಸರಕಾರ ಈ ಕೂಡಲೇ ಆತ್ಮಹತ್ಯೆ ದಾರಿ ಹಿಡಿದಿರುವ ಮತ್ತು ಊರು ಬಿಟ್ಟು ಹೊರ ಹೋಗಿರುವ ಕುಟುಂಬಗಳ ಸಾಲ ಮನ್ನಾ ಮಾಡಿಸಬೇಕು. ಜೊತೆಗೆ ಜನರನ್ನು ಸುಲಿಗೆ ಮಾಡುತ್ತಿರುವ ಮೈಕ್ರೋಫೈನಾನ್ಸ್ ಗಳ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದು ಮಹಿಳಾ ಮುನ್ನಡೆ ಒತ್ತಾಯಿಸಿದೆ.
ನೇಣು ಕುಣಿಕೆಯೊಂದಿಗೆ ಮಹಿಳೆಯರ ಪ್ರತಿಭಟನೆ
ಸಾಲ ವಸೂಲಿಗಾಗಿ ಮೈಕ್ರೋ ಫೈನಾನ್ಸ್ ಹಾಗೂ ಹಲವು ಬ್ಯಾಂಕುಗಳ ಪ್ರತಿನಿಧಿಗಳು ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ. ಇದನ್ನು ತಪ್ಪಿಸಿ ಸಾಲ ಮರುಪಾವತಿಸಲು ನಮಗೆ ಹೆಚ್ಚಿನ ಸಮಯಾವಕಾಶ ನೀಡಬೇಕು ಎಂದು ಆಗ್ರಹಿಸಿ ಮಂಡ್ಯ ತಾಲೂಕಿನ ಹೊಳಲು ಗ್ರಾಮದಲ್ಲಿ ಇತ್ತೀಚೆಗೆ ಸ್ತ್ರೀ ಶಕ್ತಿ ಸಂಘಟನೆಗಳ 30ಕ್ಕೂ ಹೆಚ್ಚು ಮಹಿಳೆಯರು ಗ್ರಾಮ ಪಂಚಾಯಿತಿ ಎದುರು ನೇಣು ಕುಣಿಕೆಯೊಂದಿಗೆ ಪ್ರತಿಭಟಿಸಿದ್ದರು.

ಕೆಲವು ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ಪ್ರತೀ ವಾರ ನಿಗದಿತ ದಿನ ಸಾಲದ ಕಂತುಗಳನ್ನು ಪಾವತಿ ಮಾಡಬೇಕಿದೆ. ಹಣ ಹೊಂದಿಸಲು ಸಾಧ್ಯವಾಗದೇ ಇದ್ದಲ್ಲಿ ಆ ಕಂಪನಿಗಳ ಪ್ರತಿನಿಧಿಗಳು ಮನೆ ಮುಂದೆ ಬಂದು ಕುಳಿತು, ಹಣ ಪಾವತಿಸುವಂತೆ ದಬಾಯಿಸುತ್ತಾರೆ. ಈ ಮೂಲಕ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಕೆಲವರಿಗೆ ಹಣದ ಅವಶ್ಯಕತೆ ಇಲ್ಲದಿದ್ದರೂ, ಅವರೇ ಮೇಲೆ ಬಿದ್ದು ಒತ್ತಡ ಹೇರಿ ಸಾಲ ನೀಡುತ್ತಿದ್ದಾರೆ. ಆ ನಂತರ ಪ್ರತೀ ವಾರ ಸಾಲದ ಕಂತು ಕಟ್ಟುವಂತೆ ಮನೆ ಬಳಿ ಬಂದು ಕಿರುಕುಳ ನೀಡುತ್ತಿದ್ದಾರೆ. ಅನಕ್ಷರಸ್ಥ ಮಹಿಳೆಯರ ಮುಗ್ಧತೆಯನ್ನು ಬಳಸಿಕೊಂಡು ತೊಂದರೆ ನೀಡಲಾಗುತ್ತಿದೆ ಎಂದು ನೋವು ತೋಡಿಕೊಂಡಿದ್ದಾರೆ.
