2025-26ನೇ ಸಾಲಿನ ಕಬ್ಬಿಗೆ ಟನ್‌ಗೆ ₹5,500ರ ನ್ಯಾಯಯುತ ಮತ್ತು ಲಾಭದಾಯಕ ಬೆಲೆ (ಎಫ್‌ಆರ್‌ಪಿ) ಘೋಷಿಸಬೇಕು. ರಾಜ್ಯ ಸರ್ಕಾರವು ಪ್ರತಿ ಟನ್ ಕಬ್ಬಿಗೆ ಕನಿಷ್ಠ ₹700 ಪ್ರೋತ್ಸಾಹ ಧನ ನೀಡಬೇಕು ಎಂದು ರೈತಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್ ಆಗ್ರಹಿಸಿದರು.
ಮಂಡ್ಯ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಕಳೆದ ಒಂಬತ್ತು ವರ್ಷಗಳಿಂದ ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು (ಎಂಎಸ್‌ಪಿ) ಪ್ರತಿ ಕೆ.ಜಿ.ಗೆ ₹31ರಲ್ಲೇ ಉಳಿಸಿದ್ದು, ಇದುವರೆಗೆ ಪರಿಷ್ಕರಣೆ ಮಾಡಿಲ್ಲ. ಪ್ರಸಕ್ತ ಸಾಲಿನಲ್ಲಿ ಸಕ್ಕರೆಯ ಎಂಎಸ್‌ಪಿಯನ್ನು ಕನಿಷ್ಠ ₹60ಕ್ಕೆ ಹೆಚ್ಚಿಸಬೇಕು. ಕರ್ನಾಟಕದಲ್ಲಿ ಎಥನಾಲ್ ಉತ್ಪಾದನೆಗೆ ಕೇಂದ್ರ ಸರ್ಕಾರ ಹೆಚ್ಚಿನ ಅವಕಾಶ ಕಲ್ಪಿಸಬೇಕು. ರಾಜ್ಯದಲ್ಲಿ ಉತ್ಪಾದನೆಯಾಗುವ ಎಥನಾಲ್ ಅನ್ನು ಸಂಪೂರ್ಣವಾಗಿ ಖರೀದಿಸುವ ವ್ಯವಸ್ಥೆ ಮಾಡಬೇಕು. ಇದರಿಂದ ಸಕ್ಕರೆ ಕಾರ್ಖಾನೆಗಳ ಆರ್ಥಿಕ ಸ್ಥಿತಿ ಸುಧಾರಿಸುವುದರ ಜತೆಗೆ ಕಬ್ಬು ಬೆಳೆಗಾರರಿಗೂ ಅನುಕೂಲವಾಗಲಿದೆ ಎಂದರು.
ಕಳೆದ ಸಾಲಿನಲ್ಲಿ ಕಾರ್ಖಾನೆಗಳಿಂದ ರೈತರಿಗೆ ಬರಬೇಕಿರುವ ಪ್ರತಿ ಟನ್‌ಗೆ ₹508ರ ಪ್ರೋತ್ಸಾಹ ಧನವನ್ನು ಪಾವತಿಸಬೇಕು. ಈ ಸಂಬಂಧ ನ್ಯಾಯಾಲಯದಲ್ಲಿರುವ ಪ್ರಕರಣವನ್ನು ಇತ್ಯರ್ಥಪಡಿಸಿ, ಕಾರ್ಖಾನೆಗಳು ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಜಮೆ ಮಾಡುವಂತೆ ಕ್ರಮ ಕೈಗೊಳ್ಳಬೇಕು. ಕೇಂದ್ರ ಸರ್ಕಾರ ಕಬ್ಬಿನ ಇಳುವರಿ ಪ್ರಮಾಣವನ್ನು ಶೇ.10.25ಕ್ಕೆ ಹೆಚ್ಚಿಸಿರುವುದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಈ ಪ್ರಮಾಣವನ್ನು ಈ ಹಿಂದೆ ನಿಗದಿಪಡಿಸಿದ್ದ ಶೇ.9.5ಕ್ಕೆ ಇಳಿಸಬೇಕು ಎಂದು ಆಗ್ರಹಿಸಿದರು.
ಮಂಡ್ಯದ ಮೈ ಶುಗರ್ ಸಕ್ಕರೆ ಕಾರ್ಖಾನೆಯಲ್ಲಿ ನಡೆದಿರುವ ಅವ್ಯವಹಾರಗಳು ಮತ್ತು ಆಡಳಿತಾತ್ಮಕ ಅವ್ಯವಸ್ಥೆಗಳ ಕುರಿತು ಸಿಬಿಐ ತನಿಖೆ ನಡೆಸಬೇಕು. ಕಾರ್ಖಾನೆಯ ಸ್ಥಳೀಯ ವ್ಯಾಪ್ತಿಯಲ್ಲಿ ಬೆಳೆದಿರುವ ಕಬ್ಬಿಗೆ ಆದ್ಯತೆ ನೀಡದೆ, ಕಳೆದ 15 ತಿಂಗಳಿಂದ ಹೊರ ಜಿಲ್ಲೆಗಳಿಂದ ಕಬ್ಬು ತಂದು ನುರಿಸಲಾಗುತ್ತಿದೆ. ಇದರಿಂದ ಸ್ಥಳೀಯ ಕಬ್ಬು ಬೆಳೆಗಾರರಿಗೆ ಅನ್ಯಾಯವಾಗುತ್ತಿದೆ. ಈ ಸಮಸ್ಯೆಯನ್ನು ಕೂಡಲೇ ಸರಿಪಡಿಸಿ, ಸ್ಥಳೀಯ ರೈತರು ಬೆಳೆದ ಕಬ್ಬನ್ನು ಆದ್ಯತೆಯ ಮೇರೆಗೆ ನುರಿಸುವ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಮಳೆಯ ಕೊರತೆ ಹಾಗೂ ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಅಭಾವದಿಂದ ಕೃಷಿ ಚಟುವಟಿಕೆಗಳು ಸಂಕಷ್ಟಕ್ಕೆ ಸಿಲುಕಿವೆ. ಸರ್ಕಾರದ ಸೂಚನೆಯಂತೆ ರೈತರು ಹೊಸ ಬೆಳೆಗಳನ್ನು ಬೆಳೆಯದೆ ಸಂಕಷ್ಟ ಎದುರಿಸುವಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ರೈತರಿಗೆ ಸೂಕ್ತ ಪರಿಹಾರ ನೀಡುವ ಬದಲು ಕೇವಲ ₹2,500 ಬರ ಪರಿಹಾರ ಘೋಷಿಸಿರುವುದು ಸಮರ್ಪಕವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ, ರೈತರ ಸಂಕಷ್ಟವನ್ನು ಪರಿಗಣಿಸಿ ಪ್ರತಿ ಎಕರೆಗೆ ₹50,000 ಬರ ಪರಿಹಾರ ನಿಗದಿಪಡಿಸಿ ತಕ್ಷಣ ಬಿಡುಗಡೆ ಮಾಡಬೇಕು. ರೈತರು ಪಡೆದಿರುವ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಈ ವಿಶೇಷ ವರದಿ ಓದಿದ್ದೀರಾ? ‘ಟಿಪ್ಪು ನಿಜ ಕನಸು’ಗಳಿಂದ ‘ಗಾಂಧೀ ಹತ್ಯೆಯ ಸತ್ಯ’ದವರೆಗೆ: ಇತಿಹಾಸ ತಿರುಚುವಿಕೆಯ ಸುತ್ತ ಮತ್ತೆ ವಿವಾದ
ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟದಲ್ಲಿ (ಮನ್‌ಮುಲ್) ಹಾಲಿನ ಪುಡಿಗೆ ಗೆಣಸು ಮತ್ತು ಆಲೂಗಡ್ಡೆ ಪುಡಿ ಬೆರೆಸಿ ಕಲಬೆರಕೆ ಉತ್ಪನ್ನವನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗಿದೆ ಎಂಬ ಆರೋಪದ ಕುರಿತು ಸಮಗ್ರ ತನಿಖೆ ನಡೆಸಬೇಕು. ಹಾಗೆಯೇ ಈ ಪ್ರಕರಣ ಸೇರಿದಂತೆ ಒಕ್ಕೂಟದಲ್ಲಿ ನಡೆದಿರುವ ಎಲ್ಲ ಅವ್ಯವಹಾರಗಳ ಬಗ್ಗೆ ಸಿಬಿಐ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ವಿಶೇಷ ವರದಿ ಓದಿದ್ದೀರಾ? ವಿಚಾರವಾದಿಗಳು ಕಂಡ ಗಾಂಧೀ-ಟಿಪ್ಪು ಮತ್ತು ಕೋಮುವಾದಿಗಳ ತಿರುಚುವಿಕೆ!
ಪತ್ರಿಕಾಗೋಷ್ಠಿಯಲ್ಲಿ ಮಂಜೇಶ್ ಗೌಡ, ಅಣ್ಣೂರು ಮಹೇಂದ್ರ, ಕೀಳಘಟ್ಟ ನಂಜುಂಡಯ್ಯ ಸೇರಿದಂತೆ ಇನ್ನಿತರರು ಇದ್ದರು.






