ಮುಂಡಗೋಡ – ಯಲ್ಲಾಪುರ ರಸ್ತೆಯಲ್ಲಿರುವ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಗೆ (KGS) ಗಜಾಂಗ್ ಟೆಹೋರ್ ಕ್ಯಾಂಪ್ನ ಟಿಬೆಟಿಯನ್ ಗುರುಗಳು ಸುಮಾರು ₹4.5 ಲಕ್ಷ ಮೌಲ್ಯದ ಬೆಂಚ್, ಕುರ್ಚಿ ಸೇರಿದಂತೆ ಅಗತ್ಯ ಪೀಠೋಪಕರಣ ಹಾಗೂ ಇತರೆ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
ಶಾಲೆಯಲ್ಲಿ ಬೆಂಚ್ ಕೊರತೆಯಿಂದ ವಿದ್ಯಾರ್ಥಿಗಳು ನೆಲದ ಮೇಲೆ ಕುಳಿತು ಪಾಠ ಕೇಳುತ್ತಿರುವುದನ್ನು ಗಮನಿಸಿದ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು ಟಿಬೆಟಿಯನ್ ಗುರುಗಳಿಗೆ ಶಾಲೆಯ ಅಗತ್ಯತೆಗಳ ಕುರಿತು ಮನವಿ ಮಾಡಿದ್ದರು.
ಮನವಿಗೆ ಸ್ಪಂದಿಸಿದ ಟಿಬೆಟಿಯನ್ ಗುರುಗಳು ಶಾಲೆಗೆ ಭೇಟಿ ನೀಡಿ, ಶಾಲೆಗೆ ಅಗತ್ಯವಿರುವ ಪೀಠೋಪಕರಣ ಹಾಗೂ ಇತರೆ ಸಾಮಗ್ರಿಗಳ ಕುರಿತು ಮಾಹಿತಿ ಪಡೆದುಕೊಂಡು ನಂತರ ಶಾಲೆಯ ಅಗತ್ಯತೆಗಳನ್ನು ಪರಿಗಣಿಸಿ, ಗಜಾಂಗ್ ಟೆಹೋರ್ ಕ್ಯಾಂಪ್ನ ಗುರುಗಳು ಬೆಂಚ್, ಕುರ್ಚಿ ಸೇರಿದಂತೆ ಸುಮಾರು ₹4.5 ಲಕ್ಷ ಮೌಲ್ಯದ ವಿವಿಧ ಸಾಮಗ್ರಿಗಳನ್ನು ಶಾಲೆಗೆ ಒದಗಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಾರವಾರ | ಅಂಜದೀವ್ ದ್ವೀಪದ ಬಳಿ ಮೀನುಗಾರಿಕಾ ಬೋಟ್ ಮುಳುಗಡೆ: 25 ಮೀನುಗಾರರು ಪಾರು; ₹70 ಲಕ್ಷ ನಷ್ಟ
ಶಾಲೆಗೆ ಪೀಠೋಪಕರಣಗಳನ್ನು ಹಸ್ತಾಂತರಿಸುವ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕೆ ನೆರವಾಗಿದ್ದು, ಟಿಬೆಟಿಯನ್ ಗುರುಗಳ ಮಾನವೀಯ ಕಾರ್ಯಕ್ಕೆ ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯಶಿಕ್ಷಕಿ ಶಾಹಿದಾಬಾನು ವಡ್ಡಟ್ಟಿ, ಎಸ್ಡಿಎಂಸಿ ಅಧ್ಯಕ್ಷ ಮೊಹದ್ದೀನ್ ಖಾನ್ ಪಠಾಣ್, ಉಪಾಧ್ಯಕ್ಷೆ ಕೌಸರ್ಬಾನು ನಂದಿಗಟ್ಟಿ, ಪಟ್ಟಣ ಪಂಚಾಯತ ಮಾಜಿ ಸದಸ್ಯರಾದ ರಜಾಖಾನ ಪಠಾಣ್, ಮೊಹಮ್ಮದ್ ಗೌಸ್ ಮಕಾಂದರ, ಹಾಗೂ ಎಸ್ಡಿಎಂಸಿ ಸದಸ್ಯರಾದ ಮೌಲಾಲಿ ಮಲ್ಲಿಗಾರ್, ಸಯ್ಯದ್ ಇಸ್ಮಾಯಿಲ್ ಹರಿಹರಕರ್, ಮೊಹಮ್ಮದ್ ರಫೀಕ್ ಕಂಬಾರ್, ಅಬ್ದುಲ್ ಬೆದದುರ್, ಇರ್ಫಾನ್ ನಾಕೇವಾಲೆ, ಬಾಷಾ ಮರಗಡಿ, ಅಬ್ದುಲ್ ಹುಸೇನ್ ನಂದಿಗಟ್ಟಿ, ತಸ್ಲೀಮಾ ಅಜೀಮ್, ಫಾತಿಮಾ ಗೌಂಡಿ, ಹಜರ್ ಬೇಗಂ ಗೌಂಡಿ, ನಸೀಮಾಬಾನು ಪಠಾಣ್, ಸಕೀನಾ ಗನ್ನುಮಿಯಾ ಹಾಗೂ ಸಲ್ಮಾ ಪಿಲ್ಲು ಸೇರಿದಂತೆ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಶಾಲೆಯ ಅಗತ್ಯತೆಗಳಿಗೆ ಸ್ಪಂದಿಸಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು ನೀಡಿದ ಟಿಬೆಟಿಯನ್ ಗುರುಗಳ ಕಾರ್ಯವು ವಿವಿಧ ಸಮುದಾಯಗಳ ನಡುವಿನ ಸೌಹಾರ್ದತೆ, ಸಹಕಾರ ಮತ್ತು ಮಾನವೀಯತೆಗೆ ಉತ್ತಮ ಉದಾಹರಣೆಯಾಗಿದೆ.




