ಹರಿಯಾಣದ ಪ್ರಸಿದ್ಧ ಗಾಯಕ ಹಾಗೂ ಯೂಟ್ಯೂಬರ್ ಅಂಕಿತ್ ಬಲಿಯಾನ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಇಬ್ಬರು ಶಾರ್ಪ್ಶೂಟರ್ಗಳನ್ನು ಉತ್ತರ ಪ್ರದೇಶ ಪೊಲೀಸರು ಎನ್ಕೌಂಟರ್ ನಡೆಸಿ ಹತ್ಯೆ ಮಾಡಿದ್ದಾರೆ.
ಉತ್ತರ ಪ್ರದೇಶದ ಶ್ಯಾಮ್ಲಿಯ ಕೈಗಾರಿಕಾ ಪ್ರದೇಶದಲ್ಲಿ ಸೋಮವಾರ ಮುಂಜಾನೆ ಈ ಎನ್ಕೌಂಟರ್ ನಡೆದಿದೆ. ಮೃತರನ್ನು ಸೋನಿಪತ್ ಮೂಲದ ಸುಮಿತ್ ಮತ್ತು ಮೋಹಿತ್ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಕುಖ್ಯಾತ ‘ಗೋಗಿ ಗ್ಯಾಂಗ್’ಗೆ ಸೇರಿದವರಾಗಿದ್ದಾರೆ. ಕೊಲೆಯಾದ ಶೂಟರ್ಗಳ ಸುಳಿವು ನೀಡಿದವರಿಗೆ ತಲಾ ₹50,000 ಬಹುಮಾನ ಘೋಷಿಸಲಾಗಿತ್ತು.
ಇದನ್ನೂ ಓದಿ: ಹನೂರು ಗ್ರೌಂಡ್ ರಿಪೋರ್ಟ್: ‘ಇದು ಕೌಂಟರ್ ಅಟ್ಯಾಕ್ ಅಲ್ಲ, ಎನ್ಕೌಂಟರ್?’
ಗಾಯಕ ಅಂಕಿತ್ ಬಲಿಯಾನ್ ಅವರನ್ನು ಹತ್ಯೆ ಮಾಡಿದ ನಂತರ ಈ ಇಬ್ಬರು ಆರೋಪಿಗಳು ಲೋನಿ ಮತ್ತು ಭಾಗ್ಪತ್ ಮಾರ್ಗವಾಗಿ ಸೋನಿಪತ್ಗೆ ತಲುಪಲು ಯತ್ನಿಸುತ್ತಿದ್ದರು. ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಯುಪಿ ವಿಶೇಷ ಪೊಲೀಸ್ ಪಡೆ ಶ್ಯಾಮ್ಲಿ ಕೈಗಾರಿಕಾ ಪ್ರದೇಶದಲ್ಲಿ ಇವರನ್ನು ಸುತ್ತುವರಿಯಿತು.
ಈ ವೇಳೆ ಆರೋಪಿಗಳು ಪೊಲೀಸರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದರು. ಆತ್ಮರಕ್ಷಣೆಗಾಗಿ ಪೊಲೀಸರು ನಡೆಸಿದ ಪ್ರತಿದಾಳಿಯಲ್ಲಿ ಇಬ್ಬರೂ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ. ಕಾರ್ಯಾಚರಣೆಯ ವೇಳೆ ಇಬ್ಬರು ಪೊಲೀಸ್ ಸಿಬ್ಬಂದಿಯೂ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಈ ಹತ್ಯೆಯಲ್ಲಿ ಒಟ್ಟು ನಾಲ್ವರು ಶಾರ್ಪ್ಶೂಟರ್ಗಳು ಭಾಗಿಯಾಗಿದ್ದರು. ಪ್ರಮುಖ ಇಬ್ಬರು ಆರೋಪಿಗಳನ್ನು ಎನ್ಕೌಂಟರ್ನಲ್ಲಿ ಮೃತರಾಗಿದ್ದು, ತಲೆಮರೆಸಿಕೊಂಡಿರುವ ಇನ್ನುಳಿದ ಇಬ್ಬರು ಆರೋಪಿಗಳಾದ ಸತ್ಯಂ ಮತ್ತು ಆರ್ಯನ್ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ಘಟನಾ ಸ್ಥಳದಿಂದ ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.




