ಕ್ಷೇತ್ರ ಪುನರ್‌ವಿಂಗಡಣೆಯಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಯಾವುದೇ ಅನ್ಯಾಯವಾಗುವುದಿಲ್ಲ. ಬದಲಾಗಿ ಸಂಸದರ ಸಂಖ್ಯೆ ಹೆಚ್ಚಳವಾಗುವುದರಿಂದ ಕೇಂದ್ರ ಸರಕಾರದೊಂದಿಗೆ ಆರ್ಥಿಕ ಹಂಚಿಕೆ ಸೇರಿದಂತೆ ವಿವಿಧ ವಿಚಾರಗಳಲ್ಲಿ ಚರ್ಚಿಸಲು ದಕ್ಷಿಣ ರಾಜ್ಯಗಳಿಗೆ ಹೆಚ್ಚಿನ ಬಲ ಸಿಗಲಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಸೋದೆ ವಾದಿರಾಜ ಮಠದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ರವಿವಾರ ಉಡುಪಿಗೆ ಆಗಮಿಸಿದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕ್ಷೇತ್ರ ಪುನರ್‌ವಿಂಗಡಣೆ ವಿಚಾರದಲ್ಲಿ ಕಾಂಗ್ರೆಸ್ ನಡೆಸುತ್ತಿರುವ ಸಭೆಗಳಿಗೆ ಯಾವುದೇ ಅರ್ಥವಿಲ್ಲ. ಜನಸಂಖ್ಯೆಯ ಆಧಾರದಲ್ಲಿ ಮಾತ್ರ ಕ್ಷೇತ್ರಗಳನ್ನು ಹೆಚ್ಚಿಸುವ ಬದಲು ದೇಶದ ಎಲ್ಲ ರಾಜ್ಯಗಳಲ್ಲೂ ಏಕರೂಪವಾಗಿ ಶೇ.50ರಷ್ಟು ಕ್ಷೇತ್ರಗಳನ್ನು ಹೆಚ್ಚಿಸಿದರೆ ದಕ್ಷಿಣ ಭಾರತದ ರಾಜ್ಯಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಈ ಪ್ರಸ್ತಾವನೆಯಿಂದ ಕರ್ನಾಟಕದ ಲೋಕಸಭಾ ಕ್ಷೇತ್ರಗಳ ಸಂಖ್ಯೆ 28ರಿಂದ 42ಕ್ಕೆ, ತಮಿಳುನಾಡಿನ ಕ್ಷೇತ್ರಗಳು 39ರಿಂದ 59ಕ್ಕೆ, ಕೇರಳದ ಕ್ಷೇತ್ರಗಳು 20ರಿಂದ 30ಕ್ಕೆ ಹಾಗೂ ತೆಲಂಗಾಣದ ಕ್ಷೇತ್ರಗಳು 9ರಿಂದ 14-15ಕ್ಕೆ ಏರಿಕೆಯಾಗಲಿವೆ. ಪ್ರಸ್ತುತ 26ರಿಂದ 28 ಲಕ್ಷ ಮತದಾರರಿರುವ ಕ್ಷೇತ್ರಗಳ ಸಂಖ್ಯೆ ಕಡಿಮೆಯಾಗಿ 12ರಿಂದ 13 ಲಕ್ಷ ಮತದಾರರಿಗೆ ಒಬ್ಬ ಜನಪ್ರತಿನಿಧಿ ಲಭ್ಯವಾಗಲಿದ್ದಾರೆ. ಇದರಿಂದ ಜನಪ್ರತಿನಿಧಿಗಳಿಗೆ ಕ್ಷೇತ್ರದ ಜನರೊಂದಿಗೆ ಸಂಪರ್ಕದಲ್ಲಿದ್ದು ಕೆಲಸ ಮಾಡಲು ಅನುಕೂಲವಾಗಲಿದೆ ಎಂದು ತಿಳಿಸಿದರು.
ಸಿಎಂಗೆ ಭೂಮಿಯ ವ್ಯಾಮೋಹ
ಮುಖ್ಯಮಂತ್ರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಚಿವ ಸಂಪುಟ ಸಭೆ ನಡೆಸಿ ಕರಾವಳಿ ಭಾಗಕ್ಕೆ 32 ಸಾವಿರ ಕೋಟಿ ರೂ.ಗಳ ಅಭಿವೃದ್ಧಿ ಕಾರ್ಯಕ್ರಮಗಳನ್ನು ಘೋಷಿಸಿ ಹಲವು ತಿಂಗಳು ಕಳೆದಿವೆ. ಆದರೆ ಈ ಪೈಕಿ ಎಷ್ಟು ಕಾರ್ಯಕ್ರಮಗಳು ಅನುಷ್ಠಾನಗೊಂಡಿವೆ ಎಂಬುದು ಯಾರಿಗೂ ತಿಳಿದಿಲ್ಲ. ಮುಖ್ಯಮಂತ್ರಿಯವರ ಭೂಮಿಯ ವ್ಯಾಮೋಹ ಕೇವಲ ಬೆಂಗಳೂರು ಸುತ್ತಮುತ್ತಕ್ಕೆ ಸೀಮಿತವಾಗದೆ ಇದೀಗ ಕರಾವಳಿ ಭಾಗಕ್ಕೂ ವಿಸ್ತರಿಸಿದೆ ಎಂದು ಟೀಕಿಸಿದರು.
ಚುನಾವಣಾ ಪ್ರಣಾಳಿಕೆಯಲ್ಲಿ ಆಶಾ ಕಾರ್ಯಕರ್ತೆಯರಿಗೆ 15 ಸಾವಿರ ರೂ. ಗೌರವಧನ ನೀಡುವುದಾಗಿ ಭರವಸೆ ನೀಡಿದ್ದ ಸರಕಾರ ಅದನ್ನು ಈಡೇರಿಸಿಲ್ಲ. ಈ ಬೇಡಿಕೆ ಮುಂದಿಟ್ಟುಕೊಂಡು ಕಳೆದ 15 ದಿನಗಳಿಂದ ಆಶಾ ಕಾರ್ಯಕರ್ತೆಯರು ಧರಣಿ ನಡೆಸುತ್ತಿದ್ದರೂ ಅವರನ್ನು ಕರೆದು ಮಾತನಾಡಿಸುವ ಕನಿಷ್ಠ ಸೌಜನ್ಯವನ್ನು ಮುಖ್ಯಮಂತ್ರಿ ಹಾಗೂ ಸಚಿವರು ತೋರಿಸಿಲ್ಲ. ಭಾರತ್ ಜೋಡೋ ಹೆಸರಿನಲ್ಲಿ ತೆರಿಗೆದಾರರ 1,000 ಕೋಟಿ ರೂ.ಗಳನ್ನು ಕಾರ್ಯಕರ್ತರಿಗೆ ಹಂಚುವ ಸರಕಾರಕ್ಕೆ 41 ಸಾವಿರ ಆಶಾ ಕಾರ್ಯಕರ್ತೆಯರಿಗೆ ತಲಾ 5 ಸಾವಿರ ರೂ. ನೀಡಲು ಬೇಕಾಗುವ 350 ಕೋಟಿ ರೂ. ದೊಡ್ಡ ಹೊರೆಯಾಗಬಾರದು ಎಂದರು.
ಐದು ಗ್ಯಾರಂಟಿಗಳ ಹೆಸರಿನಲ್ಲಿ ಜನರ ಮೇಲೆ ತೆರಿಗೆ ಹೊರೆ ಹಾಕಿರುವ ರಾಜ್ಯ ಸರಕಾರ 2026-27ನೇ ಸಾಲಿನಲ್ಲಿ 1.32 ಲಕ್ಷ ಕೋಟಿ ರೂ. ಸಾಲ ಮಾಡಲು ಮುಂದಾಗಿದೆ. ಬರ ಪರಿಹಾರವಾಗಿ 2,500 ರೂ. ಘೋಷಿಸಿ ಕೇವಲ 500ರಿಂದ 1,000 ರೂ. ನೀಡಲಾಗಿದೆ. ಹಳೆಯ ಗುತ್ತಿಗೆದಾರರ ಬಿಲ್‌ಗಳನ್ನೇ ಪಾವತಿಸಲು ಸಾಧ್ಯವಾಗದ ಸರಕಾರ ಹಳ್ಳಿಗಳ ರಸ್ತೆ ಅಭಿವೃದ್ಧಿಗೆ 16 ಸಾವಿರ ಕೋಟಿ ರೂ. ಘೋಷಿಸಿದೆ. ಇದಕ್ಕೆ ಹಣ ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸಿದರು.
ಹಸು ನೀಡುವ ಯೋಜನೆ ಜಾರಿಗೆ ಚಿಂತನೆ
ಗ್ಯಾರಂಟಿ ಯೋಜನೆಗಳು ಕೇವಲ ಆದಾಯ ವೆಚ್ಚವಾಗುತ್ತವೆ. ಅದರ ಬದಲು ದಿನಕ್ಕೆ 20 ಲೀಟರ್ ಹಾಲು ನೀಡುವ ಹಸುವನ್ನು ಕುಟುಂಬಗಳಿಗೆ ಒದಗಿಸಿದರೆ, ನಿರ್ವಹಣಾ ವೆಚ್ಚ ಕಳೆದು ತಿಂಗಳಿಗೆ ಸುಮಾರು 30 ಸಾವಿರ ರೂ. ಆದಾಯ ಗಳಿಸಲು ಸಾಧ್ಯವಾಗುತ್ತದೆ. ಇದರಿಂದ ಕುಟುಂಬಗಳು ಸ್ವಾಭಿಮಾನದಿಂದ ಬದುಕುವುದರ ಜತೆಗೆ ಶಾಶ್ವತ ಆಸ್ತಿಯನ್ನೂ ಸೃಷ್ಟಿಸಿಕೊಳ್ಳಬಹುದು. ನಗರ ಮತ್ತು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ 15ರಿಂದ 20 ವರ್ಷಗಳ ದೂರದೃಷ್ಟಿಯ ಯೋಜನೆಯನ್ನು ಸದ್ಯದಲ್ಲೇ ಘೋಷಿಸಲಾಗುವುದು ಎಂದು ತಿಳಿಸಿದರು.
ಕೆಐಎಡಿಬಿ ಹೆಸರಿನಲ್ಲಿ ಕೃಷಿಕರನ್ನು ಭೂಮಿಯಿಂದ ಒಕ್ಕಲೆಬ್ಬಿಸುತ್ತಿರುವ ವಿಚಾರ ನಿನ್ನೆ ತಮ್ಮ ಗಮನಕ್ಕೆ ಬಂದಿದೆ. ಈ ಕುರಿತು ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲಿಸಿ ರೈತರ ಪರವಾಗಿ ಧ್ವನಿ ಎತ್ತಲಾಗುವುದು ಎಂದು ಭರವಸೆ ನೀಡಿದರು.
ಕರ್ನಾಟಕವನ್ನು ಜಪಾನ್ ಮಾದರಿಯಲ್ಲಿ ಅಭಿವೃದ್ಧಿಪಡಿಸುವುದಾಗಿ ಹೇಳುವ ಮುಖ್ಯಮಂತ್ರಿಯವರ ಆಡಳಿತಾವಧಿಯಲ್ಲೇ ಜಪಾನ್ ಮೂಲದ ಟೊಯೋಟಾ ಕಂಪನಿ ರಾಜ್ಯದಲ್ಲಿ ಹೂಡಿಕೆ ಮಾಡಲು ಸಾಧ್ಯವಾಗದೆ ಮಹಾರಾಷ್ಟ್ರದಲ್ಲಿ 25 ಸಾವಿರ ಕೋಟಿ ರೂ. ಹೂಡಿಕೆ ಮಾಡುತ್ತಿದೆ ಎಂದು ಕುಮಾರಸ್ವಾಮಿ ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಸಾರಾ ಮಹೇಶ್, ಯೋಗೀಶ್ ಶೆಟ್ಟಿ, ವಾಸುದೇವ ರಾವ್, ಜಯರಾಮ ಆಚಾರ್ಯ, ರಮೇಶ್ ಕುಂದಾಪುರ, ಜಯಕುಮಾರ್ ಪರ್ಕಳ, ಶಾಲಿನಿ ಶೆಟ್ಟಿ ಕೆಂಚನೂರು ಹಾಗೂ ಮನ್ಸೂರ್ ಇಬ್ರಾಹೀಂ ಉಪಸ್ಥಿತರಿದ್ದರು.






