ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ದೊಡ್ಡ ಗ್ರಾಮಗಳಲ್ಲಿ ನಗರಕೆರೆ ಕೂಡ ಒಂದು. ಇಲ್ಲಿ 21 ಸದಸ್ಯರು ಇರುವ ಗ್ರಾಮ ಪಂಚಾಯಿತಿ ಕೂಡ ಇದೆ. ತಾಲೂಕಿನ ರಾಜಕೀಯದಲ್ಲಿ ಹೆಸರು ಮಾಡಿದವರು ತುಂಬಾ ಜನ ಈ ಗ್ರಾಮದಲ್ಲಿ ಇದ್ದಾರೆ. ಆದರೂ ಊರಿನ ಅಭಿವೃದ್ಧಿ ಮರೀಚಿಕೆಯಾಗಿದೆ.
ಇಲ್ಲಿ ಪ್ರಸ್ತಾಪಿಸಲು ಹೊರಟ ವಿಚಾರಕ್ಕೆ ಮಾದರಿಯಾಗಿ ನಗರಕೆರೆ ಗ್ರಾಮದ ಹೆಸರು ತೆಗೆದುಕೊಳ್ಳಲಾಗಿದೆ ಅಷ್ಟೇ. ರಾಮನಗರ ಹಾಗೂ ಮಂಡ್ಯ ಜಿಲ್ಲೆಯ ಎಲ್ಲಾ ಗ್ರಾಮಗಳಿಗೂ ಇದು ಅನ್ವಯಿಸುತ್ತದೆ.
ಕಳೆದ ಒಂದು ವರ್ಷದಿಂದ ಹಲವು ಗ್ರಾಮಗಳಲ್ಲಿ ಜಲಜೀವನ್ ಮಿಷನ್ ಹೆಸರಿನಲ್ಲಿ ಕಾಮಗಾರಿಗಳು ನಡೆಯುತ್ತಿದೆ. ಈ ಗ್ರಾಮದಲ್ಲಿ ನೀರು ಪ್ರತಿ ದಿನವೂ ಬರುತ್ತಿತ್ತು, ಏರ್ಪಾಡು ಕೂಡ ಚೆನ್ನಾಗಿಯೇ ಇತ್ತು. ಅವಶ್ಯಕತೆ ಇಲ್ಲದಿದ್ದರೂ ಜನರ ಅಭಿಪ್ರಾಯಕ್ಕೆ ಮನ್ನಣೆ ಕೊಡದೆ, ಕೇಂದ್ರ ಸರ್ಕಾರದಿಂದ ಹಣ ಬಂದಿದೆ ಎಂಬ ಒಂದೇ ಕಾರಣಕ್ಕೆ ಕಾಮಗಾರಿ ನಡೆಯುತ್ತಿದೆ.

ಊರಲ್ಲಿ ಚೆನ್ನಾಗಿದ್ದ ರಸ್ತೆಗಳನ್ನು ಬಗೆದು ಹಾಳು ಮಾಡಿದ್ದಾರೆ. ವರ್ಷದಿಂದ ನಡೆಯುತ್ತಿರುವ ಕೆಲಸ ಎಷ್ಟು ಉಪಯೋಗ ಆಯ್ತು ಅನ್ನುವುದು ಮಾತ್ರ ಪ್ರಶ್ನಾರ್ಹ. ಆದರೆ ಜನರಿಗೆ ಅಭಿವೃದ್ಧಿಯ ಹೆಸರಿನಲ್ಲಿ ರೋಸು ಹಿಡಿದಿದೆ. ಆದರೂ ಜನ ಪ್ರಶ್ನೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ.
ಊರಿನಲ್ಲಿ ಅರ್ಧಕ್ಕೆ ಅರ್ಧ ರಸ್ತೆಗಳು ಮಣ್ಣಿನ ರಸ್ತೆಗಳು, ಸರಾಗವಾಗಿ ನೀರು ಹರಿದು ಹೋಗುವ ಚರಂಡಿ ವ್ಯವಸ್ಥೆ ಇಲ್ಲ. ಜನರಿಗೆ ಅವಶ್ಯಕತೆ ಇರುವ ಕೆಲಸಗಳು ಇಲ್ಲಿ ಪಂಚಾಯಿತಿಯ ಚುನಾಯಿತರಿಂದ ಹಿಡಿದು ಶಾಸಕ, ಸಂಸದರವರೆಗೂ ಬೇಡವಾಗಿದೆ.
ಕಳೆದ ಎರಡು ತಿಂಗಳುಗಳಿಂದ ಸಣ್ಣ ಮಳೆ ಬರುತ್ತಿದೆ, ಒಂದೇ ಒಂದು ದೊಡ್ಡ ಮಳೆ ಬಂದಿಲ್ಲ. ಗದ್ದೆಗಳಲ್ಲಿ ಭತ್ತದ ಹೊಟ್ಲು ಹಾಕಲು ಆಗಿಲ್ಲ. ಆದರೆ ಊರಿನಲ್ಲಿ ರಸ್ತೆಗಳಲ್ಲಿ ಭತ್ತದ ನಾಟಿ ಮಾಡಬಹುದು. ಅಷ್ಟು ಹಾಳಾಗಿ ಹೋಗಿವೆ. ಆದರೂ ಪಂಚಾಯಿತಿ ಅಧಿಕಾರಿಗಳು ಇತ್ತ ತಿರುಗಿ ನೋಡಿಲ್ಲ.
ನಗರಕೆರೆ ರಾಜಕೀಯವಾಗಿ ಪ್ರಭಾವ ಹೊಂದಿರುವ ಊರಾದ್ದರಿಂದ ವರ್ಷ ವರ್ಷವೂ ಲಕ್ಷ ಇಲ್ಲವೇ ಕೋಟಿಗಳ ಲೆಕ್ಕದಲ್ಲಿ ಅನುದಾನ ಬರುತ್ತದೆ. ಜನರ ಬದುಕು ಹಸನಾಗಿದೆಯಾ ಅಂತ ನೋಡಿದರೆ ಫಲಿತಾಂಶ ಶೂನ್ಯ ಎಂಬಂತಾಗಿದೆ.

ನಗರಕೆರೆಯ ನಿವಾಸಿ ರಾಮಕೃಷ್ಣ ಎಂಬುವವರು ಈ ದಿನ.ಕಾಮ್ ಜೊತೆಗೆ ಮಾತನಾಡಿ, “ಕಳೆದ ಎರಡು ತಿಂಗಳುಗಳಿಂದ ಸಣ್ಣ ಮಳೆ ಬರುತ್ತಿದೆ. ಒಂದೇ ಒಂದು ದೊಡ್ಡ ಮಳೆ ಬಂದಿಲ್ಲ. ಗದ್ದೆಗಳಲ್ಲಿ ಭತ್ತದ ಹೊಟ್ಲು ಹಾಕಲು ಆಗಿಲ್ಲ. ಆದರೆ ಊರಿನಲ್ಲಿ ರಸ್ತೆಗಳಲ್ಲಿ ಭತ್ತದ ನಾಟಿ ಮಾಡಬಹುದು. ಅಷ್ಟು ಹಾಳಾಗಿ ಹೋಗಿವೆ. ಆದರೂ ಪಂಚಾಯಿತಿ ಅಧಿಕಾರಿಗಳು ಇತ್ತ ತಿರುಗಿ ನೋಡಿಲ್ಲ. ಊರಿನ ರಸ್ತೆ, ಚರಂಡಿಗಳು ತೀರ ಹದಗೆಟ್ಟಿವೆ. ಜನರು ಓಡಾಡದಂತಾಗಿದೆ. ಇಂತ ತುರ್ತು ಕಾಮಗಾರಿಗಳಿಗೆ ಹಣ ಬಳಸದೇ ಬೇಡದ ಜಲ ಜೀವನ್ ಮಿಷನ್ ಕಾಮಗಾರಿಗೆ ಬಳಸಿದ್ದಾರೆ” ಎಂದು ದೂರಿದರು.
“ನಗರಕೆರೆ ರಾಜಕೀಯವಾಗಿ ಪ್ರಭಾವ ಹೊಂದಿರುವ ಊರಾದ್ದರಿಂದ 2021-22 ನೇ ಸಾಲಿನಲ್ಲಿ 11,846,88 ರೂ , 2022-23 ನೇ ಸಾಲಿನಲ್ಲಿ 13,028,683 ರೂ ಹಾಗೂ 2023-24 ನೇ ಸಾಲಿನಲ್ಲಿ 93,58,700 ರೂಗಳು ಪಂಚಾಯಿತಿ ಖಾತೆಯಲ್ಲಿ ಇರುವುದನ್ನು ತೋರಿಸುತ್ತಿದೆ. ವರ್ಷ ವರ್ಷವೂ, ಲಕ್ಷ ಇಲ್ಲವೇ ಕೋಟಿಗಳ ಲೆಕ್ಕದಲ್ಲಿ ಅನುದಾನ ಬರುತ್ತದೆ. ಜನರ ಬದುಕು ಹಸನಾಗಿದೆಯಾ ಅಂತ ನೋಡಿದರೆ ಫಲಿತಾಂಶ ಶೂನ್ಯ” ಎಂದರು.
ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಮಂಡ್ಯ ಜಿಲ್ಲಾ ಪಂಚಾಯಿತಿ ಸಿಇಓ ಶೇಖ್ ತನ್ವೀರ್ ಆಸಿಫ್, ಮದ್ದೂರು ತಾಲೂಕು ಪ್ರಭಾರ ಇಓ ರವಿ ಹಾಗೂ ನಗರಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಿಲ್ಪ ಜಯಲಿಂಗು ಅವರಿಗೆ ಕರೆ ಮಾಡಲಾಯಿತಾದರೂ, ಮಾತಿಗೆ ಸಿಗಲಿಲ್ಲ.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಂಜಿತ ಜಿ.ಕೆ ಈ ದಿನ.ಕಾಮ್ ಜೊತೆಗೆ ಮಾತನಾಡಿ “ನಗರಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆ, ಚರಂಡಿ ಸೇರಿದಂತೆ ಮೂಲಭೂತ ಸೌಕರ್ಯಗಳ ವಾಸ್ತವ ಸ್ಥಿತಿಯನ್ನು ಸಾಮಾನ್ಯ ಸಭೆಯಲ್ಲಿ ಇಟ್ಟು ನಿರ್ಣಯ ಮಾಡಿ ಅನುದಾನ ಕೋರಿ ಮದ್ದೂರು ಶಾಸಕರು, ವಿಧಾನ ಪರಿಷತ್ತಿನ ಸದಸ್ಯರು ಹಾಗೂ ಸಂಸದರಿಗೆ ಪತ್ರ ಬರೆಯುತ್ತೇವೆ” ಎಂದರು.
ಕೋಟಿಗಳ ಲೆಕ್ಕದಲ್ಲಿ ಅನುದಾನ ಬಂದರು ಊರಿನ ಮೂಲಭೂತ ಸೌಕರ್ಯಗಳು ಸರಿಯಾಗಿಲ್ಲ. ಊರಿನ ಶಾಲೆಯ ಅಡುಗೆ ಮನೆ ಸೋರುತ್ತಿದೆ, ಶೌಚಾಲಯದ ಗೋಡೆಗೆ ಊರೆ ಕೊಟ್ಟು ನಿಲ್ಲಿಸಿದ್ದಾರೆ. ವರ್ಷ ವರ್ಷ ಶಾಲೆಗೆ ಮಕ್ಕಳ ದಾಖಲಾತಿ ಕಡಿಮೆ ಆಗುತ್ತಿದೆ. ಇದರ ಕಡೆಗೆ ಗ್ರಾಮ ಸರಕಾರದ ಗಮನವಿಲ್ಲ. ಜನರ ಬದುಕು ಹಸನಾಗಲಿಲ್ಲ. ಹಾಗಾದರೆ, ಬಂದ ಅನುದಾನ ಯಾರ ಜೇಬನ್ನು ತುಂಬುತ್ತಿವೆ? ಸಣ್ಣ ಮಳೆಗಳು ಅಭಿವೃದ್ಧಿಯ ಗುಣಮಟ್ಟವನ್ನು ಸಾರ್ವಜನಿಕರ ಎದುರು ತೊಳೆದಿಡುತ್ತಿವೆ.
