ರಾಜ್ಯದಲ್ಲಿ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಮಳೆ ಅಬ್ಬರಿಸುತ್ತಿದೆ. ರಾಜ್ಯದ ಬಹುತೇಕ ಜಲಾಶಯಗಳು ತುಂಬಿವೆ. ನದಿಗಳು ಉಕ್ಕಿ ಹರಿಯುತ್ತಿದೆ. ಅದಾಗ್ಯೂ, ರಾಜ್ಯದಲ್ಲಿನ 11 ಜಿಲ್ಲೆಗಳಲ್ಲಿ ವಾಡಿಕೆಯಷ್ಟು ಮಳೆಯಾಗಿಲ್ಲ. ಕೆಲವು ಜಿಲ್ಲೆಗಳಲ್ಲಿ ಸರಾಸರಿ ವಾಡಿಕೆಯಷ್ಟು ಮಳೆಯಾಗಿದ್ದರೂ, ಆ ಜಿಲ್ಲೆಗಳ ಕೆಲವು ತಾಲೂಕುಗಳು ಸೇರಿದಂತೆ ಒಟ್ಟು 83 ತಾಲೂಕುಗಳಲ್ಲಿ ಮಳೆ ಕೊರತೆ ಎದರಾಗಿದೆ. ಹೀಗಾಗಿ, ಈ ತಾಲೂಕುಗಳಲ್ಲಿ ಮುಂಗಾರು ಬಿತ್ತನೆಗೆ ಹಿನ್ನಡೆಯಾಗಿದೆ.
ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಪ್ರಕಾರ, ಏಳು ಜಿಲ್ಲೆಗಳಲ್ಲಿ ಹೆಚ್ಚಿನ ಮಳೆ ಕೊರತೆಯಾಗಿದ್ದು, ನಾಲ್ಕು ಜಿಲ್ಲೆಗಳಲ್ಲಿ ಸಾಮಾನ್ಯ ಕೊರತೆ ಕಂಡುಬಂದಿದೆ. ರಾಮನಗರದಲ್ಲಿ 1% ಮಳೆಕೊರತೆಯಾಗಿದ್ದರೆ, ಬಳ್ಳಾರಿಯಲ್ಲಿ 4% ಮಳೆ ಕೊರತೆ ಕಂಡುಬಂದಿದೆ. ವಿಜಯನಗರ ಮತ್ತು ಬೆಂಗಳೂರು ನಗರ ಜಿಲ್ಲೆಯಲ್ಲಿ ಕ್ರಮವಾಗಿ 13% ಮತ್ತು 17% ಮಳೆ ಕೊರತೆ ಎದುರಾಗಿದೆ.
ಇನ್ನು, ಕೋಲಾರದಲ್ಲಿ 49%, ಚಿಕ್ಕಬಳ್ಳಾಪುರದಲ್ಲಿ 43%, ಬೆಂಗಳೂರು ಗ್ರಾಮಾಂತರದಲ್ಲಿ 34%, ಯಾದಗಿರಿಯಲ್ಲಿ 32%, ರಾಯಚೂರಿನಲ್ಲಿ 29%, ವಿಜಯಪುರದಲ್ಲಿ 29% ಹಾಗೂ ಕೊಪ್ಪಳದಲ್ಲಿ 28% ಮಳೆ ಕೊರತೆಯಾಗಿದೆ.
ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ 32 ತಾಲೂಕುಗಳು ಹಾಗೂ ಉತ್ತರ ಒಳನಾಡು ಜಿಲ್ಲೆಗಳಲ್ಲಿ 51 ತಾಲೂಕುಗಳಲ್ಲಿ ಮಳೆ ಕೊರತೆಯಾಗಿದೆ. ಈ ಪೈಕಿ, ಸಿರಗುಪ್ಪ ತಾಲೂಕಿನಲ್ಲಿ 65%, ಕೋಲಾರ ತಾಲೂಕಿನಲ್ಲಿ 63%, ಮುಳಬಾಗಿಲು ತಾಲೂಕಿನಲ್ಲಿ 62%ರಷ್ಟು ಕೊರತೆಯೊಂದಿಗೆ ಅತಿ ಹೆಚ್ಚು ಮಳೆ ಕೊರತೆ ದಾಖಲಾಗಿದೆ.
ಈ 83 ತಾಲೂಕಿನಲ್ಲಿ ವಾಡಿಕೆಯಷ್ಟು ಮಳೆಯಾಗದ ಪರಿಣಾಮ ಮುಂಗಾರು ಬಿತ್ತನೆಯಲ್ಲಿ ಕುಂಠಿತವಾಗಿದೆ. ಜೂನ್ ತಿಂಗಳಿನಲ್ಲೇ ಮುಂಗಾರು ಬಿತ್ತನೆ ಆರಂಭವಾಗಬೇಕಿತ್ತು. ಆದರೆ, ಮಳೆಯಾಗದ ಪರಿಣಾಮ, ನಿರೀಕ್ಷೆಯಷ್ಟು ಬಿತ್ತನೆಯಾಗಿಲ್ಲ ಎಂದು ವರದಿಯಾಗಿದೆ.
ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರು ಹಾಆಗೂ ಬೆಳಗಾವಿ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಶಿರೂರು ಬಳಿ ಗುಡ್ಡ ಕುಸಿದು 11 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ, ಮೂವರ ಮೃತದೇಹಗಳು ಇನ್ನೂ ಪತ್ತೆಯಾಗಿಲ್ಲ. ಬೆಂಗಳೂರು-ಮಂಗಳೂರಿನ ನಡುವಿನ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಕಲೇಶಪುರ ಬಳಿ ಶಿರಾಡಿ ಘಾಟ್‌ನಲ್ಲಿ ಗುಡ್ಡ ಕುಸಿದು ಸಂಚಾರ ಸ್ಥಗಿತಗೊಂಡಿತ್ತು. ಚಾರ್ಮಾಡಿ ಘಾಟ್‌ನಲ್ಲಿಯೂ ಗುಡ್ಡ ಕುಸಿತವಾಗಿದೆ. ಧಾರಕಾರ ಮಳೆಯಿಂದಾಗಿ ಹಲವಾರು ಭಾಗಗಳಲ್ಲಿ ಮಳೆಗಳು ಜಲಾವೃತಗೊಂಡಿವೆ.