ಮಂಡ್ಯ ಜಿಲ್ಲೆಯ ಕಾರ್ಯಕರ್ತರು ಸ್ವಾಭಿಮಾನ ಉಳ್ಳವರಾಗಿದ್ದಾರೆ. ಯಾರೇ ಕಿಡಿಗೇಡಿಗಳು ನೋವು ಕೊಟ್ಟರು ಅದಕ್ಕೆ ಪ್ರತಿಕ್ರಿಯೆ ಮಾಡಬೇಡಿ. ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಆಗಬಾರದು ಎಂದು ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಕಾರ್ಯಕರ್ತರಿಗೆ ಕಿವಿಮಾತು ಹೇಳಿದ್ದಾರೆ.
ಮೈಸೂರು ಚಲೋ ಪಾದಯಾತ್ರೆಯು ಮಂಡ್ಯಕ್ಕೆ ಆಗಮನಿಸಿದಾಗ ಜನರನ್ನುದ್ದೇಶಿಸಿ ಮಾತನಾಡಿದ ಅವರು, “ಮಂಡ್ಯದಲ್ಲಿ ನಿನ್ನೆಯ ದಿನ ನಡೆದ ಸಂಗತಿ ಬೇಸರ ತರಿಸಿದೆ. ಯಾರೇ ಕಿಡಿಗೇಡಿಗಳು ಬಂದು ಏನೇ ಕುಚೇಷ್ಟೆ ಮಾಡಿದರೂ ಕಾರ್ಯಕರ್ತರು ತಾಳ್ಮೆ ಕಳೆದುಕೊಳ್ಳದೆ ಸಹನೆಯಿಂದ ಇರಬೇಕು. ನಮ್ಮ ಉದ್ದೇಶ ಪಾದಯಾತ್ರೆ, ನಮ್ಮ ಹೋರಾಟ ಮೂಡಾ ಹಾಗೂ ವಾಲ್ಮೀಕಿ ಹಗರಣಗಳ ವಿರುದ್ಧ” ಎಂದು ಹೇಳಿದರು.
ಮಾಜಿ ಪ್ರಧಾನಿಗಳಾದ ದೇವೇಗೌಡರು ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಸಂಬಂಧ ತುಂಬಾ ಅತ್ಯುತ್ತಮವಾಗಿದೆ ಎಂದು ತಿಳಿಸಿದ್ದಾರೆ. ನಮ್ಮ ನಾಯಕರು ಕೇಂದ್ರ ಸಚಿವರಾದ ಕುಮಾರಸ್ವಾಮಿ ಅವರು ಮಂಡ್ಯದ ಘಟನೆಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ತಾವುಗಳು ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಕಾರಣಕ್ಕೂ ಬೇರೆ ಬೇರೆ ರೀತಿಯ ಘಟನೆಗಳಿಗೆ ಅವಕಾಶ ಕೊಡಬಾರದು ಎಂದಿದ್ದಾರೆ. ಕಾರ್ಯಕರ್ತರು ತಾಳ್ಮೆಯಿಂದ ಸಮಾಧಾನಕರವಾಗಿ ವರ್ತನೆ ಮಾಡಬೇಕು ಎಂದು ತಮ್ಮ ಕಾರ್ಯಕರ್ತರಿಗೆ ಒಂದು ಸ್ಪಷ್ಟ ಸಂದೇಶ ರವಾನೆ ಮಾಡಿದ್ದಾರೆ.
ಎರಡೂ ಪಕ್ಷದ ಸಮನ್ವಯ ಸಮಿತಿಯ ಸದಸ್ಯರು ಈ ಘಟನೆಯ ಬಗ್ಗೆ ಒಕ್ಕೂಟಕ್ಕೆ ಮಾಹಿತಿ ಕೊಟ್ಟಿದ್ದಾರೆ. ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಅನ್ನೋದನ್ನು ಕಾದು ನೋಡೊಣ ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಹೊಸನಗರ | ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ
ಇದೇ ವೇಳೆ, ಕಾಂಗ್ರೆಸ್ ಸರ್ಕಾರದ ಹಗರಣಗಳ ಬಗ್ಗೆ ಸದನದ ಒಳಗೆ ಮತ್ತು ಹೊರಗೆ ಹೋರಾಟ ಮಾಡುತ್ತಿದ್ದೇವೆ. ಮೈಸೂರು ಚಲೋ ಪಾದಯಾತ್ರೆ ಯಶಸ್ವಿಯಾಗಿ ಸಾಗುತ್ತಿದೆ. ಪಾದಯಾತ್ರೆಯಲ್ಲಿ ಸಾವಿರಾರು ಕಾರ್ಯಕರ್ತರು ಹಾಗೂ ರೈತರು ನಮ್ಮ ಜೊತೆ ಹೆಜ್ಜೆ ಹಾಕುತ್ತಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
