ರಾಯಚೂರಿನ ರಾಮಕೃಷ್ಣ ಆಶ್ರಮದಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ಪೆನ್ನು ಕದ್ದ ಆರೋಪದಲ್ಲಿ ಬಾಲಕನೋರ್ವನಿಗೆ ಮಠದ ಗುರೂಜಿ ಮೂರು ದಿನ ಕತ್ತಲೆ ಕೋಣೆಯಲ್ಲಿ ಕೂಡಿಟ್ಟು, ಚಿತ್ರಹಿಂಸೆ ನೀಡಿರುವ ಘಟನೆ ಬೆಳಕಿಗೆ ಬಂದಿದೆ.
ವಿದ್ಯಾರ್ಥಿಯೋರ್ವ ಪೆನ್ನು ಕದ್ದಿದ್ದಾನೆ ಎಂಬ ಕಾರಣಕ್ಕೆ ಆಶ್ರಮದ ಗುರೂಜಿ ವಿದ್ಯಾರ್ಥಿಯನ್ನು ಮನಬಂದಂತೆ ಥಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅಷ್ಟೇ ಅಲ್ಲದೆ ವಿದ್ಯಾರ್ಥಿಯನ್ನು ಮೂರು ದಿನಗಳ ಕಾಲ ಕತ್ತಲೆ ಕೋಣೆಯಲ್ಲಿ ಕೂಡಿಟ್ಟಿದ್ದಾರೆ. ವಿದ್ಯಾರ್ಥಿಯ ಕಣ್ಣುಗಳು ಬಾವು ಬರುವಂತೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ವಿದ್ಯಾರ್ಥಿ ಶ್ರವಣ್ ಕುಮಾರ್ ಹಲ್ಲೆಗೊಳಗಾದ ಬಾಲಕ. ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ಶ್ರವಣ್ ಕುಮಾರ್ ಕುಟುಂಬದಲ್ಲಿ ಕಡು ಬಡತನ ಹಿನ್ನೆಲೆಯಲ್ಲಿ ಆಶ್ರಮದಲ್ಲಿದ್ದ. ತನ್ನ ಸಹಪಾಠಿಗಳ ಜೊತೆ ಆಟವಾಡುತ್ತಾ ಒಮ್ಮೆ ಪೆನ್ನು ಕದ್ದಿದ್ದ. ಈ ವಿಚಾರ ಸಂಬಂಧ ಶ್ರವಣಕುಮಾರ್ ಸಹಪಾಠಿಗಳು ಆತನ ವಿರುದ್ಧ ದೂರು ನೀಡಿದ್ದರು. ಈ ದೂರಿನ ಅನ್ವಯ ರಾಮಕೃಷ್ಣ ಮಠದ ಗುರೂಜಿ ವೇಣುಗೋಪಾಲ ಎಂಬುವವರು ಶ್ರವಣ್ ಕುಮಾರ್ನನ್ನು ಕರೆದು ಮನಬಂದಂತೆ ಥಳಿಸಿದ್ದಾರೆ. ಜೊತೆಗೆ ಮೂರು ದಿನಗಳ ಕಾಲ ಕತ್ತಲೇ ಕೋಣೆಯಲ್ಲಿ ಕೂಡಿ ಹಾಕಿದ್ದಾರೆ ಎಂದು ತಿಳಿದುಬಂದಿದೆ.
ರಾಯಚೂರು ನಗರದ ಸ್ಟೇಷನ್ ರಸ್ತೆಯಲ್ಲಿರುವ ರಾಮಕೃಷ್ಣ ಆಶ್ರಮಕ್ಕೆ ಆಕಸ್ಮಿಕವಾಗಿ ಶ್ರವಣ್ ಕುಮಾರ್ ತಾಯಿ ಭೇಟಿ ನೀಡಿದಾಗ ವಿಷಯ ಬಹಿರಂಗವಾಗಿದೆ. ಸದ್ಯ ಶ್ರವಣಕುಮಾರ್‌ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮೈಕೈ ತುಂಬಾ ಗಾಯಗಳಾಗಿದ್ದು, ಕಣ್ಣು ಪೂರ್ತಿ ಬಾವು ಬಂದಿದೆ. ರಾಯಚೂರು ಪಶ್ಚಿಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮಗನ ಸ್ಥಿತಿಗೆ ಪೋಷಕರು ಕಣ್ಣೀರು ಹಾಕಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಗ್ರೌಂಡ್ ರಿಪೋರ್ಟ್ | ವಯನಾಡ್; ಕೆಸರು ಮಣ್ಣು ಎಂದು ಕಾಲಿಟ್ಟಿದ್ದೆ, ಆದರೆ, ಅಲ್ಲಿ ಪುಟ್ಟ ಮಗುವಿನ ಮೃತದೇಹವಿತ್ತು!
ಘಟನೆಯ ಬಗ್ಗೆ ಮಾಹಿತಿ ತಿಳಿದ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ಪುಟ್ಟಮಾದಯ್ಯ ಅವರ ಸೂಚನೆಯ ಮೇರೆಗೆ ಆರೋಪಿ ಹಾಗೂ ಮಠದ ಉಸ್ತುವಾರಿಯಾಗಿರುವ ಪಿ ವೇಣುಗೋಪಾಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಬಾಲಕನಿಗೆ ಹಲ್ಲೆ ನಡೆಸಿ, ಮಾರಣಾಂತಿಕ ದೌರ್ಜನ್ಯವೆಸಗಿರುವ ಹಿನ್ನೆಲೆಯಲ್ಲಿ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿರುವುದಾಗಿ ವರದಿಯಾಗಿದೆ.
