ಭಾರೀ ನಿರೀಕ್ಷೆ ಹಾಗೂ ಪ್ರಚಾರದೊಂದಿಗೆ ಅನುಷ್ಠಾನಗೊಂಡಿದ್ದ ಸ್ಮಾರ್ಟ್ ಸಿಟಿ ಯೋಜನೆಯು ಈಗ ಜನರಿಗೆ ಸಂಕಷ್ಟ ತಂದೊಡ್ಡಿದೆ.
ಸ್ಮಾರ್ಟ್ ಸಿಟಿ ಯೋಜನೆಯಡಿ ಶಿವಮೊಗ್ಗ ನಗರದ ಚಿತ್ರಣವೇ ಬದಲಾಗಲಿದೆ. ಮೂಲಸೌಕರ್ಯ ವ್ಯವಸ್ಥೆಯಲ್ಲಿ ಆಮೂಲಾಗ್ರ ಸುಧಾರಣೆಯಾಗಲಿದೆ. ನೂರಾರು ಕೋಟಿ ರೂ. ಅನುದಾನ ಬರಲಿದೆ. ನಗರವು ಸ್ಮಾರ್ಟ್, ಹೈಟೆಕ್ ಆಗಲಿದೆ ಎಂದೆಲ್ಲ ಯೋಜನೆಯ ಪ್ರಾರಂಭದಲ್ಲಿ ಹೇಳಲಾಗಿತ್ತು. ಯಾವ ರೀತಿಯಲ್ಲಿ ನಗರ ಅಭಿವೃದ್ದಿಗೊಳಿಸಬೇಕು ಎಂಬ ಕುರಿತಂತೆ ಜನಾಭಿಪ್ರಾಯ ಕೂಡ ಸಂಗ್ರಹಿಸಲಾಗಿತ್ತು. ಆದರೆ, ದಿನಗಳೆದಂತೆ ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನಗೊಂಡ ನಂತರ, ನಾಗರಿಕರಲ್ಲಿದ್ದ ನಿರೀಕ್ಷೆಗಳೆಲ್ಲ ಹುಸಿಯಾಗುತ್ತಾ ಬರಲಾರಂಭಿಸಿತ್ತು.
ಹಲವು ಕಾಮಗಾರಿಗಳ ಬಗ್ಗೆ ಸಾರ್ವಜನಿಕರಿಂದ ಭಾರೀ ಟೀಕೆಗಳು ವ್ಯಕ್ತವಾಗಿರುವ ನಡುವೆಯೇ ಅವೈಜ್ಞಾನಿಕವಾಗಿ ಕಾಮಗಾರಿಗಳ ಅನುಷ್ಠಾನ, ವಿಳಂಬ, ಕಳಪೆ ಗುಣಮಟ್ಟ ಸೇರಿದಂತೆ ಹತ್ತು ಹಲವು ದೂರುಗಳು ಕೇಳಿಬಂದಿದೆ. ಇದೆಂತ ಸ್ಮಾರ್ಟ್ ಸಿಟಿ? ಎಂದು ಶಿವಮೊಗ್ಗ ಜನರ ಪ್ರಶ್ನೆಯಾಗಿದೆ?
ಶಿವಮೊಗ್ಗ ನಗರದ ಬಿ ಎಚ್ ರಸ್ತೆಯಲ್ಲಿರುವ ಮೀನಾಕ್ಷಿ ಭವನ್, ಕೃಷ್ಣ ಕೆಫೆ, ಹೊಳೆ ಸ್ಟಾಪ್ ರಸ್ತೆ, ಹಾಗೂ ಮಹಾನಗರ ಪಾಲಿಕೆ ರಸ್ತೆಯಲ್ಲಿ ಬರುವ ಕಸ್ತೂರ್ಬಾ ಶಾಲೆ ಅಂಬೇಡ್ಕರ್ ಭವನದ ರಸ್ತೆಯ ಭಾಗಗಳಲ್ಲಿ ಸಣ್ಣ ಮಳೆ ಬಂದರೆ ಸಾಕು. ಎಲ್ಲವೂ ಅಯೋಮಯವಾಗುತ್ತದೆ. ಮಳೆಗೆ ರಸ್ತೆ ತುಂಬಾ ನೀರು ತುಂಬುತ್ತದೆ. ಸಮರ್ಪಕ ಒಳಚರಂಡಿ ವ್ಯವಸ್ಥೆ ಇಲ್ಲದ ಕಾರಣ ವಾಹನ ಸವಾರರು ಪರದಾಟ ನಡೆಸಬೇಕಿದೆ.
ರಸ್ತೆಯಲ್ಲೇ ನೀರು ತುಂಬುವುದರಿಂದ ವಾಹನ ಸವಾರರು ಸುತ್ತಮುತ್ತಲಿನ ವಾಹನ ಸವರರಿಗೆ ಹಾಗೂ ಅಕ್ಕಪಕ್ಕ ಓಡಾಡುವ ಸಾರ್ವಜನಿಕರಿಗೆ ಕೆಸರು ನೀರನ್ನೆರಚಿ ಪ್ರಯಾಣಿಸಬೇಕಿದೆ. ಇವೆಲ್ಲವೂ ಸ್ಮಾರ್ಟ್ ಸಿಟಿ ಕಳಪೆ ಕಾಮಗಾರಿಗೆ ಹಿಡಿದ ಕೈಗನ್ನಡಿ ಆಗಿದೆ.
ಹಾಗೆಯೇ ನಗರದ ಹಲವು ಭಾಗಗಳಲ್ಲಿ ವಿದ್ಯುತ್ ಕಂಬದಲ್ಲಿ ತಂತಿಗಳು ನೇತಾಡುತ್ತಿದ್ದು, ಸಾರ್ವಜನಿಕರ ಬಲಿಗೆ ಕಾಯುತ್ತಿದೆ. ಯಾಕೆಂದರೆ ಅಪಾಯ ಕಟ್ಟಿಟ್ಟ ಬುತ್ತಿ ಆಗಿದೆ.
ಶಿವಮೊಗ್ಗದ ಜನರು ಎದುರಿಸುತ್ತಿರುವ ಸಮಸ್ಯೆಗಳ ಸಂಬಂಧ ಶಿವಮೊಗ್ಗ ಸ್ಮಾರ್ಟ್ ಸಿಟಿ ನಿರ್ದೇಶಕರಾದ ರಾಜಣ್ಣ ಈ.ದಿನ.ಕಾಮ್ ಜೊತೆಗೆ ಮಾತನಾಡಿ, ” ಶಿವಮೊಗ್ಗ ಸ್ಮಾರ್ಟ್ ಸಿಟಿ ಕಾಮಗಾರಿ ಎಲ್ಲವು ಜೂನ್ ತಿಂಗಳಿಗೆ ಮುಗಿದಿದೆ. ಈವಾಗ ಏನಿದ್ದರೂ ಆಡಿಟ್ ಆಗುತ್ತಿದೆ. ಹಾಗಾಗಿ ನಮಗೆ ಇದು ಜವಾಬ್ದಾರಿ ಇಲ್ಲ. ಜೊತೆಗ್ ವಿದ್ಯುತ್ ವಿಚಾರ ಕೇವಲ 10% ನಮ್ಮ ಮೇಲಿದೆ. ಉಳಿದಿದ್ದೆಲ್ಲ ಮೆಸ್ಕಾಂ ವ್ಯಾಪ್ತಿಯಲ್ಲಿದೆ. ಹಾಗಾಗಿ ಮೆಸ್ಕಾಂಗೆ ಇದರ ಕುರಿತು ತಿಳಿಸಿ” ಎಂದು ಕೈ ತೊಳೆದುಕೊಂಡರು.
ಶಿವಮೊಗ್ಗ ಸ್ಮಾರ್ಟ್ ಸಿಟಿ ಇಇ ವಿಜಯ್ ಕುಮಾರ್ ಅವರನ್ನು ಸಂಪರ್ಕ ಮಾಡಿದಾಗ, ದೂರುಗಳು ಬಂದಿದ್ದು, ಮೀನಾಕ್ಷಿ ಭವನ್ ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿ ಸರಿಪಡಿಸಿಕೊಡಲು ಪ್ರಯತ್ನಿಸುವೆ” ಎಂದು ತಿಳಿಸಿದ್ದಾರೆ.

ಮಹಾನಗರ ಪಾಲಿಕೆಯ ಎ ಇ ಸ್ವಾತಿ ನಾಯ್ಕ್ ಅವರನ್ನು ಸಂಪರ್ಕ ಮಾಡಿದಾಗ ಇದು ರಾಷ್ಟ್ರೀಯ ಹೆದ್ದಾರಿ ವಿಭಾಗಕ್ಕೆ ಬರುವುದಾಗಿ ತಿಳಿಸಿದ್ದಾರೆ. ನಂತರ ರಾಷ್ಟ್ರೀಯ ಹೆದ್ದಾರಿ ವಿಭಾಗದವರನ್ನು ಸಂಪರ್ಕ ಮಾಡಿದಾಗ ಇದು ಪಿಡಬ್ಲ್ಯೂಡಿಗೆ ಬರುವುದಾಗಿ ತಿಳಿಸಿದ್ದಾರೆ.
ನಂತರ ಪಿಡಬ್ಲ್ಯೂಡಿ ಸದಾನಂದ ಮುಖ್ಯ ಇಂಜಿನಿಯರ್ ಅವರನ್ನು ಸಂಪರ್ಕ ಮಾಡಿದಾಗ, “ಇದು ಸ್ಮಾರ್ಟ್ ಸಿಟಿ ವ್ಯಾಪ್ತಿಯಲ್ಲೆ ಬರುತ್ತದೆ. ಫುಟ್ ಪಾಥಲ್ಲಿ ಕಂಬಿ ಹಾಕುವುದು, ರಸ್ತೆ ಯುಜಿಡಿ ಎಲ್ಲವು ಅವರಿಗೆ ಬಿಟ್ಟು ಕೊಡಲಾಗಿದೆ. ಹಾಗಾಗಿ ಇದು ಅವರ ವ್ಯಾಪ್ತಿಯಲ್ಲೆ ಸರಿಯಾಗಬೇಕಿದೆ” ಎಂದು ತಿಳಿಸಿದ್ದಾರೆ. ಸ್ಮಾರ್ಟ್ ಸಿಟಿ ಇಂಜಿನಿಯರ್‌ಗಳು ಹೊಳೆ ಬಸ್ ಸ್ಟಾಪ್ ಹಾಗೂ ಫುಟ್ ಪಾತ್ ಕೆಲಸ ಎಲ್ಲವು ನಮ್ಮ ವ್ಯಾಪ್ತಿಯಲ್ಲೆ ಆಗಿರುವುದು. ಆದರೆ ಮಧ್ಯೆ ಇರುವ ರಸ್ತೆ ಮಾತ್ರ ನಮ್ ದಲ್ಲ ಎಂದು ಹೇಳುತ್ತಿದ್ದಾರೆ. ಅಧಿಕಾರಿಗಳ ‘ನಮ್ಮದಲ್ಲ, ಅವರದ್ದು’ ಎಂಬ ಮಾತುಗಳಿಂದಾಗಿ ಸಾರ್ವಜನಿಕರು ಸಂಕಷ್ಟಕ್ಕೀಡಾಗಿರುವುದಂತೂ ಮಾತ್ರ ವಾಸ್ತವ. ಅಧಿಕಾರಿಗಳ ಈ ನಡೆಗೆ ಸಾರ್ವಜನಿಕರು ಹಿಡಿಶಾಪ ಹಾಕಿದ್ದಾರೆ.

ಒಳಚರಂಡಿಗೆ ನೀರು ಹೋಗಲು ಸರಿಯಾಗಿ ಹರಿದು ಹೋಗುವ ವ್ಯವಸ್ಥೆಯನ್ನು ಯಾರು ಮಾಡಿಕೊಡಬೇಕು ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ. 1200₹ ಕೋಟಿ ವೆಚ್ಚದಲ್ಲಿ ಶಿವಮೊಗ್ಗ ಸ್ಮಾರ್ಟ್ ಸಿಟಿ ಕಾಮಗಾರಿ ಲೆಕ್ಕ ತೋರಿಸುತ್ತಿದ್ದಾರೆ. ಆದರೆ ಸರಿಯಾಗಿ ಕೆಲಸಗಳು ಆಗಿಲ್ಲ. ಆಗಿರುವ ಕೆಲಸಗಳು ಸಹ ಕಳಪೆ ಕಾಮಗಾರಿ ಆಗಿರುವುದು ಕಣ್ಣ ಮುಂದಿದೆ. ಇದಕ್ಕೆಲ್ಲ ಶಿವಮೊಗ್ಗ ಸಂಸದರಾದ ಬಿ ವೈ ರಾಘವೇಂದ್ರ ಅವರು ಯಾವಾಗ ಪರಿಹಾರ ಕಂಡುಕೊಳ್ಳುತ್ತಾರೋ ಕಾದುನೋಡಬೇಕಿದೆ.


ಸ್ಮಾರ್ಟ್ ಸಿಟಿ ಅಲ್ಲ ದರಿದ್ರ ಸಿಟಿ ಏನೇ ಕೇಳಿದರೂ ಬೇರೆಯವರ ತಲೆ ಮೇಲೆ ಹಾಕುತ್ತಾರೆ ಚೆನ್ನಾಗಿದ್ದ ನಮ್ಮ ಶಿವಮೊಗ್ಗ ಹಾಳು ಮಾಡಿದರು ಆಗಿಯುವ ಕೆಲಸ ಮುಗಿಯುವುದೇ ಇಲ್ಲಾ