ಮೋದಿಯವರು ಪ್ರಧಾನಿ ಆದ ಬಳಿಕ ಸತತವಾಗಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಸುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಈ ಬಾರಿ ಸತತ ನಾಲ್ಕನೇ ದಿನ ಇಂಧನ ದರ ಏರಿಕೆ ಮಾಡಿ ದೇಶವನ್ನು ಮತ್ತು ಜನಸಾಮಾನ್ಯರನ್ನು ಲೂಟಿ ಮಾಡುತ್ತಿದ್ದಾರೆ. ಈ ಲೂಟಿಯಿಂದ ಹೆಚ್ಚುತ್ತಿರುವ ಜನಾಕ್ರೋಶಕ್ಕೆ ಬಿಜೆಪಿಯೇ ನೇರ ಹೊಣೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೆಹಲಿಗೆ ತೆರಳುವ ಮುನ್ನ ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ, “ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ದರಗಳ ಏರಿಸಿದ್ದು, ದೇಶದ ಇತಿಹಾಸದಲ್ಲಿ ಹೀಗೆ ಏರಿಕೆಯಾಗಿದ್ದಿಲ್ಲ. ಜನಸಾಮಾನ್ಯರು, ಮದ್ಯಮ ವರ್ಗದ ಜನರ ಜೀವನ ದುಸ್ತರವಾಗಿದೆ. ಬೆಲೆಯೇರಿಕೆಯಿಂದ ಜನ ತತ್ತರಿಸಿದ್ದಾರೆ” ಎಂದಿದ್ದಾರೆ.
“ಬಿಜೆಪಿ ಅಧಿಕಾರಕ್ಕೆ ಬಂದರೆ ಗುಜರಾತ್ ಮಾದರಿ ಸರ್ಕಾರ ಬರುತ್ತದೆ, ಒಳ್ಳೆಯ ದಿನಗಳು ಬರುತ್ತವೆ ಎಂದು ಹೇಳಿ ಜನರಿಗೆ ಟೋಪಿ ಹಾಕಿದ್ದಾರೆ. ಕಳೆದ 11 ದಿನಗಳಿಂದ 4 ಬಾರಿ ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ದರ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 110 .93 ರೂ.ಗಳಾಗಿವೆ. ಡೀಸೆಲ್ ದರ 98.89 ರೂ.ಗಳಾಗಿವೆ. 7. 52 ರೂ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದೆ. ಪ್ರಧಾನಿ ಮೋದಿಯವರು ದೇಶವನ್ನು ಲೂಟಿ ಮಾಡುತ್ತಿರುವುದು ರುಜುವಾತಾಗುತ್ತಿದೆ” ಎಂದು ಆರೋಪಿಸಿದ್ದಾರೆ.
“ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ 2014ರ ಮೇ ತಿಂಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ 71.41 ರೂ. ಮತ್ತು ಡೀಸೆಲ್‌ಗೆ 56.71 ರೂ. ಇತ್ತು. ಅಂದು ಅಡುಗೆ ಅನಿಲದ ಬೆಲೆ ಸಿಲಿಂಡಲ್‌ಗೆ 412 ರೂ. ಇತ್ತು. ಆದರೆ, ಇಂದು 915 ರೂ. ಆಗಿದೆ. ದುಪ್ಪಟ್ಟಿಗಿಂತ ಹೆಚ್ಚಾಗಿದೆ. ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಕಚ್ಚಾ ತೈಲದ ಬೆಲೆ ಹೋಲಿಸಿದರೆ ಪ್ರಸ್ತುತ ಬೆಲೆ ಇಳಿದಿದ್ದರೂ ಕೂಡ, ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚುತ್ತಿದೆ. ಕ್ರೂಡ್ ಆಯಿಲ್ ಬೆಲೆ 65 ರಿಂದ 75 ಡಾಲರ್ ಇದ್ದಾಗಲೂ, ಈ ಕಡಿಮೆ ಬೆಲೆಯ ಲಾಭ, ಗ್ರಾಹಕರಿಗೆ ದೊರೆಯಲಿಲ್ಲ. ಪ್ರಸ್ತುತ ಕಚ್ಚಾ ತೈಲದ ಬೆಲೆ 100 ಡಾಲರ್ ಮಿತಿಯೊಳಗಿದ್ದರೂ, ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಸತತ ನಾಲ್ಕು ಬಾರಿ ಏರಿಕೆ ಮಾಡಿದೆ. ಇದರಿಂದಾಗಿ ಗ್ರಾಹಕರಿಗೆ, ರೈತರಿಗೆ, ಜನಸಾಮಾನ್ಯರಿಗೆ ಈ ಬೆಲೆ ಏರಿಕೆಯ ಬಿಸಿ ತಟ್ಟಲಿದೆ” ಎಂದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಎ.ಐ.ಸಿ.ಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ದಿನೇಶ್ ಗುಂಡೂರಾವ್, ಅಭಿಷೇಕ್ ದತ್ತಾ ಮೊದಲಾದವರು ಉಪಸ್ಥಿತರಿದ್ದರು.



