ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪಕ್ಷದ ನಾಯಕರಿಗೆ ಮುಸ್ಲಿಮರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಇನ್ನಷ್ಟು ಮುಕ್ತವಾಗಿ ಪ್ರಸ್ತಾಪಿಸಬೇಕು ಮತ್ತು ರಾಜಕೀಯವಾಗಿ ಮಾತನಾಡುವಾಗ ‘ಮುಸ್ಲಿಂ’ ಎಂಬ ಪದವನ್ನು ಬಳಸಲು ಹಿಂಜರಿಯಬಾರದು ಎಂದು ಕರೆ ನೀಡಿದ್ದಾರೆ.
ನವದೆಹಲಿಯಲ್ಲಿ ನಡೆದ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಸಲಹಾ ಸಮಿತಿಯ ಸಭೆಯಲ್ಲಿ ಮಾತನಾಡಿದ ಅವರು, ಒಂದು ನಿರ್ದಿಷ್ಟ ಸಮುದಾಯವು ಅನ್ಯಾಯಕ್ಕೆ ಒಳಗಾದಾಗ, ಅದನ್ನು ಅಸ್ಪಷ್ಟವಾಗಿ ಹೇಳುವ ಬದಲು ನಿರ್ದಿಷ್ಟವಾಗಿಯೇ ಗುರುತಿಸಬೇಕು ಎಂದು ಹೇಳಿದ್ದಾರೆ. ಮುಸ್ಲಿಮರು ತಾರತಮ್ಯಕ್ಕೆ ಒಳಗಾದಾಗ ಅಥವಾ ಅವರ ಮೇಲೆ ದಾಳಿಯಾದಾಗ, ಅದನ್ನು ಕೇವಲ ‘ಅಲ್ಪಸಂಖ್ಯಾತರು’ ಎಂಬ ಪದಸಾಲಿನಲ್ಲಿ ಅಡಗಿಸದೆ, ನೇರವಾಗಿ ಮುಸ್ಲಿಮರ ಸಮಸ್ಯೆ ಎಂದೇ ಪ್ರಸ್ತಾಪಿಸಬೇಕು ಎಂದು ನಾಯಕರಿಗೆ ಸಲಹೆ ನೀಡಿದ್ದಾರೆ.
ಇದೇ ರೀತಿ, ದಲಿತರು, ಒಬಿಸಿ ಮತ್ತು ಇತರೆ ಸಮುದಾಯಗಳಿಗೂ ಯಾವುದೇ ತೊಂದರೆಯಾದರೆ, ಅದನ್ನು ಕೂಡ ಆ ನಿರ್ದಿಷ್ಟ ಸಮುದಾಯದ ಹೆಸರಿನಲ್ಲಿಯೇ ಮುಕ್ತವಾಗಿ ಪ್ರಸ್ತಾಪಿಸಬೇಕು ಎಂದು ರಾಹುಲ್ ಗಾಂಧಿ ಒತ್ತಿ ಹೇಳಿದ್ದಾರೆ. “ಕಾಂಗ್ರೆಸ್ ಪಕ್ಷವು ‘ಮುಸ್ಲಿಂ’ ಎಂಬ ಪದವನ್ನು ಬಳಸಲು ಹಿಂಜರಿಯಬಾರದು ಎನ್ನುವುದು ರಾಹುಲ್ ಗಾಂಧಿ ಅವರ ಪ್ರಮುಖ ಸಂದೇಶವಾಗಿತ್ತು. ಈ ದಿನಗಳಲ್ಲಿ ಜನರು ಈ ಪದವನ್ನು ನೇರವಾಗಿ ಬಳಸಲು ಹಿಂಜರಿಯುತ್ತಾರೆ ಮತ್ತು ಅದರ ಬದಲು ‘ಅಲ್ಪಸಂಖ್ಯಾತರು’ ಎಂದು ಬಳಸುತ್ತಾರೆ” ಎಂದು ಸಭೆಯಲ್ಲಿ ಭಾಗವಹಿಸಿದ್ದ ನಾಯಕರೊಬ್ಬರು ಮಾಹಿತಿ ನೀಡಿದ್ದಾರೆ.
ಪಕ್ಷದ ಸಾಂಸ್ಥಿಕ ರೂಪುರೇಷೆಗಳಲ್ಲಿ ಮುಸ್ಲಿಮರ ಪ್ರಾತಿನಿಧ್ಯವನ್ನು ಹೆಚ್ಚಿಸುವ ಅಗತ್ಯವನ್ನು ಪ್ರಸ್ತಾಪಿಸಿದ ಅವರು, ಇದಕ್ಕಾಗಿ ಒಂದು ಬಲವಾದ ವೇದಿಕೆಯನ್ನು ಸೃಷ್ಟಿಸಲು ಅಲ್ಪಸಂಖ್ಯಾತ ವಿಭಾಗವು ಕೆಲಸ ಮಾಡಬೇಕು ಎಂದು ಸೂಚಿಸಿದ್ದಾರೆ.
ಇದನ್ನು ಓದಿದ್ದೀರಾ? IPL 2026 ಕಪ್ ಯಾರಿಗೆ; ಹೇಗಿದೆ ಪ್ಲೇ-ಆಫ್ ತಲುಪಿದ ನಾಲ್ಕು ದಿಗ್ಗಜ ತಂಡಗಳ ಬಲಾಬಲ?
ಈ ಸಭೆಯಲ್ಲಿ ಚುನಾವಣಾ ಅಕ್ರಮಗಳು ಮತ್ತು ‘ಮತ ಕಳ್ಳತನ’ದ ಬಗ್ಗೆಯೂ ಚರ್ಚಿಸಲಾಯಿತು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮೊದಲು ಈ ವಿಷಯದಲ್ಲಿ ಕಾಂಗ್ರೆಸ್ ಅನ್ನು ಬೆಂಬಲಿಸಿರಲಿಲ್ಲ, ಆದರೆ ಈಗ ಅವರು ಕೂಡ ಇವಿಎಂ ಹಾಗೂ ಚುನಾವಣಾ ಅಕ್ರಮಗಳ ವಿರುದ್ಧ ಹೋರಾಟಕ್ಕೆ ಕರೆ ನೀಡಿದ್ದಾರೆ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
ಇತ್ತೀಚೆಗೆ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ನಡೆದ ವಿಧಾನಸಭಾ ಚುನಾವಣೆಗಳು “ಮುಕ್ತ ಮತ್ತು ನ್ಯಾಯಸಮ್ಮತ”ವಾಗಿ ನಡೆದಿಲ್ಲ ಎಂದು ರಾಹುಲ್ ಗಾಂಧಿ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ದೇಶದ ಪ್ರಸ್ತುತ ಆರ್ಥಿಕ ಪರಿಸ್ಥಿತಿಯ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ ಅವರು, ದೀರ್ಘಕಾಲದ ಆಧಾರದ ಮೇಲೆ ದೇಶದ ಆರ್ಥಿಕ ಸವಾಲುಗಳನ್ನು ನಿಭಾಯಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಾಧ್ಯವಾಗಿಲ್ಲ ಎಂದು ತೀವ್ರವಾಗಿ ಟೀಕಿಸಿದ್ದಾರೆ.





