ವಿದ್ಯಾರ್ಥಿಗಳು ತಮ್ಮ ಅಭಿರುಚಿ ಹಾಗೂ ಪ್ರತಿಭೆಯನ್ನು ಗುರುತಿಸಿಕೊಂಡು ಅದನ್ನು ಬೆಳೆಸಿಕೊಳ್ಳಬೇಕು. ಜ್ಞಾನಾರ್ಜನೆ ಮತ್ತು ನೈತಿಕ ಮೌಲ್ಯಗಳನ್ನು ಬದುಕಿನ ದಿಕ್ಸೂಚಿಯನ್ನಾಗಿಸಿಕೊಳ್ಳಬೇಕು ಎಂದು ಗಾಯಕಿ ಹಾಗೂ ನಟಿ ಸುಮಾ ಶಾಸ್ತ್ರಿ ಕರೆ ನೀಡಿದರು.
ತುಮಕೂರು ವಿಶ್ವವಿದ್ಯಾನಿಲಯದ ಕಲಾ ಕಾಲೇಜು ವತಿಯಿಂದ 2026-27ನೇ ಸಾಲಿನ ವಿವಿಧ ಘಟಕಗಳ ಉದ್ಘಾಟನೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ‘ಅಭ್ಯುದಯ 2026-27’ ಕಾರ್ಯಕ್ರಮವನ್ನು ಸೆ.2ರಂದು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಜಗತ್ತಿಗೆ ಪರಿಚಯಿಸುವ ಜೊತೆಗೆ, ಪ್ರತಿ ಹಂತದಲ್ಲೂ ಮಾರ್ಗದರ್ಶನ ನೀಡುವ ಗುರುಗಳನ್ನು ಗೌರವಿಸಬೇಕು. ಎನ್ಎಸ್ಎಸ್, ಎನ್ಸಿಸಿ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಶಿಸ್ತು ಮತ್ತು ಪ್ರತಿಭೆಯನ್ನು ಬೆಳೆಸಿಕೊಳ್ಳಬೇಕು ಎಂದರು.
ವಿವಿಯ ಹಣಕಾಸು ಅಧಿಕಾರಿ ನರಸಿಂಹಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ಉತ್ಕೃಷ್ಟವಾಗಿ ಕಲಿತು ದೇಶವನ್ನು ಸದೃಢಗೊಳಿಸುವಂತಹ ಪ್ರತಿಭೆಗಳಾಗಿ ಹೊರಹೊಮ್ಮಬೇಕು ಎಂದು ಹೇಳಿದರು.
ತುಮಕೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ. ಮೋಹನ ಎಚ್.ಎಸ್. ಮಾತನಾಡಿ, ಜ್ಞಾನವೆಂಬ ಎಣ್ಣೆಯಿಂದ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯ ದೀಪವನ್ನು ಬೆಳಗಿಸಿ ಅಜ್ಞಾನ, ಅಹಿಂಸೆ ಹಾಗೂ ಅಧರ್ಮಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಮುನ್ನಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಎಸ್ಐಆರ್ ಹಾಗೂ ಮತದಾನದ ಹಕ್ಕಿನ ಕುರಿತು ವಿದ್ಯಾರ್ಥಿಗಳಿಗೆ ವಿಶೇಷ ಅರಿವು ಮೂಡಿಸಲಾಯಿತು.
ವಿವಿಯ ಪ್ರಭಾರ ಕುಲಪತಿ ಪ್ರೊ. ಎಚ್. ನಾಗಭೂಷಣ್ ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ. ದಾಕ್ಷಾಯಣಿ ಜಿ. ಅಧ್ಯಕ್ಷತೆ ವಹಿಸಿದ್ದರು. ಸಾಂಸ್ಕೃತಿಕ ಚಟುವಟಿಕೆಗಳ ಘಟಕದ ಸಂಚಾಲಕ ಡಾ. ಎಸ್. ಶಿವಣ್ಣ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಡಾ. ಎಚ್.ಆರ್. ರೇಣುಕಾ, ಡಾ. ಸುದೀಪ್ ಕುಮಾರ್ ಆರ್., ಡಾ. ಶೋಭಾ ಸಿ., ಪ್ರೊ. ಪಲ್ಲವಿ ಕುಸುಗಲ್ಲ ಉಪಸ್ಥಿತರಿದ್ದರು.





