ದೇವರ ಹೊಸಹಳ್ಳಿ–ಮಲ್ಲಸಂದ್ರ–ವಸಂತನರಸಾಪುರ ಮಾರ್ಗದಲ್ಲಿ ಪ್ರಸ್ತಾಪಿಸಲಾಗಿರುವ ಫೆರಿಪೆರಲ್ ರಿಂಗ್ ರಸ್ತೆ ಯೋಜನೆಗೆ ಸಂಬಂಧಿಸಿದಂತೆ ಭೂಮಿಯ ಸರ್ವೆ ನಡೆಸಲು ಅಧಿಕಾರಿಗಳು ಮುಂದಾದ ಹಿನ್ನೆಲೆಯಲ್ಲಿ ರೈತರು ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ ಘಟನೆ ದೊಡ್ಡಸಾರಂಗಿ ಗ್ರಾಮದ ಬಳಿ ನಡೆದಿದೆ.
ರೈತರ ಆಕ್ಷೇಪದ ನಡುವೆಯೂ ಅಧಿಕಾರಿಗಳು ಸರ್ವೆ ಕಾರ್ಯಕ್ಕೆ ಮುಂದಾಗುತ್ತಿದ್ದಂತೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಕೃಷಿ ಭೂಮಿ ಕಳೆದುಕೊಳ್ಳುವ ಆತಂಕದಲ್ಲಿದ್ದ ರೈತರು ಅಧಿಕಾರಿಗಳ ಕ್ರಮವನ್ನು ಪ್ರಶ್ನಿಸಿ ಸರ್ವೆ ಕಾರ್ಯಕ್ಕೆ ತಡೆಯೊಡ್ಡಿದರು. ರೈತರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಅಧಿಕಾರಿಗಳು ಸರ್ವೆ ಸ್ಥಗಿತಗೊಳಿಸಿ ಸ್ಥಳದಿಂದ ವಾಪಸ್ ತೆರಳಿದರು.
ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಶಾಸಕ ಡಿ.ಸಿ. ಗೌರಿಶಂಕರ್ ರೈತರೊಂದಿಗೆ ಮಾತುಕತೆ ನಡೆಸಿ, ಅವರ ಸಮಸ್ಯೆ ಹಾಗೂ ಆತಂಕಗಳನ್ನು ಆಲಿಸಿದರು.
“ರೈತರ ವಿರುದ್ಧ ಸರ್ಕಾರಗಳು ನಿಂತರೆ ನಾನು ರೈತರ ಪರ ನಿಲ್ಲಬೇಕಾಗುತ್ತದೆ. ರೈತರ ಭೂಮಿ ಮತ್ತು ಬದುಕಿನ ಪ್ರಶ್ನೆ ಬಂದಾಗ ರಾಜಕೀಯಕ್ಕಿಂತ ರೈತರ ಹಿತವೇ ಮುಖ್ಯ. ರೈತರ ಒಪ್ಪಿಗೆ, ನ್ಯಾಯಸಮ್ಮತ ಪರಿಹಾರ ಹಾಗೂ ಅವರ ಆತಂಕಗಳಿಗೆ ಸೂಕ್ತ ಉತ್ತರ ನೀಡದೆ ಏಕಾಏಕಿ ಸರ್ವೆ ನಡೆಸುವುದು ಸರಿಯಲ್ಲ” ಎಂದು ಅವರು ಹೇಳಿದರು.
ರೈತರೊಂದಿಗೆ ಸಮಾಲೋಚನೆ ನಡೆಸದೆ ಸರ್ವೆ ಕಾರ್ಯ ಮುಂದುವರಿಸಿದರೆ ಕಾನೂನುಬದ್ಧ ಹಾಗೂ ಪ್ರಜಾಸತ್ತಾತ್ಮಕ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ಪ್ರತಿಭಟನೆಯನ್ನು ಪೊಲೀಸ್ ಬಲದ ಮೂಲಕ ಹತ್ತಿಕ್ಕುವ ಪ್ರಯತ್ನ ಮಾಡಬಾರದು ಎಂದರು.
“ರೈತರ ಮೇಲೆ ಲಾಠಿ ಬೀಸುವ ಪರಿಸ್ಥಿತಿ ನಿರ್ಮಾಣವಾದರೆ, ರೈತರ ಪರವಾಗಿ ಬಾರುಗೋಲು ಚಳುವಳಿ ಸೇರಿದಂತೆ ಶಾಂತಿಯುತ ಹಾಗೂ ಪ್ರಜಾಸತ್ತಾತ್ಮಕ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ. ಸರ್ಕಾರ ಜನರಿಗಾಗಿ ಇರಬೇಕು; ಜನರ ಭೂಮಿಯನ್ನು ಕಸಿದುಕೊಳ್ಳಲು ಅಲ್ಲ. ಅಭಿವೃದ್ಧಿಯ ಹೆಸರಿನಲ್ಲಿ ರೈತರ ಬದುಕು ನಾಶವಾಗಬಾರದು” ಎಂದು ಗೌರಿಶಂಕರ್ ತಿಳಿಸಿದರು.
ಫೆರಿಪೆರಲ್ ರಿಂಗ್ ರಸ್ತೆ ಸೇರಿದಂತೆ ಯಾವುದೇ ಅಭಿವೃದ್ಧಿ ಯೋಜನೆಗೆ ರೈತರು ವಿರೋಧಿಗಳಲ್ಲ. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ಕೃಷಿ ಭೂಮಿ, ಜೀವನೋಪಾಯ ಹಾಗೂ ಸಾಮಾಜಿಕ ನೆಲೆಯನ್ನು ಬಲಿಕೊಡುವುದನ್ನು ಒಪ್ಪಲು ಸಾಧ್ಯವಿಲ್ಲ. ಯೋಜನೆ ಅನಿವಾರ್ಯವಾಗಿದ್ದರೆ ಪರ್ಯಾಯ ಮಾರ್ಗಗಳ ಪರಿಶೀಲನೆ, ಪಾರದರ್ಶಕ ಸರ್ವೆ, ರೈತರೊಂದಿಗೆ ಸಮಗ್ರ ಚರ್ಚೆ, ಸೂಕ್ತ ಪರಿಹಾರ ಹಾಗೂ ಪುನರ್ವಸತಿ ಕುರಿತು ಸರ್ಕಾರ ಸ್ಪಷ್ಟ ನಿಲುವು ಪ್ರಕಟಿಸಬೇಕು ಎಂದು ಅವರು ಆಗ್ರಹಿಸಿದರು.
“ಕೃಷಿ ಭೂಮಿ ರೈತನಿಗೆ ಕೇವಲ ಆಸ್ತಿಯಲ್ಲ; ಅದು ಕುಟುಂಬದ ಬದುಕು, ಭವಿಷ್ಯ ಮತ್ತು ಸ್ವಾಭಿಮಾನದ ಆಧಾರ. ಭೂಮಿ ಕಳೆದುಕೊಳ್ಳುವ ರೈತರಿಗೆ ಕೇವಲ ಹಣದ ಪರಿಹಾರ ನೀಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಪ್ರತಿಯೊಬ್ಬ ರೈತನ ಆತಂಕವನ್ನು ಸರ್ಕಾರ ಆಲಿಸಬೇಕು” ಎಂದು ಅವರು ಹೇಳಿದರು.
ಸರ್ಕಾರ ಕೂಡಲೇ ರೈತರ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ಫೆರಿಪೆರಲ್ ರಿಂಗ್ ರಸ್ತೆ ಯೋಜನೆಯ ಸಂಪೂರ್ಣ ವಿವರ, ಸರ್ವೆಯ ಉದ್ದೇಶ, ಭೂಸ್ವಾಧೀನದ ವ್ಯಾಪ್ತಿ, ಪರಿಹಾರದ ಮಾನದಂಡ ಹಾಗೂ ಪರ್ಯಾಯ ಮಾರ್ಗಗಳ ಕುರಿತು ಸ್ಪಷ್ಟ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.
“ರೈತರ ಹಿತಕ್ಕೆ ವಿರುದ್ಧವಾಗಿ ಯಾವುದೇ ಕ್ರಮ ಕೈಗೊಂಡರೂ ರೈತರೊಂದಿಗೆ ನಿಂತು ಹೋರಾಟ ಮಾಡುತ್ತೇವೆ. ರೈತರ ಭೂಮಿ ಉಳಿಸುವ ಹೋರಾಟದಲ್ಲಿ ಅಗತ್ಯವಿದ್ದರೆ ಮುಂದಿನ ಹಂತದ ಪ್ರಜಾಸತ್ತಾತ್ಮಕ ಹೋರಾಟಕ್ಕೂ ಸಿದ್ಧ” ಎಂದು ಮಾಜಿ ಶಾಸಕ ಡಿ.ಸಿ. ಗೌರಿಶಂಕರ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.





