ಎಲೆಚಾಕನಹಳ್ಳಿಯಲ್ಲಿ ಪೊಲೀಸರಿಂದಲೇ ಅಸ್ಪೃಶ್ಯತೆ ಪೋಷಣೆ: ದಲಿತರು ಬದುಕುವುದು ಹೇಗೆ?

Date:

Advertisements
ಪ್ರಜಾಪ್ರಭುತ್ವ ದೇಶದಲ್ಲಿ ಬದುಕುತ್ತಿದ್ದರೂ ಕೂಡ ಜಾತಿ ತಾರತಮ್ಯ, ಅಸ್ಪೃಶ್ಯತೆ ಆಚರಿಸುವ ಜನರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಜಾತಿ, ಅಸಮಾನತೆಯನ್ನು ಆಚರಿಸುವ ವರ್ಗವಂತೂ ಇನ್ನೂ ತಮ್ಮ ಮನಸ್ಸಿನೊಳಗಿನ ಜಾತಿಯೆಂಬ ಕೊಳಕನ್ನು ಅಪ್ಪಿಕೊಂಡು, ಆ ಕೊಳಕಿನೊಂದಿಗೆ ಇನ್ನೂ ಜೀವಿಸುತ್ತಲೇ ಇದೆ.

ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆಯ ಕತ್ತರಘಟ್ಟದಲ್ಲಿ ದಲಿತ ಯುವಕನನ್ನು ಸಜೀವ ದಹನ ನಡೆಸಿದ ಘಟನೆ ಮಾಸುವ ಮುನ್ನವೇ ಮಂಡ್ಯ ತಾಲೂಕಿನ ಎಲೆಚಾಕನಹಳ್ಳಿ ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಿಸಿರುವ ಸವರ್ಣೀಯರೆಂಬ ಕೊಳೆತಿನಿಗಳು ದಲಿತರಿಗೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಅಮಾನವೀಯ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಕಳೆದ ಜೂ.3ರ ರಾತ್ರಿ ಮಧ್ಯರಾತ್ರಿ 12.30ರ ಸುಮಾರಿಗೆ ಸವರ್ಣೀಯರೆಂಬ ‘ವಿವೇಕಿ’ಗಳು ದಲಿತ ಕೇರಿಗೆ ನುಗ್ಗಿ ಕಾರಿನ ಗಾಜನ್ನು ಹೊಡೆದು ಹಾಕಿದ್ದಾರೆ. ಈ ಸಂಬಂಧ ದಲಿತ ಯುವಕ ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನ ಸವರ್ಣೀಯ ದುಷ್ಕರ್ಮಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಬಳಿಕ ಜೂ.4ರಂದು ವಿಜಯಕುಮಾರ್ ಬಿನ್ ನಟರಾಜ್(36) ಎಂಬ ಪರಿಶಿಷ್ಟ ಜಾತಿಯ ಯುವಕ ನೀಡಿದ ದೂರಿನ ಆಧಾರದ ಮೇಲೆ ಶಿವಲಿಂಗ ಬಿನ್ ಕರಿಗೌಡ ಅಲಿಯಾಸ್ ಪಾಪು, ದಿನೇಶ್ ಬಿನ್ ಮಾದೇಗೌಡ, ಜನಾರ್ದನ ಬಿನ್ ತಿಮ್ಮೆಗೌಡ, ಚೇತನ್ ಕುಮಾರ್ ಬಿನ್ ಪುಟ್ಟಸ್ವಾಮಿ, ರೋಪೇಶ ಬಿನ್ ಚಿಕ್ಕಣ್ಣ ಹಾಗೂ ಮನು ಬಿನ್ ಮಾದೇಗೌಡ ಸೇರಿದಂತೆ ಇತರರ ವಿರುದ್ಧ ಎಫ್ಐಆರ್ ದಾಖಲಾಗಿದೆ.

Advertisements
ಕಾರು ಜಖಂ

ದಲಿತ ಯುವಕ ವಿಜಯ್ ಕುಮಾರ್ ನೀಡಿರುವ ದೂರಿನಲ್ಲಿ, “ನಮ್ಮ ಮನೆಯ ಹತ್ತಿರ ಬಂದು, ನನ್ನ ಅತ್ತೆಯ ಮಗನ ಹೆಸರಲ್ಲಿರುವ KA-02-MC-5131, ಕಾರಿನ ಗಾಜು ಮತ್ತು ಬಂಪರನ್ನು ಬಿಯರ್ ಬಾಟಲಿಂದ ಹೊಡೆದಿದ್ದು, ‘ಮಾದಿಗ ಬಡ್ಡಿ ಮಕ್ಕಳ ನಿಮಗೆ ದೇವಸ್ಥಾನ ಪ್ರವೇಶ ಬೇಕಾ’ ಎಂದು ಬಾಯಿಗೆ ಬಂದಂತೆ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ. ಇದನ್ನು ಕೇಳಿಸಿಕೊಂಡ ನನ್ನ ಹೆಂಡತಿ ಪಲ್ಲವಿ ಭಯಗೊಂಡಿದ್ದು, ನನ್ನ ಗಂಡ ಹೊರಗಡೆ ಹೋದರೆ ಸಾಯಿಸಿ ಬಿಡುತ್ತಾರೆಂದು ನನ್ನನ್ನು ಎಬ್ಬಿಸದೇ ಭಯದಿಂದ ಮಲಗಿ ಬಿಟ್ಟಿದ್ದಾರೆ” ಎಂದು ಉಲ್ಲೇಖಿಸಿದ್ದಾರೆ.

“ನಮ್ಮ ಪಕ್ಕದ ಮನೆಯ ಚಿಕ್ಕತಾಯಮ್ಮ ಎಂಬುವವರೂ ಕೂಡ ಅವರ ಕೃತ್ಯವನ್ನು ಅವರ ಮನೆಯಿಂದಲೇ ನೋಡಿ, ಆ ರಾತ್ರಿ ಹೊರಗೆ ಬರದೆ ಬೆಳಿಗ್ಗೆ 6ರ ಸಮಯಕ್ಕೆ ನನಗೆ ಮತ್ತು ನನ್ನ ಹೆಂಡತಿಗೆ ಆ ವಿಚಾರವನ್ನು ತಿಳಿಸಿದರು. ಆದ್ದರಿಂದ ಇವರನ್ನು ತನಿಖೆಗೆ ಒಳಪಡಿಸಿ ಕಾನೂನು ಕ್ರಮ ಜರುಗಿಸಿ ನಮಗೆ ರಕ್ಷಣೆ ನೀಡಬೇಕು. ನ್ಯಾಯ ದೊರಕಿಸಿ ಕೊಡಬೇಕು” ಎಂದು ವಿಜಯ್ ಕುಮಾರ್ ದೂರು ದಾಖಲಿಸಿದ್ದಾರೆ.

ಘಟನೆ ಹಿನ್ನೆಲೆ

ದಲಿತರು ದೇವಾಲಯದಲ್ಲಿ ಪೂಜೆ ಸಲ್ಲಿಸಿದರೆಂಬ ಕಾರಣಕ್ಕೆ ಎಲೆಚಾಕನಹಳ್ಳಿ ಗ್ರಾಮದ ಕೆಲ ಕೊಳಕರು ದಲಿತರಿಗೆ ಸಾಮಾಜಿಕ ಬಹಿಷ್ಕಾರ ಹಾಕಿದ್ದರು. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಶಿವಕುಮಾರ್ ಬಿರಾದಾರ್ ನೇತೃತ್ವದಲ್ಲಿ ನಡೆದ ಗ್ರಾಮದ ಮುಖಂಡರ ಶಾಂತಿಸಭೆ ಫಲ ನೀಡಿಲ್ಲ. ಊರಿನ ಗ್ರಾಮ ಠಾಣಾ ಜಾಗದಲ್ಲಿರುವ ಮಾರಮ್ಮನ ದೇವಾಲಯಕ್ಕೆ ನಮಗೂ ಪ್ರವೇಶ ನೀಡಬೇಕೆಂದು ದಲಿತರು ಒತ್ತಾಯ ಮಾಡುತ್ತಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ದಲಿತರಿಗೆ ಪ್ರವೇಶ ನೀಡುವುದಿಲ್ಲವೆಂದು ಸವರ್ಣೀಯರು ಪಟ್ಟು ಹಿಡಿದಿದ್ದು, ಸರ್ಕಾರಿ ಅಧಿಕಾರಿಗಳ ಸಮ್ಮುಖದಲ್ಲಿಯೇ ತಮ್ಮನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಅಲ್ಲದೆ ಏನು ಮಾಡಿಕೊಳ್ಳುತ್ತೀರೋ ಮಾಡಿಕೊಳ್ಳಿ ನಾವು ಹೆದರುವುದಿಲ್ಲ. ಆದರೆ ಈ ಕೆಳಜಾತಿಯವರನ್ನು ಮಾತ್ರ ದೇವಾಲಯಕ್ಕೆ ಬಿಡುವುದಿಲ್ಲ ಎಂದು ಅಧಿಕಾರಿಗಳಿಗೇ ಸವಾಲು ಹಾಕಿದ್ದಾರೆ.

ದೇವಾಲಯ ಪ್ರವೇಶ ನಿಷೇಧ

ಸ್ಥಳೀಯ ದಲಿತ ನಿವಾಸಿ ಈ ದಿನ.ಕಾಮ್‌ಗೆ ಮಾಹಿತಿ ನೀಡಿದ್ದು, ಜಾತಿ ದೌರ್ಜನ್ಯ, ಜಾತಿ ತಾರತಮ್ಯಗಳು ಈ ಊರಿನಲ್ಲಿ ಆಗಾಗ ನಡೆಯುತ್ತಲೇ ಇರುತ್ತವೆ. ದೇವಾಲಯ ಪ್ರವೇಶಕ್ಕೆ ನಮಗೂ ಅವಕಾಶ ಕೊಡಿ ಎಂದು ಕೇಳಿದ್ದಕ್ಕೆ ನಮಗೆ ಸಾಮಾಜಿಕ ಬಹಿಷ್ಕಾರ ಹಾಕಿದರು. ಎರಡ್ಮೂರು ತಿಂಗಳ ಹಿಂದೆಯೇ ಇಂತಹ ಘಟನೆ ನಡೆದಿದ್ದು, ಆ ಕುರಿತು ಮಂಡ್ಯ ಎಸ್‌ಪಿಗೆ ದೂರು ನೀಡಿದ್ದೆವು. ಆದರೆ ಆ ದೂರನ್ನು ಪರಿಗಣಿಸದ ಎಸ್‌ಪಿ ಮಂಡ್ಯ ಗ್ರಾಮಾಂತರ ಪೊಲೀಸ್‌ ಠಾಣೆಗೆ ರವಾನಿಸಿದ್ದರೆಂದು ತಿಳಿಸಿದರು. ಆದರೆ ಎಸ್‌ಪಿ ಕಚೇರಿಯಿಂದ ಬಂದ ದೂರು ಪ್ರತಿಗೆ ಅನುಗುಣವಾಗಿ ದೂರು ದಾಖಲಿಸದೆ, ವಿಚಾರಣೆ ನಡೆಸದೆ, ಎಫ್‌ಐಆರ್‌ ದಾಖಲಿಸದ ಪೊಲೀಸರು‌, ಊರಿನಲ್ಲಿ ಯಾವುದೇ ರೀತಿಯ ಜಾತಿ ತಾರತಮ್ಯ ಪ್ರಕರಣಗಳು ನಡೆದೇ ಇಲ್ಲವೆಂಬಂತೆ ಕೊಳಕು ಮನಸ್ಥಿತಿಯವರ ಪರ ವಕಾಲತ್ತು ವಹಿಸಿದ್ದು, ಕಾನೂನು ವ್ಯವಸ್ಥೆಯನ್ನೇ ಕೊಳಚೆ ಗುಂಡಿ ಮಾಡಿಕೊಂಡಿರುವ ಪೊಲೀಸರು ಅದರಲ್ಲೇ ಮಿಂದೇಳುತ್ತಿದ್ದಾರೆ.

ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದರೂ, ವಾತಾವರಣ ಬಿಗುವಿನಿಂದ ಕೂಡಿದ್ದು, ಇದು ದಲಿತರಲ್ಲಿ ಅಭದ್ರತೆ ಉಂಟುಮಾಡಿದೆ. ಮಂಡ್ಯ ತಹಶೀಲ್ದಾರ್ ನೇತೃತ್ವದಲ್ಲಿ ಈ ಹಿಂದೆಯೇ ಶಾಂತಿ ಸಭೆ ನಡೆದಿದೆ. ಆದರೂ ಕೂಡ ದಲಿತರ ದೇವಾಲಯ ಪ್ರವೇಶಕ್ಕೆ ಸವರ್ಣೀಯರು ಒಪ್ಪದಿರುವ ಕಾರಣ ಶಾಂತಿ ಸಭೆ ವಿಫಲವಾಗಿತ್ತು. ಹಾಗಾಗಿ ಗ್ರಾಮದ ಮಾರಮ್ಮನ ದೇವಾಲಯದ ಬಾಗಿಲಿಗೆ ಸರ್ಕಾರಿ ಅಧಿಕಾರಿಗಳು ಒಂದು ಬೀಗ ಜಡಿದಿದ್ದರೆ, ಗ್ರಾಮಸ್ಥರು ಮತ್ತೊಂದು ಬೀಗ ಹಾಕಿರುವುದು ಕಂಡುಬಂದಿದೆ.

ದೇವಾಲಯ ಪ್ರವೇಶ ನಿಷೇಧ 1

ತಹಶೀಲ್ದಾರ್‌ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಎಲೆಚಾಕನಹಳ್ಳಿ ಗ್ರಾಮದಲ್ಲಿ ಎರಡ್ಮೂರು ತಿಂಗಳ ಹಿಂದೆಯೇ ಜಾತಿ ದೌರ್ಜನ್ಯದ ಪ್ರಕರಣ ನಡೆದಿದ್ದು, ದಲಿತರಿಗೆ ದೇವಾಲಯ ಪ್ರವೇಶಕ್ಕೆ ಅವಕಾಶ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ದೂರು ಬಂದ ಬಳಿಕ ಕೂಡಲೇ ಗ್ರಾಮಕ್ಕೆ ಧಾವಿಸಿ ಶಾಂತಿ ಸಭೆಗೆ ಪ್ರಯತ್ನಿಸಿದೆವು. ಆದರೆ ಸವರ್ಣೀಯರು ಇದಕ್ಕೆ ಒಪ್ಪದ ಹಿನ್ನೆಲೆಯಲ್ಲಿ ಸಭೆ ವಿಫಲವಾಯಿತು. ಈಗಾಗಲೇ ಮೂರು ಬಾರಿ ಶಾಂತಿ ಸಭೆಗೆ ಬಂದಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಇತ್ಯರ್ಥ ಆಗುವವರೆಗೆ ಯಾರೂ ಕೂಡ ದೇವಾಲಯಕ್ಕೆ ಹೋಗದಂತೆ ನಾವೂ ಒಂದು ಬೀಗ ಹಾಕಿದ್ದೇವೆ” ಎಂದು ಹೇಳಿದರು.

“ಎಷ್ಟೇ ಕಷ್ಟವಾದರೂ ಪರವಾಗಿಲ್ಲ. ಈ ಬಗ್ಗೆ ಜಾಗೃತಿ ಮೂಡಿಸಿ, ಸವರ್ಣೀಯರ ಮನವೊಲಿಸಿ ಸಾಮಾಜಿಕ ಸಮಾನತೆಗೆ ಶ್ರಮಿಸುತ್ತೇವೆ. ದಲಿತರೂ ದೇವಾಲಯ ಪ್ರವೇಶ ಮಾಡುವಂತೆ ಅನುಕೂಲ ಮಾಡಿಕೊಡುತ್ತೇವೆ” ಎಂದು ಭರವಸೆ ನೀಡಿದರು.

ಗ್ರಾಮದಲ್ಲಿ 40 ದಲಿತ ಕುಟುಂಬಗಳು ವಾಸವಿದ್ದು, ಸುಮಾರು 500ಕ್ಕೂ ಅಧಿಕ ಸವರ್ಣೀಯ ಕುಟುಂಬಗಳಿವೆ. ದಲಿತರು ಜೀವಭಯದಿಂದ ಜೀವನ ನಡೆಸುವಂತಾಗಿದೆ. ಇದಕ್ಕೆ, ಕೊಳಕು ಮನಸ್ಥಿತಿಯ ಸವರ್ಣೀಯರನ್ನು ಪೋಷಿಸಿ ಬೆಳೆಸುತ್ತಿರುವ ಸ್ಥಳೀಯ ಪೊಲೀಸರೇ ನೇರ ಹೊಣೆಯಲ್ಲವೇ ಎಂಬುದು ಸಾರ್ವಜನಿಕ ಅಭಿಪ್ರಾಯ.

ಗ್ರಾಮದಲ್ಲಿ ವಾತಾವರಣ ಹದಗೆಟ್ಟಿರುವುದರಿಂದ ಬೂದಿ ಮುಚ್ಚಿದ ಕೆಂಡದಂತಹ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿದ್ದು, ಆಗಾಗ್ಗೆ ಸವರ್ಣೀಯರು ದಲಿತರ ಕೇರಿಗೆ ನುಗ್ಗಿ ಹಲ್ಲೆ ನಡೆಸುವ ಬಗ್ಗೆ ಸಾರ್ವಜನಿಕವಾಗಿಯೇ ಮಾತನಾಡುತ್ತಿರುವುದಾಗಿ ದಲಿತ ಯುವಕರು ಆರೋಪಿಸಿದ್ಧಾರೆ.

ದೇವಾಲಯ ಪ್ರವೇಶ ನಿಷೇಧ 2 1

ಪ್ರಜಾಪ್ರಭುತ್ವ ದೇಶದಲ್ಲಿ ಬದುಕುತ್ತಿದ್ದರೂ ಕೂಡ ಜಾತಿ ತಾರತಮ್ಯ, ಅಸ್ಪೃಶ್ಯತೆ ಆಚರಿಸುವ ಜನರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಜಾತಿ, ಅಸಮಾನತೆಯನ್ನು ಆಚರಿಸುವ ವರ್ಗವಂತೂ ಇನ್ನೂ ತಮ್ಮ ಮನಸ್ಸಿನೊಳಗಿನ ಜಾತಿಯೆಂಬ ಕೊಳಕನ್ನು ಅಪ್ಪಿಕೊಂಡು, ಆ ಕೊಳಕಿನೊಂದಿಗೆ ಇನ್ನೂ ಜೀವಿಸುತ್ತಲೇ ಇದೆ. ಸಾಮಾನ್ಯ ಜನರ ಕತೆ ಹೋಗಲಿ, ಜಾತಿ ಅವಮಾನ, ಅಸ್ಪೃಶ್ಯತೆಯಂತಹ ಪ್ರಕರಣ ನಡೆದಾಗ ತಪ್ಪಿತಸ್ಥರನ್ನು ಶಿಕ್ಷೆಗೊಳಪಡಿಸಿ, ಜಾಗೃತಿ ಮೂಡಿಸಬೇಕಾದ ಪೊಲೀಸರೇ ಅಸಮಾನತೆ ಆಚರಿಸುವ ಕೊಳಕರ ಪರ ವಕಾಲತ್ತು ವಹಿಸುತ್ತಿದ್ದಾರೆ. ಈ ಮೂಲಕ ಅಸ್ಪೃಶ್ಯತೆಯನ್ನು ಪೋಷಿಸುತ್ತ ಹೆಮ್ಮರವಾಗಿ ಬೆಳೆಸುತ್ತಿದ್ದಾರೆ. ಬೇಲಿಯೇ ಎದ್ದು ಹೊಲ ಮೇಯುತ್ತಿರುವಾಗ ದನಕರುಗಳು ಬಿಡುತ್ತವೆಯೇ? ಹಾಗೆಯೇ ರಕ್ಷಣೆ ನೀಡಬೇಕಾದ ನಮ್ಮ ದೇಶದ ಕಾನೂನು ವ್ಯವಸ್ಥೆ ದುರ್ಬಲವಾಗಿರುವ ಕಾರಣ ಈವರೆಗೂ ಅಸ್ಪೃಶ್ಯತೆಯನ್ನು ಕಿತ್ತೊಗೆಯಲು ಸಾಧ್ಯವಾಗುತ್ತಿಲ್ಲ.

ಸಂವಿಧಾನ, ಕಾನೂನು, ನ್ಯಾಯ, ವಿಶೇಷ ಕಾಯಿದೆಗಳು ಇದ್ದರೂ ಕೂಡ ಜಾತಿ ದೌರ್ಜನ್ಯ, ಅಸ್ಪೃಶ್ಯತೆಯಂತಹ ವಿಷದ ಬೇರು ಆಳವಾಗಿ ಬೇರೂರಿರುವುದನ್ನು ನೋಡಿದರೆ, ಕಾನೂನುಗಳ ವೈಫಲ್ಯ ಹಾಗೂ ಸಂವಿಧಾನದ ಆಶಯಗಳು ಮೂಲೆಗೆ ಸರಿಯುತ್ತಿರುವುದು ಗೋಚರವಾಗುತ್ತಿದೆ. ಅಲ್ಲದೆ ದಲಿತರ ಹಕ್ಕುಗಳನ್ನು ರಕ್ಷಿಸುವ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಕಾಲು ಮುರಿದುಕೊಂಡು ಬಿದ್ದಿರುವುದಕ್ಕೆ ಇಂತಹ ಪ್ರಕರಣಗಳು ಸಾಕ್ಷಿಯಾಗಿವೆ.

ಇದನ್ನೂ ಓದಿದ್ದೀರಾ? ಹಾರೋಹಳ್ಳಿ | ಬನವಾಸಿಯಲ್ಲಿ ಅಸ್ಪೃಶ್ಯತೆ ಆಚರಣೆ: ರಾಜಿ, ಮಾತುಕತೆ ನೆಪದಲ್ಲಿ ಆರೋಪಿಗಳ ರಕ್ಷಣೆ

ಮಂಡ್ಯ ಜಿಲ್ಲೆಯ ಕೆ ಆರ್‌ ಪೇಟೆ ತಾಲೂಕಿನ ಕತ್ತರಘಟ್ಟ ಗ್ರಾಮದ ಜಯಕುಮಾರ್‌ ಎಂಬ ಯುವರೈತನನ್ನು ಸಜೀವ ದಹನ ಮಾಡಿ ಜಾತಿ ಕ್ರೌರ್ಯ ಮೆರೆದಿರುವ ಪ್ರಕರಣ ಮಾಸುವ ಮುನ್ನವೇ ಅಂಥದ್ದೇ ಜಾತಿ ತಾರತಮ್ಯ, ಅಸ್ಪೃಶ್ಯತೆ, ಸಾಮಾಜಿಕ ಅಸಮಾನತೆ ಅದೇ ಜಿಲ್ಲೆಯಲ್ಲಿ ನಡೆದಿದೆ.

ಇದಕ್ಕೂ ಮೊದಲು 2024ರಲ್ಲಿ ಮಂಡ್ಯ ತಾಲೂಕಿನ ಹನಕೆರೆ ಗ್ರಾಮದಲ್ಲಿ ವಿರೋಧದ ನಡುವೆಯೂ ದಲಿತರು ದೇಗುಲ ಪ್ರವೇಶ ಮಾಡಲು ಅಧಿಕಾರಿಗಳು ಅವಕಾಶ ಕಲ್ಪಿಸಿದ್ದರು. ಹೀಗಾಗಿ ಉತ್ಸವ ಮೂರ್ತಿ ಮಾಡಿಸಿದ್ದ ಕೆಲ ಸವರ್ಣೀಯರು ಅಸಮಾಧಾನಗೊಂಡು, ಉತ್ಸವ ಮೂರ್ತಿಯನ್ನೇ ಬೇರೆ ದೇವಾಲಯಕ್ಕೆ ಸ್ಥಳಾಂತರಿಸಿ ತಮ್ಮ ಆಕ್ರೋಶ ಹೊರ ಹಾಕಿದರು. ಇದೀಗ ಮತ್ತೆ ಅದೇ ರೀತಿಯ ಪ್ರಕರಣ ಬೆಳಕಿಗೆ ಬಂದಿದ್ದು, ಜಾತಿ ತಾರತಮ್ಯ ತಾಂಡವ ಆಡುತ್ತಲೇ ಇದೆ.

WhatsApp Image 2025 07 12 at 17.38.34 e1752322718567
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

Download Eedina App Android / iOS

X