“ಸಿಎನ್ಎನ್, ಬಿಬಿಸಿ, ಫ್ರಾನ್ಸ್ 24 ಮಾಧ್ಯಮಗಳೇ ಕೇಳಿಸಿಕೊಳ್ಳಿ. ನಾನು ನಿಮ್ಮನ್ನು ಗಮಿಸುತ್ತಿದ್ದೇನೆ. ನೀವು ಹಂಚುವ ಪ್ರತಿ ಸುಳ್ಳನ್ನೂ ಪ್ರತಿ ವಿಕೃತಿಯನ್ನೂ ಸಂಗ್ರಹಿಸುತ್ತಿದ್ದೇನೆ”- ಹೀಗೆ ಅಂತಾರಾಷ್ಟ್ರೀಯ ಮಾಧ್ಯಮಗಳ ವಿರುದ್ಧ ಇಬ್ರಾಹಿಂ ಥೋರೆ ಇಂಗ್ಲಿಷ್‌ನಲ್ಲಿ ಮಾತನಾಡುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿದೆ. ಆದರೆ ಇದೊಂದು ಎಐ ಸೃಷ್ಟಿತ ವಿಡಿಯೊವೆಂಬುದು ಸ್ಪಷ್ಟವಾದರೂ ಥೋರೆ ವಾಸ್ತವದಲ್ಲಿ ಇರುವುದೇ ಹೀಗೆ ಎನ್ನುತ್ತಿವೆ ವರದಿಗಳು. ಥೋರೆ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಬಿಸಿತುಪ್ಪವಾಗಿರುವ ವ್ಯಕ್ತಿ ಎಂಬುದಂತೂ ಅಕ್ಷರಶಃ ಸತ್ಯ.
ಪಶ್ಚಿಮ ಆಫ್ರಿಕಾ ಭಾಗದಲ್ಲಿ ಸುಮಾರು 2 ಕೋಟಿ 30 ಲಕ್ಷ ಜನರನ್ನು ಹೊಂದಿರುವ ದೇಶ ಬುರ್ಕಿನಾ ಫಾಸೋ. 2022ರಲ್ಲಿ ನಡೆದ ಮಿಲಿಟರಿ ದಂಗೆಯ ಬಳಿಕ ಈ ದೇಶದಲ್ಲಿ ಅಧ್ಯಕ್ಷ ಪದವಿಗೇರಿದ ಇಬ್ರಾಹಿಂ ಥೋರೆಗೆ ಆಗ 34 ವರ್ಷ ವಯಸ್ಸು. ಈಗ 37 ವರ್ಷ ಪ್ರಾಯದವರಾದ ಥೋರೆ, ಪಶ್ಚಿಮ ರಾಷ್ಟ್ರಗಳ ಕೆಂಗಣ್ಣಿಗೂ ಗುರಿಯಾಗಿರುವ ವ್ಯಕ್ತಿ. ಆದರೆ ಆಫ್ರಿಕಾ ಖಂಡದ ಅನೇಕರ ಕಣ್ಣಿಗೆ ಥೋರೆ ಕೇವಲ ಬುರ್ಕಿನಾ ಫಾಸೋ ಅಧ್ಯಕ್ಷರಲ್ಲ, ಅವರು ಇಡೀ ಆಫ್ರಿಕಾಕ್ಕೆ ಅಧ್ಯಕ್ಷ. ಪ್ಯಾನ್-ಆಫ್ರಿಕನ್‌ನ ದಿಟ್ಟ ದನಿ ಹಾಗೂ ನಿಜವಾದ ‘ಸಿಂಹ’!
ಥೋರೆಯವರನ್ನು ಹತ್ಯೆ ಮಾಡಲು ಹಲವು ಸಲ ಪ್ರಯತ್ನಿಸಲಾಗಿದೆ. ಯಾಕೆಂದರೆ ತಮ್ಮನ್ನು ಈಗಲೂ ಹಿಡಿತದಲ್ಲಿ ಇಟ್ಟುಕೊಳ್ಳಲು ಯತ್ನಿಸುತ್ತಿರುವ ಪಶ್ಚಿಮದ ಬಲಾಢ್ಯ ದೇಶಗಳ ವಿರುದ್ಧ ಅವರು ಗುಡುಗಿದ್ದಾರೆ. ಜೊತೆಗೆ ಆಫ್ರಿಕನ್ ದೇಶಗಳಲ್ಲಿ ಸ್ವಾತಂತ್ರ್ಯ ಮತ್ತು ಸ್ವಾವಲಂಬನೆಯ ಕಹಳೆ ಊದಿದ್ದಾರೆ.

This video cannot be played in your browser. Open the video directly
1983ರಿಂದ 1987ರವರೆಗೆ ಬುರ್ಕಿನಾ ಫಾಸೋ ದೇಶದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಕಮ್ಯುನಿಸ್ಟ್ ನಾಯಕ ಥಾಮಸ್ ಸಂಕರರನ್ನು ಹತ್ಯೆ ಮಾಡಲಾಯಿತು. ಇಡೀ ಆಫ್ರಿಕನ್ ಒಗ್ಗಟ್ಟಿನ ಬಗ್ಗೆ ಮಾತನಾಡುತ್ತಿದ್ದ ಸಂಕರರ ತದ್ರೂಪದಂತೆ ಕಾಣುತ್ತಿರುವ ವ್ಯಕ್ತಿ ಇಬ್ರಾಹಿಂ ಥೋರೆ ಎಂದು ಬಣ್ಣಿಸುತ್ತಾರೆ ರಾಜಕೀಯ ವಿಶ್ಲೇಷಕರು. ತನಗೆ ಥಾಮಸ್ ಅವರೇ ಗುರು ಎಂದು ಥೋರೆ ಹೇಳಿಕೊಂಡಿದ್ದಾರೆ.
ಇದನ್ನೂ ಓದಿರಿ: ಪಹಲ್ಗಾಮೋತ್ತರ ಪ್ರವಾಸೋದ್ಯಮ; ಕಾಶ್ಮೀರಿಗಳ ಬದುಕು ತತ್ತರ
ಸ್ವಾವಲಂಬಿ ರಾಷ್ಟ್ರ ಕಟ್ಟುವ ಕೆಲಸಗಳನ್ನು ಮಾಡುತ್ತಿರುವ ಇಬ್ರಾಹಿಂ, ಈಗ ಪಶ್ಚಿಮ ರಾಷ್ಟ್ರಗಳ ಕಣ್ಣಿಗೆ ಶತ್ರುವಿನಂತೆ ಕಾಣುತ್ತಿದ್ದರೆ ಆಶ್ಚರ್ಯಪಡಬೇಕಾದ ವಿಷಯವೇನಲ್ಲ. ಆಫ್ರಿಕಾ ಖಂಡವನ್ನು ನಾವು ಗಮನಿಸಿದರೆ ಸಹರಾ ಮರುಭೂಮಿ ಕೆಳಗೆ ಸಹೇಲ್ ಭೂ ಭಾಗವಿದೆ. ಕೊಂಚ ಮಳೆಯಾಗುವ ಸಹೇಲ್ ಪ್ರಾಂತ್ಯವು ಪಶ್ಚಿಮದಲ್ಲಿ ಅಟ್ಲಾಂಟಿಕ್ ಮಹಾಸಾಗರದಿಂದ ಪೂರ್ವದಲ್ಲಿ ಕೆಂಪು ಸಮುದ್ರದವರೆಗೆ 5,900 ಕಿ.ಮೀ ಕಿಮೀ ವ್ಯಾಪಿಸಿದೆ. ಇದು ಹಲವಾರು ನೂರರಿಂದ ಸಾವಿರ ಕಿಲೋಮೀಟರ್ (ಸುಮಾರು 600 ಮೈಲಿ) ಅಗಲವಿದ್ದು, ಸಹೇಲ್ ಪಟ್ಟಿ ಎಂದೇ ಗುರುತಿಸಲ್ಪಟ್ಟಿದೆ. ಈ ಪ್ರದೇಶ ಗಣಿಗಾರಿಕೆಗಳಿಗೂ ಹೇಳಿ ಮಾಡಿಸಿದ್ದು, ಪಾಶ್ಚಾತ್ಯ ರಾಷ್ಟ್ರಗಳ ಕಣ್ಣು ಇದ್ದೇ ಇದೆ. ಆದರೆ ಸಹೇಲ್ ಪ್ರಾಂತ್ಯದಲ್ಲಿ ಆಫ್ರಿಕನ್ ರಾಷ್ಟ್ರಗಳ ಒಗ್ಗಟ್ಟಿಗೆ ಶ್ರಮಿಸುತ್ತಾ, ಶತ್ರುಗಳನ್ನು ಸೃಷ್ಟಿಸಿಕೊಳ್ಳುತ್ತಿರುವ ಯುವ ನಾಯಕ ಇಬ್ರಾಹಿಂ.

2022ರಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಫ್ರೆಂಚ್ ಪಡೆಗಳನ್ನು ಹೊರಹಾಕಿದ ಥೋರೆ, ಪಾಶ್ಚಿಮಾತ್ಯ ನಿಗಮಗಳನ್ನು ಹೊರದೂಡಿದರು. ತಮ್ಮ ದೇಶವನ್ನು ರಷ್ಯಾ, ಕ್ಯೂಬಾ ಮತ್ತು ವೆನೆಜುವೆಲಾದೊಂದಿಗೆ ಕೊಂಡೊಯ್ಯಲು ಹೆಜ್ಜೆ ಇಟ್ಟರು. ಆಫ್ರಿಕನ್ನರ ಏಕತೆ, ರಾಷ್ಟ್ರೀಯತೆ, ಸ್ವಾವಲಂಬನೆಯನ್ನು ಉತ್ತೇಜಿಸುತ್ತಿರುವ ಇಬ್ರಾಹಿಂ, ತಮ್ಮನ್ನು ‘ಸಾಮ್ರಾಜ್ಯಶಾಹಿಗಳ ವಿರೋಧಿ’ ಎಂದು ಗುರುತಿಸಿಕೊಳ್ಳುತ್ತಾರೆ. ಈ ಕಾರಣಕ್ಕೆ ಅಮೆರಿಕ ಮತ್ತು ಫ್ರಾನ್ಸ್ ದೇಶಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
“ವಿದೇಶಿ ಸಂಘಟಿತ ಪಿತೂರಿಗಳ ಭಾಗವಾಗಿ ಥೋರೆ ಅವರನ್ನು ಕಳೆದ ಏಪ್ರಿಲ್‌ನಲ್ಲಿ ಕೊಲ್ಲುವ ಯತ್ನ ನಡೆಯಿತು” ಎನ್ನುತ್ತದೆ ಸರ್ಕಾರದ ಹೇಳಿಕೆ. ಏಪ್ರಿಲ್ 16ರಂದು ಥೋರೆಯವರ ಕಚೇರಿಗೆ ನುಗ್ಗಲು ನಡೆದ ಸಂಚನ್ನು ದೇಶದ ಸೇನೆ ತಡೆದು ನಿಲ್ಲಿಸಿತ್ತು. ಭದ್ರತಾ ಸಚಿವ ಮಹಮದೌ ಸನಾ ಪ್ರಕಾರ, ಸಂಚುಕೋರರು ಅಮೆರಿಕ ಬೆಂಬಲಿತ ನೆರೆಯ ಐವರಿ ಕೋಸ್ಟ್‌ನಲ್ಲಿ ನೆಲೆಸಿದ್ದಾರೆ.
ಭಯೋತ್ಪಾದನೆ ನಿಗ್ರಹದ ಹೆಸರಲ್ಲಿ ಆಫ್ರಿಕಾ ರಾಷ್ಟ್ರಗಳ ಮೇಲೆ ಹದ್ದಿನ ಕಣ್ಣು ಇಟ್ಟಿರುವ ‘ಅಮೆರಿಕ, ಆಫ್ರಿಕಾ ಕಮಾಂಡ್ (AFRICOM)’ನ ಕಮಾಂಡರ್ ಜನರಲ್ ಮೈಕೆಲ್ ಲ್ಯಾಂಗ್ಲಿಯವರು ಬುರ್ಕಿನಾ ನಾಯಕನ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿದ್ದಾರೆ. ರಷ್ಯಾ ಮತ್ತು ಚೀನಾದ ಸಾಮ್ರಾಜ್ಯಶಾಹಿ ನೆಲೆಗಳ ವಿಸ್ತರಣೆಗೆ ಥೋರೆ ಸಹಕರಿಸುತ್ತಿದ್ದಾರೆ ಎಂಬುದು ಅಮೆರಿಕದ ಆಕ್ಷೇಪ.
ಅಧಿಕಾರ ವಹಿಸಿಕೊಂಡಾಗಿನಿಂದಲೂ ಪಾಶ್ಚಿಮಾತ್ಯ ರಾಷ್ಟ್ರಗಳಿಂದ ಅಂತರ ಕಾಯ್ದುಕೊಳ್ಳುತ್ತಿರುವ ಥೋರೆ, “ಇದು ರಾಷ್ಟ್ರೀಯ ಸಾರ್ವಭೌಮತ್ವಕ್ಕೆ ಸಂಬಂಧಿಸಿದ ವಿಷಯ” ಎಂದು ತಿರುಗೇಟು ನೀಡಿದ್ದಾರೆ. ಫ್ರೆಂಚ್ ದೇಶವನ್ನು ಸಾಮ್ರಾಜ್ಯಶಾಹಿ ಎಂದು ಟೀಕಿಸಿರುವ ಅವರು, 2023ರ ಜನವರಿಯಲ್ಲಿ ಫ್ರೆಂಚ್ ರಾಯಭಾರಿಯನ್ನು ತಮ್ಮ ದೇಶದಿಂದ ಹೊರಹಾಕಿದರು.
ಮುಖ್ಯವಾಗಿ ಫ್ರೆಂಚ್ ಪಡೆಗಳನ್ನು ಹೊರದಬ್ಬಿದ್ದರಿಂದ ಬೀರಿದ ಪರಿಣಾಮಗಳು ಅಗಾಧ. ಈ ಹಿಂದೆ ಫ್ರೆಂಚ್ ಸಾಮ್ರಾಜ್ಯದ ಭಾಗವಾಗಿದ್ದ ಇತರ ಪಶ್ಚಿಮ ಆಫ್ರಿಕಾದ ರಾಷ್ಟ್ರಗಳಲ್ಲಿ ಹೊಸ ಅಲೆಯೇ ಎದ್ದಿತು. ಈಗ ಮಾಲಿ, ಚಾಡ್, ಸೆನೆಗಲ್, ನೈಜರ್ ಮತ್ತು ಐವರಿ ಕೋಸ್ಟ್‌ಗಳು ಫ್ರೆಂಚ್ ಪಡೆಗಳನ್ನು ತಮ್ಮ ತಾಯ್ನೆಲದಿಂದ ಹೊರಹಾಕಿದವು. “ಈ ರಾಷ್ಟ್ರಗಳು ಫ್ರಾನ್ಸ್‌ಗೆ ಧನ್ಯವಾದ ಹೇಳುವುದನ್ನು ಮರೆತಿವೆ” ಎಂಬುದು ಪಾಶ್ಚಾತ್ಯರ ಅಂಬೋಣ.
ಇದನ್ನೂ ಓದಿರಿ: ನಾವು ನೀವು ಅರಿಯದ ಬೆಂಗಳೂರಿನ ‘ಬಡವರ ಜಗತ್ತು’ (ಭಾಗ- 1)
ತಮ್ಮ ದೇಶಗಳ ಕುರಿತು ಕಪೋಲ ಕಲ್ಪಿತ ಸುದ್ದಿಗಳನ್ನು ಬಿತ್ತರಿಸುವ ಹಾಗೂ ವಿಶ್ವದೆದುರು ತಮ್ಮನ್ನು ಶತ್ರುಗಳಂತೆ ಬಿಂಬಿಸುವ ಪಾಶ್ಚಾತ್ಯ ಮಾಧ್ಯಮಗಳ ಬಗ್ಗೆ ಇಬ್ರಾಹಿಂ ಥೋರೆಗೆ ತೀವ್ರ ಅಸಮಾಧಾನ. ಪಾಶ್ಚಿಮಾತ್ಯ ಸರ್ಕಾರಿ ಪ್ರಾಯೋಜಿಕ ಮಾಧ್ಯಮ ಸಂಸ್ಥೆಗಳನ್ನು ನವವಸಾಹತುಶಾಹಿಯ ಏಜೆಂಟ್‌ಗಳೆಂದು ಜರಿದಿರುವ ಥೋರೆ, ರೇಡಿಯೋ ಫ್ರಾನ್ಸ್ ಇಂಟರ್‌ನ್ಯಾಷನಲ್, ಫ್ರಾನ್ಸ್ 24, ವಾಯ್ಸ್ ಆಫ್ ಅಮೆರಿಕ, ಬ್ರಿಟನ್‌ನ ಬಿಬಿಸಿ ಮತ್ತು ಜರ್ಮನಿಯ ಡಾಯ್ಚವೆಲ್ಲಿ ಸಂಸ್ಥೆಗಳನ್ನು ಹೊರಗೆ ಹಾಕಿದ್ದಾರೆ. ಈ ಕ್ರಮಗಳನ್ನು ಪಾಶ್ಚಾತ್ಯ ಸಂಸ್ಥೆಗಳು ತೀವ್ರವಾಗಿ ಖಂಡಿಸಿವೆ. “ಇದು ಭಿನ್ನಾಭಿಪ್ರಾಯಗಳನ್ನು ದಮನ ಮಾಡುವ ಪ್ರವೃತ್ತಿ” ಎಂದಿದೆ ಹ್ಯೂಮನ್ ರೈಟ್ಸ್ ವಾಚ್ ಸಂಸ್ಥೆ.
ಅರ್ಧ ಶತಮಾನಕ್ಕೂ ಮುಂಚೆಯೇ ಸ್ವತಂತ್ರ ಪಡೆದಿದ್ದರೂ, ತನ್ನ ಹಿಂದಿನ ಆಫ್ರಿಕನ್ ವಸಾಹತುಗಳ ಮೇಲೆ ಫ್ರಾನ್ಸ್ ತನ್ನ ಗಮನಾರ್ಹ ನಿಯಂತ್ರಣವನ್ನು ಸಾಧಿಸುತ್ತಾ ಬಂದಿದೆ. ಹದಿನಾಲ್ಕು ಆಫ್ರಿಕನ್ ರಾಷ್ಟ್ರಗಳು ಸಿಎಫ್‌ಎ ಫ್ರಾಂಕ್ ಕರೆನ್ಸಿಯನ್ನು ಬಳಸುತ್ತವೆ. ಈ ಕರೆನ್ಸಿಯು ಫ್ರೆಂಚ್ ಫ್ರಾಂಕ್ ಮತ್ತು ಯುರೋಗೆ ಅಧೀನವೆಂದೇ ಹೇಳಬಹುದು. ಸದರಿ ಆಫ್ರಿಕನ್ ದೇಶಗಳು ಪ್ಯಾರಿಸ್ ಅನ್ನು ಆರ್ಥಿಕವಾಗಿ ಅವಲಂಬಿಸಿವೆ. ಈ ಕರೆನ್ಸಿ ಅವಲಂಬನೆಯ ಬಗ್ಗೆ ಅಸಮಾಧಾನ ಹೊಂದಿರುವ ಥೋರೆ, “ಫ್ರಾಂಕ್ ಎಂಬುದು ಆಫ್ರಿಕಾವನ್ನು ಗುಲಾಮಗಿರಿಯಲ್ಲಿ ಇಡುವ ಕಾರ್ಯವಿಧಾನ” ಎಂದಿದ್ದಾರೆ. ಹೀಗಾಗಿ ಹೊಸ ಕರೆನ್ಸಿಯನ್ನು ರಚಿಸುವ ಉದ್ದೇಶವನ್ನೂ ಘೋಷಿಸಿದ್ದಾರೆ.
ಪಾಶ್ಚಿಮಾತ್ಯ ಬೆಂಬಲಿತ ‘ಪಶ್ಚಿಮ ಆಫ್ರಿಕಾ ದೇಶಗಳ ಆರ್ಥಿಕ ಸಮುದಾಯ’ (ECOWAS)ದಿಂದ ಬೇರ್ಪಟ್ಟ ಬುರ್ಕಿನಾ ಫಾಸೋ, ಸಹೇಲ್ ರಾಜ್ಯಗಳ ಒಕ್ಕೂಟವನ್ನು ಮಾಲಿ ಮತ್ತು ನೈಜರ್ ದೇಶಗಳ ಜೊತೆ ಸೇರಿಕೊಂಡು ಸ್ಥಾಪಿಸಿದೆ. ಸಾಮ್ರಾಜ್ಯಶಾಹಿ-ವಿರೋಧಿ ಮತ್ತು ಏಕೀಕೃತ ಆಫ್ರಿಕಾದತ್ತ ಮೊದಲ ಹೆಜ್ಜೆಯಾಗಿ ಈ ನಡೆಯನ್ನು ಗುರುತಿಸಲಾಗುತ್ತಿದೆ.
ಸಂಕರ ಪರಂಪರೆ
ಕ್ರಾಂತಿಕಾರಿ ಬುರ್ಕಿನಾ ನಾಯಕ ಥಾಮಸ್ ಸಂಕರ ಅವರ ಕನಸುಗಳನ್ನು ಥೋರೆ ಈಡೇರಿಸುತ್ತಿದ್ದಾರೆಂದು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ಕೇವಲ ನಾಲ್ಕು ವರ್ಷ ಅಧಿಕಾರ ನಡೆಸಿದ್ದ ಸಂಕರ, ರಾಷ್ಟ್ರದ ಉತ್ಪಾದಕತೆಯನ್ನು ಹೆಚ್ಚಿಸಲು ಮತ್ತು ವಿದೇಶಿ ನೆರವಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ವ್ಯಾಪಕ ಸುಧಾರಣೆಗಳನ್ನು ತಂದರು. “ನಿಮಗೆ ಆಹಾರವನ್ನು ನೀಡುವವನು ನಿಮ್ಮನ್ನು ನಿಯಂತ್ರಿಸುತ್ತಾನೆ” ಎಂದಿದ್ದ ಸಂಕರ, ಸ್ಥಳೀಯವಾಗಿಯೇ ಪೌಷ್ಟಿಕವಾದ ಆಹಾರ ಉತ್ಪಾದಿಸಲು ದೇಶೀಯ ಮತ್ತು ಸಣ್ಣ ಪ್ರಮಾಣದ ಕೃಷಿಯನ್ನು ಉತ್ತೇಜಿಸಿದ್ದರು. ತಮ್ಮ ಪ್ರದೇಶದ ಅನೇಕ ನಾಯಕರು ಸಾರ್ವಜನಿಕ ನಿಧಿಯನ್ನು ದುರುಪಯೋಗ ಮಾಡಿಕೊಂಡಾಗ, ಸಂಕರ ತಮ್ಮ ಕ್ರಾಂತಿಕಾರಕ ಆಲೋಚನೆಗಳ ಮೂಲಕ ಸಮಾಜವಾದಿ ನಿರ್ಧಾರಗಳನ್ನು ಕೈಗೊಂಡರು. ಸಾಮಾಜಿಕ ವಸತಿ ಮತ್ತು ಆರೋಗ್ಯ ಕೇಂದ್ರಗಳನ್ನು ನಿರ್ಮಿಸಿದರು. ಸಾಕ್ಷರತೆಗಾಗಿ ಶ್ರಮಪಟ್ಟರು. ಸ್ತ್ರೀವಾದಿಯಾಗಿದ್ದ ಅವರು, ಬಲವಂತದ ವಿವಾಹಗಳನ್ನು, ಹೆಣ್ಣಿನ ಮೇಲಿನ ದೌರ್ಜನ್ಯಗಳನ್ನು ನಿಷೇಧಿಸಿದರು. ಹೆಚ್ಚಿನ ಸಂಖ್ಯೆಯ ಮಹಿಳೆಯರನ್ನು ಅಧಿಕಾರದ ಉನ್ನತ ಹುದ್ದೆಗಳಿಗೆ ನೇಮಿಸುವ ಗುರಿಯನ್ನು ಹಾಕಿಕೊಂಡಿದ್ದರು. 1987ರಲ್ಲಿ ಸಂಕರ ಅವರನ್ನು ಹತ್ಯೆ ಮಾಡಲಾಯಿತು. ಸಂಕರರನ್ನು ಕೊಂದಿದ್ದ ಮಾಜಿ ಅಧ್ಯಕ್ಷ ಬ್ಲೇಸ್ ಕಾಂಪೋರೆಯನ್ನು ಶಿಕ್ಷೆಗೆ ಗುರಿಪಡಿಸಿದ್ದು ಥೋರೆ ಅಧಿಕಾರಕ್ಕೇರಿದ ಮೇಲಷ್ಟೇ. ಬ್ಲೇಸ್ ಕಾಂಪೋರೆ ಈಗ ಐವರಿ ಕೋಸ್ಟ್‌ನಲ್ಲಿ ದೇಶಭ್ರಷ್ಟನಾಗಿ ವಾಸಿಸುತ್ತಿದ್ದಾನೆ.

“ಸಂಕರರ ಶಿಷ್ಯ ನಾನು, ಅವರು ನಡೆಸಿದ ಚಳವಳಿಯ ಕೂಸು ನಾನು” ಎಂದು ಬಣ್ಣಿಸಿಕೊಳ್ಳುತ್ತಾರೆ ಥೋರೆ. ಸಂಕರ ಅವರ ಕೆಲಸಗಳು ಥೋರೆಯವರ ಅಧಿಕಾರದಲ್ಲಿ ಪ್ರತಿಫಲಿಸಲು ಆರಂಭಿಸಿವೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ಹೊಸ ಮಿಲಿಟರಿ ಸರ್ಕಾರವು ಆಹಾರ ಸಾರ್ವಭೌಮತ್ವವನ್ನು ಸಾಧಿಸುವುದಕ್ಕೆ ಒತ್ತು ನೀಡಿದೆ. ಯಂತ್ರಾಧಾರಿತ ಕೃಷಿಗೆ ಪ್ರೋತ್ಸಾಹಿಸಿ ಅಕ್ಕಿ, ಜೋಳ ಮತ್ತು ಆಲೂಗಡ್ಡೆಯಂತಹ ಪ್ರಧಾನ ಬೆಳೆಗಳ ಉತ್ಪಾದನೆಯನ್ನು ಹೆಚ್ಚಿಸಲು 1 ಬಿಲಿಯನ್ ಡಾಲರ್ ಮೌಲ್ಯದ ಹೊಸ ಕಾರ್ಯಕ್ರಮಗಳನ್ನು ಬುರ್ಕಿನಾ ಫಾಸೋ ಸರ್ಕಾರ ಕೈಗೊಂಡಿದೆ.
ಇದನ್ನೂ ಓದಿರಿ: ಕರ್ನಾಟಕಕ್ಕೆ ಕ್ರೈಸ್ತರು ಕೊಟ್ಟ ಕೊಡುಗೆಗಳ ಮರೆಯಲಾದೀತೆ? (ಭಾಗ- 2)
ದೇಶದ ಗಣಿಗಾರಿಕೆ ಉದ್ಯಮವನ್ನು ರಾಷ್ಟ್ರೀಕರಣಗೊಳಿಸಿದ್ದು ಥೋರೆಯವರ ಮಹತ್ವದ ಕೆಲಸ. ಬುರ್ಕಿನಾ ಫಾಸೋದ ಆರ್ಥಿಕತೆಯು ಚಿನ್ನದ ಗಣಿಗಾರಿಕೆಯನ್ನು ಅವಲಂಬಿಸಿದೆ. ಈ ದೇಶವು ಮಾಡುವ ರಫ್ತಿನಲ್ಲಿ ಶೇ. 80ಕ್ಕಿಂತ ಹೆಚ್ಚು ಪಾಲು ಚಿನ್ನಕ್ಕೆ ಸಂಬಂಧಿಸಿದ್ದು ಎಂಬುದು ಗಮನಾರ್ಹ. ಬುರ್ಕಿನಾ ದೇಶವು ವಿಶ್ವದ 13ನೇ ಅತಿದೊಡ್ಡ ಚಿನ್ನದ ಉತ್ಪಾದಕ ರಾಷ್ಟ್ರವಾಗಿದ್ದು, ವರ್ಷಕ್ಕೆ ಸುಮಾರು 100 ಟನ್‌ಗಳನ್ನು ತಯಾರಿಸಿ, ಸುಮಾರು 6 ಬಿಲಿಯನ್ ಡಾಲರ್ ವಹಿವಾಟಿಗೆ ಕಾರಣವಾಗುತ್ತದೆ. ದುರಾದೃಷ್ಟವಶಾತ್ ಈ ಗಣಿಗಾರಿಕೆಯಲ್ಲಿ ವಿದೇಶಿ ನಿಗಮಗಳು ಹಿಡಿತ ಹೊಂದಿದ್ದವು.
“ಸಂಪನ್ಮೂಲ-ಸಮೃದ್ಧ ಆಫ್ರಿಕಾ ಖಂಡವು ವಿಶ್ವದ ಬಡ ಪ್ರದೇಶವಾಗಿ ಏಕೆ ಉಳಿದಿದೆ? ಆಫ್ರಿಕನ್ ದೇಶಗಳ ಮುಖ್ಯಸ್ಥರು ಸಾಮ್ರಾಜ್ಯಶಾಹಿಗಳ ಕೈಗೊಂಬೆಗಳಂತೆ ವರ್ತಿಸಬಾರದು” ಎಂದು ಗುಡುಗಿದ್ದಾರೆ ಥೋರೆ. ಪಾಶ್ಚಿಮಾತ್ಯ ದೇಶಗಳ ಒಡೆತನದ ಎರಡು ಪ್ರಮುಖ ಚಿನ್ನದ ಗಣಿಗಳನ್ನು 2024ರ ಆಗಸ್ಟ್‌ನಲ್ಲಿ ರಾಷ್ಟ್ರೀಕರಣಗೊಳಿಸಿದರು. ದೇಶದ ಮೊದಲ ಚಿನ್ನದ ಸಂಸ್ಕರಣಾಗಾರದ ನಿರ್ಮಾಣ ಮಾಡುವುದಾಗಿ 2024ರ ನವೆಂಬರ್‌ನಲ್ಲಿ ಘೋಷಿಸಲಾಯಿತು.
ಥೋರೆ ಕಾಲದಲ್ಲಿ ಆಹಾರ ಉತ್ಪಾದನೆ ಹೆಚ್ಚಾಗಿದೆ. ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆಗಳು ಉತ್ತಮಗೊಂಡಿವೆ. 15 ಮೊಬೈಲ್ ಚಿಕಿತ್ಸಾಲಯಗಳು ಸ್ಥಾಪನೆಯಾಗಿವೆ. ಏರ್ ಬುರ್ಕಿನಾವನ್ನು ಪುನರುಜ್ಜೀವನಗೊಳಿಸಲಾಗಿದೆ. ಬೊಬೊ ಡುಲುತ್ ವಿಮಾನ ನಿಲ್ದಾಣವನ್ನು ವಿಸ್ತರಿಸಲಾಗಿದೆ. ನ್ಯಾಯಾಲಯದಲ್ಲಿ ಇನ್ನು ಮುಂದೆ ಬ್ರಿಟಿಷ್ ಶೈಲಿಯ ವಿಂಗ್‌ಗಳಿಲ್ಲ. ಫ್ರೆಂಚ್ ಅನ್ನು ಅಧಿಕೃತ ಭಾಷೆಯಿಂದ ಕೈಬಿಡಲಾಗಿದೆ. 25 ಮಿಲಿಯನ್ ಡಾಲರ್‌ಗಿಂತ ಹೆಚ್ಚು ಹಣದೊಂದಿಗೆ ಪೋಸ್ಟೊ ಬ್ಯಾಂಕ್ ಪ್ರಾರಂಭಿಸಲಾಗಿದೆ. ಸೆಕೆಂಡ್ ಹ್ಯಾಂಡ್ ಬಟ್ಟೆಗಳ ಆಮದನ್ನು ನಿಷೇಧಿಸಲಾಗಿದೆ. 2025ರಲ್ಲಿ ಬುರ್ಕಿನಾ ಫಾಸೊ ದೇಶವು ಸಾಧಿಸಿರುವ ಆರ್ಥಿಕ ಪ್ರಗತಿಯನ್ನು ಐಎಂಎಫ್ (ಅಂತಾರಾಷ್ಟ್ರೀಯ ಹಣಕಾಸು ನಿಧಿ) ಗಂಭೀರವಾಗಿ ಗಮನಿಸುತ್ತಿದೆ. ದೇಶದ ಆದಾಯ ಹೆಚ್ಚಾಗಿದೆ. ಕೃಷಿ ಮತ್ತು ಸೇವೆಗಳ ಬೆಳವಣಿಗೆಯಿಂದಾಗಿ ತೀವ್ರ ಬಡತನ ಕಡಿಮೆಯಾಗಿದೆ.- ಹೀಗೆ ಹತ್ತಾರು ಸಾಧನೆಗಳನ್ನು ಥೋರೆ ಆಡಳಿತದಲ್ಲಿ ಗುರುತಿಸುತ್ತಿದ್ದಾರೆ ಆಫ್ರಿಕನ್ ಪತ್ರಕರ್ತರು.
ಆದರೆ ಥೋರೆ ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸುತ್ತಿದ್ದಾರೆಂಬ ಅಪವಾದಕ್ಕೂ ಗುರಿಯಾಗಿದ್ದಾರೆ. ಚುನಾವಣೆಗಳು ನಡೆಯಬೇಕೆಂದು ಪ್ರತಿಪಾದಿಸುತ್ತಿದ್ದ ಥೋರೆ ಅವರೇ, ಇಂದು ಯುದ್ಧದ ಕಾರಣ ಇಟ್ಟು ಮುಂದೂಡುತ್ತಿದ್ದಾರೆಂಬ ಅಪವಾದವನ್ನು ಎದುರಿಸುತ್ತಿದ್ದಾರೆ.
ಇದನ್ನೂ ಓದಿರಿ: ಕರ್ನಾಟಕದಲ್ಲಿ ಕೋಮುವಾದಕ್ಕೆ ಬಲಿಯಾಗದ ರಂಗಭೂಮಿ
ಬುರ್ಕಿನಾ ಫಾಸೊ ಬಿಕ್ಕಟ್ಟಿನಲ್ಲಿರುವ ರಾಷ್ಟ್ರವಾಗಿಯೇ ಉಳಿದಿದೆ. 2011ರಲ್ಲಿ ಲಿಬಿಯಾದಲ್ಲಿ ನ್ಯಾಟೋ ಹಸ್ತಕ್ಷೇಪದ ನಂತರ ಅಧಿಕಾರಕ್ಕೆ ಬಂದ ಇಸ್ಲಾಮಿಸ್ಟ್ ಗುಂಪುಗಳು, ಸಹೇಲ್ ಪ್ರಾಂತ್ಯದಲ್ಲಿ ಕಿರಿಕಿರಿ ಶುರು ಮಾಡಿವೆ. 2024ರಲ್ಲಿ ಬುರ್ಕಿನಾ ಫಾಸೋದಲ್ಲಿ 1,000 ಕ್ಕೂ ಹೆಚ್ಚು ಜನರು ಈ ಗುಂಪುಗಳಿಂದಾಗಿ ಪ್ರಾಣ ಕಳೆದುಕೊಂಡರು. ‘ಈ ಕಾರಣ ಇಟ್ಟುಕೊಂಡು ಥೋರೆ, ಚುನಾವಣೆಯನ್ನು ಮುಂದೂಡುತ್ತಿರುವುದು ಎಷ್ಟು ಸರಿ?’ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. “ಚುನಾವಣೆಯು ಆದ್ಯತೆಯಲ್ಲ; ನಮಗೆ ಭದ್ರತೆಯೇ ಆದ್ಯತೆ” ಎಂದಿದ್ದಾರೆ ಥೋರೆ. ಇದನ್ನು ಬುರ್ಕಿನೋ ಫಾಸೋ ಜನರು ಹೇಗೆ ನೋಡುತ್ತಾರೆ ಎಂಬುದು ಸದ್ಯದ ಪ್ರಶ್ನೆ.
ತಮ್ಮ ನಾಯಕ ಥಾಮಸ್ ಸಂಕರರಂತೆ ಬುರ್ಕಿನಾ ಫಾಸೊ ಮೇಲೆ ಅಳಿಸಲಾಗದ ಗುರುತನ್ನು ಥೋರೆ ಸೃಷ್ಟಿಸುತ್ತಾರೆಯೇ ಎಂದು ಕಾಲವೇ ಹೇಳಬೇಕು. ಅನೇಕ ಆಫ್ರಿಕನ್ ನಾಯಕರು ಆಮೂಲಾಗ್ರ ಬದಲಾವಣೆಯ ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದಾರೆ, ಆದರೆ ಅದನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ. ಆದರೂ ಅವರ ಪ್ಯಾನ್-ಆಫ್ರಿಕನ್ ವಾದ, ಸಾಮ್ರಾಜ್ಯಶಾಹಿ ವಿರೋಧಿ ಮತ್ತು ಸ್ವಾವಲಂಬನೆಯ ಸಂದೇಶವು ಖಂಡಿತವಾಗಿಯೂ ಎಲ್ಲರ ಗಮನ ಸೆಳೆಯುತ್ತಿದೆ. ಮುಂದೇನಾಗುತ್ತದೆ ಎಂಬುದನ್ನು ನೋಡಬೇಕಷ್ಟೆ.

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.




