“ವೇದ, ಸಂಸ್ಕೃತಿ ಬಗ್ಗೆ ಮಾತನಾಡುವ ಸಂಸದ ಅನಂತ್ ಕುಮಾರ್ ಹೆಗಡೆ ಅವರು ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಏಕವಚನ, ಅಸಂವಿಧಾನಿಕವಾಗಿ ಮಾತನಾಡಿದ್ದು, ಜಿಲ್ಲೆಯ ಜನ ತಲೆ ತಗ್ಗಿಸುವಂತಾಗಿದೆ. ಇಂಥ ಜನಪ್ರತಿನಿಧಿಗಳು ಯಾವುದೇ ಪಕ್ಷದಲ್ಲಿ ಇದ್ದರೂ ಆ ಪಕ್ಷಕ್ಕೆ ಮುಜುಗರ” ಎಂದು ಕಾಂಗ್ರೆಸ್ ವಕ್ತಾರ ದೀಪಕ್ ದೊಡ್ಡೂರು ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಸುಪ್ರಿಯಾ ಹೋಟೆಲ್‌ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.
“ಸಂಸದ ಅನಂತ್ ಕುಮಾರ್ ಹೆಗಡೆ ನಾಲಾಯಕ್ಕು ಮನುಷ್ಯ. ಅವರು ರಾಷ್ಟ್ರಮಟ್ಟಕ್ಕೆ ಹೋದ ಬಳಿಕ ಜಿಲ್ಲೆಗೆ ಮಸಿ ಬಳಿಯುವಂತಾಗಿದೆ. ಅಗೌರವ ತೋರಿಸುವಂಥದ್ದು ಸಂಸದರಿಗೆ ಹೊಸತಲ್ಲ. ಜಿಲ್ಲೆಗೆ ಹಿಂದೆ ಪ್ರಧಾನಿಗಳು ಬಂದಾಗಲೂ ಸಮಯ ಕೊಡಲಿಲ್ಲ. ಮೊನ್ನೆ ಮೊನ್ನೆ ಗೂಡಿನಿಂದ ಹೊರ ಬಂದು ಸಿಎಂ ಸಿದ್ದರಾಮಯ್ಯ ಬಗ್ಗೆ ಏಕವಚನ ಪದ ಪ್ರಯೋಗ ಮಾಡಿದ್ದಾರೆ. ನಾಲ್ಕೂವರೆ ವರ್ಷ ಜನರಿಗೆ ಧ್ವನಿಯಾಗದೆ ಜನರ ನಕಾರಾತ್ಮಕ ಹೇಳಿಕೆ ನೀಡಿದ್ದಾರೆ. ಇದನ್ನು ಆತ ಬಿಡಬೇಕು. ಈ ಜಿಲ್ಲೆಯ ಜನ ಸಾಕಷ್ಟು ಅವಧಿಯ ತನಕ ಅನಂತರ ಹರಿಕತೆ ಕೇಳಿಯೂ ಆಯಿತು” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ಸಿದ್ದರಾಮಯ್ಯ ಬಗ್ಗೆ ಅವಹೇಳನ; ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ ಪ್ರತಿಭಟನೆ
“ಜನಪ್ರತಿನಿಧಿಗಳಾದವರು ಕೋಮು ಸೌಹಾರ್ದತೆ ಹೊಂದಿರಬೇಕು. ಆದರೆ, ಅನಂತನ ನಡೆಯಿಂದ ಆತಂಕ ಉಂಟಾಗಿದೆ. ಅನಂತರು ಇತಿಹಾಸಕಾರರು, ಸಾಹಿತ್ಯಕ್ಕೆ ಮಹತ್ವ ಕೊಟ್ಟರೆ ಹೆಚ್ಚಿನ ಹೆಸರು ಅವರಿಗೆ ಬರುತ್ತಿತ್ತು. ಸಂಸದರು ಅಬ್ಬರಿಸುವುದು ಕೋಮು ಸೌಹಾರ್ದ ಕೆಡಿಸಲು ಮಾತ್ರ. ಅಭಿವೃದ್ಧಿ ಬಗ್ಗೆ ಅವರು ಮಾತನಾಡುತ್ತಿಲ್ಲ. ಅಂಕೋಲಾ ಹುಬ್ಬಳ್ಳಿ ರೈಲ್ವೆ, ರಸ್ತೆ ಅಭಿವೃದ್ಧಿಯಾಗಿಲ್ಲ. ವಿಮಾನ ನಿಲ್ದಾಣ ಬಂದಿಲ್ಲ” ಎಂದು ಆರೋಪಿಸಿದರು.