ಕೃತಕ ಬುದ್ಧಿಮತ್ತೆ(ಎಐ) ವಿಶ್ವದಾದ್ಯಂತ ಉದ್ಯೋಗ ಭದ್ರತೆಯ ಮೇಲೆ ಭಾರೀ ಪರಿಣಾಮ ತಂದೊಡ್ಡಲಿದೆ ಎಂದು ಐಎಂಎಫ್ ಮುಖ್ಯಸ್ಥರಾದ ಕ್ರಿಸ್ಟಲೀನಾ ಜಾರ್ಜೋವಿಯಾ ಅವರು ಎಚ್ಚರಿಕೆ ನೀಡಿದ್ದಾರೆ.
ಸ್ವಿಟ್ಜರ್‌ಲ್ಯಾಂಡಿನ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಮಾವೇಶದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಎಐ’ ಜಾಗತಿಕ ಉದ್ಯೋಗಗಳಲ್ಲಿ ಶೇ. 40 ರಷ್ಟು ಹೊಡೆತ ನೀಡಿದರೆ, ಮುಂದುವರೆದ ಅರ್ಥಶಾಸ್ತ್ರ ಕ್ಷೇತ್ರದ ಮೇಲೆ ಶೇ. 60 ರಷ್ಟು ಪರಿಣಾಮ ಬೀರುತ್ತದೆ. ಆದಾಗ್ಯೂ ಕೃತಕ ಬುದ್ಧಿಮತ್ತೆ ಉತ್ಪಾದಕತೆಯ ಮಟ್ಟವನ್ನು ಹೆಚ್ಚಿಸಲು ಮತ್ತು ಜಾಗತಿಕ ಬೆಳವಣಿಗೆಯನ್ನು ಉತ್ತೇಜಿಸಲು ‘ಪ್ರಚಂಡ ಅವಕಾಶ’ ನೀಡುತ್ತದೆ ಎಂದು ಹೇಳಿದರು.
”ಮುಂದುವರೆಯುತ್ತಿರುವ ರಾಷ್ಟ್ರಗಳಲ್ಲಿ ಉದ್ಯೋಗ ಭದ್ರತೆಯ ಮೇಲೆ ‘ಎಐ’ ಪರಿಣಾಮ ಸರಿಸುಮಾರು ಶೇ. 40 ರಷ್ಟು ಪರಿಣಾಮ ಬೀರುವ ಸಂಭವವಿದೆ. ಹೆಚ್ಚಾಗಿ ಉನ್ನತ ಕೌಶಲ್ಯ ಉದ್ಯೋಗಗಳು ಹೆಚ್ಚಿನ ಪರಿಣಾಮ ಬೀರಲಿದೆ” ಎಂದು ಕ್ರಿಸ್ಟಲೀನಾ ತಿಳಿಸಿದ್ದಾರೆ.
”ಒಟ್ಟಾರೆಯಾಗಿ ನಿಮ್ಮ ಉದ್ಯೋಗ ಕಣ್ಮರೆಯಾಗಬಹುದು ಅಥವಾ ಕೃತಿಕ ಬುದ್ಧಿಮತ್ತೆ ನಿಮ್ಮ ಉದ್ಯೋಗವನ್ನು ವೃದ್ಧಿಸಬಹುದು. ಹಾಗಾಗಿ ನೀವು ವಿಸ್ತಾರವಾಗಿ ಉತ್ಪಾದಕತೆಯನ್ನು ಹೆಚ್ಚಿಸಬಹುದು ಹಾಗೂ ನಿಮ್ಮ ಆದಾಯ ಮಟ್ಟ ಕೂಡ ಏರಿಕೆಯಾಗಬಹುದು ಎಂದು” ಐಎಂಎಫ್ ಮುಖ್ಯಸ್ಥರು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅನಂತಕುಮಾರ್ ಎಂಬ ಬೆಂಕಿ ಬಾಲಕನೂ, ಜನಿವಾರದಾಟವೂ
”ಪ್ರಸ್ತುತ ನಿರ್ದಿಷ್ಟವಾಗಿ ಕಡಿಮೆ ಆದಾಯ ಇರುವ ರಾಷ್ಟ್ರಗಳಿಗೆ ಕೃತಕ ಬುದ್ಧಿಮತ್ತೆ ಪ್ರಸ್ತುತಪಡಿಸುವ ಅವಕಾಶಗಳನ್ನು ವೇಗವಾಗಿ ಪಡೆದುಕೊಳ್ಳುವ ಬಗ್ಗೆ ಸಹಾಯ ಮಾಡುವತ್ತ ನಾವು ಗಮನಹರಿಸಬೇಕಿದೆ. ‘ಎಐ’ ಒಂಚೂರು ಗಾಬರಿ ಹುಟ್ಟಿಸಿದರೂ ಪ್ರತಿಯೊಬ್ಬರಿಗೂ ಅದ್ಭುತ ಅವಕಾಶವನ್ನು ನೀಡುತ್ತದೆ” ಎಂದು ಕ್ರಿಸ್ಟಲೀನಾ ಹೇಳಿದ್ದಾರೆ.
“ಉದಯೋನ್ಮುಖ ಮಾರುಕಟ್ಟೆಗಳು ಮತ್ತು ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳಲ್ಲಿನ ಕಾರ್ಮಿಕ ಮಾರುಕಟ್ಟೆಗಳಿಗೆ ‘ಎಐ’ನಿಂದ ಸಣ್ಣ ಆರಂಭಿಕ ಪರಿಣಾಮ ಬೀರುತ್ತದೆ. ವಿಶ್ವದಾದ್ಯಂತ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ನಿರ್ಮಾಣವಾಗಿರುವ ಸಾಲದ ಹೊರೆಗಳನ್ನು ನಿಭಾಯಿಸಲು ಹಾಗೂ ತಗ್ಗಿರುವ ಆರ್ಥಿಕತೆಗಳನ್ನು ಮರುನಿರ್ಮಾಣಗೊಳಿಸಲು ದೇಶಗಳು ಮುನ್ನೋಟ ವಹಿಸುತ್ತಿರುವ ಕಾರಣ 2024ರ ವರ್ಷವು ವಿಶ್ವದ ಆರ್ಥಿಕ ನೀತಿಗೆ ಖಂಡಿತವಾಗಿಯು ಕಠಿಣವಾದ ವರ್ಷ” ಎಂದು ಕ್ರಿಸ್ಟಲೀನಾ ತಿಳಿಸಿದರು.
”ಈ ವರ್ಷ 80 ದೇಶಗಳ ಕೋಟ್ಯಂತರ ಮಂದಿ ಮತ ಚಲಾಯಿಸಲಿದ್ದಾರೆ. ಈ ಕಾರಣಗಳಿಂದ ಸರ್ಕಾರಗಳಿಗೆ ಹೆಚ್ಚುವರಿ ಒತ್ತಡವಿರುವ ಕಾರಣ ಚುನಾವಣೆ ಗೆಲ್ಲಲು ಹೆಚ್ಚು ಹಣ ವೆಚ್ಚ ಮಾಡಬಹುದು ಅಥವಾ ತೆರಿಗೆಗಳನ್ನು ಕಡಿತಗೊಳಿಸಬಹುದು. ಇದು ಕೂಡ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ” ಎಂದು ಕ್ರಿಸ್ಟಲೀನಾ ಹೇಳಿದರು.