ಜುಲೈ 20ರಂದು ಸಂಸತ್ ಚಲೋ ಮೆರವಣಿಗೆ ನಡೆಸುತ್ತಿದ್ದ ವಿದ್ಯಾರ್ಥಿ ಪ್ರತಿಭಟನಾಕಾರರ ಮೇಲಿನ ಪೊಲೀಸ್ ದೌರ್ಜನ್ಯ ಮತ್ತು ಪೆಲೆಟ್ ಗನ್ ಬಳಕೆಯ ವಿಚಾರವಾಗಿ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ವಿಪಕ್ಷ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. “ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯದ ವಿಷಯದಲ್ಲಿ ಅಮಿತ್ ಶಾ ಒಂದೋ ‘ತಪ್ಪಿತಸ್ಥ’ ಆಗಿರಬೇಕು, ಇಲ್ಲವೇ ‘ಅಸಮರ್ಥ’ ಆಗಿರಬೇಕು” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಈ ಎರಡೂ ಸಂದರ್ಭಗಳಲ್ಲೂ ಅವರು ತಮ್ಮ ಹುದ್ದೆಯಲ್ಲಿ ಮುಂದುವರಿಯಲು ಅನರ್ಹರಾಗಿದ್ದು, ಪ್ರಧಾನಿ ಮೋದಿಯವರು ತಕ್ಷಣವೇ ಅಮಿತ್ ಶಾರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಸಂಸತ್ತಿನ ಹೊರಗೆ ಮಾಧ್ಯಮಗಳೊಂದಿಗೆ ಮತ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಹುಲ್ ಗಾಂಧಿ, “ಸದನದಲ್ಲಿ ಗೃಹ ಸಚಿವರ ಕುರಿತ ನಮ್ಮ ಮಾತುಗಳನ್ನು ಕಡತದಿಂದ ತೆಗೆದುಹಾಕಲಾಗಿದೆ. ನಮ್ಮ ಭಾಷಣಕ್ಕೆ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಡ್ಡಿಪಡಿಸಿದರು. ನಮಗೆ ಮಾತನಾಡಲು ಅವಕಾಶ ನೀಡದೆ ಕ್ಷಮೆ ಯಾಚಿಸುವಂತೆ ಒತ್ತಾಯಿಸಿದರು. ಆದರೆ, ನಾನು ಯಾವುದೇ ಕಾರಣಕ್ಕೂ ಬಿಜೆಪಿ ಅಥವಾ ಆರ್‌ಎಸ್ಎಸ್ ಮುಂದೆ ಕ್ಷಮೆ ಯಾಚಿಸುವುದಿಲ್ಲ” ಎಂದು ಹೇಳಿದ್ದಾರೆ.
ಸದನದಲ್ಲಿನ ಚರ್ಚೆಯ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ, “ವಿದ್ಯಾರ್ಥಿಗಳ ಮೇಲೆ ಪೊಲೀಸರು ಗುಂಡು ಹಾರಿಸಲು ಅಥವಾ ಪೆಲೆಟ್ ಗನ್ ಬಳಸಲು ಗೃಹ ಸಚಿವರೇ ಆದೇಶ ನೀಡಿರಬೇಕು, ಇಲ್ಲವೇ, ಅವರಿಗೆ ಈ ವಿಷಯವೇ ತಿಳಿದಿರಬಾರದು. ಆದೇಶ ನೀಡಿದ್ದರೆ ಅವರು ಅಪರಾಧಿಯಾಗುತ್ತಾರೆ, ವಿಷಯ ತಿಳಿಯದೇ ಇದ್ದರೆ ಅವರು ಸಂಪೂರ್ಣ ಅಸಮರ್ಥರಾಗಿದ್ದಾರೆ ಎಂಬ ಸರಳ ತರ್ಕವನ್ನು ನಾನು ಸದನದಲ್ಲಿ ಮಂಡಿಸಿದೆ” ಎಂದು ತಿಳಿಸಿದ್ದಾರೆ.
#WATCH | Delhi: On his speech in the House, Lok Sabha LoP Rahul Gandhi says, "There can be two possible scenarios. One is that the Home Minister issued the order. The second is that the Home Minister was unaware that firing would take place. In the first case, he is culpable; in… pic.twitter.com/MqgzyW1uai
— ANI (@ANI) July 29, 2026
ಮುಂದುವರೆದು, “ಧೀರ ಗೃಹ ಸಚಿವನೆಂದು ಕರೆಸಿಕೊಳ್ಳುವ ಅಮಿತ್ ಶಾ ಅವರು ಈ ವಿಷಯದ ಬಗ್ಗೆ ಸ್ಪಷ್ಟನೆ ನೀಡಲು ಸಂಸತ್ತಿಗೆ ಏಕೆ ಬರುತ್ತಿಲ್ಲ” ಎಂದು ಪ್ರಶ್ನಿಸಿದ್ದಾರೆ.
“ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯು ಕೇವಲ ಮೇಲ್ನೋಟದ ಪ್ರಹಸನವಾಗಿದ್ದು, ಇಡೀ ಶಿಕ್ಷಣ ವ್ಯವಸ್ಥೆಯ ಆತ್ಮವನ್ನು ಆರ್‌ಎಸ್ಎಸ್ ತನ್ನ ವಶಕ್ಕೆ ತೆಗೆದುಕೊಂಡಿದೆ” ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಸದನದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಹುಲ್ ಗಾಂಧಿ, “ವಿರೋಧ ಪಕ್ಷದ ನಾಯಕನಾಗಿ ರೈತರ ಮತ್ತು ವಿದ್ಯಾರ್ಥಿಗಳ ಧ್ವನಿಯನ್ನು ಸಂಸತ್ತಿನಲ್ಲಿ ಎತ್ತುವುದು ನಮ್ಮ ಹಕ್ಕು. ಆದರೆ, ನಮಗೆ ಮಾತನಾಡಲು ಬಿಡಲಿಲ್ಲ. ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಕೇವಲ ಪೊಲೀಸರಷ್ಟೇ ಅಲ್ಲದೆ, ಸಿವಿಲ್ ಉಡುಪಿನಲ್ಲಿದ್ದ ವ್ಯಕ್ತಿಗಳೂ ಕೂಡ ಮಹಿಳೆಯರು ಮತ್ತು ಅಪ್ರಾಪ್ತ ಮಕ್ಕಳ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ವಿವರಣೆ ಕೋರಿ ಗೃಹ ಸಚಿವರಿಗೆ ಪತ್ರ ಬರೆದರೂ ಯಾವುದೇ ಉತ್ತರ ಬಂದಿಲ್ಲ. ಸರ್ಕಾರವು ಹೊರನೋಟಕ್ಕೆ ವಿದ್ಯಾರ್ಥಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಭರವಸೆ ನೀಡುತ್ತಿದ್ದರೂ, ಗೃಹ ಸಚಿವರು ಮುಖ ಗುರುತಿಸುವ ತಂತ್ರಜ್ಞಾನ ಬಳಸಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ಗುರುತಿಸಲಾದ ವಿದ್ಯಾರ್ಥಿಗಳ ಮೇಲೆ ಬಜರಂಗದಳದಂತಹ ಸಂಘಟನೆಗಳು ದಾಳಿ ನಡೆಸುತ್ತಿವೆ” ಎಂದು ಆರೋಪಿಸಿದ್ದಾರೆ.
“ಸಂಸತ್ತಿನಲ್ಲಿ ಅಂಗೀಕರಿಸಲಾದ ‘ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ವಿಧೇಯಕ’ವು ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ತಡೆಯುವ ವಿಧೇಯಕವಲ್ಲ, ಬದಲಿಗೆ ಕೇವಲ ಜನರನ್ನು ‘ಶಿಕ್ಷಿಸುವ ಉಪಕರಣ’ದಂತೆ ರೂಪುಗೊಂಡಿದೆ. ನಿಜವಾದ ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಕಾಯಿದೆಯು ಅಕ್ರಮ ನಡೆಯದಂತೆ ತಡೆಯಬೇಕು, ಕೇವಲ ಶಿಕ್ಷಿಸುವುದಷ್ಟೇ ಅದರ ಕೆಲಸವಾಗಬಾರದು” ಎಂದಿದ್ದಾರೆ.
“ಅಮಿತ್ ಶಾ ಅವರನ್ನು ‘ಹೀರೋ’ ಮತ್ತು ನರೇಂದ್ರ ಮೋದಿಯವರನ್ನು ‘ದೇವರು’ ಎಂಬಂತೆ ಬಿಂಬಿಸುವ ಪ್ರಯತ್ನಗಳು ನಡೆಯುತ್ತಿದ್ದವು. ಪ್ರಧಾನಿ ಮೋದಿ ಕ್ಯಾಮೆರಾ ಮುಂದೆ ಬಂದರೆ ಸಾಕು ಜನ್-ಝೀ ಜೊತೆ ಸಂವಹನ ನಡೆಸಬಹುದು ಎಂಬ ಭ್ರಮೆಯಿತ್ತು. ಆದರೆ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯದಿಂದಾಗಿ ಸರ್ಕಾರದ ಆ ಬಿಂಬತೆ ಸಂಪೂರ್ಣವಾಗಿ ಕಳಚಿಬಿದ್ದಿದೆ. ಯುವ ಸಮುದಾಯಕ್ಕೆ ಸತ್ಯದ ಅರಿವಾಗಿದ್ದು, ಹೋರಾಡುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ನ್ಯಾಯ ಸಿಗುವವರೆಗೂ ಕಾಂಗ್ರೆಸ್ ಪಕ್ಷ ಅವರ ಪರವಾಗಿ ನಿಲ್ಲಲಿದೆ” ಎಂದು ಅವರು ಭರವಸೆ ನೀಡಿದ್ದಾರೆ.



