- ವಿಜಯಪುರ ಜಿಲ್ಲೆಯಲ್ಲಿ 17 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದೆ
- ದ್ರಾಕ್ಷಿ ಬೆಳೆ ತೆಗೆಯಲು ಎಕರೆಗೆ ಸರಿಸುಮಾರು 3 ಲಕ್ಷ ರೂ. ವೆಚ್ಚವಾಗುತ್ತದೆ
ಗುಣಮಟ್ಟದ ದ್ರಾಕ್ಷಿ ಬೆಳೆಯುವಲ್ಲಿ ವಿಜಯಪುರ ಜಿಲ್ಲೆ ಹೆಸರುವಾಸಿ. ಅಲ್ಲಿನ ದ್ರಾಕ್ಷಿಗೆ ಬೇಡಿಕೆಯೂ ಹೆಚ್ಚು. ಈ ವರ್ಷ ಬೇಡಿಕೆ ಹೆಚ್ಚಿದ್ದರೂ, ಇಳುವರಿ ಕಡಿಮೆಯಾಗುತ್ತಿದೆ. ಅಲ್ಲಿನ ರೈತರಿಗೆ ದ್ರಾಕ್ಷಿ ಹುಳಿಯಾಗಿ ಮಾರ್ಪಟ್ಟಿವೆ. ಕಾರಣ, ಇತ್ತೀಚೆಗೆ ಸುರಿದ ಅಕಾಲಿಕ ಮಳೆ. ಅವಧಿಗೂ ಮುನ್ನವೇ ಸುರಿದ ಮಳೆಯಿಂದ ದ್ರಾಕ್ಷಿ ಬೆಳೆ ಹಾಳಾಗಿದೆ. ರೈತರು ನಷ್ಟ ಸುಳಿಗೆ ಸಿಲುಕಿ ಕಂಗಾಲಾಗಿದ್ದಾರೆ.
ಅಧಿಕಾರಿಗಳ ಪ್ರಕಾರ ವಿಜಯಪುರ ಜಿಲ್ಲೆಯಲ್ಲಿ 17 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದೆ. ಈ ಪೈಕಿ, ಸುಮಾರು 2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಸಂಪೂರ್ಣ ಹಾನಿಯಾಗಿದೆ. ಇದರ ಜೊತೆಗೆ, ಮಧ್ಯವರ್ತಿಗಳ ಹಾವಳಿ, ಒಣ ದ್ರಾಕ್ಷಿಯ ಬೆಲೆಯಲ್ಲಿನ ಏರಿಳಿತ ಮತ್ತು ಸಾಕಷ್ಟು ಕೋಲ್ಡ್ ಸ್ಟೋರೇಜ್ ಸೌಲಭ್ಯಗಳಿಲ್ಲದಿರುವುದು ರೈತರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.
ದ್ರಾಕ್ಷಿ ಬೆಳೆ ತೆಗೆಯಲು ಎಕರೆಗೆ ಸರಿಸುಮಾರು 3 ಲಕ್ಷ ರೂ. ವೆಚ್ಚವಾಗುತ್ತದೆ. ಈ ಹೂಡಿಕೆ ಹಣವನ್ನು ರೈತರು ಮರಳಿ ಪಡೆಯಲು ಕನಿಷ್ಠ ಮೂರು ವರ್ಷ ಬೇಕಾಗುತ್ತದೆ. ಅದರ ನಡುವೆ, ಅಕಾಲಿಕ ಮಳೆ ಅಥವಾ ಬರಗಳಂತಹ ಪ್ರಕೃತಿ ವಿಕೋಪಗಳು ಮತ್ತಷ್ಟು ನಷ್ಟ ಉಂಟುಮಾಡುತ್ತಿವೆ.
ವಿಜಯಪುರ ಜಿಲ್ಲೆಯ ಮಣ್ಣು ಮತ್ತು ಬಿಸಿಲಿನ ತಾಪ ದ್ರಾಕ್ಷಿ ಕೃಷಿಗೆ ಅನುಕೂಲಕರವಾಗಿದೆ. ಪಾದರಸ ಹೆಚ್ಚಾದಂತೆ ಹಣ್ಣಿನಲ್ಲಿ ಸಕ್ಕರೆ ಅಂಶವೂ ಹೆಚ್ಚುತ್ತದೆ. ಜಿಲ್ಲೆಯ ಬಾಬಾನಗರದಲ್ಲಿರುವ ಕುಲಕರ್ಣಿ ಎಂಬವರ ಕುಟುಂಬ 1980ರ ದಶಕದಲ್ಲಿ ದ್ರಾಕ್ಷಿ ಬೆಳೆಯನ್ನು ಜಿಲ್ಲೆಯಲ್ಲಿ ಬೆಳಯಲಾರಂಭಿಸಿತು. ವರ್ಷಗಳು ಕಳೆದಂತೆ ಜಿಲ್ಲೆಯ ಇತರೆ ಭಾಗಗಳಿಗೂ ದ್ರಾಕ್ಷಿ ಬೆಳೆ ವ್ಯಾಪಿಸಿತು. ಆದರೆ, ಎಕರೆಗೆ ಸರಾಸರಿ ಇಳುವರಿ ನಿರೀಕ್ಷೆಗಿಂತ ಕಡಿಮೆಯಾಗುತ್ತಿದೆ.
“ಬೆಳೆಯನ್ನು ರಕ್ಷಿಸುವುದು ಸವಾಲಾಗಿದೆ. ಮುಂಗಾರು ಮಳೆ ಅಗತ್ಯವಿದ್ದಷ್ಟು ಸುರಿಯದಿದ್ದಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಒದಗಿಸಬೇಕು. ಅಧಿಕ ಮಳೆಯಾಗಿ ಪ್ರವಾಹ ಉಂಟಾದರೆ, ಕೀಟನಾಶಕಗಳನ್ನು ಬಳಸಬೇಕು. ಈ ಎರಡೂ ಸನ್ನಿವೇಶಗಳು ಹೆಚ್ಚುವರಿ ಖರ್ಚಿಗೆ ಕಾರಣವಾಗುತ್ತವೆ. ಆರ್ಥಿಕ ಹೊರೆಯನ್ನು ಹೆಚ್ಚಿಸುತ್ತವೆ” ಎನ್ನುತ್ತಾರೆ ಬಬಲೇಶ್ವರದ ರೈತ ಮಲ್ಲಪ್ಪ.
ಈ ಸುದ್ದಿ ಓದಿದ್ದೀರಾ: ಉತ್ತರ ಕರ್ನಾಟಕದ ಅಭಿವೃದ್ಧಿಗೆ ಕಿತ್ತೂರು ಕರ್ನಾಟಕ ಮಂಡಳಿ ರಚನೆ: ಸಿಎಂ ಬೊಮ್ಮಾಯಿ
“ಈ ಬಾರಿ ಆಲಿಕಲ್ಲು ಸಹಿತ ಮಳೆಯಾಯಿತು. ಆಲಿಕಲ್ಲಿನ ಹೊಡೆತದಿಂದ ದ್ರಾಕ್ಷಿಗೆ ಹಾನಿಯಾಯಿತು. ಕಳೆದ 20 ವರ್ಷಗಳಲ್ಲಿ 12 ವರ್ಷಗಳಿಂದ ಬರ, ಎರಡು ವರ್ಷಗಳಿಂದ ಪ್ರವಾಹ, ಮೂರು ವರ್ಷಗಳಿಂದ ಅತಿವೃಷ್ಟಿ, ಅಕಾಲಿಕ ಮಳೆಯಾಗಿದೆ. ದ್ರಾಕ್ಷಿ ಬೆಳೆಯಲ್ಲಿ ‘ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ’ ಎಂಬಂತಾಗಿದೆ ನಮ್ಮ ಪರಿಸ್ಥಿತಿ” ಎಂದು ಮಲ್ಲಪ್ಪ ಹೇಳಿದರು.
ದ್ರಾಕ್ಷಿ ಕೃಷಿಯನ್ನು ಪ್ರೋತ್ಸಾಹಿಸುತ್ತೇವೆ ಎಂದಿರುವ ರಾಜ್ಯ ಸರ್ಕಾರ, ‘ದ್ರಾಕ್ಷಿ ಮತ್ತು ವೈನ್ಸ್ ಅಭಿವೃದ್ಧಿ ಮಂಡಳಿ’ಯನ್ನು ಸ್ಥಾಪಿಸಿದೆ. ಮಂಡಳಿಗೆ ದ್ರಾಕ್ಷಿ ಬೆಳೆಗಾರ ಎಂಎಸ್ ರುದ್ರಗೌಡ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದೆ.