ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ತಿಂಗಳುಗಟ್ಟಲೆ ಬೆವರು ಸುರಿಸಿ ಬೆಳೆದಿದ್ದ ಕಬ್ಬು ಕಟಾವಿಗೆ ಸಿದ್ಧವಾಗಿದ್ದ ಹೊತ್ತಿನಲ್ಲೇ ವಿದ್ಯುತ್ ಅವಘಡ ರೈತರ ಬದುಕಿಗೆ ಬೆಂಕಿಯಿಟ್ಟಿದೆ. ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ದಾಸೂರ ಗ್ರಾಮದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 10 ಎಕರೆಗೂ ಅಧಿಕ ಪ್ರದೇಶದ ಕಬ್ಬಿನ ಬೆಳೆ ಸುಟ್ಟು ಭಸ್ಮವಾಗಿದ್ದು, ರೈತರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ.
ಶನಿವಾರ ಸಂಜೆ ರೈತರ ಜಮೀನಿನಲ್ಲಿ ವಿದ್ಯುತ್ ಸ್ಪರ್ಶದಿಂದ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲೇ ಒಣಗಿದ ಕಬ್ಬಿನ ಎಲೆಗಳಿಗೆ ವ್ಯಾಪಿಸಿದ ಬೆಂಕಿ ಇಡೀ ಕಬ್ಬಿನ ಗದ್ದೆಯನ್ನು ಆವರಿಸಿದೆ. ಮಹೇಶ ರೇವಪ್ಪ ಅಂಕಲಗಿ, ಸತೀಶ ನಾರಾಯಣ ಸೀತೋಳೆ ಹಾಗೂ ಮನೋಜ್ ಕುಮಾರ್ ಸೀತೋಳೆ ಅವರಿಗೆ ಸೇರಿದ ಜಮೀನಿನ ಕಟಾವಿಗೆ ಬಂದಿದ್ದ ಕಬ್ಬು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಂಪೂರ್ಣ ನಾಶವಾಗಿದೆ.ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಸ್ಥಳೀಯರು ಅದನ್ನು ನಿಯಂತ್ರಿಸಲು ಹರಸಾಹಸಪಟ್ಟಿದ್ದಾರೆ. ಬೆಂಕಿ ನಂದಿಸುವ ಪ್ರಯತ್ನದ ನಡುವೆಯೇ ಟ್ರ್ಯಾಕ್ಟರ್ ಕೂಡ ಬೆಂಕಿಗೆ ಆಹುತಿಯಾಗಿದೆ.
ಬೆಂಕಿಯ ತೀವ್ರತೆಗೆ ಅಪಾರ ಪ್ರಮಾಣದ ಕೃಷಿ ಉತ್ಪನ್ನಗಳು ಹಾಗೂ ಕೃಷಿ ಪರಿಕರಗಳು ಸುಟ್ಟು ಕರಕಲಾಗಿವೆ.ಒಂದೆಡೆ ಬೆಳೆ ಬೆಳೆಯಲು ಮಾಡಿದ ಸಾಲ, ಮತ್ತೊಂದೆಡೆ ಕಟಾವಿನ ನಿರೀಕ್ಷೆಯಲ್ಲಿದ್ದ ಫಸಲು ಕಣ್ಣೆದುರೇ ಭಸ್ಮವಾಗಿರುವುದು ರೈತರನ್ನು ತೀವ್ರ ಸಂಕಷ್ಟಕ್ಕೆ ದೂಡಿದೆ.
ವಿದ್ಯುತ್ ಅವಘಡದಿಂದ ಸಂಭವಿಸಿದ ಈ ನಷ್ಟಕ್ಕೆ ಪರಿಹಾರ ಕಲ್ಪಿಸುವ ಹೊಣೆ ಸರ್ಕಾರದ ಮೇಲಿದೆ ಎಂಬ ಒತ್ತಾಯ ರೈತ ವಲಯದಿಂದ ಕೇಳಿಬಂದಿದೆ.ಘಟನೆಗೆ ಸಂಬಂಧಿಸಿದಂತೆ ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳೆ ನಷ್ಟದ ಸಮಗ್ರ ಸಮೀಕ್ಷೆ ನಡೆಸಿ ಸಂತ್ರಸ್ತ ರೈತರಿಗೆ ತಕ್ಷಣ ಸೂಕ್ತ ಪರಿಹಾರ ನೀಡಬೇಕು. ಕೃಷಿ ಪರಿಕರ ಹಾಗೂ ಟ್ರ್ಯಾಕ್ಟರ್‌ಗೆ ಉಂಟಾದ ನಷ್ಟವನ್ನೂ ಪರಿಗಣಿಸಿ ನೆರವು ಒದಗಿಸಬೇಕು ಎಂದು ರೈತರು ಹಾಗೂ ಹೋರಾಟಗಾರರು ಸರ್ಕಾರವನ್ನು ಆಗ್ರಹಿಸಿದ್ದಾರೆ.



