ಆಧುನಿಕ ಕಚೇರಿ ವ್ಯವಹಾರ ಮತ್ತು ಡಿಜಿಟಲ್ ಸಂವಹನದ ಬೆನ್ನೆಲುಬಂತಿರುವ ತಂತ್ರಜ್ಞಾನ ದೈತ್ಯ ಮೈಕ್ರೋಸಾಫ್ಟ್‌ನ ಸರ್ವರ್‌ಗಳಲ್ಲಿ ಕಾಣಿಸಿಕೊಂಡ ಅನಿರೀಕ್ಷಿತ ತಾಂತ್ರಿಕ ದೋಷವು ಜಾಗತಿಕ ಮಟ್ಟದಲ್ಲಿ ಭಾರಿ ಅಲ್ಲೋಲಕಲ್ಲೋಲ ಸೃಷ್ಟಿಸಿದೆ. ಗುರುವಾರ (ನವೆಂಬರ್ 12) ಸಂಜೆಯಿಂದ ಆರಂಭವಾದ ಈ ಬೃಹತ್ ಸರ್ವರ್ ಕ್ರಾಶ್ ಶುಕ್ರವಾರವೂ (ನವೆಂಬರ್ 13) ಮುಂದುವರೆದು, ಭಾರತ ಸೇರಿದಂತೆ ವಿಶ್ವದ 74ಕ್ಕೂ ಹೆಚ್ಚು ದೇಶಗಳ ಕೋಟ್ಯಂತರ ಬಳಕೆದಾರರು ಮೈಕ್ರೋಸಾಫ್ಟ್ 365, ಔಟ್‌ಲುಕ್ , ಟೀಮ್ಸ್ ಹಾಗೂ ಕೋಪೈಲಟ್ ಸೇವೆಗಳನ್ನು ಬಳಸಲಾಗದೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಸುಮಾರು 43 ಕೋಟಿ (430 ಮಿಲಿಯನ್) ಜನರು ಮೈಕ್ರೋಸಾಫ್ಟ್ ಸೇವೆಗಳನ್ನು ಅವಲಂಬಿಸಿದ್ದು, ಈ ದಿಢೀರ್ ಸ್ಥಗಿತವು ಜಾಗತಿಕ ಆಡಳಿತ, ಆರೋಗ್ಯ, ಸಾರಿಗೆ ಮತ್ತು ಕಾರ್ಪೊರೇಟ್ ವಲಯಕ್ಕೆ ದೊಡ್ಡ ಹೊಡೆತ ನೀಡಿದೆ.
ಸಮಸ್ಯೆ ಶುರುವಾಗಿದ್ದು ಹೇಗೆ?
ಗುರುವಾರ ಭಾರತೀಯ ಕಾಲಮಾನ ರಾತ್ರಿ ಸುಮಾರು 9:30ರ ಸುಮಾರಿಗೆ ಆರಂಭವಾದ ಈ ತಾಂತ್ರಿಕ ಅಡಚಣೆ, ಕೇವಲ ಒಂದು ಗಂಟೆಯ ಅವಧಿಯಲ್ಲಿ ಜಗತ್ತಿನ 74 ದೇಶಗಳಿಗೆ ವ್ಯಾಪಿಸಿತು. ಆರಂಭದಲ್ಲಿ ಅಮೆರಿಕ ಬಳಕೆದಾರರಿಗೆ ಮಾತ್ರ ಸೀಮಿತವಾಗಿದ್ದ ಸಮಸ್ಯೆ, ನೋಡನೋಡುತ್ತಿದ್ದಂತೆಯೇ ಯುರೋಪ್, ಏಷ್ಯಾ ಮತ್ತು ಆಸ್ಟ್ರೇಲಿಯಾ ಖಂಡಗಳಿಗೂ ಹಬ್ಬಿತು.
ಆನ್‌ಲೈನ್ ಸೇವೆಗಳ ಅಡಚಣೆಯನ್ನು ದಾಖಲಿಸುವ ‘ಡೌನ್‌ಡಿಟೆಕ್ಟರ್’ ವೆಬ್‌ಸೈಟ್‌ನಲ್ಲಿ ಸಮಸ್ಯೆ ಆರಂಭವಾದ ಕೆಲವೇ ಕ್ಷಣಗಳಲ್ಲಿ ದೂರುಗಳ ಸುರಿಮಳೆಯಾಯಿತು. ಗುರುವಾರ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಔಟ್‌ಲುಕ್ ಸಮಸ್ಯೆ ಕುರಿತು 1,38,058ಕ್ಕೂ ಅಧಿಕ ದೂರುಗಳು ದಾಖಲಾದವು. ಭಾರತದಲ್ಲೂ ಒಂದು ಲಕ್ಷಕ್ಕೂ ಹೆಚ್ಚು ಬಳಕೆದಾರರು ಇಮೇಲ್ ಕಳುಹಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗದೆ ಪರದಾಡಿದರು. ಗುರುವಾರ ಸಂಜೆಯ ವೇಳೆಗೆ ದೂರುಗಳ ಸಂಖ್ಯೆ 34,490ಕ್ಕೆ ಇಳಿದಿತ್ತಾದರೂ, ಶುಕ್ರವಾರ ಬೆಳಿಗ್ಗೆ ವೇಳೆಗೆ 72 ದೇಶಗಳಿಂದ ಮತ್ತೆ 43,000ಕ್ಕೂ ಹೆಚ್ಚು ಹೊಸ ದೂರುಗಳು ದಾಖಲಾಗುವ ಮೂಲಕ ಸಮಸ್ಯೆ ಇನ್ನೂ ಬಗೆಹರಿದಿಲ್ಲ ಎಂಬುದನ್ನು ಸಾಬೀತುಪಡಿಸಿತು.
ಈ ಜಾಗತಿಕ ಅಡಚಣೆಯು ಕೇವಲ ಇಮೇಲ್ ಸೇವೆಗೆ ಸೀಮಿತವಾಗದೆ, ಮೈಕ್ರೋಸಾಫ್ಟ್‌ನ ಇಡೀ ಡಿಜಿಟಲ್ ಪರಿಸರ ವ್ಯವಸ್ಥೆಯನ್ನೇ ಅಲುಗಾಡಿಸಿತು.
ಔಟ್‌ಲುಕ್ ಮತ್ತು ಎಕ್ಸ್‌ಚೇಂಜ್ ಆನ್‌ಲೈನ್ ಅತಿ ಹೆಚ್ಚು ಹೊಡೆತ ತಿಂದ ಸೇವೆಯಾಗಿದೆ. ವೆಬ್ ಬ್ರೌಸರ್, ಡೆಸ್ಕ್‌ಟಾಪ್ ಆ್ಯಪ್ ಹಾಗೂ ಮೊಬೈಲ್ ಫೋನ್‌ಗಳ ಮೂಲಕ ತಮ್ಮ ಇನ್‌ಬಾಕ್ಸ್ ತೆರೆಯಲು ವಾಣಿಜ್ಯ ಮತ್ತು ವೈಯಕ್ತಿಕ ಬಳಕೆದಾರರಿಗೆ ಸಾಧ್ಯವಾಗಲಿಲ್ಲ. ಕೆಲವರಿಗೆ ಇಮೇಲ್‌ಗಳು ಅತ್ಯಂತ ತಡವಾಗಿ ತಲುಪಿದವು.
ಮೈಕ್ರೋಸಾಫ್ಟ್ ಟೀಮ್ಸ್ : ಕಚೇರಿ ಕೆಲಸಗಳ ಸಂವಹನ ಮತ್ತು ವಿಡಿಯೋ ಮೀಟಿಂಗ್‌ಗಳಿಗೆ ಬಳಸುವ ‘ಟೀಮ್ಸ್’ ಆ್ಯಪ್ ಕೂಡ ಕೈಕೊಟ್ಟಿದ್ದು, ಬಳಕೆದಾರರಿಗೆ ಲಾಗಿನ್ ಆಗಲು ಮತ್ತು ಇತರರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಅಚ್ಚರಿಯೆಂದರೆ, ಇದಕ್ಕೂ ಕೆಲವೇ ಗಂಟೆಗಳ ಮುನ್ನವಷ್ಟೇ ಉತ್ತರ ಅಮೆರಿಕದಲ್ಲಿ ಟೀಮ್ಸ್‌ನಲ್ಲಿ ಕಾಣಿಸಿಕೊಂಡಿದ್ದ ಪ್ರತ್ಯೇಕ ತಾಂತ್ರಿಕ ದೋಷವೊಂದನ್ನು ಮೈಕ್ರೋಸಾಫ್ಟ್ ಸರಿಪಡಿಸಿತ್ತು. ಆದರೆ, ಆ ಸಮಸ್ಯೆ ಬಗೆಹರಿದ ಬೆನ್ನಲ್ಲೇ ಈ ಜಾಗತಿಕ ಮಹಾ ಕುಸಿತ ಸಂಭವಿಸಿದೆ.
ಆಫೀಸ್ ಮತ್ತು ಕ್ಲೌಡ್ ಸೇವೆಗಳು: ವರ್ಡ್ , ಎಕ್ಸೆಲ್ , ಪವರ್‌ಪಾಯಿಂಟ್ , ಫೈಲ್ ಹಂಚಿಕೆ ವೇದಿಕೆ ಶೇರ್‌ಪಾಯಿಂಟ್ ಆನ್‌ಲೈನ್ ಹಾಗೂ ಕ್ಲೌಡ್ ಸ್ಟೋರೇಜ್ ಸೇವೆ ಒನ್‌ಡ್ರೈವ್ ಕಾರ್ಯನಿರ್ವಹಣೆಯಲ್ಲೂ ಭಾರಿ ವ್ಯತ್ಯಯ ಉಂಟಾಯಿತು.
ಮೈಕ್ರೋಸಾಫ್ಟ್ ಡಿಫೆಂಡರ್ ಎಕ್ಸ್‌ಡಿಆರ್ , ಡಿಫೆಂಡರ್ ಫಾರ್ ಆಫೀಸ್ 365, ಮೈಕ್ರೋಸಾಫ್ಟ್ ಪ್ಲಾನರ್, ಮೈಕ್ರೋಸಾಫ್ಟ್ ಟು-ಡು , ಇನ್‌ಟ್ಯೂನ್ ಹಾಗೂ ಮೈಕ್ರೋಸಾಫ್ಟ್ ಪರ್ವ್ಯೂ ಅಡಿಯಲ್ಲಿ ಬರುವ ಡೇಟಾ ಲಾಸ್ ಪ್ರಿವೆನ್ಷನ್ , ಆಟೋ-ಲೇಬಲಿಂಗ್ ಮತ್ತು ಡೇಟಾ ವರ್ಗೀಕರಣ ಸೇವೆಗಳಿಗೂ ಅಡ್ಡಿಯಾಯಿತು. ಅಷ್ಟೇ ಅಲ್ಲದೆ, ಐಟಿ ಆಡಳಿತಗಾರರಿಗೆ ‘ಅಡ್ಮಿನ್ ಸೆಂಟರ್’ ತೆರೆಯಲೂ ಸಾಧ್ಯವಾಗದ ಕಾರಣ, ಮೈಕ್ರೋಸಾಫ್ಟ್ ಸಾಮಾಜಿಕ ಜಾಲತಾಣ ‘ಎಕ್ಸ್’ (X) ಮೂಲಕ ಮಾಹಿತಿ ಹಂಚಿಕೊಳ್ಳಬೇಕಾಯಿತು.
ಮೈಕ್ರೋಸಾಫ್ಟ್‌ನ ಎಐ ಸಹಾಯಕ ‘ಕೋಪೈಲಟ್’ ಮಾತ್ರವಲ್ಲದೆ, ಮೈಕ್ರೋಸಾಫ್ಟ್ 365 ಕನೆಕ್ಟರ್‌ಗಳನ್ನು ಅವಲಂಬಿಸಿರುವ ಪ್ರಮುಖ ಎಐ ಕಂಪನಿಗಳಾದ ‘ಓಪನ್ ಎಐ’ ಮತ್ತು ‘ಆಂಥ್ರೋಪಿಕ್’ ಸಂಸ್ಥೆಗಳ ಪರಿಕರಗಳ ಕಾರ್ಯನಿರ್ವಹಣೆಯಲ್ಲೂ ಏರುಪೇರಾಗಿರುವುದಾಗಿ ಆಯಾ ಕಂಪನಿಗಳು ಖಚಿತಪಡಿಸಿವೆ.
ಈ ತಾಂತ್ರಿಕ ವೈಫಲ್ಯವು ಕೇವಲ ಖಾಸಗಿ ಕಂಪನಿಗಳ ಕೆಲಸಕ್ಕೆ ಅಡ್ಡಿಪಡಿಸಲಿಲ್ಲ, ಬದಲಾಗಿ ವಿವಿಧ ದೇಶಗಳ ಸರ್ಕಾರಿ ಮತ್ತು ತುರ್ತು ಸೇವೆಗಳ ಮೇಲೂ ನೇರ ಪರಿಣಾಮ ಬೀರಿತು.
ಬ್ರಿಟನ್ : ಬ್ರಿಟನ್‌ನ ರಾಷ್ಟ್ರೀಯ ಆರೋಗ್ಯ ಸೇವೆಯ (NHS) ದೈನಂದಿನ ಕಾರ್ಯಾಚರಣೆಗಳ ಮೇಲೆ ಈ ಅಡಚಣೆಯು “ಗಂಭೀರ ಪರಿಣಾಮ” ಬೀರಿದೆ ಎಂದು ಕಾರ್ಮಿಕ ಸಂಘಟನೆಯ ನಾಯಕರೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.
ಜರ್ಮನಿ: ಜರ್ಮನಿಯ ರೈಲ್ವೆ ನಿರ್ವಾಹಕ ಸಂಸ್ಥೆ ‘ಡಾಯ್ಚ ಬಾನ್’ ಮಾರ್ಗ ಬದಲಾಯಿಸಿದ ರೈಲುಗಳ ವೇಳಾಪಟ್ಟಿಯನ್ನು ರವಾನಿಸಲು ತೀವ್ರ ತೊಂದರೆ ಅನುಭವಿಸಿತು. ಜರ್ಮನಿಯ ಡಿಜಿಟಲ್ ವ್ಯವಹಾರಗಳ ಸಚಿವಾಲಯದ ಪ್ರಕಾರ, ಫೆಡರಲ್ ಸರ್ಕಾರದ ಕೆಲಸಗಳಿಗೆ ಹೆಚ್ಚಿನ ತೊಂದರೆಯಾಗದಿದ್ದರೂ, ದೇಶದ ವಾಣಿಜ್ಯ ಮತ್ತು ಉದ್ಯಮ ವಲಯಕ್ಕೆ ಭಾರಿ ನಷ್ಟವಾಗಿದೆ.
ಏಷ್ಯಾ ಮತ್ತು ಆಸ್ಟ್ರೇಲಿಯಾ: ಸಿಂಗಾಪುರ ಮತ್ತು ಜಪಾನ್‌ನ ಸರ್ಕಾರಿ ವ್ಯವಸ್ಥೆಗಳು ಅಸ್ತವ್ಯಸ್ತಗೊಂಡವು. ಫಿಲಿಪೈನ್ಸ್ ಸುಪ್ರೀಂ ಕೋರ್ಟ್‌ನ ಸಂವಹನ ಜಾಲಕ್ಕೆ ಅಡ್ಡಿಯಾಯಿತು. ಇನ್ನು ಆಸ್ಟ್ರೇಲಿಯಾದಲ್ಲಿ ದೇಶದ ಫೆಡರಲ್ ಪೊಲೀಸ್ ಮತ್ತು ಗುಪ್ತಚರ ಸಂಸ್ಥೆಗಳ ದೈನಂದಿನ ಸಂವಹನಕ್ಕೂ ಈ ಸರ್ವರ್ ಕ್ರಾಶ್ ಬಿಸಿ ಮುಟ್ಟಿಸಿದೆ.
ಜಗತ್ತಿನಾದ್ಯಂತ ಏಕಕಾಲಕ್ಕೆ ಇಷ್ಟೊಂದು ದೊಡ್ಡ ಮಟ್ಟದ ಕುಸಿತ ಕಂಡುಬಂದಾಗ ಸಹಜವಾಗಿಯೇ ಸೈಬರ್ ದಾಳಿಯ ಶಂಕೆ ವ್ಯಕ್ತವಾಗಿತ್ತು. ಆದರೆ, ಮೈಕ್ರೋಸಾಫ್ಟ್ ಈ ವದಂತಿಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದೆ. ಮೈಕ್ರೋಸಾಫ್ಟ್‌ನ ಕೋಪೈಲಟ್ ಮತ್ತು ಪ್ಲಾಟ್‌ಫಾರ್ಮ್ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಚಾರ್ಲ್ಸ್ ಲಾಮನ್ನಾ ಹಾಗೂ ಕಂಪನಿಯ ವಕ್ತಾರರು, “ಇದು ಯಾವುದೇ ಸೈಬರ್ ದಾಳಿ ಅಥವಾ ದುರುದ್ದೇಶಪೂರಿತ ಕೃತ್ಯವಲ್ಲ ಎಂಬುದನ್ನು ನಾವು ಖಚಿತಪಡಿಸುತ್ತೇವೆ,” ಎಂದಿದ್ದಾರೆ.
ಆರಂಭದಲ್ಲಿ ಮೈಕ್ರೋಸಾಫ್ಟ್ ತನ್ನ ಸರ್ವರ್‌ಗಳ ಮೇಲೆ ವಿಪರೀತ ಒತ್ತಡ ಬಿದ್ದಿದೆ ಎಂದು ಹೇಳಿತ್ತು. ಆದರೆ ನಂತರ ಸ್ಪಷ್ಟನೆ ನೀಡಿದ ಸಂಸ್ಥೆ, “ಬಳಕೆದಾರರ ಸಂಖ್ಯೆ ದಿಢೀರ್ ಹೆಚ್ಚಾದ ಕಾರಣದಿಂದ ಈ ಒತ್ತಡ ಸೃಷ್ಟಿಯಾಗಿಲ್ಲ. ಬದಲಾಗಿ, ನಮ್ಮ ಜಾಲದಲ್ಲಿದ್ದ ಅನೇಕ ಸರ್ವರ್‌ಗಳು ಅನಿರೀಕ್ಷಿತವಾಗಿ ನಿಷ್ಕ್ರಿಯಗೊಂಡಿದ್ದರಿಂದ, ಉಳಿದ ಸಕ್ರಿಯ ಸರ್ವರ್‌ಗಳ ಮೇಲೆ ವಿಪರೀತ ಒತ್ತಡ ಬಿದ್ದಿದೆ” ಎಂದು ವಿವರಿಸಿದೆ.
ಸರ್ವರ್‌ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂದು ಪರಿಶೀಲಿಸುವ ಸ್ವಯಂಚಾಲಿತ ‘ಹೆಲ್ತ್ ಚೆಕ್’ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದೇ ಈ ಸರಣಿ ವೈಫಲ್ಯಕ್ಕೆ ಕಾರಣವಾಗಿದೆ. ಈ ತಪಾಸಣೆಯಲ್ಲಿ ದೋಷ ಕಂಡುಬಂದ ಸರ್ವರ್‌ಗಳು ತಾವಾಗಿಯೇ ಸ್ಥಗಿತಗೊಂಡಿವೆ. ಆಸ್ಟ್ರೇಲಿಯಾದ ಗೃಹ ಸಚಿವ ಟೋನಿ ಬರ್ಕ್ ಮಾತನಾಡಿ, “2024ರಲ್ಲಿ ‘ಕ್ರೌಡ್‌ಸ್ಟ್ರೈಕ್’ ಸಂಸ್ಥೆಯಲ್ಲಿ ಸಂಭವಿಸಿದಂತೆ, ದೋಷಪೂರಿತ ಸಾಫ್ಟ್‌ವೇರ್ ಅಪ್‌ಡೇಟ್ ಒಂದರಿಂದ ಈ ಸಮಸ್ಯೆ ಉಂಟಾಗಿರಬಹುದು ಎಂದು ಮೈಕ್ರೋಸಾಫ್ಟ್ ಶಂಕಿಸಿದೆ,” ಎಂದು ತಿಳಿಸಿದ್ದಾರೆ. ಶುಕ್ರವಾರ ಮೈಕ್ರೋಸಾಫ್ಟ್ ತನ್ನ ನೆಟ್‌ವರ್ಕ್ ಬದಲಾವಣೆಯೊಂದನ್ನು ಹಿಂಪಡೆಯುವ ಪ್ರಕ್ರಿಯೆ ಆರಂಭಿಸಿದ್ದರೂ, ಅದೇ ಬದಲಾವಣೆ ಸಮಸ್ಯೆಗೆ ಕಾರಣವೇ ಎಂಬುದನ್ನು ಅಧಿಕೃತವಾಗಿ ಒಪ್ಪಿಕೊಂಡಿಲ್ಲ.
ಸಮಸ್ಯೆಯನ್ನು ಬಗೆಹರಿಸಲು ಮೈಕ್ರೋಸಾಫ್ಟ್ ಎಂಜಿನಿಯರ್‌ಗಳು ಎಲ್ಲಾ ಹೊಸ ಸಾಫ್ಟ್‌ವೇರ್ ಅಪ್‌ಡೇಟ್‌ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರು. ಒತ್ತಡದಿಂದ ನಿಷ್ಕ್ರಿಯಗೊಂಡ ಸರ್ವರ್‌ಗಳಿಂದ ಬೇರೆ ಸರ್ವರ್‌ಗಳಿಗೆ ವರ್ಗಾಯಿಸಿ, ನಿಂತುಹೋಗಿದ್ದ ಸರ್ವರ್‌ಗಳನ್ನು ರೀಸ್ಟಾರ್ಟ್ ಮಾಡುವ ಕಾರ್ಯಕ್ಕೆ ಕೈಹಾಕಿದರು. ಆದರೆ, ಎಂಜಿನಿಯರ್‌ಗಳು ಅಂದುಕೊಂಡಂತೆ ಪರಿಸ್ಥಿತಿ ಸುಧಾರಿಸಲಿಲ್ಲ. “ಸೇವೆಯನ್ನು ಸುಧಾರಿಸಲು ನಾವು ಮಾಡಿದ ಬದಲಾವಣೆಗಳು ನಿರೀಕ್ಷಿತ ಫಲಿತಾಂಶ ನೀಡುತ್ತಿಲ್ಲ,” ಎಂದು ಮೈಕ್ರೋಸಾಫ್ಟ್ ಶುಕ್ರವಾರ ಮುಂಜಾನೆ ತನ್ನ ಸ್ಟೇಟಸ್ ಪೇಜ್‌ನಲ್ಲಿ ಅಸಹಾಯಕತೆ ವ್ಯಕ್ತಪಡಿಸಿತು.
ಈ ಕುರಿತು ವಿವರಿಸಿದ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಸಂಶೋಧಕ ವಾಲ್ಟರ್ ಪಾಸ್ಕ್ವಾರೆಲ್ಲಿ, “ನಾಲ್ಕು ಪಥಗಳ ಹೆದ್ದಾರಿಯಲ್ಲಿ ದಿಢೀರನೆ ಎರಡು ಪಥಗಳು ಮುಚ್ಚಿಹೋದರೆ ಹೇಗೆ ಭಾರಿ ಟ್ರಾಫಿಕ್ ಜಾಮ್ ಆಗುತ್ತದೆಯೋ, ಮೈಕ್ರೋಸಾಫ್ಟ್ ಸರ್ವರ್‌ಗಳ ಸ್ಥಿತಿಯೂ ಹಾಗೆಯೇ ಆಗಿದೆ,” ಎಂದಿದ್ದಾರೆ. ತಂತ್ರಜ್ಞಾನ ವಿಶ್ಲೇಷಕ ರೂಪರ್ಟ್ ಗುಡ್‌ವಿನ್ಸ್ ಪ್ರಕಾರ, “ರೀಸ್ಟಾರ್ಟ್ ಮಾಡಿದ ಸರ್ವರ್‌ಗಳು ಮತ್ತೆ ಆನ್‌ಲೈನ್‌ಗೆ ಬಂದ ತಕ್ಷಣ, ಇತರ ಸರ್ವರ್‌ಗಳು ತಮ್ಮಲ್ಲಿದ್ದ ಬಾಕಿ ಡೇಟಾವನ್ನು ಸಿಂಕ್ರೊನೈಸ್ ಮಾಡಲು ಒಮ್ಮೆಲೇ ಮುಗಿಬೀಳುತ್ತಿವೆ. ಈ ದಿಢೀರ್ ಒತ್ತಡವನ್ನು ತಾಳಲಾರದೆ ಸರ್ವರ್‌ಗಳು ಮತ್ತೆ ಮತ್ತೆ ಕ್ರಾಶ್ ಆಗುತ್ತಿವೆ.” ಸದ್ಯಕ್ಕೆ ಪರ್ಯಾಯ ಹೆಲ್ತ್-ಚೆಕ್ ವಿಧಾನವನ್ನು ಪರೀಕ್ಷಿಸುತ್ತಿರುವ ಮೈಕ್ರೋಸಾಫ್ಟ್, ಸೇವೆಗಳು ಒಮ್ಮೆಲೇ ಸರಿಯಾಗುವ ಬದಲು ಹಂತ ಹಂತವಾಗಿ ಚೇತರಿಸಿಕೊಳ್ಳಲಿವೆ ಎಂದು ತಿಳಿಸಿದೆ.
ಮೈಕ್ರೋಸಾಫ್ಟ್‌ಗೆ ಈ ವರ್ಷ ಎದುರಾದ ಮೂರನೇ ಪ್ರಮುಖ ಆಘಾತವಿದು. ಈ ಹಿಂದೆ ಜನವರಿ ತಿಂಗಳಲ್ಲಿ ಉತ್ತರ ಅಮೆರಿಕದಲ್ಲಿ ಸುಮಾರು 10 ಗಂಟೆಗಳ ಕಾಲ ಮೈಕ್ರೋಸಾಫ್ಟ್ 365 ಸ್ಥಗಿತಗೊಂಡಿತ್ತು. ಆಗಸ್ಟ್ ಅಂತ್ಯದಲ್ಲಿ ಮತ್ತು ಸೆಪ್ಟೆಂಬರ್ ತಿಂಗಳಲ್ಲೂ ದೃಢೀಕರಣ ದೋಷದಿಂದ ಸಾವಿರಾರು ಬಳಕೆದಾರರು ದಿನಗಟ್ಟಲೆ ತಮ್ಮ ಖಾತೆಗಳಿಂದ ಲಾಕ್‌ಔಟ್ ಆಗಿದ್ದರು. 2025ರ ಅಕ್ಟೋಬರ್‌ನಲ್ಲಿ ಅಮೆಜಾನ್ ವೆಬ್ ಸರ್ವೀಸಸ್ ಹಾಗೂ 2024ರ ಜುಲೈನಲ್ಲಿ ಕ್ರೌಡ್‌ಸ್ಟ್ರೈಕ್ ವೈಫಲ್ಯದಿಂದ ಜಗತ್ತು ಇಂತಹದ್ದೇ ಸಂಕಷ್ಟ ಎದುರಿಸಿತ್ತು.
ಈ ಘಟನೆಯ ಕುರಿತು ಗಂಭೀರ ವಿಶ್ಲೇಷಣೆ ಮಾಡಿರುವ ರೂಪರ್ಟ್ ಗುಡ್‌ವಿನ್ಸ್, “ಮೈಕ್ರೋಸಾಫ್ಟ್ ಇತ್ತೀಚಿನ ದಿನಗಳಲ್ಲಿ ತನ್ನ ಸಂಪೂರ್ಣ ಗಮನ ಮತ್ತು ಹೂಡಿಕೆಯನ್ನು ಎಐ (AI) ತಂತ್ರಜ್ಞಾನದ ಮೇಲೆ ಕೇಂದ್ರೀಕರಿಸಿದೆ. ಇದರಿಂದಾಗಿ ಔಟ್‌ಲುಕ್ ಮತ್ತು ಟೀಮ್ಸ್‌ನಂತಹ ಅತ್ಯಗತ್ಯ ಸೇವೆಗಳ ನಿರ್ವಹಣೆಯನ್ನು ಕಡೆಗಣಿಸಲಾಗಿದೆ. ಜೊತೆಗೆ, ಈ ವ್ಯವಸ್ಥೆಗಳನ್ನು ಕಟ್ಟಿ ಬೆಳೆಸಿದ ಅನುಭವಿ ಹಿರಿಯ ಎಂಜಿನಿಯರ್‌ಗಳು ಸಂಸ್ಥೆ ತೊರೆದಿರುವುದು ಕೂಡ ಬಿಕ್ಕಟ್ಟನ್ನು ತ್ವರಿತವಾಗಿ ಬಗೆಹರಿಸಲು ಅಡ್ಡಿಯಾಗಿದೆ. ವಿಪರ್ಯಾಸವೆಂದರೆ, ಇಷ್ಟೆಲ್ಲಾ ಎಐ ತಂತ್ರಜ್ಞಾನ ಹೊಂದಿರುವ ಮೈಕ್ರೋಸಾಫ್ಟ್ ಬಳಿ ತನ್ನದೇ ನೆಟ್‌ವರ್ಕ್ ಸರಿಪಡಿಸುವಂತಹ ಎಐ ಇಲ್ಲವಾಗಿದೆ,” ಎಂದು ವ್ಯಂಗ್ಯವಾಡಿದ್ದಾರೆ.
ಇನ್ನೊಂದೆಡೆ, ಅಮೆರಿಕದ ಟೆಕ್ ದೈತ್ಯರ ಮೇಲಿನ ಅತಿಯಾದ ಅವಲಂಬನೆಯನ್ನು ತಗ್ಗಿಸಿ, ತನ್ನದೇ ಆದ ‘ಡಿಜಿಟಲ್ ಸಾರ್ವಭೌಮತ್ವ’ ಸಾಧಿಸಲು ಹೊರಟಿರುವ ಯುರೋಪ್ ರಾಷ್ಟ್ರಗಳ ವಾದಕ್ಕೆ ಈ ಘಟನೆ ಮತ್ತಷ್ಟು ಬಲ ನೀಡಿದೆ. ಇತ್ತೀಚೆಗಷ್ಟೇ ಫ್ರಾನ್ಸ್ ಪ್ರಧಾನಿ ಸೆಬಾಸ್ಟಿಯನ್ ಲೆಕಾರ್ನು ಸರ್ಕಾರಿ ಅಧಿಕಾರಿಗಳು ಜೂಮ್ ಮತ್ತು ಅಮೆರಿಕದ ವಿಡಿಯೋ ಕಾನ್ಫರೆನ್ಸಿಂಗ್ ಸಾಫ್ಟ್‌ವೇರ್‌ಗಳ ಬದಲು ಫ್ರೆಂಚ್ ಸಾಫ್ಟ್‌ವೇರ್ ಬಳಸುವಂತೆ ಸೂಚಿಸಿದ್ದರು. ಸದ್ಯಕ್ಕೆ ಪರವಾನಗಿ ಒಪ್ಪಂದಗಳಿಗೆ ಕಟ್ಟುಬಿದ್ದಿರುವ ಕಂಪನಿಗಳು ತಕ್ಷಣವೇ ಮೈಕ್ರೋಸಾಫ್ಟ್ ತೊರೆಯದಿದ್ದರೂ, ಭವಿಷ್ಯದಲ್ಲಿ ಪರ್ಯಾಯ ಡಿಜಿಟಲ್ ವ್ಯವಸ್ಥೆಗಳತ್ತ ಮುಖ ಮಾಡುವ ಚರ್ಚೆಗಂತೂ ಈ ಮಹಾ ಕುಸಿತ ನಾಂದಿ ಹಾಡಿದೆ.



