ಒಬಿಸಿ ಮೀಸಲಾತಿ ಮತ್ತು ಕೆನೆಪದರ: ಸುಪ್ರೀಂನ ಮಾರ್ಚ್ ತೀರ್ಪಿನ ಹಿನ್ನೆಲೆಯೇನು? ಪ್ರಸ್ತುತ ಮಹತ್ವವೇನು?

Date:

ಒಬಿಸಿ ಮೀಸಲಾತಿ ಸೌಲಭ್ಯ ಪಡೆಯಲು 'ಕೆನೆಪದರ' ನಿರ್ಧರಿಸುವಾಗ ಕೇವಲ ಪೋಷಕರ ವಾರ್ಷಿಕ ವೇತನವನ್ನೇ ಏಕೈಕ ಮಾನದಂಡವಾಗಿ ಪರಿಗಣಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ಮಾರ್ಚ್ ತೀರ್ಪನ್ನು ಪುನರುಚ್ಚರಿಸಿದೆ. 1993ರ ಮೂಲ ನಿಯಮಗಳೇನು? ಕೆಳಹಂತದ ಸರ್ಕಾರಿ ನೌಕರರ ಮಕ್ಕಳಿಗೆ ಇದರಿಂದಾಗುವ ಲಾಭವೇನು?

ಸಾಮಾಜಿಕ ನ್ಯಾಯ ಮತ್ತು ಮೀಸಲಾತಿ ವ್ಯವಸ್ಥೆಯಲ್ಲಿ ‘ಕೆನೆಪದರ’ (Creamy Layer) ಎಂಬ ಪರಿಕಲ್ಪನೆಯು ಅತ್ಯಂತ ಸೂಕ್ಷ್ಮ, ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಇತರ ಹಿಂದುಳಿದ ವರ್ಗಗಳ (ಒಬಿಸಿ) ಮೀಸಲಾತಿಯನ್ನು ಅತ್ಯಂತ ಹಿಂದುಳಿದ ಮತ್ತು ಅವಕಾಶವಂಚಿತರಿಗೆ ಅರ್ಹ ಸೌಲಭ್ಯವನ್ನು ನೀಡುವ ಉದ್ದೇಶದಿಂದ ರೂಪಿಸಲಾದ ನಿಯಮ. ಆದರೆ, ಕಳೆದ ಹಲವು ವರ್ಷಗಳಿಂದ ನೇಮಕಾತಿ ಪ್ರಾಧಿಕಾರಗಳು ಮತ್ತು ಆಡಳಿತ ಯಂತ್ರವು ಕೇವಲ ಅಭ್ಯರ್ಥಿಯ ಪೋಷಕರ ವಾರ್ಷಿಕ ವೇತನವನ್ನೇ ಮಾನದಂಡವಾಗಿಟ್ಟುಕೊಂಡು, ಅರ್ಹ ಅಭ್ಯರ್ಥಿಗಳಿಗೆ ‘ನಾನ್-ಕ್ರೀಮಿ ಲೇಯರ್’ (OBC-NCL) ಪ್ರಮಾಣಪತ್ರವನ್ನು ನಿರಾಕರಿಸುತ್ತಿದ್ದ ಪ್ರಕರಣಗಳು ಹೆಚ್ಚಾಗಿದ್ದವು.

- Advertisement -

ಈ ಕಾನೂನು ಗೊಂದಲಕ್ಕೆ ತೆರೆ ಎಳೆಯುವ ನಿಟ್ಟಿನಲ್ಲಿ, 2026ರ ಮಾರ್ಚ್ 11ರಂದು ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಮತ್ತು ನ್ಯಾಯಮೂರ್ತಿ ಆರ್. ಮಹಾದೇವನ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು (Union of India v. Rohith Nathan ಪ್ರಕರಣ) ಒಂದು ಐತಿಹಾಸಿಕ ತೀರ್ಪನ್ನು ನೀಡಿತ್ತು. “ಒಬಿಸಿ ಕೆನೆಪದರವನ್ನು ನಿರ್ಧರಿಸಲು ಪೋಷಕರ ವೇತನದ ಆದಾಯವೊಂದನ್ನೇ ಏಕೈಕ ಆಧಾರವಾಗಿ ಪರಿಗಣಿಸಲು ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿದ್ದ ಸುಪ್ರೀಂ ಕೋರ್ಟ್, 2026ರ ನವೆಂಬರ್ 6ರಂದು ಕೇಂದ್ರ ಸರ್ಕಾರದ ಅರ್ಜಿಯ ವಿಚಾರಣೆ ವೇಳೆ ತನ್ನದೇ ಮಾರ್ಚ್ ತೀರ್ಪನ್ನು ಮತ್ತೊಮ್ಮೆ ದೃಢವಾಗಿ ಪುನರುಚ್ಚರಿಸಿದೆ. ಈ ತೀರ್ಪನ್ನು ಅರ್ಥ ಮಾಡಿಕೊಳ್ಳಬೇಕಾದರೆ ಏನಿದು ಕೆನೆಪದರ ತೀರ್ಪು? ಪರಿಕಲ್ಪನೆಯ ಐತಿಹಾಸಿಕ ಹಿನ್ನೆಲೆ, ತೀರ್ಪಿನ ಮಹತ್ವವನ್ನು ತಿಳಿಯುವುದು ಮುಖ್ಯ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೈಕ್ರೋಸಾಫ್ಟ್‌ ಸರ್ವರ್ ಕ್ರಾಶ್; ತಲ್ಲಣಗೊಂಡ ಆನ್‌ ಲೈನ್‌ ಜಗತ್ತು!

ಆಧುನಿಕ ಕಚೇರಿ ವ್ಯವಹಾರ ಮತ್ತು ಡಿಜಿಟಲ್ ಸಂವಹನದ ಬೆನ್ನೆಲುಬಂತಿರುವ ತಂತ್ರಜ್ಞಾನ ದೈತ್ಯ ಮೈಕ್ರೋಸಾಫ್ಟ್‌ನ ಸರ್ವರ್‌ಗಳಲ್ಲಿ ಕಾಣಿಸಿಕೊಂಡ ಅನಿರೀಕ್ಷಿತ ತಾಂತ್ರಿಕ ದೋಷವು ಜಾಗತಿಕ ಮಟ್ಟದಲ್ಲಿ ಭಾರಿ ಅಲ್ಲೋಲಕಲ್ಲೋಲ ಸೃಷ್ಟಿಸಿದೆ. ಗುರುವಾರ (ನವೆಂಬರ್ 12) ಸಂಜೆಯಿಂದ...

ಸ್ಮರಣೆ | ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೇ ಜೈಲುಶಿಕ್ಷೆ ವಿಧಿಸಿ,...

ನ್ಯಾಯಮೂರ್ತಿಗಳ ವಿರುದ್ಧ ಜಾತಿ ತಾರತಮ್ಯದ ಆರೋಪ ಮಾಡಿ, ನ್ಯಾಯಾಂಗದೊಂದಿಗಿನ ಸಂಘರ್ಷ ನಡೆಸಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗೇ ಐದು ವರ್ಷಗಳ ಶಿಕ್ಷೆಯ ಆದೇಶ ಹೊರಡಿಸಿ, ಕೊನೆಗೆ ತಾವೇ ಆರು ತಿಂಗಳ ಜೈಲುವಾಸ ಅನುಭವಿಸಿದ್ದವರು,...

ಡಿ.ಡಿ. ಕೋಸಾಂಬಿ | ಜ್ಞಾನದ ಹಲವು ಜಗತ್ತುಗಳನ್ನು ಶೋಧಿಸಿದ...

ಡಿ.ಡಿ. ಕೋಸಾಂಬಿಯವರ ಬದುಕು ಕೇವಲ ಯಶಸ್ಸಿನ ಕಥೆಯಷ್ಟೇ ಅಲ್ಲ; ಅದು ಅಸಾಧಾರಣ ಪ್ರತಿಭೆ ಹಾಗೂ ಮನುಷ್ಯ ಸಹಜ ಭಾವನೆಗಳ ನಡುವಿನ ಸುಂದರ ಪಯಣ. ತಮಿಳು ಇತಿಹಾಸಕಾರ ಎ.ಆರ್. ವೆಂಕಟಾಚಲಪತಿ ಅವರಂತಹ ವಿಮರ್ಶಕರು ಈ...

ಇದನ್ನೂ ಓದಿ: ಒಬಿಸಿ ‘ಕೆನೆಪದರ’ ನಿಯಮ: ಸಿಎಸ್‌ಇ 2025ರ ಕುರಿತು ಸುಪ್ರೀಂ ಸ್ಪಷ್ಟನೆ ಕೋರಿದ ಕೇಂದ್ರ

‘ಕೆನೆಪದರ’ (Creamy Layer) ಪರಿಕಲ್ಪನೆಯ ಐತಿಹಾಸಿಕ ಹಿನ್ನೆಲೆ

1992ರ ಐತಿಹಾಸಿಕ ಇಂದಿರಾ ಸಾಹ್ನಿ Vs ಭಾರತ ಒಕ್ಕೂಟ (ಮಂಡಲ್ ಆಯೋಗದ ಪ್ರಕರಣ) ತೀರ್ಪಿನಿಂದ ಮೊದಲ ಬಾರಿಗೆ ಈ ಕೆನೆಪದರದ ಕಲ್ಪನೆಯು ಹುಟ್ಟಿಕೊಂಡಿತು. ಒಬಿಸಿ ಸಮುದಾಯಗಳಿಗೆ ಶೇ. 27ರಷ್ಟು ಮೀಸಲಾತಿಯನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್‌ನ 9 ನ್ಯಾಯಮೂರ್ತಿಗಳ ಸಂವಿಧಾನ ಪೀಠವು, ಈ ಸಮುದಾಯಗಳಲ್ಲಿಯೇ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಮುಂದುವರಿದ ವರ್ಗವನ್ನು (ಕೆನೆಪದರ) ಮೀಸಲಾತಿಯಿಂದ ಹೊರಗಿಡಬೇಕು ಎಂದು ನಿರ್ದೇಶಿಸಿತು. ಇದರ ಆಧಾರದ ಮೇಲೆ ಕೇಂದ್ರ ಸರ್ಕಾರವು ನ್ಯಾಯಮೂರ್ತಿ ರಾಮ್ ನಂದನ್ ಪ್ರಸಾದ್ ಸಮಿತಿಯನ್ನು ರಚಿಸಿತು. ಈ ಸಮಿತಿಯ ಶಿಫಾರಸುಗಳ ಅನ್ವಯ ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (DoPT) 1993ರ ಸೆಪ್ಟೆಂಬರ್ 8ರಂದು ಒಂದು ಮೂಲಭೂತ ಕಚೇರಿ ಜ್ಞಾಪಕ ಪತ್ರವನ್ನು ಹೊರಡಿಸಿತು.

1993ರ DoPT ಮಾರ್ಗಸೂಚಿಯು ಕೆನೆಪದರವನ್ನು ಗುರುತಿಸಲು ಮುಖ್ಯವಾಗಿ ಎರಡು ಪರೀಕ್ಷೆಗಳನ್ನು (Tests) ನಿಗದಿಪಡಿಸಿದೆ:

ಸಾಮಾಜಿಕ ಸ್ಥಾನಮಾನ ಮತ್ತು ಹುದ್ದೆಯ ದರ್ಜೆ (Status/Rank Test – ವರ್ಗ I ರಿಂದ V): ಪೋಷಕರು ಸಾಂವಿಧಾನಿಕ ಹುದ್ದೆಗಳಲ್ಲಿದ್ದರೆ (ರಾಷ್ಟ್ರಪತಿ, ನ್ಯಾಯಾಧೀಶರು ಇತ್ಯಾದಿ), ಅಖಿಲ ಭಾರತ ಸೇವೆಗಳು ಅಥವಾ ಕೇಂದ್ರ/ರಾಜ್ಯ ಸರ್ಕಾರಗಳ ಗ್ರೂಪ್-ಎ (Class I) ಅಧಿಕಾರಿಗಳಾಗಿದ್ದರೆ, ಅಥವಾ ಸಶಸ್ತ್ರ ಪಡೆಗಳಲ್ಲಿ ಕರ್ನಲ್ ಮತ್ತು ಅದಕ್ಕಿಂತ ಮೇಲಿನ ಹುದ್ದೆಯಲ್ಲಿದ್ದರೆ, ಅವರ ಆದಾಯ ಎಷ್ಟೇ ಇದ್ದರೂ ಅವರ ಮಕ್ಕಳು ನೇರವಾಗಿ ಕೆನೆಪದರಕ್ಕೆ ಸೇರುತ್ತಾರೆ. ಗ್ರೂಪ್-ಬಿ ಅಧಿಕಾರಿಗಳು 40 ವರ್ಷಕ್ಕಿಂತ ಮುನ್ನ ಗ್ರೂಪ್-ಎ ಗೆ ಬಡ್ತಿ ಪಡೆದರೆ ಅಥವಾ ಪತಿ-ಪತ್ನಿ ಇಬ್ಬರೂ ಗ್ರೂಪ್-ಬಿ ಅಧಿಕಾರಿಗಳಾಗಿದ್ದರೆ ಈ ನಿಯಮ ಅನ್ವಯಿಸುತ್ತದೆ.

ಆದಾಯ ಮತ್ತು ಸಂಪತ್ತು ಪರೀಕ್ಷೆ (Income/Wealth Test – ವರ್ಗ VI): ಮೇಲಿನ ಸರ್ಕಾರಿ ಹುದ್ದೆಗಳಲ್ಲಿ ಇಲ್ಲದವರಿಗೆ (ವ್ಯಾಪಾರಿಗಳು, ಉದ್ಯಮಿಗಳು, ವೃತ್ತಿಪರರು ಇತ್ಯಾದಿ) ವಾರ್ಷಿಕ ಆದಾಯ ಮಿತಿಯನ್ನು ಅನ್ವಯಿಸಲಾಗುತ್ತದೆ. ಪ್ರಸ್ತುತ (2017ರಿಂದ) ಈ ಮಿತಿ ಸತತ ಮೂರು ವರ್ಷಗಳ ಕಾಲ ವಾರ್ಷಿಕ ₹8 ಲಕ್ಷ ಆಗಿದೆ. ಅತ್ಯಂತ ಮುಖ್ಯ ಅಂಶ ಏನೆಂದರೆ 1993ರ ಮೂಲ ನಿಯಮದ ಪ್ರಕಾರ, ಈ ₹8 ಲಕ್ಷದ ಆದಾಯ ಮಿತಿಯನ್ನು ಲೆಕ್ಕಹಾಕುವಾಗ ಸರ್ಕಾರಿ ನೌಕರರ ವೇತನ ಮತ್ತು ಕೃಷಿ ಭೂಮಿಯಿಂದ ಬರುವ ಆದಾಯವನ್ನು ಒಟ್ಟು ಆದಾಯಕ್ಕೆ ಸೇರಿಸುವಂತಿಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿತ್ತು.

2004ರ ಸ್ಪಷ್ಟೀಕರಣ ಪತ್ರದ ಗೊಂದಲ

1993ರ ನಿಯಮಗಳು ಸ್ಪಷ್ಟವಾಗಿದ್ದರೂ, 2004ರ ಅಕ್ಟೋಬರ್ 14ರಂದು DoPT ಹೊರಡಿಸಿದ ಒಂದು ‘ಸ್ಪಷ್ಟೀಕರಣ ಪತ್ರ’ ದೊಡ್ಡ ಗೊಂದಲಕ್ಕೆ ಕಾರಣವಾಯಿತು. ಸಾರ್ವಜನಿಕ ವಲಯದ ಉದ್ಯಮಗಳು (PSUs), ಬ್ಯಾಂಕುಗಳು, ವಿಶ್ವವಿದ್ಯಾಲಯಗಳು ಮತ್ತು ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ನೌಕರರ ಹುದ್ದೆಗಳಿಗೆ ಸರ್ಕಾರಿ ಹುದ್ದೆಗಳೊಂದಿಗೆ ಸಮಾನತೆ ನಿಗದಿಯಾಗದಿದ್ದರೆ, ಅವರ ವೇತನದ ಆದಾಯವನ್ನೇ ₹8 ಲಕ್ಷದ ಮಿತಿಗೆ ಪರಿಗಣಿಸಿ ಕೆನೆಪದರವನ್ನು ನಿರ್ಧರಿಸಬೇಕು ಎಂದು ಈ 2004ರ ಪತ್ರದಲ್ಲಿ ಸೂಚಿಸಲಾಗಿತ್ತು.

ಇದರ ಪರಿಣಾಮವಾಗಿ, ಕೆಳಹಂತದ ಸರ್ಕಾರಿ ಹುದ್ದೆಗಳಲ್ಲಿ (Group C / Group D), ಸರ್ಕಾರಿ ಶಾಲಾ ಶಿಕ್ಷಕರಾಗಿ, ಕ್ಲರ್ಕ್‌ಗಳಾಗಿ ಅಥವಾ ಪಿಎಸ್‌ಯುಗಳಲ್ಲಿ (PSUs) ಸೇವೆ ಸಲ್ಲಿಸುವ ಪೋಷಕರ ವೇತನವು ವೇತನ ಆಯೋಗದ ಶಿಫಾರಸುಗಳ ನಂತರ ₹8 ಲಕ್ಷ ದಾಟಿದ ತಕ್ಷಣ, ನೇಮಕಾತಿ ಪ್ರಾಧಿಕಾರಗಳು ಮತ್ತು ಯುಪಿಎಸ್‌ಸಿ ಅಂತಹ ಕುಟುಂಬಗಳ ಮಕ್ಕಳನ್ನು ಯಾಂತ್ರಿಕವಾಗಿ ‘ಕೆನೆಪದರ’ಕ್ಕೆ ಸೇರಿಸಿ ಮೀಸಲಾತಿ ನಿರಾಕರಿಸಲು ಆರಂಭಿಸಿದವು.

ಇದನ್ನೂ ಓದಿ: ಈಗಾಗಲೇ ಮುಕ್ತಾಯಗೊಂಡ ನೇಮಕಾತಿಗಳಿಗೆ ‘ಕೆನೆಪದರ’ ಮಾರ್ಚ್ 11ರ ತೀರ್ಪು ಅನ್ವಯಿಸಲ್ಲ: ಸುಪ್ರೀಂ ಕೋರ್ಟ್

ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರೂ, ಕೇವಲ ಪೋಷಕರ ವೇತನದ ಆಧಾರದ ಮೇಲೆ ಸೇವಾ ಹಂಚಿಕೆ ನಿರಾಕರಿಸಲ್ಪಟ್ಟ ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, 2026ರ ಮಾರ್ಚ್ 11ರಂದು ಕೆಲವು ಮಹತ್ವದ ತೀರ್ಪನ್ನು ನೀಡಿತು. ಮೀಸಲಾತಿಯ ಮೂಲ ಉದ್ದೇಶ ಬಡತನ ನಿರ್ಮೂಲನೆಯಲ್ಲ, ಬದಲಾಗಿ ಶತಮಾನಗಳ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಹೋಗಲಾಡಿಸುವುದು. ಕೇವಲ ವೇತನ ಹೆಚ್ಚಾದ ಮಾತ್ರಕ್ಕೆ ಸಮಾಜದಲ್ಲಿನ ಅವರ ಸಾಮಾಜಿಕ ಸ್ಥಾನಮಾನ ತಕ್ಷಣವೇ ಬದಲಾಗುವುದಿಲ್ಲ. ಹೀಗಾಗಿ ಪೋಷಕರ ಹುದ್ದೆಯ ದರ್ಜೆ ಮತ್ತು ಸಾಮಾಜಿಕ ಸ್ಥಾನಮಾನವನ್ನು ಮೊದಲು ಪರಿಗಣಿಸಬೇಕು ಎಂದು ಹೇಳಿತು.

ಹಾಗೆಯೇ 2004ರ ಆಡಳಿತಾತ್ಮಕ ಸ್ಪಷ್ಟೀಕರಣ ಪತ್ರವು 1993ರ ಮೂಲ ಕಚೇರಿ ಜ್ಞಾಪಕ ಪತ್ರದ (OM) ಆಶಯವನ್ನು ಬದಲಿಸಲು ಸಾಧ್ಯವಿಲ್ಲ. 1993ರ ನಿಯಮದಂತೆ ವೇತನ ಮತ್ತು ಕೃಷಿ ಆದಾಯವನ್ನು ಆದಾಯ ಮಿತಿಯ ಲೆಕ್ಕಾಚಾರದಿಂದ ಹೊರಗಿಡಬೇಕು. ಒಬ್ಬ ಗ್ರೂಪ್-ಸಿ ಅಥವಾ ಕ್ಲರಿಕಲ್ ಹುದ್ದೆಯಲ್ಲಿರುವ ನೌಕರನ ವೇತನ ₹8 ಲಕ್ಷ ದಾಟಿದೆ ಎಂಬ ಒಂದೇ ಕಾರಣಕ್ಕೆ ಅವರ ಮಕ್ಕಳನ್ನು ಕೆನೆಪದರಕ್ಕೆ ಸೇರಿಸುವುದು, ಗ್ರೂಪ್-ಎ ಅಧಿಕಾರಿಗಳ ಮಕ್ಕಳೊಂದಿಗೆ ಅವರನ್ನು ಸಮೀಕರಿಸಿದಂತಾಗುತ್ತದೆ. ಇದು ಸಂವಿಧಾನದ 14 ಮತ್ತು 16ನೇ ವಿಧಿಗಳ ಅಡಿಯಲ್ಲಿ ಸಮಾನತೆಯ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಮಾರ್ಚ್ ತೀರ್ಪಿನ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಸ್ಪಷ್ಟೀಕರಣ ಕೋರಿ ಅರ್ಜಿ ಸಲ್ಲಿಸಿತ್ತು. ಪಿಎಸ್‌ಯು ಮತ್ತು ಸರ್ಕಾರಿ ಹುದ್ದೆಗಳ ನಡುವೆ ಸಮಾನತೆ ನಿಗದಿಪಡಿಸಲು 2 ವರ್ಷಗಳ ಕಾಲಾವಕಾಶ ನೀಡಬೇಕು ಮತ್ತು 2025ರ ನಾಗರಿಕ ಸೇವಾ ಪರೀಕ್ಷೆಯ (CSE 2025) ಹಂಚಿಕೆಯನ್ನು ಹಳೆಯ ಮಾನದಂಡದಲ್ಲೇ ನಡೆಸಲು ಅನುಮತಿ ನೀಡಬೇಕು ಎಂದು ಕೇಂದ್ರ ಕೋರಿತ್ತು. 2026ರ ನವೆಂಬರ್ 6ರಂದು ಈ ಅರ್ಜಿಯನ್ನು ಇತ್ಯರ್ಥಪಡಿಸಿದ ಸುಪ್ರೀಂ ಕೋರ್ಟ್, ಮಾರ್ಚ್ ತೀರ್ಪನ್ನು ಪುನರುಚ್ಚರಿಸುವುದರ ಜೊತೆಗೆ ಕೆಲವು ನಿರ್ದೇಶನಗಳನ್ನು ನೀಡಿದೆ.

ಗ್ರೂಪ್-ಸಿ, ಗ್ರೂಪ್-ಡಿ ನೌಕರರು, ಸರ್ಕಾರಿ ಶಾಲಾ ಶಿಕ್ಷಕರು ಮತ್ತು ಸಮಾನಾಂತರ ಹುದ್ದೆಗಳಲ್ಲಿರುವ ಪೋಷಕರ ವೇತನ ₹8 ಲಕ್ಷಕ್ಕಿಂತ ಹೆಚ್ಚಿದ್ದರೂ, ಅವರ ಹುದ್ದೆಯ ದರ್ಜೆ ಕೆಳಮಟ್ಟದಲ್ಲೇ ಇರುವುದರಿಂದ ಅವರ ಮಕ್ಕಳು ಇನ್ನು ಮುಂದೆ ನಿರಾತಂಕವಾಗಿ ‘ನಾನ್-ಕ್ರೀಮಿ ಲೇಯರ್’ ಮೀಸಲಾತಿ ಸೌಲಭ್ಯ ಪಡೆಯಲಿದ್ದಾರೆ. 2025ರ ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಆಯ್ಕೆಯಾದ ಒಬಿಸಿ ಅಭ್ಯರ್ಥಿಗಳಿಗೆ ಮಾರ್ಚ್ 11ರ ತೀರ್ಪಿನ ಮಾನದಂಡಗಳ ಪ್ರಕಾರವೇ ಸೇವಾ ಹಂಚಿಕೆ ಮಾಡಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಅಲ್ಲದೆ, ಅನ್ಯಾಯಕ್ಕೊಳಗಾದ ಅರ್ಹ ಅಭ್ಯರ್ಥಿಗಳಿಗೆ ಅಗತ್ಯವಿದ್ದರೆ ಹೆಚ್ಚುವರಿ ಹುದ್ದೆಗಳನ್ನು ಸೃಷ್ಟಿಸಬೇಕು ಎಂಬ ಭರವಸೆಯನ್ನು ದಾಖಲಿಸಿಕೊಂಡಿದೆ.

ಈ ತೀರ್ಪು ಭವಿಷ್ಯದ ನೇಮಕಾತಿಗಳಿಗೆ ಮತ್ತು ಬಾಕಿ ಇರುವ ಪ್ರಕರಣಗಳಿಗೆ ಅನ್ವಯವಾಗುತ್ತದೆಯೇ ಹೊರತು, ಈಗಾಗಲೇ ಮುಕ್ತಾಯಗೊಂಡಿರುವ ಹಳೆಯ ನೇಮಕಾತಿಗಳು ಅಥವಾ ಸೇವಾ ಹಿರಿತನದ ಪಟ್ಟಿಗಳನ್ನು ಮತ್ತೆ ತೆರೆಯುವುದಿಲ್ಲ ಎಂದು ಸ್ಪಷ್ಟಪಡಿಸುವ ಮೂಲಕ ಆಡಳಿತಾತ್ಮಕ ಗೊಂದಲವನ್ನು ತಪ್ಪಿಸಿದೆ. ಹುದ್ದೆಗಳ ಸಮಾನತೆ ನಿಗದಿಪಡಿಸಲು 2 ವರ್ಷಗಳ ಕಾಲಾವಕಾಶ ನೀಡಲು ನಿರಾಕರಿಸಿದ ನ್ಯಾಯಾಲಯ, ನೀತಿ ನಿರೂಪಣೆ ಕಾರ್ಯಾಂಗದ ವ್ಯಾಪ್ತಿಗೆ ಬರುತ್ತದೆ; ಆದರೆ ಅದು ಸಂವಿಧಾನದ ಮೂಲ ಆಶಯಗಳಿಗೆ ಬದ್ಧವಾಗಿರಬೇಕು ಎಂದು ತಾಕೀತು ಮಾಡಿದೆ.

ಒಟ್ಟಾರೆಯಾಗಿ, ಸುಪ್ರೀಂ ಕೋರ್ಟ್‌ನ ಮಾರ್ಚ್ ತೀರ್ಪು ಮತ್ತು ನವೆಂಬರ್‌ನ ಪುನರುಚ್ಚಾರವು ದೇಶದ ಮೀಸಲಾತಿ ನ್ಯಾಯಶಾಸ್ತ್ರದಲ್ಲಿ ಒಂದು ಮೈಲಿಗಲ್ಲಾಗಿದೆ. ಆರ್ಥಿಕ ಅಂಕಿಅಂಶಗಳ ಯಾಂತ್ರಿಕ ಲೆಕ್ಕಾಚಾರಕ್ಕಿಂತ ಮಿಗಿಲಾಗಿ, ಮೀಸಲಾತಿಯ ಹಿಂದಿರುವ ಸಾಮಾಜಿಕ ನ್ಯಾಯದ ಆಶಯವನ್ನು ಎತ್ತಿಹಿಡಿಯುವುದು ಎಷ್ಟು ಮುಖ್ಯ ಎಂಬುದನ್ನು ಈ ತೀರ್ಪು ಆಡಳಿತ ಯಂತ್ರಕ್ಕೆ ಮನವರಿಕೆ ಮಾಡಿಕೊಟ್ಟಿದೆ. ವೇತನ ಏರಿಕೆಯ ಕಾರಣದಿಂದಾಗಿ ಮೀಸಲಾತಿಯಿಂದ ವಂಚಿತರಾಗುತ್ತಿದ್ದ ಲಕ್ಷಾಂತರ ಕೆಳಮಧ್ಯಮ ವರ್ಗದ ಒಬಿಸಿ ಕುಟುಂಬಗಳ ವಿದ್ಯಾರ್ಥಿಗಳಿಗೆ ಇದು ದೊಡ್ಡ ಆಸರೆಯಾಗಿದೆ.

ಮುಂದಿನ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹುದ್ದೆಗಳ ಸಮಾನತೆಯ ಕುರಿತು ಇರುವ ಗೊಂದಲಗಳನ್ನು ಶೀಘ್ರವಾಗಿ ಬಗೆಹರಿಸಬೇಕಾಗಿದೆ. ಕಂದಾಯ ಅಧಿಕಾರಿಗಳು ಮತ್ತು ನೇಮಕಾತಿ ಸಂಸ್ಥೆಗಳು 1993ರ ಮೂಲ ಮಾರ್ಗಸೂಚಿಗಳನ್ನು ಅಕ್ಷರಶಃ ಪಾಲಿಸುವ ಮೂಲಕ, ಅರ್ಹ ಅಭ್ಯರ್ಥಿಗಳು ಪ್ರಮಾಣಪತ್ರಗಳಿಗಾಗಿ ನ್ಯಾಯಾಲಯದ ಮೆಟ್ಟಿಲೇರುವ ಪರಿಸ್ಥಿತಿಯನ್ನು ತಪ್ಪಿಸಬೇಕಿದೆ.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮಾಜವಾದಿ ಸಮಾಜ ನಿರ್ಮಾಣಕ್ಕೆ ರಷ್ಯಾ ಕ್ರಾಂತಿ ಪ್ರೇರಣೆ: ಪಿ ಷಣ್ಮುಖಸ್ವಾಮಿ

ಜಗತ್ತಿನ ಬಹುತೇಕ ದೇಶಗಳ ಸಮಾಜವಾದಿ ಸಮಾಜ ನಿರ್ಮಾಣಕ್ಕೆ ರಷ್ಯಾ ದೇಶ ಪ್ರೇರಣೆಯಾಗಿದೆ...

ಬೀದರ್‌ | ರೈತರ ಸಮಸ್ಯೆ ಪರಿಹರಿಸುವಲ್ಲಿ ರಾಜ್ಯ ಸರ್ಕಾರ ವಿಫಲ: ಭಗವಂತ ಖೂಬಾ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಪ್ರಾಕೃತಿಕ ವಿಕೋಪದಿಂದ ರೈತರು ತೀವ್ರ ಸಂಕಷ್ಟಕ್ಕೆ...

​’ಅಪ್ರಾಪ್ತೆಯ ಜೊತೆ ವಿವಾಹವಾದರೆ ಪೋಕ್ಸೊದಿಂದ ಪಾರಾಗುವುದಿಲ್ಲ’: ದೆಹಲಿ ಹೈಕೋರ್ಟ್

ಅಪ್ರಾಪ್ತೆಯನ್ನು ವಿವಾಹವಾದ ವ್ಯಕ್ತಿಯೊಬ್ಬನ ವಿರುದ್ಧ ದಾಖಲಾಗಿದ್ದ ಲೈಂಗಿಕ ದೌರ್ಜನ್ಯ (ಪೋಕ್ಸೊ) ಪ್ರಕರಣವನ್ನು...

ಸ್ಮರಣೆ | ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೇ ಜೈಲುಶಿಕ್ಷೆ ವಿಧಿಸಿ, ತಾವೇ ಜೈಲು ಸೇರಿದ್ದ ನ್ಯಾಯಮೂರ್ತಿ ಕರ್ಣನ್!

ನ್ಯಾಯಮೂರ್ತಿಗಳ ವಿರುದ್ಧ ಜಾತಿ ತಾರತಮ್ಯದ ಆರೋಪ ಮಾಡಿ, ನ್ಯಾಯಾಂಗದೊಂದಿಗಿನ ಸಂಘರ್ಷ ನಡೆಸಿ,...