ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಬಂದಿದ್ದ ಯಾದಗಿರಿಯ ಯುವಕನೋರ್ವ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ಭಾನುವಾರ ನಡೆದಿದೆ.
ಮೃತಪಟ್ಟ ಯುವಕನನ್ನು ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ರಮೇಶ್ (35) ಎಂದು ಗುರುತಿಸಲಾಗಿದೆ. ಕೂಲಿ ಕಾರ್ಮಿಕರಾಗಿರುವ ರಮೇಶ್ ಹೊಟ್ಟೆ ನೋವು ಎಂದು ಭಾನುವಾರ ಬೆಳಗ್ಗೆ ಬೆಂಗಳೂರಿನ ಕೊಡಿಗೇಹಳ್ಳಿಯಲ್ಲಿರುವ ನಾರಾಯಣ್ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಹೋಗಿದ್ದರು. ಪರೀಕ್ಷೆ ಮಾಡಿದ್ದ ಆಸ್ಪತ್ರೆಯ ವೈದ್ಯರು ಇಸಿಜಿ ಸಹಿತ ಇನ್ನಿತರ ಎಲ್ಲಾ ಟೆಸ್ಟ್ ಮಾಡಿದ್ದು, ರಿಪೋರ್ಟ್ ಎಲ್ಲಾ ಸರಿಯಾಗಿದೆ. ಯಾವ ತೊಂದರೆ ಇಲ್ಲ ಎಂದು ಹೊಟ್ಟೆ ನೋವಿಗಾಗಿ ಔಷಧಿ ಕೊಟ್ಟು ಕಳುಹಿಸಿದ್ದರು. ಔಷಧಿ ಸೇವಿಸಿದ ಬಳಿಕ ತೀವ್ರ ತಲೆನೋವು ಕಾಣಿಸಿಕೊಂಡಿದ್ದು, ಕೂಡಲೇ ಅದೇ ಆಸ್ಪತ್ರೆಗೆ ಕರೆ ತರಲಾಯಿತು. ಈ ವೇಳೆ ಚಿಕಿತ್ಸೆ ನೀಡುತ್ತಿರುವಾಗಲೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ವೈದ್ಯರ ನಿರ್ಲಕ್ಷ್ಯದಿಂದಾಗಿ ಯುವಕ ರಮೇಶ್ ಸಾವನ್ನಪ್ಪಿರುವುದಾಗಿ ಆರೋಪಿಸಿ ಆತನ ಕುಟುಂಬದ ಸದಸ್ಯರು ಹಾಗೂ ಪರಿಚಯಸ್ಥರು ಆಸ್ಪತ್ರೆಯ ಮುಂದೆ ಧರಣಿ ನಡೆಸಿದ್ದಾರೆ. ಯುವಕನ ಸಾವಿಗೆ ನ್ಯಾಯ ಕೊಡಬೇಕು ಎಂದು ಆಗ್ರಹಿಸಿ, ಪ್ರತಿಭಟನೆ ನಡೆಸಿದರು.
ಈ ಮಾಹಿತಿ ಅರಿತ ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಎಷ್ಟೇ ಮನವಿ ಮಾಡಿದರು ಕೂಡ ಪ್ರತಿಭಟನೆ ನಿಲ್ಲಿಸಲು ಒಪ್ಪಲಿಲ್ಲ. ಕೊನೆಗೆ ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿದರೆ ಮಾತ್ರ ಯುವಕನ ಸಾವಿಗೆ ಕಾರಣ ತಿಳಿಯಬಹುದು. ಹಾಗಾಗಿ, ಶವ ಬಿಟ್ಟು ಕೊಡುವಂತೆ ವಿನಂತಿ ಮಾಡಿದ್ದಕ್ಕೆ ಒಪ್ಪಿದ ಕುಟುಂಬಸ್ಥರು, ಕೊನೆಗೆ ಮರಣೋತ್ತರ ಪರೀಕ್ಷೆ ನಡೆಸಲು ಒಪ್ಪಿಕೊಂಡರು. ಆ ಬಳಿಕ ಆ್ಯಂಬುಲೆನ್ಸ್ ಮೂಲಕ ಶವವನ್ನು ಸಾಗಿಸಲಾಯಿತು.
ರಮೇಶ್ ಅವರು ಹೊಟ್ಟೆಪಾಡಿಗಾಗಿ ದುಡಿದು ತಿನ್ನಲು ಬೆಂಗಳೂರಿಗೆ ಹೋದವರು ಅಚಾನಕ್ಕಾಗಿ ಸಾವಿನ ದವಡೆಗೆ ಸಿಲುಕಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಈ ಘಟನೆಯ ಬಗ್ಗೆ ಈ ದಿನ. ಕಾಮ್ ಜೊತೆಗೆ ಮಾತನಾಡಿರುವ ಮೃತಪಟ್ಟ ರಮೇಶ್ ಅವರ ಮಾವ ಬಸವರಾಜ್, “ನನ್ನ ಅಳಿಯನ ಆರೋಗ್ಯದಲ್ಲಿ ಯಾವ ಸಮಸ್ಯೆ ಇರಲಿಲ್ಲ. ಇದೇ ಮೊದಲ ಬಾರಿಗೆ ಹೊಟ್ಟೆ ನೋವು ಎಂದು ಆಸ್ಪತ್ರೆ ಹೋಗಿದ್ದರು. ಎಲ್ಲ ಟೆಸ್ಟ್ ಮಾಡಿ ವೈದ್ಯರೇ ಏನು ಸಮಸ್ಯೆ ಇಲ್ಲ ಅಂತ ಹೇಳಿ, ಹೊಟ್ಟೆ ನೋವು ಕಡಿಮೆ ಆಗುವುದಕ್ಕೆ ಔಷಧಿ ಕೊಟ್ಟಿದ್ದಾರೆ. ಔಷಧಿ ಸೇವಿಸಿದ ಮೇಲೆ ತಲೆನೋವು ಕಾಣಿಸಿಕೊಂಡು ಮತ್ತೆ ಆಸ್ಪತ್ರೆಗೆ ಹೋಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿರುವಾಗ ಸಾವು ಸಂಭವಿಸಿದೆ. ಸಮಸ್ಯೆ ಇದೆ ಅಂತ ಹೇಳಿದ್ದಿದ್ದರೆ ನಾವು ಹೆಚ್ಚಿನ ಚಿಕಿತ್ಸೆಗೆ ಬೇರೆ ಕಡೆಗೆ ಕರೆದುಕೊಂಡು ಹೋಗುತ್ತಿದ್ದೆವು” ಎಂದು ತಿಳಿಸಿದರು.
“ವೈದ್ಯರು ಸರಿಯಾಗಿ ಪರೀಕ್ಷೆ ನಡೆಸಿಲ್ಲ. ಎಲ್ಲಾ ಸರಿ ಇದೆ ಅಂತ ನಿರ್ಲಕ್ಷ್ಯ ಮಾಡಿದ್ದಾರೆ. ಇದರಿಂದ ನಮ್ಮ ಅಳಿಯನನ್ನು ಕಳೆದುಕೊಂಡಿದ್ದೇವೆ. ಆಸ್ಪತ್ರೆಯವರು ನಮ್ಮನ್ನು ಹೊರಗಡೆ ತಳ್ಳಿ, ಬಾಗಿಲು ಹಾಕಿದ್ದಾರೆ. ನಾವು ಬಡವರು ಏನು ಮಾಡಬೇಕು ಎಂದು ಗೊತ್ತಾಗುತ್ತಿಲ್ಲ. ಪೊಲೀಸರ ಸ್ಥಳಕ್ಕೆ ಬಂದು ಪೋಸ್ಟ್ ಮಾರ್ಟಮ್ ರಿಪೋರ್ಟ್ ಬಂದ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳುತ್ತಿದ್ದಾರೆ” ಎಂದು ತಿಳಿಸಿದರು.
ವರದಿ: ಗೀತಾ ಹೊಸಮನಿ
