ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಸಂಪಾಜೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಜ್ಯೋತಿ ವಿಧ್ಯಾ ಸಂಘ ಸಂಯುಕ್ತಾಶ್ರಯದಡಿ ಪೆರಾಜೆಯ ಜ್ಯೋತಿ ಪ್ರೌಢಶಾಲೆ ಸಭಾಂಗಣದಲ್ಲಿ ದಿ ಗಂಗಾಧರ ಶೇಟ್ ಮತ್ತು ಸುಲೋಚನಾ ಬಾಯಿ ಸ್ಮಾರಕ ದತ್ತಿ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ನೆನಪಿಸುತ್ತಾ, “1837ರಲ್ಲಿ ನಡೆದ ಅಮರ ಸುಳ್ಯ ಹೋರಾಟವೇ ಭಾರತದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟ’. ಆಗ ಸುಳ್ಯ ಪ್ರದೇಶವು ಕೊಡಗು ಜಿಲ್ಲೆಗೆ ಸೇರಿತ್ತು. ಕೊಡಗು ಮೊದಲ ಸ್ವಾತಂತ್ರ್ಯ ಹೋರಾಟಕ್ಕೆ ಸಾಕ್ಷಿಯಾಗಿದೆ” ಎಂದು ಹಿರಿಯ ಸಾಹಿತಿ ಕೊಡಗಿನ ಗೌರಮ್ಮ ಪ್ರಶಸ್ತಿ ಪುರಸ್ಕೃತೆ ಸಹನಾ ಕಾಂತಬೈಲು ಹೇಳಿದರು.
1857ರಲ್ಲಿ ನಡೆದ ಸಿಪಾಯಿ ದಂಗೆ ಭಾರತದ ಮೊದಲ ಸ್ವಾತಂತ್ರ ಹೋರಾಟ ಎಂದು ಇತಿಹಾಸ ನಿರ್ಮಿಸಲಾಗಿದೆ. ಆದರೆ ಅದಕ್ಕೂ 20 ವರ್ಷಗಳ ಹಿಂದೆ ಬ್ರಿಟೀಷರನ್ನು ನಮ್ಮ ನೆಲದಿಂದ ಓಡಿಸುವ ಪ್ರಯತ್ನ ನಡೆದಿದೆ. ಕೊಡಗಿನ ರಾಜ ಚಿಕ್ಕವೀರ ರಾಜೇಂದ್ರರನ್ನು ಬ್ರಿಟಿಷರು ರಾಜಪಟ್ಟದಿಂದ ಇಳಿಸಿದ ನಂತರ ಬ್ರಿಟಿಷ್ ಆಳ್ವಿಕೆ ಈ ಪ್ರದೇಶದಲ್ಲಿ ಪ್ರಾರಂಭವಾಯಿತು ಎಂದು ಹೇಳಿದರು.
ಅತಿಯಾದ ತೆರಿಗೆ ಮತ್ತು ದಬ್ಬಾಳಿಕೆಯಿಂದಾಗಿ ಬ್ರಿಟಿಷರ ವಿರುದ್ಧ ದಂಗೆ ಏಳುವ ಪ್ರಯತ್ನ ನಡೆಯಿತು. ಆ ಸಂದರ್ಭದಲ್ಲಿ ರಾಜಮನೆತನದ ಪ್ರತಿನಿಧಿ ಎಂದೇಳಿಕೊಂಡು ಸ್ವಾಮಿ ಅಪರಾಂಪರ ಎನ್ನುವ ವ್ಯಕ್ತಿ ಎಲ್ಲರನ್ನೂ ಸಂಘಟಿಸಿ ಬ್ರಿಟೀಷರ ವಿರುದ್ಧ ಹೋರಾಡಿ ಬ್ರಿಟೀಷ್ ಧ್ವಜವನ್ನು ಕೆಳಗಿಳಿಸಿ ತಮ್ಮ ಧ್ವಜವನ್ನು ಏರಿಸಿ, 13 ದಿನಗಳ ಕಾಲ ಬ್ರಿಟಿಷರನ್ನು ನಮ್ಮ ನೆಲದಿಂದ ಹೊರಗಿಡುತ್ತಾರೆ. ನಂತರ ಬ್ರಿಟಿಷರು ಬಹು ದೊಡ್ಡ ಸೈನ್ಯದೊಂದಿಗೆ ಬಂದು ಇವರನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾರೆ ಎಂದು ಕೊಡಗಿನಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದ ಮೆಲುಕು ಹಾಕಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ ಪಿ ಕೇಶವ ಕಾಮತ್ ಮಾತನಾಡಿ, “200 ವರ್ಷಗಳಿಗೂ ಹೆಚ್ಚು ನಮ್ಮನ್ನಾಳಿದ ಬ್ರಿಟೀಷರ ವಿರುದ್ಧ ಇಡೀ ದೇಶ ಒಂದಾಗಿ ಹೋರಾಡಿ ಸ್ವಾತಂತ್ರವನ್ನು ಗಳಿಸಿಕೊಂಡಿತು. ಸ್ವಾತಂತ್ರ್ಯ ಹೋರಾಟ ವಿಚಾರದಲ್ಲಿ ಕೊಡಗು ಹಿಂದೆ ಬಿದ್ದಿರಲಿಲ್ಲ. ಆದರೆ ಮಾಹಿತಿಯ ಕೊರತೆಯಿಂದಾಗಿ ಜಿಲ್ಲೆಯಲ್ಲಿ ನಡೆದಂತಹ ಸ್ವಾತಂತ್ರದ ಹೋರಾಟಗಳು ಜನರನ್ನು ತಲುಪಲಿಲ್ಲ” ಎಂದು ವಿಷಾದಿಸಿದರು.
ಕಾರ್ಯಕ್ರಮದ ಉದ್ಘಾಟನೆ ಮಾಡಿದ ಪೆರಾಜೆಯ ಜ್ಯೋತಿ ವಿದ್ಯಾ ಸಂಘದ ಅಧ್ಯಕ್ಷ ಎನ್ ಎ ಜ್ಞಾನೇಶ್ ಮಾತನಾಡಿ, “ಇಂದಿನ ವಿದ್ಯಾರ್ಥಿಗಳಿಗೆ ನಮ್ಮ ದೇಶಕ್ಕೆ ಸಿಕ್ಕ ಸ್ವಾತಂತ್ರ್ಯ ಮತ್ತು ಸಿಗುವಲ್ಲಿ ನಮ್ಮ ಹಿರಿಯರ ತ್ಯಾಗ, ಬಲಿದಾನದ ಕುರಿತು ಮಾಹಿತಿ ನೀಡುವ ಈ ಕಾರ್ಯಕ್ರಮ ಅತ್ಯಂತ ಶ್ಲಾಘನೀಯ” ಎಂದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಗೋಪಾಲ ಪೆರಾಜೆ ವಹಿಸಿದ್ದರು. ಎಂ ಜಿ ಮೋಹನ್, ಟಿ ಪಿ ರಮೇಶ್, ಸುರೇಶ್ ಪೆರುಮುಂಡ, ಮುಡುಕಜೆ ಹರಿಶ್ಚಂದ್ರ, ಮುಖ್ಯೋಪಾಧ್ಯಾಯ ನಾಗರಾಜ್, ರೇವತಿ ರಮೇಶ್, ಲೋಕನಾಥ್ ಅಮೆಚೂರು ಉಪಸ್ಥಿತರಿದ್ದರು.