ಈ ಬಾರಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಸಂಡೂರು ಶಾಸಕ, ಮಾಜಿ ಸಚಿವ ಈ.ತುಕಾರಾಂ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಹೈಕಮಾಂಡ್ ಬಹುತೇಕ ನಿರ್ಧರಿಸಿರುವುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.
ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರಿಗೆ ಠಕ್ಕರ್ ಕೊಡಲು ಶಾಸಕ ಈ.ತುಕಾರಾಂ ಅವರು ತಮ್ಮ ಪುತ್ರಿಯನ್ನು ಕಣಕ್ಕಿಳಿಸಲು ಬಯಸಿದ್ದರು. ಆದರೆ ಪಕ್ಷ ತುಕಾರಾಂ ಅವರನ್ನೇ ಕಣಕ್ಕಿಳಿಯುವಂತೆ ತೀವ್ರ ಒತ್ತಡ ತಂದಿತ್ತು. ತುಕಾರಾಂ ಅವರಿಗಿಂತ ಅವರ ರಾಜಕೀಯ ಸೂತ್ರಧಾರ ಸಂತೋಷ್ ಲಾಡ್ ಅವರ ಮೇಲೆ ಸಹ ಒತ್ತಡವಿತ್ತು.
ಕಾರ್ಮಿಕ ಸಚಿವರಾದ ಸಂತೋಷ್ ಎಸ್. ಲಾಡ್ ನೇತೃತ್ವದಲ್ಲಿ ಸಚಿವರಾದ ನಾಗೇಂದ್ರ, ವಸತಿ ಸಚಿವರಾದ ಜಮೀರ್ ಅಹಮದ್, ಸಂಡೂರು ಶಾಸಕರಾದ ತುಕಾರಾಂ ಸೇರಿ ಹಲವು ಪ್ರಮುಖರು ನನ್ನನ್ನು ಭೇಟಿಯಾಗಿ ಬಳ್ಳಾರಿ ಲೋಕಸಭಾ ಚುನಾವಣೆ ಸಂಬಂಧ ಚರ್ಚೆ ನಡೆಸಿದರು. pic.twitter.com/WAJ4oXrLJ3
— Siddaramaiah (@siddaramaiah) March 21, 2024
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತುಕರಾಂ ಅವರಿಗೆ ನೀನು ಅಭ್ಯರ್ಥಿಯಾಗಲು ಒಪ್ಪಲೇಬೇಕೆಂದು ಹಠ ಹಿಡಿದು ಇಂದು ಬೆಂಗಳೂರಿಗೆ ಕರೆಸಿ, ಸಚಿವರಾದ ಸಂತೋಷ್ ಲಾಡ್, ಬಿ.ನಾಗೇಂದ್ರ, ಝಮೀರ್ ಅಹಮ್ಮದ್ , ಮಾಜಿ ಎಂಎಲ್ ಸಿ ಕೆಎಸ್.ಎಲ್ ಸ್ವಾಮಿ, ಇಬ್ಬರು ಜಿಲ್ಲಾಧ್ಯಕ್ಷರಾದ ಮಹಮ್ಮದ್ ರಫೀಕ್, ಬಿ.ವಿ.ಶಿವಯೋಗಿ ಮೊದಲಾದವರು ಸೇರಿ ತುಕರಾಂ ಅವರಿಗೆ ಸ್ಪರ್ಧೆ ಮಾಡಲು ಒಪ್ಪಿಸಿರುವುದಾಗಿ ತಿಳಿದುಬಂದಿದೆ.
ತುಕಾರಾಂ ಅವರು ವಿಜಯಿಯಾಗಿ ಲೋಕಸಭೆಗೆ ಹೋದರೆ ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಅವರ ಪುತ್ರಿಗೆ ಟಿಕೆಟ್ ನೀಡುವ ಬಗ್ಗೆಯೂ ಈ ಸಂದರ್ಭದಲ್ಲಿ ಚರ್ಚೆ ನಡೆದಿರುವುದಾಗಿ ತಿಳಿದುಬಂದಿದೆ.
