ದೆಹಲಿ ಹೈಕೋರ್ಟ್ ಮುಂದೆ ನಾಳೆ (ಮಾ.28ರಂದು) ಅರವಿಂದ್ ಕೇಜ್ರಿವಾಲ್ ಅವರು ಹಾಜರಾಗಲಿದ್ದು, ಅಬಕಾರಿ ಹಗರಣ ಎಂದು ಕರೆಯಲಾಗುವ ಸತ್ಯದ ಬಗ್ಗೆ ಬಹಿರಂಗಪಡಿಸಲಿದ್ದಾರೆ ಎಂದು ಕೇಜ್ರಿವಾಲ್ ಅವರ ಪತ್ನಿ ಸುನಿತಾ ಅವರು ತಿಳಿಸಿದ್ದಾರೆ.
ಹಗರಣದ ಹಣ ಎಲ್ಲಿಂದ ಬಂತೆಂಬುದು ಹಾಗೂ ಸಾಕ್ಷ್ಯಗಳನ್ನು ಕೂಡ ಇದೇ ಸಂದರ್ಭದಲ್ಲಿ ದೆಹಲಿ ಮುಖ್ಯಮಂತ್ರಿ ಒದಗಿಸಲಿದ್ದಾರೆ ಎಂದು ಸುನಿತಾ ಅವರು ತಿಳಿಸಿದ್ದಾರೆ.
ತಮ್ಮ ಪತಿಯ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುನಿತಾ ಕೇಜ್ರಿವಾಲ್, ರದ್ದುಗೊಂಡಿರುವ ದೆಹಲಿ ಅಬಕಾರಿ ನೀತಿಯಲ್ಲಿ ಹಗರಣ ನಡೆದಿದೆ ಎಂದು ತನಿಖೆಯ ಸಲುವಾಗಿ ಜಾರಿ ನಿರ್ದೇಶನಾಲಯ ಮಾ.21ರಂದು ತಮ್ಮ ಕಸ್ಟಡಿಗೆ ತೆಗೆದುಕೊಂಡಿದೆ. ಇ.ಡಿ ದಾಳಿ ನಡೆಸಿದಾಗ ದೆಹಲಿ ಸಿವಿಲ್ ಲೈನ್ಸ್ ಪ್ರದೇಶದ ಮನೆಯಲ್ಲಿ ಜಾರಿ ನಿರ್ದೇಶನಾಲಯಕ್ಕೆ ಕೇವಲ 73 ಸಾವಿರ ರೂ. ಮಾತ್ರ ಹಣ ದೊರಕಿದೆ ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ‘ಭ್ರಷ್ಟರು ಬೇಕಾಗಿದ್ದಾರೆ’ ಇದು ಬಿಜೆಪಿಯ ಹೊಸ ಜಾಹೀರಾತು
ತಮ್ಮ ಪತಿ ದೇಶ ಭಕ್ತರಾಗಿದ್ದು, ಅಬಕಾರಿ ಹಗರಣ ಎಂದು ಕರೆಯಲಾಗುವ ಹಗರಣದಲ್ಲಿ ಇ.ಡಿ 250ಕ್ಕೂ ಹೆಚ್ಚು ದಾಳಿಗಳನ್ನು ನಡೆಸಿದೆ. ಹಗರಣ ಎನ್ನುತ್ತಿರುವ ಇ.ಡಿ ಹಣಕ್ಕಾಗಿ ಶೋಧ ನಡೆಸುತ್ತಿದ್ದಾರೆ. ಆದರೆ ಅವರಿಗೆ ಇನ್ನೂ ಹಣ ದೊರಕಿಲ್ಲ ಎಂದು ಸುನಿತಾ ಹೇಳಿದ್ದಾರೆ.
”ಕೇಜ್ರಿವಾಲ್ ಅವರು ಮಾ.28ರಂದು ಕೋರ್ಟ್‌ನಲ್ಲಿ ಎಲ್ಲವನ್ನು ಬಹಿರಂಗ ಪಡಿಸಲಿದ್ದಾರೆ. ಹಣ ಎಲ್ಲಿಂದ ಬಂತು ಹಾಗೂ ದಾಖಲೆಗಳನ್ನು ಕೂಡ ಅವರು ಒದಗಿಸಲಿದ್ದಾರೆ” ಎಂದು ಸುನಿತಾ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಕೇಂದ್ರ ಸರ್ಕಾರವು ಕೇಜ್ರಿವಾಲ್ ವಿರುದ್ಧ ಪ್ರಕರಣ ದಾಖಲಿಸಿದೆ. ಅವರು ದೆಹಲಿಯನ್ನು ನಾಶಪಡಿಸುವ ಬಯಕೆ ಹೊಂದಿದ್ದಾರೆಯೆ? ಅವರು ಜನರಿಗೆ ತೊಂದರೆ ನೀಡಲು ಬಯಸಿದ್ದಾರೆಯೆ? ಕೇಜ್ರಿವಾಲ್ ಅವರು ಇದರಿಂದ ತುಂಬ ನೊಂದಿದ್ದಾರೆ ಎಂದು ಸುನಿತಾ ಅವರು ಹೇಳಿದರು.
ಅರವಿಂದ್ ಕೇಜ್ರಿವಾಲ್ ಅವರನ್ನು ಇ.ಡಿ ಬಂಧಿಸಿರುವುದು ಅಕ್ರಮ ಎಂದು ಎಎಪಿ ದೆಹಲಿ ಹೈಕೋರ್ಟಿನಲ್ಲಿ ದೂರು ದಾಖಲಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ಅವರು ಮಾ.28ರವರೆಗೂ ಇ.ಡಿ ಕಸ್ಟಡಿಯಲ್ಲಿರಲಿದ್ದಾರೆ.
