ರಸ್ತೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯ ಮುರಿದ ಕಾಲಿಗೆ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಪ್ಲಾಸ್ಟರ್ ಅಥವಾ ಸರಿಯಾದ ವೈದ್ಯಕೀಯ ಬ್ಯಾಂಡೇಜ್ ಹಾಕುವ ಬದಲು ಕಾರ್ಡ್‌ಬೋರ್ಡ್ ಸುತ್ತಿ ಪ್ರಥಮ ಚಿಕಿತ್ಸೆ ನೀಡಿರುವ ಘಟನೆ ಬಿಹಾರದ ಬೆಗುಸರಾಯ್ ಜಿಲ್ಲೆಯಲ್ಲಿ ವರದಿಯಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜ್ಯದ ಆರೋಗ್ಯ ವ್ಯವಸ್ಥೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಬೆನ್ನಲ್ಲೇ, ಘಟನೆ ಕುರಿತು ತನಿಖೆಗೆ ಆದೇಶಿಸಲಾಗಿದೆ.
ಬೆಗುಸರಾಯ್ ಜಿಲ್ಲೆಯ ಮಂಜೌಲ್ ಉಪ-ವಿಭಾಗೀಯ ಆಸ್ಪತ್ರೆಯಲ್ಲಿ ಘಟನೆ ನಡೆದಿದೆ.
ನೌಕೋಠಿ ಪೊಲೀಸ್ ಠಾಣೆ ವ್ಯಾಪ್ತಿಯ ಮಹೇಶ್ವರ ಗ್ರಾಮದ ನಿವಾಸಿ ಕುನಾಲ್ ಕುಮಾರ್ ಅವರು ಆಗಸ್ಟ್ 3ರ ಸಂಜೆ ಹರ್ ಸಿಂಗ್ ಸೇತುವೆ ಬಳಿ ಬೈಕ್‌ನಲ್ಲಿ ತೆರಳುವಾಗ, ಅಪಘಾತವಾಗಿತ್ತು. ಕುಮಾರ್ ಅವರ ಕಾಲು ಮುರಿತಕ್ಕೊಳಗಾಗಿತ್ತು. ಕುಟುಂಬಸ್ಥರು ತಕ್ಷಣ ಅವರನ್ನು ಮಂಜೌಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು.
ಆದರೆ, ಆಸ್ಪತ್ರೆಯಲ್ಲಿ ಮೂಳೆ ಚಿಕಿತ್ಸಕ (ಆರ್ಥೋಪೆಡಿಕ್) ಅಥವಾ ಡ್ರೆಸ್ಸರ್ ಲಭ್ಯವಿರಲಿಲ್ಲ. ಹೀಗಾಗಿ ಸಿಬ್ಬಂದಿಗಳು ರೋಗಿಯ ಕಾಲಿಗೆ ಕಾರ್ಡ್‌ಬೋರ್ಡ್ ತುಂಡನ್ನು ಇಟ್ಟು, ಹತ್ತಿ ಹಾಗೂ ಬ್ಯಾಂಡೇಜ್‌ನಿಂದ ಸುತ್ತಿ ಬೆಗುಸರಾಯ್‌ನ ಸದರ್ ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ವರದಿಯಾಗಿದೆ.
ಆಸ್ಪತ್ರೆ ವೈದ್ಯರು ಘಟನೆಯನ್ನು ಸಮರ್ಥಿಸಿಕೊಂಡಿದ್ದಾರೆ. “ರಕ್ತಸ್ರಾವ ತಡೆಯಲು ಮತ್ತು ಮೂಳೆ ಹೆಚ್ಚು ಅಲ್ಲಾಡದಂತೆ ಸ್ಥಿರವಾಗಿಡಲು ತುರ್ತು ಪ್ರಥಮ ಚಿಕಿತ್ಸೆಯ ಭಾಗವಾಗಿ ಕಾರ್ಡ್‌ಬೋರ್ಡ್ ಅಥವಾ ಸ್ಪ್ಲಿಂಟ್ ಬಳಸುವುದು ವೈದ್ಯಕೀಯವಾಗಿ ತಪ್ಪಲ್ಲ. ಆ ಸಮಯದಲ್ಲಿ ಮೂಳೆ ತಜ್ಞರು ಮತ್ತು ಡ್ರೆಸ್ಸರ್ ಲಭ್ಯವಿಲ್ಲದ ಕಾರಣ ಲಭ್ಯವಿದ್ದ ವಸ್ತುವಿನಿಂದಲೇ ತುರ್ತು ಚಿಕಿತ್ಸೆ ನೀಡಿ, ಮೇಲ್ಮಟ್ಟದ ಆಸ್ಪತ್ರೆಗೆ ಕಳಿಸಲಾಗಿದೆ” ಎಂದು ಆಸ್ಪತ್ರೆಯ ಉಸ್ತುವಾರಿ ವೈದ್ಯ ಅಭಿನವ್ ಪ್ರಿಯದರ್ಶಿ ಸಮರ್ಥಿಸಿಕೊಂಡಿದ್ದಾರೆ.
ವಿಡಿಯೋ ವೈರಲ್ ಆದ ಬಳಿಕ, ಬೆಗುಸರಾಯ್ ಜಿಲ್ಲಾ ಸಿವಿಲ್ ಸರ್ಜನ್ ಡಾ. ಅಶೋಕ್ ಕುಮಾರ್ ಅವರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಸಮಗ್ರ ತನಿಖೆಗೆ ಆದೇಶಿಸಿದ್ದಾರೆ. ತುರ್ತು ಸ್ಥಿತಿಯಲ್ಲಿ ಮೂಳೆಯನ್ನು ಸ್ಥಿರಗೊಳಿಸಲು ತಾತ್ಕಾಲಿಕ ಸ್ಪ್ಲಿಂಟ್ ಬಳಸುವುದು ಚಿಕಿತ್ಸಾ ಪದ್ಧತಿಯಲ್ಲಿ ಅಂಗೀಕೃತವಾಗಿದ್ದರೂ, ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಕೊರತೆ ಮತ್ತು ಕರ್ತವ್ಯ ಲೋಪ ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.



