ಅಕ್ಕಿ ಬೆಲೆ ಏರಿಕೆಯನ್ನು ಕೇವಲ ಭತ್ತದ ಉತ್ಪಾದನೆ ಕುಸಿತದ ಪರಿಣಾಮ ಎಂದು ವ್ಯಾಖ್ಯಾನಿಸುವುದು ಸರಿಯಲ್ಲ. ಏಕೆಂದರೆ ಮಾರುಕಟ್ಟೆಯಲ್ಲಿ ಈಗ ಮಾರಾಟವಾಗುತ್ತಿರುವ ಅಕ್ಕಿ ಬಹುತೇಕ ಹಿಂದಿನ ಬೆಳೆ ವರ್ಷಗಳಲ್ಲಿ ಉತ್ಪಾದನೆಯಾಗಿ ಸಂಗ್ರಹಿಸಲ್ಪಟ್ಟಿರುವ ಅಕ್ಕಿ. ಪ್ರಸಕ್ತ ಸಾಲಿನ ಭತ್ತದ ಕಟಾವು ಮತ್ತು ಹೊಸ ಅಕ್ಕಿಯ ಮಾರುಕಟ್ಟೆ ಪ್ರವೇಶ ಇನ್ನೂ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ. ಹೀಗಿರುವಾಗ, ಅಕ್ಕಿ ಬೆಲೆ ಏರಿಕೆಗೆ ಕೇವಲ ಈ ವರ್ಷದ ಬೆಳೆ ಕೊರತೆಯನ್ನೇ ಕಾರಣವೆಂದು ಹೇಳಲು ಸಾಧ್ಯವೇ?.
ಇಲ್ಲಿಯೇ ಆಹಾರಧಾನ್ಯ ಮಾರುಕಟ್ಟೆಯ ಅಸಲಿ ಆಯಾಮಗಳನ್ನು ಪರಿಶೀಲಿಸಬೇಕಿದೆ. ಹಿಂದಿನ ವರ್ಷಗಳಲ್ಲಿ ಉತ್ತಮ ಉತ್ಪಾದನೆಯಾಗಿದ್ದರೂ ಬೆಲೆ ಏರಿಕೆಯಾಗುವುದು, ಸರ್ಕಾರಿ ಸಂಗ್ರಹದಲ್ಲಿರುವ ಅಕ್ಕಿಯನ್ನು ದೊಡ್ಡ ಪ್ರಮಾಣದಲ್ಲಿ ಎಥೆನಾಲ್ ಉತ್ಪಾದನೆಗೆ ಮಾರಾಟ ಮಾಡುವುದು, ರೈತರು ಸಾಂಪ್ರದಾಯಿಕ ಭತ್ತದ ಬೆಳೆಯಿಂದ ಕಬ್ಬಿನಂತಹ ವಾಣಿಜ್ಯ ಬೆಳೆಗಳಿಗೆ ಬದಲಾಗುವುದು ಮತ್ತು ಮಾರುಕಟ್ಟೆಯಲ್ಲಿ ಭವಿಷ್ಯದ ಉತ್ಪಾದನೆ ಕುರಿತು ಮುಂಚಿತವಾಗಿಯೇ ಬೆಲೆ ನಿರೀಕ್ಷೆಗಳು ರೂಪುಗೊಳ್ಳುವುದು ಇವೆಲ್ಲವೂ ಅಕ್ಕಿ ಬೆಲೆಯ ಮೇಲೆ ಪರಿಣಾಮ ಬೀರುವ ಅಂಶಗಳಾಗಿವೆ.
ಚಿಂತಕರಾದ ಕೆ.ಪಿ. ಸುರೇಶ್ ಈದಿನ.ಕಾಮ್ ಜೊತೆ ಮಾತನಾಡಿ, ಅಕ್ಕಿ ಬೆಲೆ ಏರಿಕೆಯ ಹಿಂದೆ ಕೇವಲ ಉತ್ಪಾದನೆಯ ಲೆಕ್ಕಾಚಾರವಿಲ್ಲ; ಮಾರುಕಟ್ಟೆ ವ್ಯವಸ್ಥೆ, ಭವಿಷ್ಯದ ಬೆಲೆ ನಿರೀಕ್ಷೆ, ಎಥೆನಾಲ್ ನೀತಿ ಮತ್ತು ಕೃಷಿ ಉತ್ಪಾದನೆಯ ದಿಕ್ಕನ್ನು ನಿರ್ಧರಿಸುತ್ತಿರುವ ಆರ್ಥಿಕ ಹಿತಾಸಕ್ತಿಗಳನ್ನೂ ಗಮನಿಸಬೇಕಿದೆ ಎಂದು ವಿಶ್ಲೇಷಿಸಿದ್ದಾರೆ.
ಹಿಂದಿನ ಬೆಳೆ ಚೆನ್ನಾಗಿದ್ದರೂ ಬೆಲೆ ಏರಿಕೆಯೇಕೆ?

ಅಕ್ಕಿ ಬೆಲೆ ನಿರ್ಧಾರವಾಗುವುದು ಕೇವಲ ಗದ್ದೆಯಲ್ಲಿ ಬೆಳೆದ ಭತ್ತದ ಪ್ರಮಾಣದ ಆಧಾರದ ಮೇಲೆ ಅಲ್ಲ. ಮಾರುಕಟ್ಟೆಯಲ್ಲಿ ಲಭ್ಯವಿರುವ ಹಳೆಯ ದಾಸ್ತಾನು, ಸರ್ಕಾರಿ ಸಂಗ್ರಹ, ಖಾಸಗಿ ವ್ಯಾಪಾರಿಗಳ ಕೈಯಲ್ಲಿರುವ ದಾಸ್ತಾನು, ಅಕ್ಕಿ ಗಿರಣಿಗಳ ಸಂಸ್ಕರಣಾ ಸಾಮರ್ಥ್ಯ, ಸಾಗಣೆ ವೆಚ್ಚ, ರಫ್ತು ಬೇಡಿಕೆ ಮತ್ತು ಭವಿಷ್ಯದ ಉತ್ಪಾದನೆಯ ನಿರೀಕ್ಷೆಗಳೂ ಬೆಲೆ ನಿರ್ಧಾರದಲ್ಲಿ ಪಾತ್ರ ವಹಿಸುತ್ತವೆ. 2024-25ರಲ್ಲಿ ಭಾರತದಲ್ಲಿ ಅಕ್ಕಿ ಉತ್ಪಾದನೆ ಸುಮಾರು 150.18 ಮಿಲಿಯನ್ ಟನ್ಗಳಷ್ಟಿತ್ತು. ಅದಕ್ಕೂ ಹಿಂದಿನ 2023-24ರಲ್ಲಿ ಸುಮಾರು 137.83 ಮಿಲಿಯನ್ ಟನ್ ಉತ್ಪಾದನೆಯಾಗಿತ್ತು. ಅಂದರೆ ಹಿಂದಿನ ವರ್ಷಕ್ಕಿಂತ ಸುಮಾರು 12.35 ಮಿಲಿಯನ್ ಟನ್ಗಳಷ್ಟು ಹೆಚ್ಚಳವಾಗಿತ್ತು. 2025-26ರಲ್ಲಿಯೂ ಅಕ್ಕಿ ಉತ್ಪಾದನೆ 154.02 ಮಿಲಿಯನ್ ಟನ್ಗಳಿಗೆ ಏರಿಕೆಯಾಗಿದೆ ಎಂದು ಕೇಂದ್ರ ಕೃಷಿ ಸಚಿವಾಲಯದ ಅಂತಿಮ ಉತ್ಪಾದನಾ ಅಂದಾಜು ತಿಳಿಸಿದೆ.
ಈ ಅಂಕಿ-ಅಂಶಗಳು ಒಂದು ಪ್ರಶ್ನೆಯನ್ನು ಮುಂದಿಡುತ್ತವೆ. ಉತ್ಪಾದನೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಗ್ರಾಹಕರು ಅಕ್ಕಿಯನ್ನು ಹೆಚ್ಚಿನ ಬೆಲೆಗೆ ಖರೀದಿಸುವ ಪರಿಸ್ಥಿತಿ ಏಕೆ ನಿರ್ಮಾಣವಾಗಿದೆ?. ಕೃಷಿ ಉತ್ಪಾದನೆ ಹೆಚ್ಚಳವಾದ ಮಾತ್ರಕ್ಕೆ ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಾಗುತ್ತದೆ ಎಂಬ ಖಾತರಿ ಇಲ್ಲ. ಉತ್ಪಾದನೆಯಾದ ಆಹಾರಧಾನ್ಯ ಎಲ್ಲಿ ಸಂಗ್ರಹವಾಗುತ್ತಿದೆ, ಎಷ್ಟು ಪ್ರಮಾಣ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದೆ ಮತ್ತು ಎಷ್ಟು ಪ್ರಮಾಣ ಬೇರೆ ಕೈಗಾರಿಕಾ ಬಳಕೆಗೆ ವರ್ಗಾವಣೆಯಾಗುತ್ತಿದೆ ಎಂಬುದೂ ಅಷ್ಟೇ ಮುಖ್ಯ.
ಎಫ್ಸಿಐ ದಾಸ್ತಾನು: ಎಥೆನಾಲ್ ಉತ್ಪಾದನೆಗೆ ಹೋದ ಲಕ್ಷಾಂತರ ಟನ್ ಅಕ್ಕಿ!
ಅಕ್ಕಿ ಬೆಲೆ ಏರಿಕೆಯ ಚರ್ಚೆಯಲ್ಲಿ ಅತ್ಯಂತ ಮಹತ್ವದ ಸಂಗತಿಯೆಂದರೆ ಭಾರತೀಯ ಆಹಾರ ನಿಗಮ (ಎಫ್ಸಿಐ) ತನ್ನ ಸಂಗ್ರಹದಲ್ಲಿದ್ದ ಅಕ್ಕಿಯನ್ನು ಎಥೆನಾಲ್ ಉತ್ಪಾದನೆಗಾಗಿ ಡಿಸ್ಟಿಲರಿಗಳಿಗೆ ಮಾರಾಟ ಮಾಡಿರುವುದು. ಲಭ್ಯವಿರುವ ಕೇಂದ್ರ ಸರ್ಕಾರದ ಸಂಸತ್ತಿನ ಉತ್ತರದ ಪ್ರಕಾರ:
- 2023-24ರಲ್ಲಿ ಎಥೆನಾಲ್ ಉತ್ಪಾದನೆಗಾಗಿ ಮಾರಾಟವಾದ ಅಕ್ಕಿ: 8.96 ಲಕ್ಷ ಮೆಟ್ರಿಕ್ ಟನ್.
- 2024-25ರಲ್ಲಿ: 2.36 ಲಕ್ಷ ಮೆಟ್ರಿಕ್ ಟನ್.
- 2025-26ರಲ್ಲಿ: 52.22 ಲಕ್ಷ ಮೆಟ್ರಿಕ್ ಟನ್.
- 2026-27ರ ಜುಲೈ 31ರವರೆಗೆ: 23.42 ಲಕ್ಷ ಮೆಟ್ರಿಕ್ ಟನ್.
ಇದಲ್ಲದೆ, 2025ರ ಜೂನ್ನಿಂದ 2026ರ ಜೂನ್ವರೆಗೆ ಎಫ್ಸಿಐನಿಂದ ಎಥೆನಾಲ್ ಡಿಸ್ಟಿಲರಿಗಳಿಗೆ ಒಟ್ಟು 63.5 ಲಕ್ಷ ಟನ್ ಅಕ್ಕಿ ರವಾನೆಯಾಗಿದೆ ಎಂದು ಸಂಸತ್ತಿನಲ್ಲಿ ಮಂಡಿಸಿದ ಮಾಹಿತಿಯನ್ನು ಆಧರಿಸಿದ ವರದಿಗಳು ತಿಳಿಸಿವೆ. 2024-25ರಲ್ಲಿ 2.36 ಲಕ್ಷ ಟನ್ ಇದ್ದ ಮಾರಾಟವು 2025-26ರಲ್ಲಿ 52.22 ಲಕ್ಷ ಟನ್ಗೆ ಏರಿರುವುದು ಗಮನಾರ್ಹ. ಅಂದರೆ ಒಂದೇ ವರ್ಷದಲ್ಲಿ ಸುಮಾರು 22 ಪಟ್ಟು ಹೆಚ್ಚಳವಾಗಿದೆ. ಇದು ಸಾಮಾನ್ಯ ಪ್ರಮಾಣದ ಕೈಗಾರಿಕಾ ಬಳಕೆಯಲ್ಲ. ದೇಶದ ಆಹಾರಧಾನ್ಯ ನಿರ್ವಹಣಾ ನೀತಿಯಲ್ಲಿ ದೊಡ್ಡ ಬದಲಾವಣೆಯನ್ನು ಸೂಚಿಸುವ ಬೆಳವಣಿಗೆಯಾಗಿದೆ.
ಎಫ್ಸಿಐ ಅಕ್ಕಿಯನ್ನು ಎಥೆನಾಲ್ ಉತ್ಪಾದನೆಗೆ ನೀಡುವುದರ ಉದ್ದೇಶ ಪೆಟ್ರೋಲ್ನಲ್ಲಿ ಎಥೆನಾಲ್ ಮಿಶ್ರಣ ಹೆಚ್ಚಿಸುವ ನೀತಿಗೆ ನೆರವಾಗುವುದು ಹಾಗೂ ಹೆಚ್ಚುವರಿ ಆಹಾರಧಾನ್ಯವನ್ನು ಬಳಸಿಕೊಳ್ಳುವುದಾಗಿದೆ ಎಂಬುದು ಸರ್ಕಾರದ ವಾದ. ಆದರೆ, ಆಹಾರ ಭದ್ರತೆ ಮತ್ತು ಕೈಗಾರಿಕಾ ಬಳಕೆ ನಡುವಿನ ಸಮತೋಲನವನ್ನು ಸರ್ಕಾರ ಹೇಗೆ ನಿರ್ವಹಿಸುತ್ತಿದೆ ಎಂಬ ಪ್ರಶ್ನೆ ಇಲ್ಲಿ ಎದುರಾಗುತ್ತದೆ.
ಇನ್ನೊಂದು ಗಮನಾರ್ಹ ಅಂಶವೆಂದರೆ 2025ರ ಜೂನ್ನಿಂದ ಅಕ್ಟೋಬರ್ವರೆಗೆ ಪ್ರತಿ ಕ್ವಿಂಟಾಲ್ಗೆ ₹2,250 ಮತ್ತು ನವೆಂಬರ್ 2025ರಿಂದ ₹2,320 ದರದಲ್ಲಿ ಎಫ್ಸಿಐ ಅಕ್ಕಿಯನ್ನು ಮಾರಾಟ ಮಾಡಿದೆ. ಆದರೆ, ಎಫ್ಸಿಐನ ಸರಾಸರಿ ಅಕ್ಕಿ ಸ್ವಾಧೀನ ವೆಚ್ಚ 2025-26ರಲ್ಲಿ ಪ್ರತಿ ಕ್ವಿಂಟಾಲ್ಗೆ ₹3,889.46 ಆಗಿತ್ತು ಎಂದು ಸಂಸತ್ತಿನಲ್ಲಿ ಸರ್ಕಾರ ಮಾಹಿತಿ ನೀಡಿದೆ.
ಅಂದರೆ ಖರೀದಿ ವೆಚ್ಚಕ್ಕಿಂತ ಕಡಿಮೆ ದರದಲ್ಲಿ ಕೈಗಾರಿಕಾ ಬಳಕೆಗೆ ಅಕ್ಕಿ ಮಾರಾಟವಾಗಿರುವ ವಿಚಾರವೂ ಸಾರ್ವಜನಿಕ ಚರ್ಚೆಗೆ ಅರ್ಹವಾಗಿದೆ.
ಸರ್ಕಾರಿ ದಾಸ್ತಾನು ಸಾಕಷ್ಟಿದ್ದರೂ ಗ್ರಾಹಕರಿಗೆ ಬೆಲೆ ಏರಿಕೆಯ ಹೊರೆ!
2026ರ ಮೇ 28ರ ಕೇಂದ್ರ ಸರ್ಕಾರದ ಆಹಾರಧಾನ್ಯ ದಾಸ್ತಾನು ಮಾಹಿತಿಯ ಪ್ರಕಾರ, ಕೇಂದ್ರ ಸಂಗ್ರಹದಲ್ಲಿ 397 ಲಕ್ಷ ಟನ್ ಅಕ್ಕಿ ಇತ್ತು. ಇದರ ಜೊತೆಗೆ ಸುಮಾರು 298 ಲಕ್ಷ ಟನ್ ಭತ್ತವನ್ನು ಅಕ್ಕಿಯಾಗಿ ಸಂಸ್ಕರಿಸಬೇಕಿತ್ತು. ಜುಲೈ 1ಕ್ಕೆ ನಿಗದಿಪಡಿಸಿದ್ದ ಅಕ್ಕಿಯ ಬಫರ್ ಸ್ಟಾಕ್ ಮಾನದಂಡ ಕೇವಲ 135.40 ಲಕ್ಷ ಟನ್ ಆಗಿತ್ತು. ಇದಕ್ಕೆ ಹೋಲಿಸಿದರೆ ಲಭ್ಯವಿದ್ದ ಅಕ್ಕಿ ದಾಸ್ತಾನು ಬಹಳ ಹೆಚ್ಚಾಗಿತ್ತು. ಹೀಗಿರುವಾಗ, ದೇಶದಲ್ಲಿ ಅಕ್ಕಿ ಲಭ್ಯತೆಯೇ ಇಲ್ಲ ಎಂಬ ಪರಿಸ್ಥಿತಿ ಇರಲಿಲ್ಲ. ಆದರೆ, ಸರ್ಕಾರಿ ದಾಸ್ತಾನು ಇರುವುದು ಮತ್ತು ಅದು ಗ್ರಾಹಕರಿಗೆ ಸೂಕ್ತ ಬೆಲೆಯಲ್ಲಿ ತಲುಪುವುದು ಎರಡೂ ಬೇರೆ ವಿಚಾರಗಳು.
ಸರ್ಕಾರ ಅಗತ್ಯವಿದ್ದಾಗ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (OMSS) ಮೂಲಕ ಅಕ್ಕಿ ಬಿಡುಗಡೆ ಮಾಡಿ ಬೆಲೆ ನಿಯಂತ್ರಿಸಬಹುದು. ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯ ಬೆಲೆ ಮೇಲ್ವಿಚಾರಣಾ ಮಾಹಿತಿಯ ಪ್ರಕಾರ, 2026ರ ನವೆಂಬರ್ 5ರಂದು ದೇಶದ ಸರಾಸರಿ ಚಿಲ್ಲರೆ ಅಕ್ಕಿ ಬೆಲೆ ಪ್ರತಿ ಕೆ.ಜಿ.ಗೆ ₹48.44 ಇತ್ತು. ಅಕ್ಟೋಬರ್ ಆರಂಭದಲ್ಲಿ ಇದು ಸುಮಾರು ₹46.76ರಷ್ಟಿತ್ತು. ಅಂದರೆ ಒಂದು ತಿಂಗಳಲ್ಲೇ ಬೆಲೆಯಲ್ಲಿ ಏರಿಕೆ ದಾಖಲಾಗಿದೆ. ಕರ್ನಾಟಕದಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದೆ. ಸೆಪ್ಟೆಂಬರ್ 2026ರಲ್ಲಿ ರಾಜ್ಯದ ಸರಾಸರಿ ಚಿಲ್ಲರೆ ಅಕ್ಕಿ ಬೆಲೆ ಪ್ರತಿ ಕೆ.ಜಿ.ಗೆ ₹63.70 ತಲುಪಿತ್ತು. ಜುಲೈನಿಂದ ಸೆಪ್ಟೆಂಬರ್ ಅವಧಿಯಲ್ಲಿ ಸುಮಾರು ₹7.30ರಷ್ಟು ಹೆಚ್ಚಳವಾಗಿತ್ತು ಎಂದು ಕೇಂದ್ರದ ಬೆಲೆ ಮೇಲ್ವಿಚಾರಣಾ ದತ್ತಾಂಶವನ್ನು ಆಧರಿಸಿದ ವರದಿಗಳು ತಿಳಿಸಿವೆ. ಈ ಬೆಲೆ ಏರಿಕೆಯ ಹೊರೆ ನೇರವಾಗಿ ಸಾಮಾನ್ಯ ಕುಟುಂಬಗಳ ಅಡುಗೆಮನೆಯ ಮೇಲೆ ಬೀಳುತ್ತಿದೆ.
ಫ್ಯೂಚರ್ಸ್ ಟ್ರೇಡಿಂಗ್: ಬೆಳೆ ಬರುವ ಮುನ್ನವೇ ಬೆಲೆ ನಿರೀಕ್ಷೆಗಳ ಆಟ!
ಇಲ್ಲಿ ಮತ್ತೊಂದು ಪ್ರಮುಖ ವಿಚಾರವೆಂದರೆ ಫ್ಯೂಚರ್ಸ್ ಟ್ರೇಡಿಂಗ್ ಅಥವಾ ಭವಿಷ್ಯದ ಸರಕು ವಹಿವಾಟು. ಆಧುನಿಕ ಮಾರುಕಟ್ಟೆಯಲ್ಲಿ ಒಂದು ಬೆಳೆ ಹೊಲದಲ್ಲಿರುವಾಗಲೇ ಅದರ ಮುಂದಿನ ಉತ್ಪಾದನೆ, ಬೇಡಿಕೆ, ಪೂರೈಕೆ ಮತ್ತು ಬೆಲೆಗಳ ಕುರಿತು ಅಂದಾಜುಗಳನ್ನು ರೂಪಿಸಲಾಗುತ್ತದೆ. ಅಂತರರಾಷ್ಟ್ರೀಯ ಸರಕು ಮಾರುಕಟ್ಟೆಗಳು, ವ್ಯಾಪಾರ ಸಂಸ್ಥೆಗಳು, ದೊಡ್ಡ ಖರೀದಿದಾರರು ಮತ್ತು ಹೂಡಿಕೆದಾರರು ಈ ನಿರೀಕ್ಷೆಗಳನ್ನು ಆಧರಿಸಿ ತಮ್ಮ ವ್ಯಾಪಾರ ತಂತ್ರಗಳನ್ನು ರೂಪಿಸುತ್ತಾರೆ.
ಉದಾಹರಣೆಗೆ, ಈ ಬಾರಿ ಭತ್ತದ ಬಿತ್ತನೆ ಕಡಿಮೆಯಾಗಿದೆ, ಮಳೆ ಕೊರತೆಯಾಗಿದೆ, ಇಳುವರಿ ಕುಸಿಯಬಹುದು ಎಂಬ ಮಾಹಿತಿ ಮಾರುಕಟ್ಟೆಯಲ್ಲಿ ಹರಿದಾಡಿದರೆ, ಹೊಸ ಬೆಳೆ ಮಾರುಕಟ್ಟೆಗೆ ಬರುವುದಕ್ಕೂ ಮೊದಲೇ ವ್ಯಾಪಾರಿಗಳು ಮುಂದಿನ ದಿನಗಳಲ್ಲಿ ಬೆಲೆ ಹೆಚ್ಚಾಗಬಹುದು ಎಂದು ನಿರೀಕ್ಷಿಸಬಹುದು. ಅಂತಹ ನಿರೀಕ್ಷೆಗಳು ಖರೀದಿ, ಸಂಗ್ರಹ ಮತ್ತು ಮಾರಾಟದ ನಿರ್ಧಾರಗಳ ಮೇಲೆ ಪರಿಣಾಮ ಬೀರಬಹುದು. ಇದರಿಂದ ಮಾರುಕಟ್ಟೆಯಲ್ಲಿ ನಿಜವಾದ ಕೊರತೆ ಉಂಟಾಗುವ ಮುನ್ನವೇ ಬೆಲೆ ಒತ್ತಡ ನಿರ್ಮಾಣವಾಗುವ ಸಾಧ್ಯತೆಯಿದೆ.
ಆದರೆ, ಒಂದು ಮುಖ್ಯ ಕಾನೂನು ಅಂಶವನ್ನೂ ಗಮನಿಸಬೇಕು. ಭಾರತದಲ್ಲಿ ಎನ್ಎಸ್ಇ ಮತ್ತು ಎನ್ಸಿಡಿಎಕ್ಸ್ನಂತಹ ಸರಕು ಉತ್ಪನ್ನಗಳ ಮಾರುಕಟ್ಟೆಗಳಲ್ಲಿ ಪ್ಯಾಡಿ (ನಾನ್-ಬಾಸ್ಮತಿ) ಫ್ಯೂಚರ್ಸ್ ಒಪ್ಪಂದಗಳ ವಹಿವಾಟನ್ನು ಸೆಬಿ 2021ರಿಂದ ಅಮಾನತುಗೊಳಿಸಿತ್ತು. 2025ರ ಮಾರ್ಚ್ನಲ್ಲಿ ಈ ಅಮಾನತನ್ನು 2026ರ ಮಾರ್ಚ್ 31ರವರೆಗೆ ವಿಸ್ತರಿಸಿತ್ತು.
ಇದೇ ಸಂದರ್ಭದಲ್ಲಿ ಚಿಂತಕ ಕೆ.ಪಿ. ಸುರೇಶ್ ಅವರು ಮುಂದಿಡುವ ಮತ್ತೊಂದು ವಿಚಾರ ಗಮನಾರ್ಹವಾಗಿದೆ. ಉಪಗ್ರಹ ತಂತ್ರಜ್ಞಾನ ಬಳಸಿ ಕೃಷಿ ಉತ್ಪಾದನೆಯ ಕುರಿತು ಮುಂಚಿತವಾಗಿ ಮಾಹಿತಿ ಪಡೆಯುವ ಸಾಮರ್ಥ್ಯ ಇಂದು ಬೆಳೆದಿದೆ. ಮಂಡ್ಯದಲ್ಲಿ ಭತ್ತದ ಬೆಳೆ ಯಾವ ಹಂತದಲ್ಲಿದೆ, ಕಲಬುರಗಿಯಲ್ಲಿ ತೊಗರಿಯ ಸ್ಥಿತಿ ಹೇಗಿದೆ, ಬೆಳಗಾವಿಯಲ್ಲಿ ಕಬ್ಬಿನ ವಿಸ್ತೀರ್ಣ ಎಷ್ಟಿದೆ, ಬೆಳೆಗಳಿಗೆ ರೋಗಬಾಧೆ ಇದೆಯೇ, ನಿರೀಕ್ಷಿತ ಇಳುವರಿ ಎಷ್ಟಿರಬಹುದು ಎಂಬುದನ್ನು ದೂರಸಂವೇದಿ ತಂತ್ರಜ್ಞಾನದಿಂದ ಅಂದಾಜಿಸಬಹುದು.
ಇಂತಹ ಮಾಹಿತಿ ಸರ್ಕಾರದ ಕೈಯಲ್ಲಿ ಇದ್ದರೆ ಬೆಳೆ ಉತ್ಪಾದನೆ ಮತ್ತು ಆಹಾರ ಪೂರೈಕೆಯನ್ನು ಮುಂಚಿತವಾಗಿ ಯೋಜಿಸಬಹುದು. ರೈತರಿಗೆ ಸರಿಯಾದ ಸಲಹೆ ನೀಡಬಹುದು. ಗ್ರಾಹಕರಿಗೆ ಬೆಲೆ ಸ್ಥಿರತೆ ಒದಗಿಸಬಹುದು. ಆದರೆ, ಈ ತಂತ್ರಜ್ಞಾನವನ್ನು ಕೇವಲ ದೊಡ್ಡ ವ್ಯಾಪಾರ ಸಂಸ್ಥೆಗಳು ಮತ್ತು ಕಾರ್ಪೊರೇಟ್ ವಲಯಗಳು ತಮ್ಮ ವ್ಯಾಪಾರ ನಿರ್ಧಾರಗಳಿಗೆ ಬಳಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾದರೆ, ರೈತರು ಮತ್ತು ಗ್ರಾಹಕರಿಗೆ ಅದರ ಲಾಭ ಸಿಗುವುದಿಲ್ಲ ಎಂಬುದು ಅವರ ಆತಂಕ.
ಭತ್ತದ ಹೊಲಗಳಲ್ಲಿ ಕಬ್ಬಿನ ವಿಸ್ತರಣೆ: ಆಹಾರ ಬೆಳೆಗಳಿಂದ ವಾಣಿಜ್ಯ ಬೆಳೆಗಳತ್ತ!
ಅಕ್ಕಿ ಬೆಲೆ ಏರಿಕೆಯ ಇನ್ನೊಂದು ಆಯಾಮವೆಂದರೆ ದೇಶದ ಕೃಷಿ ಭೂಮಿಯಲ್ಲಿ ನಡೆಯುತ್ತಿರುವ ಬೆಳೆ ಬದಲಾವಣೆ. ಕರ್ನಾಟಕದ ಹಲವು ಪ್ರದೇಶಗಳಲ್ಲಿ ಭತ್ತದಂತಹ ಆಹಾರ ಬೆಳೆಗಳಿಂದ ಕಬ್ಬಿನಂತಹ ವಾಣಿಜ್ಯ ಬೆಳೆಗಳತ್ತ ರೈತರು ಬದಲಾಗುತ್ತಿರುವುದು ಕಂಡುಬರುತ್ತಿದೆ.
ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿ ಕಬ್ಬಿನ ವಿಸ್ತೀರ್ಣ ಗಮನಾರ್ಹವಾಗಿ ಹೆಚ್ಚಿದೆ. ವರದಿಗಳ ಪ್ರಕಾರ, 2022-23ರಲ್ಲಿ 2.60 ಲಕ್ಷ ಹೆಕ್ಟೇರ್ ಇದ್ದ ಕಬ್ಬಿನ ಪ್ರದೇಶ 2023-24ರಲ್ಲಿ 2.80 ಲಕ್ಷ ಹೆಕ್ಟೇರ್, 2024-25ರಲ್ಲಿ 2.93 ಲಕ್ಷ ಹೆಕ್ಟೇರ್ ಹಾಗೂ 2025-26ರಲ್ಲಿ ಸುಮಾರು 3 ಲಕ್ಷ ಹೆಕ್ಟೇರ್ಗೆ ಏರಿದೆ. ರಾಜ್ಯದ ಒಟ್ಟು ಕಬ್ಬಿನ ಪ್ರದೇಶದಲ್ಲಿ ಬೆಳಗಾವಿಯ ಪಾಲು ಸುಮಾರು ಶೇ.44ರಷ್ಟಿದೆ ಎಂಬ ಅಂದಾಜುಗಳೂ ವರದಿಯಾಗಿವೆ.
ಮಂಡ್ಯ ಮತ್ತು ಮೈಸೂರು ಜಿಲ್ಲೆಗಳನ್ನು ಒಳಗೊಂಡ ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಿನ ಲಭ್ಯತೆ ಹೆಚ್ಚಿರುವ ಸಂದರ್ಭಗಳಲ್ಲಿ ರೈತರು ಭತ್ತದ ಜೊತೆಗೆ ಕಬ್ಬಿನ ಬೆಳೆಯತ್ತಲೂ ಹೆಚ್ಚಿನ ಆಸಕ್ತಿ ತೋರಿಸುತ್ತಾರೆ.
ಕಲಬುರಗಿ, ಬಾಗಲಕೋಟೆ, ಕೊಪ್ಪಳ ಸೇರಿದಂತೆ ಕೃಷ್ಣಾ ಮತ್ತು ತುಂಗಭದ್ರಾ ಜಲಾನಯನ ಪ್ರದೇಶಗಳಲ್ಲಿಯೂ ಕಬ್ಬು ಬೆಳೆಯ ವಿಸ್ತರಣೆ ಕುರಿತು ಚರ್ಚೆ ನಡೆಯುತ್ತಿದೆ. ಸ್ಥಳೀಯ ಸಕ್ಕರೆ ಕಾರ್ಖಾನೆಗಳು, ಎಥೆನಾಲ್ ಉತ್ಪಾದನೆಯ ಬೇಡಿಕೆ ಮತ್ತು ಕಬ್ಬಿಗೆ ದೊರೆಯುವ ಬೆಲೆ ರೈತರ ಬೆಳೆ ಆಯ್ಕೆಯ ಮೇಲೆ ಪ್ರಭಾವ ಬೀರುತ್ತಿವೆ.
ಆದರೆ, ಈ ಬೆಳೆ ಬದಲಾವಣೆಗೆ ರೈತರನ್ನೇ ಹೊಣೆ ಮಾಡುವುದು ಸರಿಯಲ್ಲ. ಖಚಿತ ಮಾರುಕಟ್ಟೆ, ಕಾರ್ಖಾನೆಗಳ ಖರೀದಿ ವ್ಯವಸ್ಥೆ ಮತ್ತು ಆದಾಯದ ನಿರೀಕ್ಷೆಗಳು ಅವರ ನಿರ್ಧಾರಗಳನ್ನು ಪ್ರಭಾವಿಸುತ್ತವೆ. ಸರ್ಕಾರದ ಕೃಷಿ ನೀತಿ ಯಾವ ಬೆಳೆಗೆ ಪ್ರೋತ್ಸಾಹ ನೀಡುತ್ತದೆ ಎಂಬುದೂ ಮುಖ್ಯವಾಗುತ್ತದೆ. ಇಲ್ಲಿ ಮತ್ತೊಂದು ಪ್ರಶ್ನೆ ಎದುರಾಗುತ್ತದೆ. ಆಹಾರ ಧಾನ್ಯಗಳ ಉತ್ಪಾದನೆಗೆ ಅಗತ್ಯವಿರುವ ಭೂಮಿ ಮತ್ತು ನೀರು ಕ್ರಮೇಣ ವಾಣಿಜ್ಯ ಬೆಳೆಗಳತ್ತ ತಿರುಗಿದರೆ ಮುಂದಿನ ದಿನಗಳಲ್ಲಿ ಆಹಾರ ಭದ್ರತೆಯ ಸ್ಥಿತಿ ಏನಾಗಬಹುದು?.
ರೈತರಿಗೆ ಬೆಳೆ ಆಯ್ಕೆಯ ಸ್ವಾತಂತ್ರ್ಯವಿದೆಯೇ? ಆಹಾರ ಭದ್ರತೆಯ ಜವಾಬ್ದಾರಿ ಯಾರದ್ದು?
ಒಂದೆಡೆ ಭತ್ತ ಬೆಳೆಯುವ ರೈತರಿಗೆ ಸೂಕ್ತ ಬೆಲೆ ಮತ್ತು ಖಚಿತ ಮಾರುಕಟ್ಟೆ ಒದಗಿಸುವಲ್ಲಿ ಸರ್ಕಾರ ವಿಫಲವಾಗುತ್ತದೆ. ಮತ್ತೊಂದೆಡೆ ಕಬ್ಬಿನಂತಹ ವಾಣಿಜ್ಯ ಬೆಳೆಗಳಿಗೆ ಕೈಗಾರಿಕಾ ಬೇಡಿಕೆ ಮತ್ತು ಖರೀದಿ ವ್ಯವಸ್ಥೆ ಬಲವಾಗಿರುವುದರಿಂದ ರೈತರು ಆ ಬೆಳೆಗಳತ್ತ ಆಕರ್ಷಿತರಾಗುತ್ತಾರೆ. ಇದರ ಪರಿಣಾಮವಾಗಿ ಆಹಾರ ಬೆಳೆಗಳ ಉತ್ಪಾದನಾ ಪ್ರದೇಶ ಕುಗ್ಗುವ ಅಪಾಯವಿದೆ. ಮುಂದಿನ ವರ್ಷಗಳಲ್ಲಿ ಭತ್ತದ ಉತ್ಪಾದನೆ ಕಡಿಮೆಯಾದರೆ ಅದನ್ನು ಮತ್ತೆ ಹೆಚ್ಚಿಸುವುದು ಸುಲಭದ ಕೆಲಸವಲ್ಲ.
ಕೆಲವು ಸಂದರ್ಭಗಳಲ್ಲಿ ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುವುದಿಲ್ಲ. ಗ್ರಾಹಕರು ಅದೇ ಆಹಾರಧಾನ್ಯವನ್ನು ಹೆಚ್ಚಿನ ಬೆಲೆಗೆ ಖರೀದಿಸಬೇಕಾಗುತ್ತದೆ. ಮಧ್ಯದಲ್ಲಿ ಸಂಗ್ರಹಣೆ, ಸಂಸ್ಕರಣೆ ಮತ್ತು ಮಾರುಕಟ್ಟೆ ವ್ಯವಸ್ಥೆಯಲ್ಲಿರುವವರ ಲಾಭದ ಪ್ರಮಾಣ ಹೆಚ್ಚಾಗುವ ಸಾಧ್ಯತೆಯೂ ಇದೆ. ಈ ವ್ಯವಸ್ಥೆಯಲ್ಲಿ ರೈತರು ಮತ್ತು ಗ್ರಾಹಕರು ಇಬ್ಬರೂ ಸಂಕಷ್ಟಕ್ಕೆ ಸಿಲುಕಿದರೆ, ಮಾರುಕಟ್ಟೆಯ ನಿಯಂತ್ರಣ ಯಾರ ಕೈಯಲ್ಲಿದೆ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ.
ಸರ್ಕಾರದ ಬಳಿ ತಂತ್ರಜ್ಞಾನವಿದೆ; ಆದರೆ ಅದನ್ನು ಬಳಸುವ ರಾಜಕೀಯ ಇಚ್ಛಾಶಕ್ತಿ ಇದೆಯೇ?
ಇಂದಿನ ಉಪಗ್ರಹ ತಂತ್ರಜ್ಞಾನ, ಡ್ರೋನ್ ಸಮೀಕ್ಷೆ, ಕೃತಕ ಬುದ್ಧಿಮತ್ತೆ ಮತ್ತು ದೂರಸಂವೇದಿ ವ್ಯವಸ್ಥೆಗಳಿಂದ ಕೃಷಿ ಉತ್ಪಾದನೆಯ ಕುರಿತು ಸಾಕಷ್ಟು ಮುಂಚಿತ ಮಾಹಿತಿ ಪಡೆಯಬಹುದು. ಯಾವ ಜಿಲ್ಲೆಯಲ್ಲಿ ಎಷ್ಟು ಭತ್ತ ಬಿತ್ತನೆಯಾಗಿದೆ? ಯಾವ ಪ್ರದೇಶದಲ್ಲಿ ನೀರಿನ ಕೊರತೆಯಿದೆ? ಎಲ್ಲಿ ಬೆಳೆ ನಷ್ಟವಾಗಬಹುದು? ಯಾವ ಭಾಗದಲ್ಲಿ ಇಳುವರಿ ಹೆಚ್ಚಾಗಬಹುದು? ದೇಶಕ್ಕೆ ಮುಂದಿನ ಆರು ತಿಂಗಳಲ್ಲಿ ಎಷ್ಟು ಅಕ್ಕಿ ಬೇಕಾಗಬಹುದು? ಎಷ್ಟು ದಾಸ್ತಾನು ಇದೆ? ಎಷ್ಟು ಪ್ರಮಾಣವನ್ನು ಕೈಗಾರಿಕಾ ಬಳಕೆಗೆ ನೀಡಬಹುದು?
ಇಂತಹ ಪ್ರಶ್ನೆಗಳಿಗೆ ಮಾಹಿತಿ ಆಧಾರಿತ ಉತ್ತರ ಪಡೆಯುವ ಸಾಮರ್ಥ್ಯ ಸರ್ಕಾರಕ್ಕೆ ಇದೆ.
ಈ ಮಾಹಿತಿಯನ್ನು ರೈತರಿಗೆ ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡಬೇಕು. ಮಾರುಕಟ್ಟೆಯ ದೊಡ್ಡ ವ್ಯಾಪಾರ ಸಂಸ್ಥೆಗಳಿಗೆ ಮಾತ್ರ ಮುಂಚಿತ ಮಾಹಿತಿ ಸಿಗುವ ಬದಲು ರೈತರು, ಸಹಕಾರಿ ಸಂಸ್ಥೆಗಳು, ಗ್ರಾಹಕ ಸಂಘಟನೆಗಳು ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಯೂ ಸಮಾನವಾಗಿ ಬಳಸುವಂತಾಗಬೇಕು.
ಸರ್ಕಾರವು ಬೆಳೆ ಮುನ್ಸೂಚನೆ, ಉತ್ಪಾದನೆ, ದಾಸ್ತಾನು, ಎಥೆನಾಲ್ಗೆ ನೀಡಿದ ಆಹಾರಧಾನ್ಯ, ರಫ್ತು ಮತ್ತು ದೇಶೀಯ ಮಾರುಕಟ್ಟೆಯ ಬೆಲೆಗಳ ಕುರಿತು ನಿಯಮಿತವಾಗಿ ಸಾರ್ವಜನಿಕ ವರದಿ ಬಿಡುಗಡೆ ಮಾಡಬೇಕು.
ಗ್ರಾಹಕರು ಮತ್ತು ರೈತರ ಹಿತಾಸಕ್ತಿಗೆ ಆದ್ಯತೆ ನೀಡಬೇಕಿದೆ
ಅಕ್ಕಿ ಬೆಲೆ ಏರಿಕೆಯನ್ನು ಕೇವಲ ಮಳೆ ಕೊರತೆ ಅಥವಾ ಪ್ರಸಕ್ತ ವರ್ಷದ ಬೆಳೆ ಇಳಿಕೆಯ ಪರಿಣಾಮ ಎಂದು ಹೇಳಿ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು. ಹಿಂದಿನ ವರ್ಷಗಳ ಉತ್ಪಾದನೆ, ಎಫ್ಸಿಐನಲ್ಲಿರುವ ದಾಸ್ತಾನು, ಎಥೆನಾಲ್ ಉತ್ಪಾದನೆಗೆ ಮಾರಾಟ ಮಾಡಿದ ಅಕ್ಕಿಯ ಪ್ರಮಾಣ, ಖಾಸಗಿ ಸಂಗ್ರಹಣೆ, ಮುಕ್ತ ಮಾರುಕಟ್ಟೆ ಬಿಡುಗಡೆ ಮತ್ತು ಹೊಸ ಬೆಳೆ ಬರುವ ಸಮಯ ಇವೆಲ್ಲವನ್ನೂ ಒಟ್ಟಿಗೆ ಪರಿಶೀಲಿಸಬೇಕು. ಅಗತ್ಯವಿದ್ದಲ್ಲಿ ಅಕ್ಕಿಯನ್ನು ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡಬೇಕು. ದಾಸ್ತಾನು ಮಿತಿಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಕೃತಕ ಅಭಾವ ಸೃಷ್ಟಿಸುವ ಸಂಗ್ರಹಣೆ ಅಥವಾ ಬೆಲೆ ತಿರುಚುವಿಕೆ ಕಂಡುಬಂದರೆ ತನಿಖೆ ನಡೆಸಬೇಕು.
ಈ ವಿಶೇಷ ವರದಿ ಓದಿದ್ದೀರಾ? ಕಬ್ಬು ಬೆಳೆಗಾರರ ಬದುಕಿಗೆ ಸಿಹಿಯಾಗದ ಕಬ್ಬಿನ ಬೆಲೆ!
ಅಂತಿಮವಾಗಿ, ಅಕ್ಕಿ ಬೆಲೆ ಏರಿಕೆಯ ಪ್ರಶ್ನೆ ಕೇವಲ ಒಂದು ಕೆ.ಜಿ. ಅಕ್ಕಿಯ ಬೆಲೆ ಎಷ್ಟು ಎಂಬುದಲ್ಲ. ದೇಶದ ಆಹಾರಧಾನ್ಯವನ್ನು ಯಾರು ನಿಯಂತ್ರಿಸುತ್ತಿದ್ದಾರೆ, ಯಾರ ಅಗತ್ಯಕ್ಕೆ ಅದನ್ನು ಬಳಸಲಾಗುತ್ತಿದೆ ಮತ್ತು ಅದರ ಬೆಲೆಯನ್ನು ನಿರ್ಧರಿಸುವ ಶಕ್ತಿ ಯಾರ ಕೈಯಲ್ಲಿದೆ ಎಂಬುದಾಗಿದೆ.
ಈ ವಿಶೇಷ ಸುದ್ದಿ ಓದಿದ್ದೀರಾ? ಅಕ್ಕಿ ಬೆಲೆ ಏರಿಕೆಯ ಬಿಸಿ: ಗ್ರಾಹಕರ ಕೈ ಸುಡುತ್ತಿದೆ, ಆಹಾರ ಭದ್ರತೆಗೆ ಎದುರಾಗಿದೆ ಸವಾಲು!
ಆಹಾರ ಬೆಳೆ ಬೆಳೆಸುವ ರೈತ ಸಂಕಷ್ಟದಲ್ಲಿರಬೇಕು, ಅಕ್ಕಿ ಖರೀದಿಸುವ ಗ್ರಾಹಕ ಹೆಚ್ಚಿನ ಬೆಲೆ ತೆರಬೇಕು, ಆದರೆ ಆಹಾರಧಾನ್ಯದ ಸಂಗ್ರಹಣೆ ಮತ್ತು ವ್ಯಾಪಾರದ ಮೇಲಿನ ನಿಯಂತ್ರಣ ಹೊಂದಿರುವ ದೊಡ್ಡ ಆರ್ಥಿಕ ಶಕ್ತಿಗಳು ಲಾಭದ ಅವಕಾಶಗಳನ್ನು ಪಡೆದುಕೊಳ್ಳಬೇಕು ಎಂದಾದರೆ ಅದು ಆರೋಗ್ಯಕರ ಕೃಷಿ ಮತ್ತು ಆಹಾರ ವ್ಯವಸ್ಥೆಯಲ್ಲ. ಆಹಾರ ಭದ್ರತೆ ಸರ್ಕಾರದ ಜವಾಬ್ದಾರಿ. ಅದನ್ನು ಮಾರುಕಟ್ಟೆಯ ಲಾಭದ ಲೆಕ್ಕಾಚಾರಕ್ಕೆ ಸಂಪೂರ್ಣವಾಗಿ ಒಪ್ಪಿಸುವುದು ಅಪಾಯಕಾರಿ.




