ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ವಿರೋಧಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಕೇರಳದ ಕೊಚ್ಚಿಯಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ನವೆಂಬರ್ 7ರಂದು (ನಾಳೆ) ಸಂಜೆ 4 ಗಂಟೆಗೆ ಕೊಚ್ಚಿಯ ರಾಜೇಂದ್ರ ಮೈದಾನದಲ್ಲಿ ಈ ಧರಣಿ ನಡೆಯಲಿದೆ.
ದೆಹಲಿಯಲ್ಲಿ ಜಂತರ್ ಮಂತರ್ ಪ್ರದೇಶವನ್ನು ಪ್ರತಿಭಟನಾ ಸ್ಥಳ ಪಟ್ಟಿಯಿಂದ ತೆಗೆದುಹಾಕಿದ ಮತ್ತು ಇತ್ತೀಚೆಗೆ ದೆಹಲಿ ಪೊಲೀಸರಿಂದ ಪ್ರಮುಖ ನಾಯಕರು ಬಂಧನಕ್ಕೊಳಗಾದ ನಂತರ ಸಿಜೆಪಿ ಕೈಗೊಂಡಿರುವ ಮೊದಲ ಬೃಹತ್ ಪ್ರತಿಭಟನೆ ಇದಾಗಿದೆ. ಈ ಕಾರ್ಯಕ್ರಮಕ್ಕೆ “ಕೊಚ್ಚಿಯಲ್ಲಿ ಜಂತರ್ ಮಂತರ್” ಮತ್ತು “ಪ್ರಜಾಪ್ರಭುತ್ವ ಉಳಿಸಿ, ಎಸ್‌ಐಆರ್ ರದ್ದುಗೊಳಿಸಿ” ಎಂದು ಹೆಸರಿಡಲಾಗಿದೆ.
ಇದನ್ನೂ ಓದಿ: ಸಿಜೆಪಿ ಪ್ರತಿಭಟನೆ ವೇಳೆ ವಕೀಲರ ಬಂಧನ: ಮಧ್ಯಪ್ರವೇಶಿಸಿ ಬಿಡುಗಡೆಗೆ ಸೂಚಿಸಿದ ಸುಪ್ರೀಂ ಕೋರ್ಟ್
ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ, ದಕ್ಷಿಣ ವಲಯದ ಮುಖ್ಯಸ್ಥ ವಿಜಯ್ ಮಲ್ಲಂಗಿ ಮತ್ತು ರಾಷ್ಟ್ರೀಯ ಕಾರ್ಯದರ್ಶಿ ಆಫ್ರೀನ್ ನವಾಜ್ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ನಟ ಪ್ರಕಾಶ್ ರಾಜ್ ಸೇರಿದಂತೆ ಹಲವಾರು ಗಣ್ಯರು ಈ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.
ಕಳೆದ ತಿಂಗಳು ದೆಹಲಿಯ ಜಂತರ್ ಮಂತರ್‌ನಲ್ಲಿ ಅನುಮತಿಯಿಲ್ಲದೆ ಪ್ರತಿಭಟನೆ ನಡೆಸಲು ಯತ್ನಿಸಿದ ಆರೋಪದಲ್ಲಿಸ ಸಿಜೆಪಿ ನಾಯಕರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದರು. ತದನಂತರ ಕೇಂದ್ರ ಸರ್ಕಾರವು ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ನೀಡಿದ್ದ ಅಧಿಕೃತ ಅನುಮತಿಯನ್ನು ರದ್ದುಗೊಳಿಸಿತ್ತು. ಈ ನಿರ್ಬಂಧಗಳ ಕಾರಣದಿಂದಾಗಿ ಇದೀಗ ಸಿಜೆಪಿ ತನ್ನ ಹೋರಾಟದ ಕೇಂದ್ರವನ್ನು ಕೇರಳಕ್ಕೆ ಸ್ಥಳಾಂತರಿಸಿದೆ.




