‘ಕಡೆಗೂ ಸತ್ತ, ಸೆಟೆದ, ನೆಗೆದುಬಿದ್ದ’ ಎಂಬ ತಲೆಬರೆಹ ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುವುದು ತೀರಾ ತೀರಾ ವಿರಳವಿದ್ದೀತು. ‘ಅಮೆರಿಕೆಯ ಆಳುವ ವರ್ಗಕ್ಕೆ ಬಹು ಪ್ರಿಯವಾಗಿದ್ದ ಸಮರಪಾತಕಿ ಹೆನ್ರಿ ಕಿಸಿಂಜರ್ ಕಡೆಗೂ ಸತ್ತ’ ಎಂಬ ತಲೆಬರೆಹದ ವರದಿಯನ್ನು ಅಲ್ಲಿನ ‘ರೋಲಿಂಗ್ ಸ್ಟೋನ್’ (www.rollingstone.com) ಮಾಸಪತ್ರಿಕೆ ಪ್ರಕಟಿಸಿದೆ.

ರಿಚರ್ಡ್ ನಿಕ್ಸನ್‌ನ ವಿದೇಶಾಂಗ ನೀತಿಯ ವಾಸ್ತುಶಿಲ್ಪಿ (ಕಿಸಿಂಜರ್) ಇತಿಹಾಸದ ಭಯಾನಕ ಸಾಮೂಹಿಕ ಹತ್ಯೆಗಳ ಬದಿಯಲ್ಲಿ ಚಿರಕಾಲ ತಳ ಊರಿರುತ್ತಾನೆ. ಈತನನ್ನು ಹಾಡಿಹೊಗಳಿ ಸಂಭ್ರಮಿಸುವ ದೇಶಕ್ಕೆ ಆಳದ ಲಜ್ಜೆ ಅಂಟಿಕೊಳ್ಳುತ್ತದೆ ಎಂದು ಹೆಸರಾಂತ ಪತ್ರಕರ್ತ ಮತ್ತು ಬರೆಹಗಾರ ಸ್ಪೆನ್ಸರ್ ಆ್ಯಕರ್ ಮ್ಯಾನ್ ವರದಿ ಬರೆದಿದ್ದಾರೆ.
ಸ್ಪೆನ್ಸರ್‌ನ ವರದಿ ಹೀಗೆ ಶುರುವಾಗುತ್ತದೆ,
ಹೆನ್ರಿ ಕಿಸಿಂಜರ್ ಕನೆಕ್ಟಿಕಟ್‌ನ ತನ್ನ ಮನೆಯಲ್ಲಿ ನಿಧನ ಹೊಂದಿದನೆಂದು ಆತನ ಕನ್ಸಲ್ಟಿಂಗ್ ಫರ್ಮ್ ಹೇಳಿಕೆಯೊಂದರಲ್ಲಿ ತಿಳಿಸಿದೆ. ಕುಖ್ಯಾತ ಸಮರಪಾತಕಿಗೆ 100 ವರ್ಷ ವಯಸ್ಸಾಗಿತ್ತು. 20ನೆಯ ಶತಮಾನದ ದ್ವಿತೀಯಾರ್ಧದ ಭವ್ಯ ಸಮರವ್ಯೂಹ ರಚನಕಾರ ಹೆನ್ರಿ ಕಿಸಿಂಜರ್. ಅಮೆರಿಕೆಯು ಆರಾಧಿಸಿದ ವ್ಯಕ್ತಿತ್ವ ಇವನದು.
ಬಿಳಿತೊಗಲು ಶ್ರೇಷ್ಠವೆಂದು ಸಾರಿದ್ದ ಭಯೋತ್ಪಾದಕ ಟಿಮತೀ ಮೆಕ್ವೀ. ಅಮೆರಿಕೆಯ ಅತಿಕೇಡಿನ ಸಾಮೂಹಿಕ ಕೊಲೆಗಡುಕ. ಖಚಿತ ಹತ್ಯೆಗಳ ಮಾನದಂಡದಿಂದ ಅಳೆಯುವುದೇ ಆದರೆ ಈವರೆಗೆ ಅಮೆರಿಕೆಯಿಂದ ಮರಣದಂಡನೆಗೆ ಗುರಿಯಾದ ಏಕೈಕ ಸಾಮೂಹಿಕ ಹಂತಕ.
1995ರ ಏಪ್ರಿಲ್ 19ರಂದು ಮೆಕ್ವೀ ಓಕ್ಲಹಾಮ ನಗರದ ಮುರ್ರಾ ಫೆಡರಲ್ ಕಟ್ಟಡದಲ್ಲಿ ಭಾರೀ ಬಾಂಬೊಂದನ್ನು ಸಿಡಿಸಿದ. 168 ಮಂದಿ ಬಲಿಯಾದರು. ಈ ಪೈಕಿ 19 ಮಕ್ಕಳೂ ಇದ್ದರು. ಮೆಕ್ವೀಯನ್ನು ಸರ್ಕಾರ 2001ರಲ್ಲಿ ಮಾರಕ ಚುಚ್ಚುಮದ್ದು ನೀಡಿ ಕೊಂದಿತು. ಮೆಕ್ವೀ ಬಾಂಬಿಗೆ ಬಲಿಯಾದ ನಾಲ್ಕು ವರ್ಷದ ಮಗುವೊಂದರ ತಾಯಿ ಕ್ಯಾಥ್ಲೀನ್ ಟ್ರೀನರ್. ಮೆಕ್ವೀ ಮರಣದಂಡನೆಯು ತನ್ನ ಮಗುವಿನ ಹತ್ಯೆ ಉಂಟು ಮಾಡಿದ ದುಃಖಕ್ಕೆ ಪೂರ್ಣವಿರಾಮ ಹಾಕಿದೆ ಎಂಬುದು ಆಕೆಯ ಪ್ರತಿಕ್ರಿಯೆಯಾಗಿತ್ತು.
ಇದನ್ನು ಓದಿದ್ದೀರಾ? ಅಮೆರಿಕಾದ ಮಾಜಿ ವಿದೇಶಾಂಗ ಕಾರ್ಯದರ್ಶಿ, ನೊಬೆಲ್ ಪುರಸ್ಕೃತ ಹೆನ್ರಿ ಕಿಸ್ಸಿಂಜರ್ ನಿಧನ
ತನ್ನದೇ ರೀತಿಯಲ್ಲಿ ಅಮೆರಿಕೆಯನ್ನು ಕಾಪಾಡುತ್ತಿದ್ದೇನೆಂದು ಭ್ರಮಿಸಿದ್ದ ಮನೋವಿಕಾರಿ ಮೆಕ್ವೀ. ಇಂತಹವನು ಕೂಡ ದೂರ ದೂರದಿಂದಲೂ ಕಿಸಿಂಜರ್ ನಡೆಸಿದ ಹತ್ಯೆಗಳ ಭಾರೀ ಸಂಖ್ಯೆಯನ್ನು ಸಮೀಪಿಸಲಾರ. ಮೂವತ್ತರಿಂದ ನಲವತ್ತು ಲಕ್ಷದಷ್ಟು ಮಂದಿಯ ಸಾಮೂಹಿಕ ಹತ್ಯೆಗಳಿಗೆ ಕಾರಣನಾದವನು ಕಿಸಿಂಜರ್.
ಕಾಂಬೋಡಿಯಾ, ಚಿಲಿ, ಇಂಡೋನೇಷ್ಯಾ, ಬಾಂಗ್ಲಾದೇಶ ಹಾಗೂ ಕುರ್ಡ್ ಜನಾಂಗೀಯರ ಹತ್ಯೆಗಳ ನೆತ್ತರು ನೇರವಾಗಿ ಈತನ ಹಸ್ತಗಳಿಗೆ ಮೆತ್ತಿದೆ. 1969-1976ರ ಎಂಟು ವರ್ಷಗಳ ಅಲ್ಪ ಅವಧಿಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಮತ್ತು ಮಂತ್ರಿಯಾಗಿ ರಿಚರ್ಡ್ ನಿಕ್ಸನ್ ಮತ್ತು ಜೆರಾಲ್ಡ್ ಫೋರ್ಡ್‌ನ ವಿದೇಶಾಂಗ ನೀತಿಯನ್ನು ರೂಪಿಸಿದವನು ಇವನು. ಈ ಹತ್ಯೆಗಳ ಅಂದಾಜು ಮಾಡಿದವರು ‘Kissinger’s Shadow’ (ಕಿಸಿಂಜರ್ಸ್ ಶಾಡೋ) ಹೆಸರಿನ ಜೀವನಚರಿತ್ರೆಯ ಲೇಖಕ ಮತ್ತು ಯೇಲ್ ವಿಶ್ವವಿದ್ಯಾಲಯದ ಇತಿಹಾಸಕಾರ ಗ್ರೆಗ್ ಗ್ರ್ಯಾಂಡಿನ್.
‘ನೂರು ವರ್ಷಗಳಷ್ಟು ದೀರ್ಘಕಾಲ ಜೀವಿಸಬಲ್ಲ ಕೇಡು ಯಾವುದೂ ಇಲ್ಲ’ ಎಂದು ಕ್ಯೂಬನ್ನರು ಹೇಳುತ್ತಾರೆ. ಆದರೆ ಕಿಸಿಂಜರ್ ಈ ಮಾತನ್ನು ಸುಳ್ಳು ಮಾಡಿದ’ ಎಂದು ಗ್ರ್ಯಾಂಡಿನ್ ಅವರು ಕಿಸಿಂಜರ್ ಸಾಯುವ ಬಹುಮುನ್ನ ‘ರೋಲಿಂಗ್ ಸ್ಟೋನ್’ಗೆ ಹೇಳಿದ್ದರು.
ಭೌಗೋಳಿಕ ಅಂಶಗಳನ್ನು ಆಧರಿಸಿದ ರಾಜಕಾರಣದ ಭವ್ಯ ವ್ಯೂಹರಚನಕಾರ ಎಂದು ಈತನನ್ನು ಹಾಡಿ ಹೊಗಳಲಾಗುತ್ತದೆ. ಆದರೆ ಇಂತಹ ಬಿಕ್ಕಟ್ಟುಗಳಲ್ಲಿ ಆತನ ವಿಫಲತೆಯದೇ ಸಿಂಹಪಾಲು. ಪರಿಹಾರವಾಗುವ ಬದಲು ಉಲ್ಬಣಗೊಂಡದ್ದೇ ಅಧಿಕ. ಚೀನಾದ ಬಾಗಿಲುಗಳನ್ನು ತೆರೆದವನೆಂದು ಈತನನ್ನು ಕೊಂಡಾಡಲಾಗುತ್ತದೆ. ಆದರೆ ಅದರ ಅಸಲು ಶ್ರೇಯಸ್ಸು ಡಿ ಗಾಲ್ ಗೆ ಸಲ್ಲಬೇಕು. ವಾಟರ್ ಗೇಟ್ ಹಗರಣದಲ್ಲಿ ಈತನ ಪಾತ್ರವಿದ್ದರೂ ಪಾರಾಗಿಬಿಟ್ಟ ಎನ್ನುತ್ತಾರೆ ಗ್ರ್ಯಾಂಡಿನ್.
ಕಿಸಿಂಜರನನ್ನು ಇಂದಿನಂತಹ ಇಂದಿನ ದಿನಮಾನಗಳಲ್ಲಿ ಯಾವ ಅಪಕೀರ್ತಿಯೂ ತಟ್ಟದು. ಬದಲಿಗೆ ಇಷ್ಟೊಂದು ಜನರನ್ನು ಕೊಲ್ಲಲು ಈತ ಹೇಗೆ ಸಮರ್ಥನಾದ ಮತ್ತು ಕೊಂದ ನಂತರವೂ ಹೇಗೆ ಪಾರಾದನೆಂದೂ ಕೊಂಡಾಡಿ ಈತನ ಮರಣವು ಅಮೆರಿಕೆಯ ಲೋಕಸಭೆ ಮತ್ತು ಸುದ್ದಿಮನೆಗಳ ಪಾಲಿಗೆ ಪವಿತ್ರ ಘಳಿಗೆಯಾಗಲಿದೆ.
ಸಿಬಿಎಸ್ ನ್ಯೂಸ್ ನ ಮಾರ್ವಿನ್ ಕಾಬ್ ಮತ್ತು ದಿ ನ್ಯೂಯಾರ್ಕ್ ಟೈಮ್ಸ್‌ನ ಹೆಂಡ್ರಿಕ್ ಸ್ಮಿತ್ ಅವರ ಟೆಲಿಫೋನುಗಳ ಕದ್ದಾಲಿಕೆ ಮಾಡಿಸಿದ್ದ ಲಜ್ಜೆಗೇಡಿಯಿವನು. ನಿಕ್ಸನ್ ದ್ವೇಷಿಸುತ್ತಿದ್ದ ‘ಈಸ್ಟರ್ನ್ ಎಸ್ಟ್ಯಾಬ್ಲಿಶ್ಮೆಂಟ್’ನ ಶುದ್ಧತಳಿ ಸದಸ್ಯನಿವನು, ನಾಜಿ ನಿರಾಶ್ರಿತ. ಅಮೆರಿಕೆಯ ಮಹಾನತೆಯನ್ನು ಆಚರಿಸುತ್ತಿದ್ದವನು. ಹೀಗಾಗಿ ವಿಯೆಟ್ನಾಮಿನ ಸಂಕಟದಿಂದ ಅಮೆರಿಕೆಯ ಪ್ರತಿಷ್ಠೆಯನ್ನು ಪಾರು ಮಾಡಿ ಅದನ್ನು ಮರಳಿ ಪ್ರತಿಷ್ಠಾಪಿಸಿದ ಕ್ರೂರ ಕಠೋರ ಮೇಧಾವಿ ಎಂದು ಅಮೆರಿಕದ ಮೀಡಿಯಾ ಈತನಿಗೆ ಪ್ರಸಿದ್ಧ ಪುರುಷನ ಮುಕುಟವಿಟ್ಟಿತು. ಇವನಿಂದ ಒಳಗಿನ ಮಾಹಿತಿಯನ್ನು ಪಡೆದ ವರದಿಗಾರರು ಕಿಸಿಂಜರ್‌ನನ್ನು ವಹಿಸಿಕೊಂಡು ರಕ್ಷಿಸಿದರು. ಅವನ ಕ್ರಿಯೆಯ ಸಾಧಕ-ಬಾಧಕಗಳನ್ನು ಇಲ್ಲವೇ ತಮ್ಮೊಂದಿಗೆ ಕಿಸಿಂಜರ್ ಹೊಂದಿದ್ದ ಸಂಪರ್ಕವನ್ನು ಈ ವರದಿಗಾರರು ಹೊರಗೆಡವಲೇ ಇಲ್ಲ.
ಅಧಿಕಾರದಿಂದ ದೂರವಾದ ನಂತರ ಅರ್ಧ ಶತಮಾನ ಕಾಲ ಬದುಕಿದ್ದ ಕಿಸಿಂಜರ್. ಅಮೆರಿಕೆಯಿಂದ ಜರುಗಿದ 30-40 ಲಕ್ಷ ಮಾನವ ಹತ್ಯೆಗಳ ಕುರಿತು ಈ ಐವತ್ತು ವರ್ಷಗಳಲ್ಲಿ ಒಮ್ಮೆಯಾದರೂ ಕಿಸಿಂಜರನ ಪ್ರತಿಷ್ಠೆಗೆ ಮುಕ್ಕು ಬರಲಿಲ್ಲ. ಬದಲಿಗೆ ಈತನ ನಿರ್ದಯತೆಯನ್ನು ರೋಚಕವೆಂದು ಬಗೆಯಲಾಯಿತು. ಎಲ್ಲ ಸಾಮ್ರಾಜ್ಯಗಳಂತೆ ಅಮೆರಿಕೆ ಕೂಡ ತಾನು ನಡೆಸಿದ ಪ್ರಭುತ್ವ ಪ್ರಾಯೋಜಿತ ಹತ್ಯೆಗಳ ಕುರಿತು ಎದೆಯುಬ್ಬಿಸಿತು.
‘ಶ್ವೇತಭವನದೊಳಗೆ ‘ಗಿಡುಗಗಳ ಗಿಡುಗ’ವಾಗಿದ್ದ ಕಿಸಿಂಜರ್ ತನ್ನ ಉದಾರವಾದಿ ಗೆಳೆಯರ ಜೊತೆ ಗ್ಲಾಸುಗಳನ್ನು ತುಟಿಗೆ ತಾಕಿಸುತ್ತಿದ್ದಾಗ ಹಠಾತ್ತನೆ ಶಾಂತಿದೂತ ಪಾರಿವಾಳ ಪಕ್ಷಿಯಾಗಿ ಬದಲಾಗುತ್ತಿದ್ದ’ ಎಂಬುದು ನಿಕ್ಸನ್ ಕಾಲದ ಸೇನಾ ಮುಖ್ಯಸ್ಥ ಎಚ್.ಆರ್.ಹಾಲ್ಡೆಮನ್ ಹೇಳಿಕೆ.

ಭಾರತ ಹಿತದ ಕನ್ನಡಕ ಧರಿಸಿ ನೋಡುವುದಾದರೆ ಪಾಕಿಸ್ತಾನ ಪಕ್ಷಪಾತಿ ಈ ಕಿಸಿಂಜರ್. ಪಾಕ್ ಜೊತೆ ಅಮೆರಿಕೆ ಸಂಬಂಧ ಸುಧಾರಣೆ ಇವನ ಆದ್ಯತೆಯಾಗಿತ್ತು ಎನ್ನುತ್ತಾರೆ ಭಾರತದ ವಿದೇಶಾಂಗ ಕಾರ್ಯದರ್ಶಿಯಾಗಿದ್ದ ವಿಜಯ್ ಗೋಖಲೆ. ಪಾಕಿಸ್ತಾನಕ್ಕೆ ಅಮೆರಿಕೆ ನೀಡಿದ ಗಣನೀಯ ಮಿಲಿಟರಿ ಮತ್ತು ಆರ್ಥಿಕ ನೆರವಿನ ಹಿಂದೆ ಇವನ ಪಾತ್ರವಿತ್ತು.

ಪಾಕ್ ಸೇನೆಯ ದೌರ್ಜನ್ಯ ಕ್ರೌರ್ಯವನ್ನು ಭರಿಸಲಾಗದೆ ಪೂರ್ವ ಪಾಕಿಸ್ತಾನದಿಂದ (ಈಗಿನ ಬಾಂಗ್ಲಾದೇಶ) ಸುಮಾರು ಒಂದು ಕೋಟಿಯಷ್ಟು ನಿರಾಶ್ರಿತರು ಭಾರತಕ್ಕೆ ಹರಿದು ಬಂದರು. ಭಾರತ ಇಂತಹ ತೀವ್ರ ಬಿಕ್ಕಟ್ಟು ಎದುರಿಸಿದ್ದ ಸಂದರ್ಭ. ಪೂರ್ವ ಪಾಕಿಸ್ತಾನದಲ್ಲಿ ನರಮೇಧವನ್ನು ನಿಲ್ಲಿಸುವಂತೆ ಪಾಕ್ ಸರ್ಕಾರದ ಮೇಲೆ ಯಾವುದೇ ಒತ್ತಡ ಹೇರಲಿಲ್ಲ ಕಿಸಿಂಜರ್ ವಿದೇಶಾಂಗ ನೀತಿಯನ್ನು ತುಳಿದಿದ್ದ ಅಮೆರಿಕೆ. ಬದಲಿಗೆ ಚೀನಾದೊಂದಿಗೆ ತನ್ನ ಸಂಬಂಧ ಸುಧಾರಿಸಿಕೊಳ್ಳಲು ಪಾಕಿಸ್ತಾನವನ್ನು ಬಳಸಿಕೊಳ್ಳುವಲ್ಲಿ ಬಿಡುವಿಲ್ಲದೆ ತೊಡಗಿತ್ತು.
ನಾಜಿ ಜರ್ಮನಿಯಿಂದ ಓಡಿಬಂದಿದ್ದ ಯಹೂದಿ ಹೆನ್ರಿ ಕಿಸಿಂಜರ್. ಅಲ್ಲಿ ಯಹೂದಿಗಳು ಅನುಭವಿಸಿದ್ದ ಯಾತನೆಯನ್ನು ಕಣ್ಣಾರೆ ಕಂಡು ಅನುಭವಿಸಿದ್ದ. ಆದರೂ ಪೂರ್ವ ಪಾಕಿಸ್ತಾನದಲ್ಲಿ ಪಾಕಿಸ್ತಾನ ನಡೆಸಿದ್ದ ನರಮೇಧ ಅವನ ಅಂತಃಕರಣವನ್ನು ಕದಲಿಸಲಿಲ್ಲ. ಕಟ್ಟಕಡೆಯ ಕಹಿ ಮುಗಿಯದ ತನಕವೂ ಪಾಕಿಸ್ತಾನದ ಚಟುವಟಿಕೆಗಳನ್ನೇ ಬೆಂಬಲಿಸಿತು ಅಮೆರಿಕೆ. ಮಧ್ಯಪ್ರಾಚ್ಯದಲ್ಲಿನ ತನ್ನ ಮಿತ್ರರಾಷ್ಟ್ರಗಳ ಮೂಲಕ ಕಳ್ಳಮಾರ್ಗದಲ್ಲಿ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಸಿದ್ದ ಕಿಸಿಂಜರ್. ಚೀನಾದ ಯಾವುದೇ ಒತ್ತಡದ ವಿರುದ್ಧ ಭಾರತದೊಂದಿಗೆ ನಿಲ್ಲುವುದಾಗಿ ಸುಳ್ಳು ಆಶ್ವಾಸನೆ ನೀಡಿದ್ದ. ವಾಸ್ತವವಾಗಿ ಚೀನಾದ ಮೂಲಕ ಭಾರತದ ಮೇಲೆ ಒತ್ತಡ ಉಂಟು ಮಾಡಿಸಿದ್ದ.
ಪೂರ್ವ ಪಾಕಿಸ್ತಾನದ ಹೋರಾಟಕ್ಕೆ ಬೆಂಬಲವಾಗಿ ಗಡಿಭಾಗದಲ್ಲಿ ಭಾರತ ನಿಯೋಜಿಸಿದ್ದ ಮಿಲಿಟರಿ ಘಟಕಗಳ ವಿವರಗಳು ಮತ್ತು ಚೀನಾ ಗಡಿಯಿಂದ ಭಾರತ ತನ್ನ ಎರಡು ಪರ್ವತಸೇನಾ ವಿಭಾಗಗಳನ್ನು ಪೂರ್ವ ಪಾಕಿಸ್ತಾನಕ್ಕೆ ವರ್ಗಾಯಿಸಿದ ಸೂಕ್ಷ್ಮ ಮಿಲಿಟರಿ ವಿವರಗಳನ್ನು ಚೀನಾದೊಂದಿಗೆ, ಆ ಮೂಲಕ ಪಾಕಿಸ್ತಾನದೊಂದಿಗೆ ಹಂಚಿಕೊಂಡು ವಂಚಿಸಿದ್ದವನು ಕಿಸಿಂಜರ್.

ಚೀನಾದ ಮಿತ್ರನಾದ ಕಾರಣ ಪಾಕಿಸ್ತಾನವನ್ನು ಶಿಕ್ಷಿಸತೊಡಗಿದೆ ಭಾರತ ಎಂದು ಚೀನಾವನ್ನು ಭಾರತ ವಿರುದ್ಧ ಪ್ರಚೋದಿಸಲು ಪ್ರಯತ್ನಿಸಿದ್ದ. ಆದರೆ ಅಮೆರಿಕನ್ನರ ಆಟವನ್ನು ಅರಿತಿದ್ದ ಚೀನಾ ಕಿಸಿಂಜರನ ಗಾಳವನ್ನು ಕಚ್ಚಿಕೊಳ್ಳಲಿಲ್ಲ. ಹೊರನೋಟಕ್ಕೆ ಜನತಂತ್ರ ಮತ್ತು ಸ್ವಾತಂತ್ರ್ಯದ ಬೆಂಬಲಿಗನಾಗಿದ್ದ ಕಿಸಿಂಜರ್, ವಾಸ್ತವವಾಗಿ ಜನತಾಂತ್ರಿಕ ದೇಶವಾದ ಭಾರತದ ವಿರುದ್ಧವಿದ್ದ, ಸರ್ವಾಧಿಕಾರಿ ಪಾಕಿಸ್ತಾನದ ಹಿಂದೆ ನಿಂತಿದ್ದನೆಂದು ಬಣ್ಣಿಸಿದ್ದಾರೆ ಗೋಖಲೆ.
ಕನ್ನಡಕ್ಕೆ: ಡಿ.ಉಮಾಪತಿ
ಯಹೂದಿ !