ಭಾರತದ ಆರ್ಥಿಕ ಬೆಳವಣಿಗೆಯು ಬಲವಾದ ಆಧಾರಸ್ತಂಭಗಳು ಮತ್ತು ನಿರಂತರ ಸುಧಾರಣೆಗಳ ಮೇಲೆ ನಿಂತಿದೆ. ಜಗತ್ತಿನೊಂದಿಗೆ ಕೈಜೋಡಿಸಿ, ಜಗತ್ತಿನ ಹಿತಕ್ಕಾಗಿ ಬೆಳೆಯಲು ಭಾರತ ಬಯಸುತ್ತದೆ. ಇತರೆ ರಾಷ್ಟ್ರಗಳ ವೆಚ್ಚದಲ್ಲಾಗಲೀ ಅಥವಾ ಅವರ ಹಿತಾಸಕ್ತಿಗೆ ಧಕ್ಕೆ ತರುವ ಮೂಲಕ ಜಾಗತಿಕ ಆರ್ಥಿಕ ಪ್ರಭಾವವನ್ನು ವಿಸ್ತರಿಸಲಾಗಲೀ ಭಾರತ ಬಯಸುವುದಿಲ್ಲ. ಜಾಗತಿಕ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು, ವ್ಯಾಪಾರ ಅಡೆತಡೆಗಳು ಮತ್ತು ತಂತ್ರಜ್ಞಾನಕ್ಕಾಗಿ ಸ್ಪರ್ಧೆ ಏರ್ಪಟ್ಟಿರುವ ಇಂದಿನ ದಿನಗಳಲ್ಲಿ ಭಾರತವು ಅತ್ಯಂತ ವಿಶ್ವಾಸಾರ್ಹ ಆರ್ಥಿಕ ಪಾಲುದಾರನಾಗಿ ಹೊರಹೊಮ್ಮಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.
ಬ್ಲೂಮ್‌ಬರ್ಗ್ ಆರ್ಥಿಕ ವೇದಿಕೆಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಸಕ್ತ ಸಾಲಿನ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕ ವೃದ್ಧಿ ದರವು ಶೇ. 7.8ರಷ್ಟು ದಾಖಲಾಗಿದೆ. 12-13 ವರ್ಷಗಳ ಹಿಂದೆ ಶೇ. 4ಕ್ಕಿಂತ ಹೆಚ್ಚಿದ್ದ ಚಾಲ್ತಿ ಖಾತೆ ಕೊರತೆಯನ್ನು (CAD) ಈಗ ಶೇ. ಅರ್ಧದಷ್ಟು ಭಾಗಕ್ಕೆ ಇಳಿಸಲಾಗಿದೆ. ದೇಶದ ವಿದೇಶಿ ವಿನಿಮಯ ಮೀಸಲು ನಿಧಿಯು (Forex Reserves) 700 ಬಿಲಿಯನ್ ಡಾಲರ್‌ಗಳಿಗೂ ಅಧಿಕ ಮೊತ್ತವನ್ನು ತಲುಪಿದೆ. ತೆರಿಗೆ, ದಿವಾಳಿತನ ಮತ್ತು ಕಾರ್ಮಿಕ ಕಾನೂನುಗಳಲ್ಲಿ ತಂದ ಸುಧಾರಣೆಗಳು ದೇಶದ ಆರ್ಥಿಕ ಸ್ಥಿತಿಸ್ಥಾಪಕತ್ವವನ್ನು ಸಾಬೀತುಪಡಿಸಿವೆ. ಆರ್ಥಿಕ ಹಾಗೂ ತಾಂತ್ರಿಕ ಬಲವನ್ನು ಕೇವಲ ದೇಶದ ಪ್ರಭಾವದಿಂದ ಅಳೆಯಬಾರದು, ಬದಲಿಗೆ ಅದು ಇತರರಿಗೆ ಎಷ್ಟರ ಮಟ್ಟಿಗೆ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂಬುದರ ಮೇಲೆ ಅಳೆಯಬೇಕು. ಅಧಿಕಾರವೆಂದರೆ ಅದು ಇತರರನ್ನು ಸಬಲರನ್ನಾಗಿ ಮಾಡುವುದಾಗಿದೆ ಎಂದರು.
ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆ, ಡಿಜಿಟಲ್ ಗುರುತು, ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆ ಮತ್ತು ಸ್ವಚ್ಛ ಇಂಧನ (Clean Energy) ಸಾಮರ್ಥ್ಯಗಳನ್ನು ‘ಗ್ಲೋಬಲ್ ಸೌತ್’ (ಜಾಗತಿಕ ದಕ್ಷಿಣ) ರಾಷ್ಟ್ರಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಪೂರೈಕೆ ಸರಪಳಿ (Supply chains), ಇಂಧನ, ನಿರ್ಣಾಯಕ ಖನಿಜಗಳು, ಪಾವತಿ ವ್ಯವಸ್ಥೆಗಳು ಮತ್ತು ತಂತ್ರಜ್ಞಾನಗಳು ಇಂದು ರಾಜಕೀಯ ಒತ್ತಡ ಹೇರುವ ಹಾಗೂ ಬಲಪ್ರಯೋಗದ ಅಸ್ತ್ರಗಳಾಗುತ್ತಿವೆ. ಇಂತಹ ಅನಿಶ್ಚಿತತೆಯ ಜಗತ್ತಿನಲ್ಲಿ ಭಾರತವು ವಿಶ್ವಾಸ ಮತ್ತು ಸ್ಥಿರತೆಯ ಪ್ರತೀಕವಾಗಿದೆ ಎಂದು ಮೋದಿ ತಿಳಿಸಿದರು.
ನಮಗೆ ಸುಧಾರಣೆಗಳು ಯಾವುದೇ ಒತ್ತಡವಲ್ಲ, ಅದೊಂದು ನಮ್ಮ ಬಲವಾದ ನಂಬಿಕೆ. ಸಾಂಕ್ರಾಮಿಕದ ಸಂದರ್ಭದಲ್ಲಿ 100ಕ್ಕೂ ಹೆಚ್ಚು ದೇಶಗಳಿಗೆ ಲಸಿಕೆ ಪೂರೈಸುವ ಮೂಲಕ ಭಾರತವು ಜಾಗತಿಕ ಅಗತ್ಯಗಳಿಗೆ ಸ್ಪಂದಿಸಿದೆ. ಹವಾಮಾನ ಬದಲಾವಣೆ, ಸಾರ್ವಜನಿಕ ಆರೋಗ್ಯ, ಕೃತಕ ಬುದ್ಧಿಮತ್ತೆ (AI) ಮತ್ತು ಆರ್ಥಿಕ ಭದ್ರತೆಯ ವಿಷಯದಲ್ಲಿ ಜಾಗತಿಕ ರಾಷ್ಟ್ರಗಳು ಪರಸ್ಪರ ಸಹಕಾರದಿಂದ ಮುನ್ನಡೆಯಬೇಕು ಎಂದು ಮೋದಿ ಕರೆ ನೀಡಿದರು.
ಇದನ್ನೂ ಓದಿ: ಈ ದಿನ ಸಂಪಾದಕೀಯ | ಬದಲಾದ ಗಾಳಿಯ ದಿಕ್ಕು ಕಂಡು ಕಂಗಾಲಾಗಿದ್ದಾರೆ ಪ್ರಧಾನಿ ಮೋದಿ
ದೇಶದ ಜಿಡಿಪಿ ಬೆಳೆಯುತ್ತಿದೆ ಎಂದು ಮೋದಿ ಹೇಳುತ್ತಿದ್ದರೂ, ಆ ಬೆಳವಣಿಗೆಗೆ ತಕ್ಕಂತೆ ಶ್ರಮದಾಯಕ ಹಾಗೂ ಸುಸ್ಥಿರ ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ. ಸದ್ಯ ಭಾರತದಲ್ಲಿರುವ ಈ ಪರಿಸ್ಥಿತಿಯನ್ನು ಆರ್ಥಿಕ ತಜ್ಞರು ಉದ್ಯೋಗ ರಹಿತ ಬೆಳವಣಿಗೆ (Jobless Growth) ಎಂದು ಕರೆಯುತ್ತಾರೆ. ಪ್ರಸ್ತುತ ಉನ್ನತ ಶಿಕ್ಷಣ ಪಡೆದ ಲಕ್ಷಾಂತರ ಯುವಕ-ಯುವತಿಯರು ತಮ್ಮ ವಿದ್ಯಾರ್ಹತೆಗೆ ತಕ್ಕ ಉದ್ಯೋಗ ಸಿಗದೆ, ಕಡಿಮೆ ವೇತನದ ಸಣ್ಣಪುಟ್ಟ ತಾತ್ಕಾಲಿಕ ಉದ್ಯೋಗಗಳು (Gig Economy/Delivery Jobs) ಅಥವಾ ಗಿಗ್ ವರ್ಕರ್ ಕೆಲಸಗಳತ್ತ ಮುಖಮಾಡುವಂತಾಗಿದೆ. ನಿತ್ಯಬಳಕೆಯ ವಸ್ತುಗಳು, ಆಹಾರ ಪದಾರ್ಥಗಳು, ಶಿಕ್ಷಣ, ಆರೋಗ್ಯ ಮತ್ತು ಮನೆಬಾಡಿಗೆಯ ವೆಚ್ಚ ಗಗನಕ್ಕೇರಿದೆ. ಆದರೆ ಸಾಮಾನ್ಯ ನೌಕರರ ಮತ್ತು ಕಾರ್ಮಿಕರ ಆದಾಯ/ವೇತನ ಆ ಪ್ರಮಾಣದಲ್ಲಿ ಹೆಚ್ಚಾಗಿಲ್ಲ. ಜಿಡಿಪಿ ಜಿಗಿತ ಮತ್ತು ಫೊರೆಕ್ಸ್ ಮೀಸಲು ಹೆಚ್ಚಳದ ಲಾಭವು ದೇಶದ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು ಹಾಗೂ ಶ್ರೀಮಂತ ವರ್ಗಕ್ಕೆ ತಲುಪುತ್ತಿದೆಯೇ ಹೊರತು, ಮಧ್ಯಮ ಹಾಗೂ ಕೆಳಮಧ್ಯಮ ವರ್ಗದ ಜನರ ‘ಖರೀದಿ ಸಾಮರ್ಥ್ಯ’ (Purchasing Power) ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಯುಪಿಐ (UPI), ಡಿಜಿಟಲ್ ಪಾವತಿಗಳಂತಹ ತಾಂತ್ರಿಕ ಪ್ರಗತಿಯನ್ನು ಜಾಗತಿಕ ವೇದಿಕೆಯಲ್ಲಿ ಪ್ರದರ್ಶಿಸಲಾಗುತ್ತಿದ್ದರೂ, ಗ್ರಾಮೀಣ ಹಾಗೂ ಸಣ್ಣ ನಗರ ಪ್ರದೇಶಗಳಲ್ಲಿ ಸಾಂಪ್ರದಾಯಿಕ ಸಣ್ಣ ಕೈಗಾರಿಕೆಗಳು, ನೇಯ್ಗೆ, ಕೃಷಿ ಆಧಾರಿತ ಉದ್ಯೋಗಗಳು ನಶಿಸುತ್ತಿವೆ. ಆರ್ಥಿಕತೆ ಮಾತನಾಡುವಾಗ ನಿರುದ್ಯೋಗಶೈಕ್ಷಣಿಕ ವೆಚ್ಚದ ಹೊರೆ ಮತ್ತು ದೈನಂದಿನ ಜೀವನ ವೆಚ್ಚದ ಏರಿಕೆಯು ಜನರ ಜೀವನಮಟ್ಟವನ್ನು ಕುಸಿಯುವಂತೆ ಮಾಡಿರುವುದನ್ನೂ ಪ್ರಧಾನಿಗಳು ಉಲ್ಲೇಖಿಸಬೇಕು.




