ಕೇಡುಗಾಲದ ತುತ್ತ ತುದಿಯ ಅವಸ್ಥೆ ಕುರಿತು ಜಾರ್ಜ್ ಆರ್ವೆಲ್ ರಚಿಸಿದ ಪ್ರಸಿದ್ಧ ಕೃತಿಯ ಹೆಸರು 1984. ಕಾಲ್ಪನಿಕ ಕೇಡುಗಾಲ ಕುರಿತ ಈ ಕಾದಂಬರಿಯಲ್ಲಿ Thought Criminals ಎಂಬ ಮಾತೊಂದನ್ನು ಆರ್ವೆಲ್ ಟಂಕಿಸಿದ್ದಾನೆ. ಸರ್ವಾಧಿಕಾರೀ ಆಳುವ ಪಕ್ಷವನ್ನು ಅಥವಾ ಅದರ ನಾಯಕ ಬಿಗ್ ಬ್ರದರ್ ನನ್ನು ವಿರೋಧಿಸುವ ಆಲೋಚನೆಗಳನ್ನು ಹೊಂದಿರುವ ಪ್ರಜೆಗಳನ್ನು ಬಣ್ಣಿಸುವ ಪದವಿದು…
ದೇಶದಲ್ಲಿ ಬೀಸುತ್ತಿದ್ದ ಗಾಳಿ ತಿಂಗಳೊಪ್ಪತ್ತಿನಿಂದ ದಿಕ್ಕು ಬದಲಿಸಿದೆ. ಕವಿದಿದ್ದ ಭಯಭೀತ ವಾತಾವರಣ ಮರೆಯಾಗಿದೆ. ಜನಸಮೂಹಗಳು ತಮ್ಮ ಮನಸಿನ ಮಾತುಗಳನ್ನು ನಿರ್ಭಿಡೆಯಿಂದ ಆಡುವ ಸ್ಥಿತಿ ಸೃಷ್ಟಿಯಾಗಿದೆ. ಸರ್ವಾಧಿಕಾರಕ್ಕೆ ಸೆಡ್ಡು ಹೊಡೆಯತೊಡಗಿದೆ ಜನತಂತ್ರ. ಕ್ರಾಂತಿಕಾರಿ ಬದಲಾವಣೆಯಿದು. ಫ್ಯಾಶಿಸ್ಟರು-ಏಕಚಕ್ರಾಧಿಪತಿಗಳು ನೀರು ಗೊಬ್ಬರ ಎರೆದು ಪೋಷಿಸಿದ್ದ ಭಯಭೀತಿಯ ವಿಷವೃಕ್ಷದ ಬುಡಕ್ಕೆ ಕೊಡಲಿ ಏಟು ಬಿದ್ದಿದೆ. ಈ ಪರಿವರ್ತನೆಯ ಹಿಂದಿರುವ ಏಕೈಕ ಶಕ್ತಿ ಭಾರತದ ಯುವಜನತೆ. ಮನಸ್ಥಿತಿಯನ್ನು ಮುಸ್ಲಿಮ್ ದ್ವೇಷದ ದಳ್ಳುರಿಗೆ ಒಪ್ಪಿಸಿದ್ದ ಒಂದು ತಲೆಮಾರಿನ ಗುಲಾಮಗಿರಿ ಸಂಕೋಲೆಗಳು ಸಡಿಲವಾಗಿವೆ. ಅವುಗಳನ್ನು ಕಿತ್ತೊಗೆಯುವುದೊಂದೇ ಬಾಕಿ.
ಈ ಹಠಾತ್ ಬದಲಾವಣೆ ನರೇಂದ್ರ ಮೋದಿ ಮತ್ತು ಅವರ ಅತ್ಯಾಪ್ತ ಗೃಹಸಚಿವ ಅಮಿತ್ ಶಾ ಅವರನ್ನು ಕಂಗೆಡಿಸಿದೆ. ಇನ್ನೂ ಹಲವು ಅವಧಿಗಳ ಕಾಲ ಅಧಿಕಾರ ಹಿಡಿಯುವ ಇವರ ಕನಸಿಗೆ ಕೊಳ್ಳಿ ಬಿದ್ದಿದೆ. ಮುಸ್ಲಿಮ್ ದ್ವೇಷದ ತೀರುವಳಿ ದಿನಾಂಕ ಸಮೀಪಿಸಿದೆ. ಕೋಟಿ ಕೋಟಿ ದೇಣಿಗೆ ಹಣವನ್ನು ಲೂಟಿ ಹೊಡೆಯುವ ಮೂಲಕ ರಾಮಮಂದಿರದ ಕಾರ್ಯಸೂಚಿಯನ್ನು ಬಿಜೆಪಿ-ಸಂಘಪರಿವಾರ ಕೈಯಾರೆ ಕೆಡವಿಕೊಂಡಿದೆ.
ಅಧಿಕಾರ ಎಂಬ ಹುಲಿಸವಾರಿ ಮಾಡತೊಡಗಿದೆ ಈ ಜೋಡಿ. ಇಳಿದರೆ ಹುಲಿಯ ಬಾಯಿಗೆ ಆಹಾರ ಆಗಬೇಕಾಗುತ್ತದೆ. ಏನಕೇನ ಪ್ರಕಾರೇಣ ಸವಾರಿ ಮಾಡುತ್ತಲೇ ಇರಬೇಕು. ಅದಕ್ಕಾಗಿ ಅದೆಷ್ಟು ಅಡ್ಡದಾರಿಗಳನ್ನು ಹಿಡಿದರೂ ಪರವಾಗಿಲ್ಲ. ಯಾರ ಮೇಲೆ ಏನೇನು ಹುಸಿ ಆಪಾದನೆ ಹೊರಿಸಿದರೂ ಸರಿ. ಅಡ್ಡ ಬಂದ ಎಲ್ಲರನ್ನೂ ಖಳನಾಯಕರಂತೆ ಬಿಂಬಿಸಿದರೂ ತಪ್ಪಿಲ್ಲ.
ಈ ಹಿಂದೆ ನಗರ ನಕ್ಸಲರು (ಅರ್ಬನ್ ನಕ್ಸಲ್) ಎಂದು ಸಾಮಾಜಿಕ ನ್ಯಾಯಪರ ಹೋರಾಟಗಾರರನ್ನು ಕರೆದಿದ್ದರು ಇದೇ ಮೋದಿ. ಅವರ ಕಂಪ್ಯೂಟರುಗಳಲ್ಲಿ ಸುಳ್ಳು ಸಾಕ್ಷ್ಯಗಳನ್ನು ನೆಟ್ಟು, ದೇಶದ್ರೋಹದ ಆಪಾದನೆ ಹೊರಿಸಿ ಅವರನ್ನು ಬಂಧಿಸಿ ದೀರ್ಘಕಾಲ ಜೈಲುಗಳಲ್ಲಿ ಕೊಳೆಯಿಸಿದರು. ಬುಡಕಟ್ಟು ಜನರ ಭೂಮಿ ಹಕ್ಕುಗಳಿಗಾಗಿ ಹೋರಾಡಿದ ಸ್ಟ್ಯಾನ್ ಸ್ವಾಮಿ ಎಂಬ ಕ್ರೈಸ್ತ ಧರ್ಮಗುರುವನ್ನು ಜೈಲಿಗೆ ತಳ್ಳಿ, ಅಲ್ಲಿಯೇ ಅವರನ್ನು ‘ಹತ್ಯೆ’ ಮಾಡಲಾಯಿತು. ಅತ್ಯಾಚಾರಿಗಳಾದ ಆಸಾರಾಮ್ ಬಾಪು ಮತ್ತು ಡೇರಾ ಸಚ್ಚಾ ಸೌದಾದ ಗುರ್ಮೀತ್ ರಾಮ್ ರಹೀಮ್ ಅವರನ್ನು ಮತ್ತೆ ಮತ್ತೆ ಪೆರೋಲ್ ಮೇಲೆ ಬಿಡುಗಡೆ ಮಾಡಲಾಯಿತು. ಆಸಾರಾಮ್ ಆರೋಗ್ಯ ನೋಡಿಕೊಳ್ಳಲು 24 ತಾಸು ಕಾಲ ಶುಶ್ರೂಷಕರನ್ನು ನೀಡಲಾಯಿತು. ಕೈ ನಡುಗುವ ವೃದ್ಧ ಸ್ಟ್ಯಾನ್ ಸ್ವಾಮಿ ಅವರಿಗೆ ಲೋಟದಿಂದ ತುಳುಕಿಸದೆ ನೀರು ಕುಡಿಯಲು ಒಂದು ಸಿಪ್ಪರ್ ನ್ನು ಕೂಡ ನಿರಾಕರಿಸಲಾಯಿತು. ಗುಂಪುಗಳನ್ನು ಹತಾರುಗಳಂತೆ ಭುಗಿಲೆಬ್ಬಿಸಿ ಅಲ್ಪಸಂಖ್ಯಾತರನ್ನು ಹಾದಿ ಬೀದಿಗಳಲ್ಲಿ ಜಜ್ಜಿ ಕೊಲ್ಲಲಾಯಿತು. ಕೋಮುವಾದವನ್ನು ವಿರೋಧಿಸುವ, ಬಡವರು ಕೃಷಿಕ ಕೂಲಿಕಾರರು ಕಾರ್ಮಿಕರ ಪರವಾಗಿ ಮಾತಾಡುವವರನ್ನು ಬೇಟೆಯಾಡಲಾಯಿತು. ಸಾಂವಿಧಾನಿಕ ಸಂಸ್ಥೆಗಳನ್ನು ಕೈವಶ ಮಾಡಿಕೊಳ್ಳಲಾಯಿತು. ವಿರೋಧ ಪಕ್ಷಗಳನ್ನು ಬಗ್ಗುಬಡಿದು ಒಡೆದು ಸಂಸದರನ್ನು ಆಳುವ ಪಕ್ಷಕ್ಕೆ ಸೇರಿಸಿಕೊಳ್ಳಲಾಯಿತು. ಇದೀಗ ಕ್ಷೇತ್ರಮರುವಿಂಗಡಣೆಗೆ ಸಂವಿಧಾನ ತಿದ್ದುಪಡಿಯ ಸನ್ನಾಹ ನಡೆದಿದೆ. ಕಳೆದ ಹನ್ನೆರಡು ವರ್ಷಗಳಲ್ಲಿ ಆದ ಅನ್ಯಾಯಗಳಿಗೆ ಲೆಕ್ಕವಿಲ್ಲ.
ಈ ಕಾಲಘಟ್ಟದಲ್ಲೇ ಯುವಜನತೆ ಇರುವೆ ಸೈನ್ಯದಂತೆ ನೆಲದಿಂದ ಎದ್ದು ಬಂದಿದ್ದಾರೆ. ಹೊಸ ಭವಿಷ್ಯದ ಭರವಸೆಯನ್ನು ಹುಟ್ಟಿಸಿದ್ದಾರೆ.
ಹತಾಶರಾಗಿರುವ ಪ್ರಧಾನಿಯವರು ಮುಳುಗುವವನು ಕೈಕಾಲು ಬಡಿಯುವಂತೆ ಕಡೆಯ ಪ್ರಯತ್ನ ನಡೆಸಿದ್ದಾರೆ. ಮೊನ್ನೆ ಆಗಸ್ಟ್ 15ರಂದು ಕೆಂಪುಕೋಟೆಯ ಮೇಲಿಂದ ಮಾಡಿದ ಭಾಷಣದಲ್ಲಿ ದಿಮಾಗಿ ನಕ್ಸಲ್ ಎಂದು ಸಾಮಾಜಿಕ ನ್ಯಾಯಪರ ಹೋರಾಟಗಾರರನ್ನು ಜರೆದಿದ್ದಾರೆ. ಅವರನ್ನು ಹುಡುಕಿ ಗುರುತಿಸಿ ಒಂಟಿಯಾಗಿಸಬೇಕೆಂದು ಕರೆ ನೀಡಿದ್ದಾರೆ. ಇದರ ಒಳಾರ್ಥ ಅವರ ವಿರುದ್ಧ ದ್ವೇಷದ ಬೇಟೆ ನಾಯಿಗಳನ್ನು ಛೂ ಬಿಡುವುದೇ ಆಗಿದೆ. ದಿಮಾಗಿ ನಕ್ಸಲರೆಂದರೆ ಬುದ್ಧಿವಂತ ನಕ್ಸಲರು ಎಂದು ಅರ್ಥ. ಸಾಮಾಜಿಕ ನ್ಯಾಯಕ್ಕೆ ಫ್ಯಾಸಿಸ್ಟ್ ಸರ್ಕಾರ ಇಟ್ಟಿರುವ ಹೆಸರುಗಳು ನಗರ ನಕ್ಸಲ್ ವಾದ ಮತ್ತು ದಿಮಾಗಿ ನಕ್ಸಲ್ ವಾದ ಎಂದು.
ಕೇಡುಗಾಲದ ತುತ್ತ ತುದಿಯ ಅವಸ್ಥೆ ಕುರಿತು ಜಾರ್ಜ್ ಆರ್ವೆಲ್ ರಚಿಸಿದ ಪ್ರಸಿದ್ಧ ಕೃತಿಯ ಹೆಸರು 1984. ಕಾಲ್ಪನಿಕ ಕೇಡುಗಾಲ ಕುರಿತ ಈ ಕಾದಂಬರಿಯಲ್ಲಿ Thought Criminals ಎಂಬ ಮಾತೊಂದನ್ನು ಆರ್ವೆಲ್ ಟಂಕಿಸಿದ್ದಾನೆ. ಸರ್ವಾಧಿಕಾರೀ ಆಳುವ ಪಕ್ಷವನ್ನು ಅಥವಾ ಅದರ ನಾಯಕ ಬಿಗ್ ಬ್ರದರ್ ನನ್ನು ವಿರೋಧಿಸುವ ಆಲೋಚನೆಗಳನ್ನು ಹೊಂದಿರುವ ಪ್ರಜೆಗಳನ್ನು ಬಣ್ಣಿಸುವ ಪದವಿದು. ಓಶಿಯಾನಿಯಾ ಎಂಬ ದೇಶದ ಪೌರರು ಇವರು. ಇದನ್ನೇ Thought Crime ಅಥವಾ Crimethink ಎಂದೂ ಕರೆಯಲಾಗುತ್ತದೆ. ಆಚರಣೆಯಲ್ಲಿ ಅಲ್ಲ, ಆಲೋಚನೆಯಲ್ಲಿ ಕೂಡ ಆಳುವ ಪಕ್ಷವನ್ನು ವಿರೋಧಿಸುವಂತಿಲ್ಲ. ಇಂತಹ ಆಲೋಚನೆಗಳು ಅಪರಾಧ ಎನಿಸಿಕೊಳ್ಳುತ್ತವೆ. ಆಳುವ ಪಕ್ಷ ಒಪ್ಪಿಗೆ ನೀಡದಿರುವ ವಿಧಾನದಲ್ಲಿ ಆಲೋಚಿಸುವುದು ಪಾತಕವಾಗಿರುತ್ತದೆ. ಒಳುವ ಪಕ್ಷಕ್ಕೆ ಒಪ್ಪಿತ ಅಲ್ಲದ ಬೌದ್ಧಿಕ ಕ್ರಿಯೆಗಳನ್ನು ಥಾಟ್ ಕ್ರೈಮ್ ಅಥವಾ ಆಲೋಚನಾ ಅಪರಾಧ ಎಂದು ಪರಿಗಣಿಸಲಾಗಿರುತ್ತದೆ. ಹೀಗಾಗಿ ಓಶಿಯಾನಾ ದೇಶದ ಆಳುವ ಪಕ್ಷ ತನ್ನ ಪ್ರಜೆಗಳ ನಡೆಗಳು, ನುಡಿಗಳನ್ನು ಮಾತ್ರವಲ್ಲದೆ ಆಲೋಚನೆಗಳನ್ನೂ ನಿಯಂತ್ರಿಸುತ್ತಿರುತ್ತದೆ.
ಆರ್ವೆಲ್ ನ ಕೃತಿ ‘1984’ ರಲ್ಲಿ Thinkpol (ಥಿಂಕ್ ಪೋಲ್) ಎಂಬ ಮತ್ತೊಂದು ಹೊಸ ಪದದ ಕುರಿತು ಮಾತಾಡುತ್ತದೆ. ಥಿಂಕ್ ಪೋಲ್ ಎಂದರೆ ಆಲೋಚನೆಯನ್ನು ಪತ್ತೆ ಹಚ್ಚಿ ಅದನ್ನು ನಿರ್ಮೂಲನ ಮಾಡುವ ಪೊಲೀಸರು ಎಂದು ಅರ್ಥ. ಅರ್ಥಾತ್ Thought Police. ದನಿ-ದೃಶ್ಯ ಬೇಹುಗಾರಿಕೆಯ ಮೂಲಕ ಆಲೋಚನಾ ಅಪರಾಧಿಗಳನ್ನು ಪತ್ತೆ ಹಚ್ಚಿ ಬಂಧಿಸಿ ಕೊಂದು ಹಾಕುತ್ತಾರೆ. ನಾಗರಿಕರ ಬೌದ್ಧಿಕ, ಮಾನಸಿಕ ಹಾಗೂ ನೈತಿಕ ಸ್ವಾತಂತ್ರ್ಯವು ಆಳುವ ಪಕ್ಷದ ಸಂಪ್ರದಾಯವಾದಿ ಮನಸ್ಥಿತಿಗೆ ಸವಾಲು ಎಸೆದಿರುತ್ತದೆ. ಪ್ರತಿಯೊಬ್ಬ ಪೌರನ ಮೇಲೂ ನಿಗಾ ಇಟ್ಟು ಬೇಹುಗಾರಿಕೆ ನಡೆಸುವುದು ಅಸಾಧ್ಯ ಸಂಗತಿ. ಹೀಗಾಗಿ ಓಶಿಯಾನಾದ ಥಿಂಕ್ ಪೋಲ್ ಅಥವಾ ಆಲೋಚನಾ ಪೊಲೀಸರು ಇಮ್ಮುಖ ಟೆಲಿವಿಜನ್ ಪರದೆಗಳ ತಂತ್ರಜ್ಞಾನ ಬಳಸುತ್ತಾರೆ. ಪ್ರತಿಯೊಬ್ಬ ವ್ಯಕ್ತಿಯ ಆಂಗಿಕ ಚರ್ಯೆ ಅಥವಾ ಆಂಗಿಕ ಭಾಷೆಯ ಮೇಲೆ ನಿಗಾ ಇಟ್ಟಿರುತ್ತಾರೆ. ಮುಖಚರ್ಯೆಯನ್ನು ಕೂಡ ಓದಿಕೊಳ್ಳುತ್ತಿರುತ್ತಾರೆ. ಪ್ರಜೆಗಳ ಪಿಸುಮಾತನ್ನೂ ಟಿಲಿಸ್ಕ್ರೀನ್ ಗಬಕ್ಕನೆ ಹಿಡಿದುಕೊಳ್ಳುವಷ್ಟು ಸೂಕ್ಷ್ಮಗ್ರಾಹಿಯಾಗಿರುತ್ತದೆ. ಆಕೆ ಅಥವಾ ಆಕೆ ಪರದೆಯ ವ್ಯಾಪ್ತಿಯಲ್ಲಿರುವ ತನಕ ಅವರ ಬಿಂಬವನ್ನು ಬೇಹುಗಾರರು ನೋಡಬಹುದಾಗಿರುತ್ತದೆ ಮತ್ತು ಮಾತುಗಳನ್ನು ಕೇಳಬಹುದಾಗಿರುತ್ತದೆ. ಆದರೆ ತಮ್ಮನ್ನು ನೋಡಲಾಗುತ್ತಿದೆ ಮತ್ತು ತಮ್ಮ ಮಾತುಗಳನ್ನು ಕೇಳಿಸಿಕೊಳ್ಳಲಾಗುತ್ತಿದೆ ಎಂಬ ಕಹಿ ಸತ್ಯದ ಅರಿವು ಪೌರರಿಗೆ ಒಂದೇ ಒಂದು ಕ್ಷಣ ಕಾಲವೂ ಆಗುವಂತಿರುವುದಿಲ್ಲ.
ಸಾರ್ವಜನಿಕ ಮತ್ತು ಖಾಸಗಿ ಆವರಣಗಳನ್ನು ಆವರಿಸಿರುವ ಟೆಲಿಸ್ಕ್ರೀನ್, ಓಶಿಯಾನದ ಪ್ರಜೆಗಳ ಮೇಲೆ ನಿರಂತರ ಮಾನಸಿಕ ಒತ್ತಡ ಹೇರಿರುತ್ತದೆ. ತಮ್ಮ ಮೇಲೆ ಥಿಂಕ್ ಪೋಲ್ ಸದಾ ಸರ್ವದಾ ಕಣ್ಣಿಟ್ಟಿದ್ದು, ಯಾವ ಕ್ಷಣದಲ್ಲಿ ಬೇಕಾದರೂ ಥಾಟ್ ಕ್ರಿಮಿನಲ್ ಎಂದು ದಸ್ತಗಿರಿ ಮಾಡುವ ಅಪಾಯವಿದೆ ಎಂಬ ಆತಂಕ ಅವರನ್ನು ಕಾಡಿರುತ್ತದೆ. ‘ತಪ್ಪಾದ’ ಮತ್ತು ‘ಅನಪೇಕ್ಷಿತ’ ಆಲೋಚನೆಗಳು ಬಾರದಂತೆ ಹಾದಿಯಲ್ಲೇ ಅವುಗಳನ್ನು ತಡೆದು ನಿಲ್ಲಿಸಿ ತಂತಾನೇ ಅಳಿಸಿ ಹಾಕುವ ಕ್ರಿಯೆ Crime stop. ಆಳುವ ಪಕ್ಷವು ‘ಭೂಮಿ ಚಪ್ಪಟೆಯಾಗಿದೆ’ ಎಂದೂ, ‘ಮಂಜುಗಡ್ಡೆಯು ನೀರಿಗಿಂತ ಅಧಿಕ ಭಾರ’ ಎಂದೂ ಹೇಳಿದರೆ ಅದನ್ನು ವ್ಯತಿರೇಕಿಸಕೂಡದು. ಅಪಾಯಕಾರಿ ಆಲೋಚನೆಯನ್ನು ಸಹಜಪ್ರವೃತ್ತಿಯಿಂದ ಮುಂದಾಗಿಯೇ ಗ್ರಹಿಸಿ, ಹೊಸ್ತಿಲಲ್ಲೇ ತಡೆದುಬಿಡಬೇಕು. 2014ರಲ್ಲಿ ಅಮೆರಿಕದ ಬಿಳಿಯರ ತೀವ್ರ ಬಲಪಂಥೀಯ ಆಂದೋಲನವು Wrongthink ಎಂಬ ಪದವನ್ನೂ ಇದೇ ಅರ್ಥದಲ್ಲಿ ಟಂಕಿಸಿತು.
ಮೋದಿ ಸರ್ಕಾರ ಭಾರತದಲ್ಲಿ ಕಟ್ಟಿ ನಿಲ್ಲಿಸಿರುವ ಕೇಡುಗಾಲದ ಸೌಧ ಅಲ್ಲಾಡತೊಡಗಿದೆ. ಜನಶಕ್ತಿಯ ಮುಂದೆ ರಾಜ್ಯಶಕ್ತಿ ಬಾಗಲೇಬೇಕು. ಜನತಂತ್ರ ಗೆಲ್ಲಲೇಬೇಕು. ಸರ್ವಾಧಿಕಾರ ಸೋಲಲೇಬೇಕು.




