ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಉಡಾವಣಾ ವಾಹನಗಳ ತಯಾರಿಕೆ ಹಾಗೂ ಉಪಗ್ರಹ ನಿರ್ಮಾಣದಂತಹ ಪ್ರಮುಖ ಕಾರ್ಯಗಳನ್ನು ಖಾಸಗಿ ವಲಯಕ್ಕೆ ವಹಿಸಲಾಗುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ, ಇಸ್ರೋದ ಒಂಬತ್ತು ಪ್ರಮುಖ ನೌಕರರ ಸಂಘಗಳು ಸರ್ಕಾರದ ನಿರ್ಧಾರದ ಕುರಿತು ಅಧಿಕೃತ ಹಾಗೂ ಲಿಖಿತ ಸ್ಪಷ್ಟನೆ ನೀಡುವಂತೆ ಇಸ್ರೋ ಅಧ್ಯಕ್ಷರು ಹಾಗೂ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಯಾದ ವಿ. ನಾರಾಯಣನ್ ಅವರಿಗೆ ಪತ್ರ ಬರೆದಿವೆ.
ಇಸ್ರೋ ಸ್ಟಾಫ್ ಅಸೋಸಿಯೇಷನ್, ಶಾರ್ ಎಂಪ್ಲಾಯೀಸ್ ಅಸೋಸಿಯೇಷನ್, ಎನ್‌ಆರ್‌ಎಸ್‌ಎ ಎಂಪ್ಲಾಯೀಸ್ ಯೂನಿಯನ್ ಸೇರಿದಂತೆ ಒಟ್ಟು ಒಂಬತ್ತು ಸಂಘಗಳು ಈ ಜಂಟಿ ಮನವಿಗೆ ಸಹಿ ಹಾಕಿವೆ. ತಾವು ಖಾಸಗಿ ಭಾಗವಹಿಸುವಿಕೆಯನ್ನು ವಿರೋಧಿಸುತ್ತಿಲ್ಲ, ಆದರೆ ಖಾಸಗಿ ರಂಗವನ್ನು ಉತ್ತೇಜಿಸುವ ನೆಪದಲ್ಲಿ ಇಸ್ರೋದ ಸ್ವಂತ ಸಾಮರ್ಥ್ಯವನ್ನು ಕುಗ್ಗಿಸಬಾರದು ಮತ್ತು ಈ ಬಗ್ಗೆ ಇಲಾಖೆಯಿಂದ ಸ್ಪಷ್ಟವಾದ ಅಧಿಕೃತ ನೀತಿ ದಾಖಲೆ ಹೊರಬರಬೇಕು ಎಂದು ನೌಕರರ ಪ್ರತಿನಿಧಿಗಳು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ‘ಇಸ್ರೋ’ ಪರಂಪರೆಗೆ ಕೊಳ್ಳಿ ಇಡುತ್ತಿದೆಯೇ ಕೇಂದ್ರ? ಖಾಸಗಿ ಕಂಪನಿಗಳಿಗೆ ಮಣೆ, ವಿಜ್ಞಾನಿಗಳ ಬಗ್ಗೆ ತಾತ್ಸಾರ
ಇತ್ತೀಚೆಗೆ ‘ಇನ್-ಸ್ಪೇಸ್’ (IN-SPACe) ಸಂಸ್ಥೆಯ ಅಧ್ಯಕ್ಷ ಪವನ್ ಗೋಯೆಂಕಾ ಅವರು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, “ಮುಂದಿನ ದಿನಗಳಲ್ಲಿ ಇಸ್ರೋ ಯಾವುದೇ ಉಡಾವಣಾ ವಾಹನಗಳನ್ನು (ರಾಕೆಟ್) ತಯಾರಿಸುವುದಿಲ್ಲ; ಆ ಕಾರ್ಯವನ್ನು ಖಾಸಗಿ ವಲಯ ಅಥವಾ ಸಾರ್ವಜನಿಕ ವಲಯದ ಉದ್ಯಮಗಳು (PSU) ನಿರ್ವಹಿಸಲಿವೆ” ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯು ಇಸ್ರೋ ಸಿಬ್ಬಂದಿ ಹಾಗೂ ಅವರ ಕುಟುಂಬಗಳಲ್ಲಿ ಆತಂಕ ಮೂಡಿಸಿದೆ.
ರಾಕೆಟ್‌ಗಳ ವಿನ್ಯಾಸ, ನಿರ್ಮಾಣ, ಪರೀಕ್ಷೆ ಹಾಗೂ ಉಡಾವಣೆಗಳು ಕೇವಲ ‘ತಯಾರಿಕಾ ಒಪ್ಪಂದಗಳು’ ಅಲ್ಲ; ಅವು ಸಂಸ್ಥೆಯ ದಶಕಗಳ ಕಾಲದ ಮೂಲ ಸಾಮರ್ಥ್ಯ ಹಾಗೂ ತಾಂತ್ರಿಕ ಜ್ಞಾನವಾಗಿವೆ. ಈ ಕಾರ್ಯಗಳನ್ನು ಖಾಸಗೀಕರಣಗೊಳಿಸುವುದರಿಂದ ಇಸ್ರೋದ ಆಂತರಿಕ ಕೆಲಸಗಳು ಕಡಿಮೆಯಾಗಿ, ಹೊಸ ನೇಮಕಾತಿಗಳು ಸ್ಥಗಿತಗೊಳ್ಳಬಹುದು, ಪ್ರಸ್ತುತ ನೌಕರರ ಬಡ್ತಿ ಹಾಗೂ ಕೌಶಲ್ಯಾಭಿವೃದ್ಧಿಗೆ ಅಡ್ಡಿಯಾಗಬಹುದು ಎಂದು ನೌಕರರ ಸಂಘಗಳು ಆತಂಕ ವ್ಯಕ್ತಪಡಿಸಿವೆ.
ಈಗಾಗಲೇ ‘ಸಣ್ಣ ಉಪಗ್ರಹ ಉಡಾವಣಾ ವಾಹನ’ (SSLV) ತಂತ್ರಜ್ಞಾನವನ್ನು ಹಸ್ತಾಂತರಿಸಲಾಗಿದ್ದು, ಪಿಎಸ್‌ಎಲ್‌ವಿ ಮತ್ತು ಎಲ್‌ವಿಎಂ3 ಯೋಜನೆಗಳಿಗೂ ಇದು ವಿಸ್ತರಿಸುವ ವರದಿಗಳಿದ್ದು, ಸಾರ್ವಜನಿಕ ನಿಧಿಯಿಂದ ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳ ವರ್ಗಾವಣೆಯಲ್ಲಿ ಪಾರದರ್ಶಕತೆ ಇರಬೇಕು ಎಂದು ಒತ್ತಾಯಿಸಲಾಗಿದೆ.
ಈಗಾಗಲೇ ದೇಶದ ಹಲವು ಸರ್ಕಾರಿ ಸ್ವಾಮ್ಯದ ಕಂಪನಿಗಳನ್ನು ಖಾಸಗೀಕರಣ ಮಾಡಲಾಗಿದೆ. ದೇಶದ ಅತಿದೊಡ್ಡ ಖಾಸಗೀಕರಣದ ಉದಾಹರಣೆಯೆಂದರೆ ನಷ್ಟದಲ್ಲಿದ್ದ ಸರ್ಕಾರಿ ಸ್ವಾಮ್ಯದ ‘ಏರ್ ಇಂಡಿಯಾ’ ಸಂಸ್ಥೆಯನ್ನು 2022ರಲ್ಲಿ ಟಾಟಾ ಗ್ರೂಪ್‌ಗೆ ಪೂರ್ಣವಾಗಿ ಹಸ್ತಾಂತರಿಸಿದ್ದು. ಅಷ್ಟು ಮಾತ್ರವಲ್ಲದೆ ದೆಹಲಿ, ಮುಂಬೈ, ಬೆಂಗಳೂರು, ಹೈದರಾಬಾದ್ ಸೇರಿದಂತೆ ಅಹಮದಾಬಾದ್, ಮಂಗಳೂರು, ಲಖನೌ, ಗುವಾಹಾಟಿ ವಿಮಾನ ನಿಲ್ದಾಣಗಳ ನಿರ್ವಹಣೆ ಮತ್ತು ಅಭಿವೃದ್ಧಿಯನ್ನು PPP (Public-Private Partnership) ಮಾದರಿಯಲ್ಲಿ ಖಾಸಗಿ ಸಂಸ್ಥೆಗಳಿಗೆ (ಅದಾನಿ, ಜಿಎಂಆರ್ ಇತ್ಯಾದಿ) ವಹಿಸಲಾಗಿದೆ.
ಬಿಎಸ್‌ಎನ್‌ಎಲ್ ಹಾಗೂ ಎಂಟಿಎನ್‌ಎಲ್ ಸರ್ಕಾರಿ ರಂಗದಲ್ಲಿದ್ದರೂ, 90ರ ದಶಕದ ನಂತರ ರೇಡಿಯೋ ತರಂಗಗುಚ್ಛಗಳ (Spectrum) ಹರಾಜಿನ ಮೂಲಕ ಖಾಸಗಿ ಕಂಪನಿಗಳಿಗೆ (ಜಿಒ, ಏರ್‌ಟೆಲ್, ವೊಡಾಫೋನ್-ಐಡಿಯಾ) ಮುಕ್ತ ಅವಕಾಶ ನೀಡಲಾಯಿತು. ಇಂದು ಈ ಕ್ಷೇತ್ರ ಸಂಪೂರ್ಣವಾಗಿ ಖಾಸಗಿ ಕಂಪನಿಗಳ ನಿಯಂತ್ರಣದಲ್ಲಿದೆ.
ಇನ್ನು ರೈಲ್ವೆ ಹಳಿ ಮತ್ತು ಸಿಗ್ನಲಿಂಗ್ ವ್ಯವಸ್ಥೆ ಸರ್ಕಾರದ ಅಧೀನದಲ್ಲಿದ್ದರೂ, ರೈಲು ನಿಲ್ದಾಣಗಳ ಆಧುನಿಕೀಕರಣ (ಉದಾ: ಭೋಪಾಲ್‌ನ ಹಬೀಬ್‌ಗಂಜ್ ನಿಲ್ದಾಣ), ‘ತೇಜಸ್ ಎಕ್ಸ್‌ಪ್ರೆಸ್’ ನಂತಹ ರೈಲುಗಳ ನಿರ್ವಹಣೆ ಹಾಗೂ ಕಂಟೇನರ್ ಸಾರಿಗೆಯನ್ನು (CONCOR) ಖಾಸಗಿಯವರಿಗೆ ವಹಿಸಲಾಗುತ್ತಿದೆ.





