ಜಮ್ಮು ಕಾಶ್ಮೀರಕ್ಕೆ ಶೀಘ್ರದಲ್ಲೇ ರಾಜ್ಯ ಸ್ಥಾನಮಾನ ನೀಡುವುದರ ಜೊತೆ, ವಿಧಾನಸಭಾ ಚುನಾವಣೆಗಳನ್ನು ಕೂಡ ನಡೆಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ಜಮ್ಮು ಕಾಶ್ಮೀರದ ಉದಂಪುರ್‌ನಲ್ಲಿ ಮಾತನಾಡಿದ ಅವರು, ಮೋದಿ ಬಹಳ ಮುಂದೆ ಯೋಚಿಸುತ್ತಾರೆ. ಇಲ್ಲಿಯವರೆಗೂ ಈಗ ಏನು ನಡೆಯುತ್ತಿದೆಯೊ ಅದು ಕೇವಲ ಟ್ರೈಲರ್ ಮಾತ್ರ. ನಾನು ಜಮ್ಮು ಕಾಶ್ಮೀರಕ್ಕೆ ನೂತನ ಹಾಗೂ ಆದ್ಭುತವಾದ ಚಿತ್ರಣ ರೂಪಿಸಲು ನಿರತನಾಗಿದ್ದೇನೆ. ಜಮ್ಮು ಮತ್ತು ಕಾಶ್ಮೀರಕ್ಕೆ ವಿಧಾನಸಭೆ ಚುನಾವಣೆಗಳನ್ನು ನಡೆಸುವ ಸಮಯ ದೂರವಿಲ್ಲ. ಶೀಘ್ರದಲ್ಲೇ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಸ್ಥಾನಮಾನ ಪಡೆಯಲಿದೆ. ನಿಮ್ಮ ಶಾಸಕ ಹಾಗೂ ನಿಮ್ಮ ಮಂತ್ರಿಗಳೊಂದಿಗೆ ನಿಮ್ಮ ಕನಸನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬೆಲೆ ಏರಿಕೆ, ನಿರುದ್ಯೋಗವೇ ಚುನಾವಣೆ ವಿಷಯ; ಎಚ್ಚೆತ್ತ ಮತದಾರರು
“ಇಲ್ಲಿ ಒಂದು ದಿನ ಶಾಂತಿಯುತವಾಗಿದ್ದರೆ ಪತ್ರಿಕೆಯಲ್ಲಿ ಅದೇ ಮುಖಪುಟವಾಗುತ್ತಿತ್ತು. ಈಗ ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಬದಲಾಗಿದೆ. ಈ ಚುನಾವಣೆಯು ಸಂಸದರನ್ನು ಮಾತ್ರ ಆಯ್ಕೆ ಮಾಡುವುದಿಲ್ಲ.ಸುಭದ್ರ ಸರ್ಕಾರವನ್ನು ಚುನಾಯಿಸುತ್ತದೆ. ಸುಭದ್ರ ಸರ್ಕಾರ ಏನೆಲ್ಲ ಮಾಡಲಿದೆ ಎಂಬುದು ನಿಮಗೆಲ್ಲರಿಗೂ ತಿಳಿದಿದೆ” ಎಂದು ಮೋದಿ ಹೇಳಿದರು.
“ನಿಮ್ಮೆಲ್ಲರ ಆಶೀರ್ವಾದದಿಂದ 370ನೇ ವಿಧಿಯ ಗೋಡೆಯನ್ನು ನಾಶ ಮಾಡಿದ್ದೇನೆ. 370ನೇ ವಿಧಿಯನ್ನು ಮರಳಿ ಸ್ಥಾಪಿಸಲು ಕಾಂಗ್ರೆಸ್ ಸೇರಿದಂತೆ ದೇಶದ ಯಾವುದೇ ರಾಜಕೀಯ ಪಕ್ಷಕ್ಕೆ ಸವಾಲು ಹಾಕುತ್ತೇನೆ. ಈ ದೇಶವು ಅವರನ್ನು ನೋಡಲು ಬಯಸುವುದಿಲ್ಲ” ಎಂದು ಪ್ರಧಾನಿ ಹೇಳಿದರು.
“ಕಾಂಗ್ರೆಸ್, ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ ಹಾಗೂ ಎಲ್ಲ ಇತರ ಪಕ್ಷಗಳು ಜಮ್ಮು ಮತ್ತು ಕಾಶ್ಮೀರವನ್ನು ಹಳೆಯ ದಿನಕ್ಕೆ ತೆಗೆದುಕೊಂಡು ಹೋಗಲು ಬಯಸುತ್ತವೆ. ಕುಟುಂಬ ಆಧಾರಿತ ಪಕ್ಷಗಳು ಮಾಡಿದಷ್ಟು ಹಾನಿಯನ್ನು ಬೇರೆ ಯಾರೂ ಮಾಡಿಲ್ಲ” ಎಂದು ಮೋದಿ ವಿಪಕ್ಷಗಳನ್ನು ಟೀಕಿಸಿದರು.
