ಸುಪ್ರೀಂ ಕೋರ್ಟ್, ಹೈಕೋರ್ಟ್‌ಗಳ ನ್ಯಾಯಾಧೀಶರ ನೇಮಕಾತಿ ಮತ್ತು ವರ್ಗಾವಣೆಯಲ್ಲಿ ಸಾಮಾಜಿಕ ವೈವಿಧ್ಯತೆ ಹಾಗೂ ಅರ್ಹತೆಯನ್ನು ಸಂಪೂರ್ಣವಾಗಿ ಕಡೆಗಣಿಸಿ, “ಒಂದೇ ನಿರ್ದಿಷ್ಟ ಸಮುದಾಯಕ್ಕೆ” ಆದ್ಯತೆ ನೀಡಲಾಗುತ್ತಿದೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ.
ಶುಕ್ರವಾರ (ನವೆಂಬರ್ 27) ರಾಷ್ಟ್ರಪತಿಗಳಿಗೆ ಬರೆದಿರುವ ಮೂರು ಪುಟಗಳ ಪತ್ರದಲ್ಲಿ, ಇತ್ತೀಚಿನ ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸುಗಳಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡ (ಎಸ್‌ಟಿ), ಇತರೆ ಹಿಂದುಳಿದ ವರ್ಗಗಳು (ಒಬಿಸಿ), ಅಲ್ಪಸಂಖ್ಯಾತರು ಮತ್ತು ಮಹಿಳೆಯರನ್ನು ಹೊರಗಿಟ್ಟು ಕೇವಲ ಒಂದು ಸಮುದಾಯವನ್ನು ಓಲೈಸುವ ಪ್ರವೃತ್ತಿ ಕಂಡುಬರುತ್ತಿದೆ ಎಂದು ಗವಾಯಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ವಕ್ಫ್ ಕಾಯ್ದೆ | ಬಿ ಆರ್ ಗವಾಯಿ ನೇತೃತ್ವದ ಪೀಠದ ಮುಂದೆ ಮುಂದಿನ ವಿಚಾರಣೆ, ಈ ಹೊತ್ತಿನ ಸ್ಥಿತಿ ಏನು?
ಸರ್ಕಾರದ ಅಂಕಿಅಂಶಗಳನ್ನು ಉಲ್ಲೇಖಿಸಿರುವ ಮಾಜಿ ಸಿಜೆಐ, 2018ರಿಂದ ನೇಮಕಗೊಂಡ 715 ಹೈಕೋರ್ಟ್ ನ್ಯಾಯಾಧೀಶರಲ್ಲಿ ಕೇವಲ 22 ಮಂದಿ ಎಸ್‌ಸಿ, 16 ಮಂದಿ ಎಸ್‌ಟಿ, 89 ಮಂದಿ ಒಬಿಸಿ ಮತ್ತು 37 ಮಂದಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿದ್ದು, ಸುಮಾರು ನಾಲ್ಕರಲ್ಲಿ ಮೂವರು ಸಾಮಾನ್ಯ ವರ್ಗದವರೇ ಆಗಿದ್ದಾರೆ ಎಂದು ವಿವರಿಸಿದ್ದಾರೆ. ಅಲ್ಲದೆ, ದೇಶದ ಜನಸಂಖ್ಯೆಯಲ್ಲಿ ಶೇ. 5ಕ್ಕಿಂತ ಕಡಿಮೆ ಇರುವ ಸಮುದಾಯವೊಂದು ಸುಪ್ರೀಂ ಕೋರ್ಟ್‌ನಲ್ಲಿ ಶೇ. 40ಕ್ಕೂ ಹೆಚ್ಚು ಪ್ರಾತಿನಿಧ್ಯ ಪಡೆದಿದೆ ಎಂದು ಬೊಟ್ಟು ಮಾಡಿದ್ದಾರೆ.
2021ರ ಜನವರಿ ಮತ್ತು 2026ರ ಜನವರಿ ನಡುವಿನ ನೇಮಕಾತಿಗಳಲ್ಲಿ ಸುಮಾರು ಶೇ. 80ರಷ್ಟು ಸ್ಥಾನಗಳು ಮುಂದುವರಿದ ವರ್ಗಗಳ ಪಾಲಾಗಿವೆ ಎಂದು ಸಂಸದೀಯ ಸಮಿತಿಗೆ ಕೇಂದ್ರ ಕಾನೂನು ಸಚಿವಾಲಯವೇ ಮಾಹಿತಿ ನೀಡಿರುವುದನ್ನು ಗವಾಯಿ ಪತ್ರದಲ್ಲಿ ನೆನಪಿಸಿದ್ದಾರೆ. ಹಾಗೆಯೇ ತಾವು ಸಿಜೆಐ ಆಗಿದ್ದಾಗ ಕೊಲಿಜಿಯಂನಲ್ಲಿ ಎಲ್ಲಾ ವರ್ಗಗಳಿಗೂ ಸಮತೋಲಿತ ಪ್ರಾತಿನಿಧ್ಯ ನೀಡಲು ಪ್ರಯತ್ನಿಸಿದ್ದಾಗಿ ತಿಳಿಸಿದ್ದಾರೆ.
ಸಂವಿಧಾನದ 124(2)ನೇ ವಿಧಿಯನ್ನು ಉಲ್ಲೇಖಿಸಿರುವ ಅವರು, ಕೊಲಿಜಿಯಂ ಶಿಫಾರಸುಗಳಿಗೆ ಪ್ರಾಮುಖ್ಯತೆ ಇದ್ದರೂ ಅದು ಹೊಣೆಗಾರಿಕೆಯಿಂದ ಮುಕ್ತವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನ್ಯಾಯಾಂಗದಲ್ಲಿ ಸಮಾನ ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳಲು ರಾಷ್ಟ್ರಪತಿಗಳು ತಮ್ಮ ಸಾಂವಿಧಾನಿಕ ಜವಾಬ್ದಾರಿಯಡಿ ಮಧ್ಯಪ್ರವೇಶಿಸಬೇಕು ಎಂದು ಗವಾಯಿ ಮನವಿ ಮಾಡಿದ್ದಾರೆ. ಇನ್ನು ಈ ಪತ್ರದ ಪ್ರತಿಗಳನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರಿಗೂ ಕಳುಹಿಸಿದ್ದಾರೆ.



