ಸಾರ್ವಜನಿಕ ವಲಯದ ವಿಮಾ ಕಂಪನಿ ‘ಎಲ್ಐಸಿ’ಯ ನೌಕರರ ಒಕ್ಕೂಟವು 14% ವೇತನ ಹೆಚ್ಚಳದ ಸರ್ಕಾರದ ಪ್ರಸ್ತಾಪವನ್ನು ತಿರಸ್ಕರಿಸಿದೆ. ಐದು ವರ್ಷಗಳ ಒಪ್ಪಂದದ ಅಡಿಯಲ್ಲಿ 2017ರಿಂದ ವೇತನ ಪರಿಷ್ಕರಣೆ ಬಾಕಿ ಇದ್ದು, ಕನಿಷ್ಠ 25% ಹೆಚ್ಚಳ ಮಾಡಬೇಕೆಂದು ನೌಕರರು ಒತ್ತಾಯಿಸುತ್ತಿದ್ದರು.
ಅಖಿಲ ಭಾರತ ರಾಷ್ಟ್ರೀಯ ಜೀವ ವಿಮಾ ನೌಕರರ ಫೆಡರೇಶನ್ (AINLIEF) ಮತ್ತು ಎಲ್‌ಐಸಿಯ ಇತರ ಒಕ್ಕೂಟಗಳೊಂದಿಗೆ ಶುಕ್ರವಾರ ಮುಂಬೈನಲ್ಲಿ ಸಭೆ ನಡೆದಿದೆ. ಸಭೆಯಲ್ಲಿ, ಸರ್ಕಾರವು 14% ವೇತನ ಹೆಚ್ಚಿಸುವ ಪ್ರಸ್ತಾಪವನ್ನು ಮುಂದಿಟ್ಟಿತ್ತು. ಅದನ್ನು ಒಕ್ಕೂಟವು ತಿರಸ್ಕರಿಸಿದೆ. “ಇದು ಕೆಲಸಗಾರರ ಬದ್ಧತೆಗೆ ಸರ್ಕಾರದ ಅರ್ಪಣಾ ಭಾವವನ್ನು ಪ್ರತಿಬಿಂಬಿಸುವುದಿಲ್ಲ” ಎಂದು ಒಕ್ಕೂಟ ಹೇಳಿದೆ.
“ಹಲವಾರು ನಿಯತಾಂಕಗಳಲ್ಲಿ ಸಾರ್ವಜನಿಕ ವಲಯದ ವಿಮಾದಾರರ ಕಾರ್ಯಕ್ಷಮತೆಯನ್ನು ಪರಿಗಣಿಸಿ ಆಡಳಿತವು ಮುಂದಿಟ್ಟಿರುವ ಪ್ರಸ್ತಾಪವು ಉದ್ಯೋಗಿಗಳಿಗೆ ನಿರಾಶೆ ಮೂಡಿಸಿದೆ” ಎಂದು AINLIEFನ ಪ್ರಧಾನ ಕಾರ್ಯದರ್ಶಿ ರಾಜೇಶ್ ನಿಂಬಾಳ್ಕರ್ ಹೇಳಿದ್ದಾರೆ.
“ಎಲ್‌ಐಸಿ ಉದ್ಯೋಗಿಗಳಿಗೆ 2017ರಲ್ಲಿ ಕೊನೆಯ ಬಾರಿಗೆ ವೇತನ ಹೆಚ್ಚಳ ಮಾಡಲಾಗಿತ್ತು. ಆಗ, ಕಂಪನಿಯು ಸುಮಾರು 20-25%ರಷ್ಟು ಹೆಚ್ಚಳ ನೀಡಿತ್ತು. ಈ ಬಾರಿಯೂ ನಾವು ಸುಮಾರು 22% ಹೆಚ್ಚಳವನ್ನು ನಿರೀಕ್ಷಿಸುತ್ತಿದ್ದೇವೆ” ಎಂದು ನಿಂಬಾಳ್ಕರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ 49% ನಿವ್ವಳ ಲಾಭವನ್ನು ದಾಖಲಿಸಿದ್ದಾರೆ. 2023-24ಯಲ್ಲಿ 9,444.42 ಕೋಟಿ ರೂ. ಲಾಭವಾಗಿದೆ. ಇದು ಹಿಂದಿನ ವರ್ಷ 6,334.29 ಕೋಟಿ ರೂ.ಗಳಿತ್ತು. ಅಲ್ಲದೆ, ಎಲ್‌ಐಸಿಯ ಒಟ್ಟು ಆದಾಯವು ಕಳೆದ ಡಿಸೆಂಬರ್ ತ್ರೈಮಾಸಿಕದಲ್ಲಿ 2,12,447 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಬಿಸಿನೆಸ್ ಸ್ಟಾಂಡರ್ಡ್ ವರದಿ ಮಾಡಿದೆ.